ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಗಲೂ ಅದೇ ಪ್ರಭುದೇವ

Last Updated 29 ಜುಲೈ 2018, 19:30 IST
ಅಕ್ಷರ ಗಾತ್ರ

1999 ಜರ್ಮನಿಯ ಮ್ಯೂನಿಚ್‌ನಲ್ಲಿ ಶೋಭನಾ ಜೊತೆ ನೃತ್ಯ ಲಾಲಿತ್ಯಕ್ಕೆ ಒಡ್ಡಿಕೊಂಡಿದ್ದು ಪ್ರಭುದೇವ. ಸಂಗೀತ ನೀಡಲು ಎ.ಆರ್. ರೆಹಮಾನ್ ಅಲ್ಲಿದ್ದರು. ಕಾರ್ಯಕ್ರಮದ ಶೀರ್ಷಿಕೆ: ‘ಎಂಜೆ ಅಂಡ್ ಫ್ರೆಂಡ್ಸ್’. ‘ಎಂಜೆ’ ಎಂದರೆ ಮೈಕಲ್ ಜಾಕ್ಸನ್‌. ಅವನ ಸ್ನೇಹಿತರೆಂದರೆ ಇವರೇ!

ಮೈಕಲ್ ಜಾಕ್ಸನ್ ಕಾಲಿನ ಬಿರು ಚಲನೆಗಳನ್ನು ಇವೆ ಇಕ್ಕದೆ ನೋಡುತ್ತಾ ಬೆಳೆದ ಪ್ರಭುದೇವ ರಕ್ತದಲ್ಲಿಯೇ ನೃತ್ಯವಿದೆ. ಅವರ ಅಪ್ಪ ಮೂಗೂರು ಸುಂದರಂ ಸಿನಿಮಾ ಗೀತೆಗಳಿಗೆ ನೃತ್ಯ ನಿರ್ದೇಶನ ಮಾಡಿದ್ದವರು. ಅವರಿಗೆ ಸಹಾಯಕನಾಗಿ ಮೊದಲು ಕಲೆ ಪಳಗಿಸಿಕೊಂಡ ಪ್ರಭುದೇವ, ಬಲು ಬೇಗ ತಮ್ಮದೇ ಹಾದಿಯನ್ನು ಆರಿಸಿಕೊಂಡರು.

ಶಾಸ್ತ್ರೀಯ ನೃತ್ಯದ ವರಸೆಗಳ ಜತೆಗೆ ಪಾಶ್ಚಿಮಾತ್ಯ ಲಾಲಿತ್ಯವನ್ನೂ ಕರಗತ ಮಾಡಿ ಕೊಂಡು ಸಿನಿಮಾ ಹಾಡುಗಳಿಗೆ ಅಗತ್ಯ ‘ಕಿಕ್‌’ನ ಚುಚ್ಚುಮದ್ದು ಕೊಟ್ಟಿದ್ದು ಅಗ್ಗಳಿಕೆ.ಮೊದಲಿಗೆ ಅಪ್ಪನ ಜತೆ ಪ್ರಭುದೇವ ಹೆಚ್ಚು ಸಂವಾದಕ್ಕೇನೂ ಇಳಿಯುತ್ತಿರಲಿಲ್ಲ. ಅವರ ಇಶಾರೆಗೆ ತಕ್ಕಂತೆ ಕೆಲಸ ಮಾಡುತ್ತಿದ್ದರು. ಆಮೇಲಾಮೇಲೆ ಕನ್ನಡಿ ಎದುರು ನಿಂತು ಭಾವ–ಭಂಗಿ ನೋಡಿಕೊಳ್ಳುವುದರ ಜೊತೆಗೆ ತಮ್ಮದೇ ಕಾಲುಗಳ ಚಲನೆ, ದೇಹಚಲನೆಯ ವೇಗವನ್ನೂ ಒರೆಗೆಹಚ್ಚಿಕೊಂಡರು.

‘ಮೌನ ರಾಗಂ’ ತಮಿಳು ಸಿನಿಮಾದಲ್ಲಿ ಕೊಳಲನೂದುವ ಬಾಲಕನಾಗಿ ಅವರು ಮೊದಲು ಕಾಣಿಸಿಕೊಂಡಾಗ ವಯಸ್ಸಿನ್ನೂ ಹದಿಮೂರಾಗಿತ್ತು. ಎರಡೇ ವರ್ಷಗಳಾದ ಮೇಲೆ ‘ಅಗ್ನಿ ನಕ್ಷತ್ರಂ’ ಸಿನಿಮಾ ಹಾಡೊಂದಕ್ಕೆ ಕುಣಿದ ಹಲವಾರು ತರುಣರ ನಡುವೆ ಒಬ್ಬನಾಗಿ ತೆರೆಮೇಲೆ ಕಂಡರು. ಆ ಸಿನಿಮಾ ನೋಡಲು ಹೋಗಿ, ಎಷ್ಟು ಸಲ ತಾನು ಕಾಣಿಸಿಕೊಳ್ಳುತ್ತೇನೆ ಎಂದು ಎಣಿಸಿಕೊಂಡು ಬಂದಿದ್ದರು.

ಮರು ವರ್ಷವೇ ಕಮಲ ಹಾಸನ್ ನಟನೆಯ ‘ವೇಟ್ರಿ ವಿಳ’ ತಮಿಳು ಸಿನಿಮಾಗೆ ನೃತ್ಯ ನಿರ್ದೇಶಕನಾಗಿ ಸ್ವತಂತ್ರ ಅವಕಾಶ ಒದಗಿಬಂತು. ಅಲ್ಲಿಂದಾಚೆಗೆ ನೂರಾರು ಚಲನಚಿತ್ರಗಳ ಹಾಡುಗಳಿಗೆ ಪ್ರಭುದೇವ ನೃತ್ಯ ಸಂಯೋಜನೆ ಮಾಡಿದ್ದಾರೆ. ಇಷ್ಟಾಗಿ ಈಗಲೂ ಅವರ ‘ಮೂನ್‌ ವಾಕ್‌’ ಅನೇಕರಿಗೆ ಚೇತನದಾಯಕ.

ಹೊಸತನ ಹಾಗೂ ಹೊಸಬರನ್ನು ಮುನ್ನೆಲೆಗೆ ತರಲೇ ತಾನು ಹುಟ್ಟಿರುವುದು ಎಂದು ಒಂದು ಕಾಲದಲ್ಲಿ ಹೇಳಿದ್ದ ನಿರ್ದೇಶಕ ಶಂಕರ್, ಪ್ರಭು ಪಾಲಿನ ಟಾನಿಕ್. ಅದಕ್ಕೂ ಮೊದಲು ಅನೇಕ ಸಲ ಸಿನಿಮಾದಲ್ಲಿ ನಟಿಸಬೇಕು ಎಂದು ಪರೋಕ್ಷವಾಗಿ ಪ್ರಭುದೇವ ಅರ್ಜಿಗಳನ್ನು ಹಾಕಿದ್ದುಂಟು.

ಕಪ್ಪು ಬಣ್ಣದ, ಕೃಶ ದೇಹದ ಅವರಲ್ಲಿ ಯಾರೂ ಒಬ್ಬ ನಟ ಇದ್ದಾನೆಂದು ಗುರುತಿಸಲೇ ಇಲ್ಲ. ನೃತ್ಯ ಹೇಳಿಕೊಡುವವರು, ಮಾಡುವವರನ್ನು ಸಿನಿಮಾರಂಗದ ಸೃಜನಶೀಲ ವ್ಯಕ್ತಿಗಳು ನಿರ್ದಿಷ್ಟ ಅಂತರದಿಂದಲೇ ನೋಡುತ್ತಿದ್ದುದರ ಕುರಿತು ಅವರಿಗೆ ಬೇಸರವಿತ್ತು. ಅದನ್ನು ಅವರು ತಂದೆಯಲ್ಲಿ ಹೇಳಿಕೊಂಡಿದ್ದೂ ಇದೆ. ಅವರ ಕಣ್ಣೀರನ್ನು ಒರೆಸಲೋ ಎಂಬಂತೆ ಶಂಕರ್ ‘ಜಂಟಲ್‌ಮನ್‌’ ಸಿನಿಮಾದ ಮುಖ್ಯವಾದ ಹಾಡಿನಲ್ಲಿ ಕಾಣಿಸಿಕೊಳ್ಳುವ ಅವಕಾಶವಿತ್ತರು. ಮೂಳೆಯೇ ಇಲ್ಲದ ದೇಹ ತಮ್ಮದೆನ್ನುವಂತೆ ಅದರಲ್ಲಿ ಪ್ರಭು ಛಾಪು ಮೂಡಿಸಿದರು. ಈಗಲೂ ‘ಚುಕು ಬುಕು ಚುಕು ಬುಕು ರೈಲೇ’ ಎಂಬ ಆ ಹಾಡನ್ನು ನೋಡಿ ಪಡ್ಡೆಗಳು ಪುಳಕಗೊಳ್ಳುವುದುಂಟು. ಅದರಲ್ಲಿನ ಉತ್ಕಟತೆ ನೋಡಿದಾಕ್ಷಣ ಶಂಕರ್‌ ಈ ಯುವಕನನ್ನೇ ನಾಯಕನನ್ನಾಗಿಸಿ ಒಂದು ಸಿನಿಮಾ ನಿರ್ದೇಶಿಸಬೇಕೆಂದು ಸಂಕಲ್ಪ ತೊಟ್ಟರು. ಅದರ ಫಲವೇ ‘ಕಾದಲನ್’. ಅದು ತೆರೆಕಂಡ ಮೇಲೆ ಪ್ರಭುದೇವ ‘ರೇಜ್’ ಸೃಷ್ಟಿಸಿದರು. ಕಾಲೇಜು ಹಬ್ಬಗಳಲ್ಲಿ ಹುಡುಗ–ಹುಡುಗಿಯರು ಕುಣಿತಕ್ಕೆ ಅವರ ಸಿನಿಮಾಗಳ ಹಾಡುಗಳನ್ನೇ ಆಯ್ಕೆ ಮಾಡಿಕೊಂಡ ಕಾಲಘಟ್ಟ ಅದು.

ಯಾವ ನೃತ್ಯವೇ ತನಗೆ ಮುಳಿವಾದೀತು ಎಂದು ಪ್ರಭು ಯೌವನದಲ್ಲಿ ಭಾವಿಸಿದ್ದರೋ ಅದು ಅವರಿಗೆ ವರವಾಗಿ ಬದಲಾಯಿತು. ಪ್ರಭು ಆಮೇಲೆ ನಿರ್ದೇಶಕ, ನಿರ್ಮಾಪಕ ಎಲ್ಲವೂ ಆದರು. ಬಾಲಿವುಡ್‌ಗೂ ಅವರನ್ನು ಸಲ್ಮಾನ್ ಖಾನ್ ತರಹದ ದೊಡ್ಡ ನಟ ಕರೆತಂದದ್ದೂ ಹಳೆಯ ಕಥೆ.

ತಾವಿಷ್ಟಪಡುವ ಮೈಕಲ್ ಜಾಕ್ಸನ್‌ ಹಾಗೂ ಪಶ್ಚಿಮದ ರಾಗಗಳನ್ನು ಆಧರಿಸಿಯೇ ಹೊಸ ತಮಿಳು ಹಾಡೊಂದು ಈಗ ಸದ್ದು ಮಾಡುತ್ತಿದೆ. ‘ಗುಲೇಬಾ’ ಎಂಬ ಆ ಹಾಡಿನಲ್ಲಿ ಪ್ರಭು ದೇಹಚಲನೆಯ ಲಯ ಕಂಡು ಈ ಕಾಲದ ಹುಡುಗರೂ ಕಣ್ಣರಳಿಸುತ್ತಿದ್ದಾರೆ. ನಲವತ್ತೈದರ ಹರೆಯದಲ್ಲಿ ಪ್ರಭು ಈ ಪರಿಯಾಗಿ ನರ್ತಿಸುತ್ತಿರುವುದನ್ನು ನೋಡಿದರೆ, ‘ನನಗೆ ನೃತ್ಯ ಬಿಟ್ಟರೆ ಬೇರೇನೂ ಬರುವುದಿಲ್ಲ’ ಎಂದು ಎರಡೂವರೆ ದಶಕಗಳ ಹಿಂದೆ ಅವರು ಹೇಳಿದ್ದ ಮಾತಿನಲ್ಲಿ ಅರ್ಥವಿದೆ ಎನಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT