ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರೀ ವಿಜಯದಾಸರು ಸಿನಿಮಾ ಏಪ್ರಿಲ್‌ 12ರಂದು ಬಿಡುಗಡೆ

Published 16 ಮಾರ್ಚ್ 2024, 6:11 IST
Last Updated 16 ಮಾರ್ಚ್ 2024, 6:11 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಯಶಸ್ವಿಯಾಗಿ ಪ್ರದರ್ಶನ ಕಂಡಿರುವ ‘ಜಗನ್ನಾಥದಾಸ’ ಸಿನಿಮಾ ನಿರ್ಮಿಸಿದ  ತಂಡದಿಂದ ‘ದಾಸವರೇಣ್ಯ ಶ್ರೀ ವಿಜಯದಾಸರು’ ಎಂಬ ಹೊಸ ಸಿನಿಮಾ ತಯಾರಾಗಿದ್ದು, ಏಪ್ರಿಲ್ 12ರಂದು ಬಿಡುಗಡೆಗಯಾಗಲಿದೆ.

‘ಎರಡು ಭಾಗದಲ್ಲಿ ಸಿನಿಮಾ ಬರಲಿದ್ದು, ಇದು ಮೊದಲ ಭಾಗವಾಗಿರುತ್ತದೆ. ಹರಿದಾಸ ಪರಂಪರೆಯನ್ನು ಮುಂದುವರಿಸಿ, 64ಕ್ಕೂ ಅಧಿಕ ಹರಿದಾಸರಿಗೆ ಶಿಷ್ಯತ್ವ ನೀಡಿ, ಸುಳಾದಿ ಪ್ರಕಾರದಲ್ಲಿ ಸಾವಿರಾರು ಕೀರ್ತನೆಗಳನ್ನು ರಚಿಸಿದ ವಿಜಯದಾಸರ ಜೀವನ, ಸಮಾಜಮುಖಿ ಚಿಂತನೆ, ಸಾಧನೆ, ಪ್ರಭಾವಗಳನ್ನು ಕಟ್ಟಿಕೊಡುವ ಪ್ರಯತ್ನ ಈ ಸಿನಿಮಾದ ಮೂಲಕ ಮಾಡಲಾಗಿದೆ’ ಎಂದು ಹೊಸಪೇಟೆಯವರೇ ಆದ ಸಿನಿಮಾದ ನಿರ್ದೇಶಕ ಮಧುಸೂದನ್ ಹವಾಲ್ದಾರ್‌ ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಿನಿಮಾದ ನಿರ್ಮಾಪಕರೂ ಆಗಿರುವ ತ್ರಿವಿಕ್ರಮ ಜೋಷಿ ರಾಯಚೂರು ಅವರು ವಿಜಯದಾಸರ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪ್ರಭಂಜನ ದೇಶಪಾಂಡೆ, ವಿಷ್ಣುತೀರ್ಥ ಜೋಷಿ,ವಿಜಯಾನಂದ ನಾಯಕ್‌, ಶ್ರೀಲತಾ ಬಾಗೇವಾಡಿ, ಬಾರತಿ ಗುಂಡಿ ಇತರರು ನಟಿಸಿದ್ದಾರೆ. ಜೆ.ಎಂ.ಪ್ರಹ್ಲಾದ್ ಚಿತ್ರಕತೆ, ಸಂಭಾಷಣೆ ಬರೆದಿದ್ದಾರೆ. ವಿಜಯಕೃಷ್ಣ ಅವರ ಸಂಗೀತವಿದೆ. ಸಿ.ನಾರಾಯಣ ಛಾಯಾಗ್ರಹಣ ಮಾಡಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಮುಂದಿನ ದಿನಗಳಲ್ಲಿ ಶಿವಶರಣದ ಸಿನಿಮಾಗಳನ್ನು ಮಾಡುವ ವಿಚಾರ ಇದೆ, ಶೀಘ್ರದಲ್ಲೇ ‘ಮೋಳಿಗೆ ಮಾರಯ್ಯ’ ಸಿನಿಮಾದ ಚಿತ್ರೀಕರಣ ಆರಂಭಿಸುವ ಯೋಜನೆ ರೂಪಿಸಲಾಗಿದೆ ಎಂದರು.

ನಿರ್ಮಾಪಕ ತ್ರಿವಿಕ್ರಮ ಜೋಷಿ ಮಾತನಾಡಿ, ವಿಜಯದಾಸರ ಬಗ್ಗೆ ಒಂದೇ ಕಂತಿನಲ್ಲಿ ಹೇಳಿ ಮುಗಿಸಲು ಸಾಧ್ಯವಿಲ್ಲದಷ್ಟು ಮಾಹಿತಿ ಇದೆ. ಹೀಗಾಗಿ ಎರಡು ಕಂತುಗಳಲ್ಲಿ ಸಿನಿಮಾ ಹೊರಬರಲಿದೆ. ವಿಜಯದಾಸರು ನಡೆದಾಡಿದ್ದು ಬಹುತೇಕ ಹಂಪಿ ಸುತ್ತಮುತ್ತ. ಹೀಗಾಗಿ ಆನೆಗುಂದಿ, ಗಂಗಾವತಿ, ಕನಕಗಿರಿ, ಹೊಸಪೇಟೆಗಳಲ್ಲೇ ಸಿನಿಮಾದ ಚಿತ್ರೀಕರಣ ನಡೆದಿದೆ. ಸಿನಿಮಾದಲ್ಲಿ ಒಟ್ಟು 11 ಹಾಡುಗಳಿವೆ ಎಂದರು.

ಸಾಹಿತಿ ಜೆ.ಎಂ.ಪ್ರಹ್ಲಾದ್ ಮಾತನಾಡಿ, ಕನಕದಾಸರು, ಪುರಂದರದಾಸರ ಬಳಿಕ ದಾಸವರೇಣ್ಯರ ಸಿನಿಮಾಗಳನ್ನು ಹೊರತರುವುದಕ್ಕೆ ನಿರ್ಮಾಪಕರು ಹಿಂದೇಟು ಹಾಕುತ್ತಲೇ ಬಂದಿದ್ದರು. ಜಗನ್ನಾಥದಾಸ ಸಿನಿಮಾ ಜನರ ಪ್ರೀತಿ ಗಳಿಸಿದ ಬಳಿಕ ಇಂತಹ ಹೊಸ ಸಿನಿಮಾಗಳ ನಿರ್ಮಾಣಕ್ಕೆ ಧೈರ್ಯ ಬಂದಿದೆ. ಉತ್ತಮ ಕತೆ ಇದ್ದಾಗ ಜನ ಇಂತಹ ಸಿನಿಮಾಗಳನ್ನೂ ನೋಡುತ್ತಾರೆ ಎಂಬ ವಿಶ್ವಾಸ ಇದೆ ಎಂದರು.

ಕಲಾ ನಿರ್ದೇಶಕ ಸಿರಿವಾಳ ರಾಘವೇಂದ್ರ, ವಿಷ್ಣು ತೀರ್ಥ ಜೋಷಿ,  ರಾಮರಾವ್ ವಡಕಲ್‌, ತೀ.ನಂ.ಭಟ್‌ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT