ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರೆಯಲ್ಲಿಂದು ಸಿನಿ ಹಬ್ಬ

Published 24 ನವೆಂಬರ್ 2023, 0:08 IST
Last Updated 24 ನವೆಂಬರ್ 2023, 0:08 IST
ಅಕ್ಷರ ಗಾತ್ರ

ಹಲವು ವಾರಗಳ ನಂತರ ಚಂದನವನದ ಬೆಳ್ಳಿತೆರೆಯಲ್ಲಿ ಸಾಲು ಸಾಲು ಸಿನಿಮಾಗಳು ತೆರೆಕಾಣುತ್ತಿದೆ. ಇಂದು(ನ.24) ಐದು ಸಿನಿಮಾಗಳು ಬಿಡುಗಡೆಯಾಗುತ್ತಿವೆ.

‘ಶುಗರ್‌ ಫ್ಯಾಕ್ಟರಿ’:

ದೀಪಕ್ ಅರಸ್ ನಿರ್ದೇಶನದಲ್ಲಿ ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸಿರುವ ಸಿನಿಮಾ ‘ಶುಗರ್‌ ಫ್ಯಾಕ್ಟರಿ’. ಸೋನಲ್ ಮೊಂತೆರೋ, ಅದ್ವಿತಿ ಶೆಟ್ಟಿ ಹಾಗೂ ರುಹಾನಿ ಶೆಟ್ಟಿ ಚಿತ್ರದ ನಾಯಕಿಯರು. ‘ಲವ್‌ ಮಾಕ್ಟೇಲ್‌’ ಸಿನಿಮಾ ಬಳಿಕ ಡಾರ್ಲಿಂಗ್‌ ಕೃಷ್ಣ ಅವರು ಒಪ್ಪಿಕೊಂಡಿದ್ದ ಮೊದಲ ಸಿನಿಮಾ ಇದಾಗಿದ್ದು, ಅಲ್ಲಿನ ‘ಆದಿ’ಗೆ ತದ್ವಿರುದ್ಧ ಪಾತ್ರ ಇಲ್ಲಿದೆಯೆಂದಿದೆ ಚಿತ್ರತಂಡ. ‘ಶುಗರ್‌ ಫ್ಯಾಕ್ಟರಿ’ ಎನ್ನುವುದು ಪಬ್‌ ಒಂದರ ಹೆಸರು. ಚಿತ್ರದಲ್ಲಿ ಈ ಪಬ್‌ ಕೂಡಾ ಒಂದು ಪಾತ್ರವಾಗಿದ್ದು, ಅಲ್ಲಿಯೇ ಹೆಚ್ಚಿನ ಚಿತ್ರೀಕರಣ ನಡೆದಿದೆ. ‘ಚಿತ್ರದ ಶೀರ್ಷಿಕೆ, ತುಣುಕುಗಳನ್ನು ನೋಡಿ ನಮ್ಮ ಚಿತ್ರದಲ್ಲಿ ಬರಿ ಹಾಡು, ಕುಣಿತ, ಕುಡಿತ ಇದೆ ಎಂದುಕೊಳ್ಳಬೇಡಿ. ಇದೊಂದು ಸುಮಧುರ ಪ್ರೇಮ ಕಾವ್ಯ. ಆ್ಯಕ್ಷನ್‌ ಹಾಗೂ ಭಾವನಾತ್ಮಕ ಸನ್ನಿವೇಶಗಳೂ ಚಿತ್ರದಲ್ಲಿದೆ. ಒಟ್ಟಿನಲ್ಲಿ ಈಗಿನ ಜನತೆ ಯಾವ ಮನರಂಜನೆ ಬಯಸುತ್ತಾರೊ ಅದೆಲ್ಲವೂ ನಮ್ಮ ಚಿತ್ರದಲ್ಲಿದೆ’ ಎನ್ನುತ್ತಾರೆ ನಿರ್ದೇಶಕ ದೀಪಕ್ ಅರಸ್. ಚಿತ್ರಕ್ಕೆ ಕಬೀರ್ ರಫಿ ಸಂಗೀತವಿದ್ದು, ಆರ್.ಗಿರೀಶ್ ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

‘ಸ್ವಾತಿ ಮುತ್ತಿನ ಮಳೆ ಹನಿಯೇ’:

ರಾಜ್‍ ಬಿ ಶೆಟ್ಟಿ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಚಿತ್ರವಿದು. ನಟಿ ರಮ್ಯಾ ಅವರು ತಮ್ಮ ಆ್ಯಪಲ್‍ ಬಾಕ್ಸ್ ಸ್ಟುಡಿಯೋಸ್‍ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸಿರಿ ರವಿಕುಮಾರ್ ಚಿತ್ರದ ನಾಯಕಿ. ಮಿಥುನ್‍ ಮುಕುಂದನ್‍ ಸಂಗೀತ, ಪ್ರವೀಣ್‌ ಶ್ರೀಯಾನ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ.

ಸಿರಿ ಮತ್ತು ರಾಜ್‌

ಸಿರಿ ಮತ್ತು ರಾಜ್‌

‘ಬ್ಯಾಡ್‌ ಮ್ಯಾನರ್ಸ್‌’:

ನಿರ್ದೇಶಕ ಸೂರಿ ಆ್ಯಕ್ಷನ್‌ ಕಟ್‌ ಹೇಳಿರುವ, ಯಂಗ್‌ ರೆಬಲ್‌ ಸ್ಟಾರ್‌ ಅಭಿಷೇಕ್‌ ಅಂಬರೀಶ್‌ ನಟನೆಯ ಈ ಸಿನಿಮಾ ಮೇಲೆ ಜನರ ನಿರೀಕ್ಷೆ ಹೆಚ್ಚಿದೆ. ಅಭಿಷೇಕ್‌ ಇಲ್ಲಿ ರುದ್ರನಾಗಿ ಆರ್ಭಟಿಸಿದ್ದು, ಇದು ಇವರ ಎರಡನೇ ಸಿನಿಮಾ. ಚಿತ್ರದಲ್ಲಿ ರಚಿತಾ ರಾಮ್‌ ನಾಯಕಿ ಪಾತ್ರಕ್ಕೆ ಬಣ್ಣಹಚ್ಚಿದ್ದಾರೆ. 

‘ಎಲೆಕ್ಟ್ರಾನಿಕ್ ಸಿಟಿ’:

ಬಹುತೇಕ ಹೊಸಬರೇ ಇರುವ ‘ಎಲೆಕ್ಟ್ರಾನಿಕ್ ಸಿಟಿ’ ಚಿತ್ರ ಇಂದು ತೆರೆ ಕಾಣುತ್ತಿದೆ. ಆರ್.ಚಿಕ್ಕಣ್ಣ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ. ‘ಐಟಿ ಉದ್ಯೋಗಿಗಳ ಬದುಕಿನ ಚಿತ್ರವಿದು. ಈವರೆಗೂ ನಲವತ್ತೆರಡಕ್ಕೂ ಅಧಿಕ ಚಿತ್ರೋತ್ಸವಗಳಿಗೆ ಈ ಸಿನಿಮಾ ಆಯ್ಕೆಯಾಗಿದೆ’ ಎಂದು ಚಿತ್ರತಂಡ ಹೇಳಿದೆ. ಆರ್ಯನ್ ಶೆಟ್ಟಿ ಚಿತ್ರದ ನಾಯಕ. ದಿಯಾ ಆಶ್ಲೇಷ, ರಕ್ಷಿತ ಕೆರೆಮನೆ, ರಶ್ಮಿ ನಾಯಕಿಯರು.

‘ಸ್ಕೂಲ್ ಡೇಸ್’:

ಉಮೇಶ್ ಎಸ್. ಹಿರೇಮಠ ನಿರ್ಮಾಣದಲ್ಲಿ ಸಂಜಯ್ ಎಚ್. ನಿರ್ದೇಶಿಸಿರುವ ‘ಸ್ಕೂಲ್ ಡೇಸ್’ ಬಿಡುಗಡೆಗೊಳ್ಳುತ್ತಿದೆ. ಶಾಲಾ ದಿನಗಳ ಕುರಿತಾದ ಈ ಚಿತ್ರ, ಸಂಪೂರ್ಣ ಉತ್ತರ ಕರ್ನಾಟಕದ ಭಾಷೆಯಲ್ಲೇ ಮೂಡಿಬಂದಿದೆ. ಅರ್ಜುನ್ ಬಳ್ಳಾರಿ, ಸಂಗಮ್ ಮಠದ್, ನೇಹಾ, ವಿವೇಕ್ ಜಂಬಗಿ ಮುಂತಾದವರು ನಟಿಸಿರುವ ಚಿತ್ರಕ್ಕೆ ಕೆ.ಎಂ.ಇಂದ್ರ ಸಂಗೀತ ನಿರ್ದೇಶನವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT