ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕರಾವಳಿ’ ಪ್ರವೇಶಿಸಿದ ಪ್ರಜ್ವಲ್‌

Published 20 ಫೆಬ್ರುವರಿ 2024, 21:12 IST
Last Updated 20 ಫೆಬ್ರುವರಿ 2024, 21:12 IST
ಅಕ್ಷರ ಗಾತ್ರ

ಗುರುದತ್‌ ಗಾಣಿಗ ಆ್ಯಕ್ಷನ್‌ ಕಟ್‌ ಹೇಳಿರುವ ಪ್ರಜ್ವಲ್‌ ದೇವರಾಜ್‌ ನಟನೆಯ 40ನೇ ಸಿನಿಮಾ ‘ಕರಾವಳಿ’ಯ ಮುಹೂರ್ತ ಮಂಗಳವಾರ(ಫೆ.20) ಬೆಂಗಳೂರಿನ ಬಸವನಗುಡಿ ದೇವಸ್ಥಾನದಲ್ಲಿ ನಡೆಯಿತು. ಸಿನಿಮಾದ ಚಿತ್ರೀಕರಣ ಮೂಡಬಿದಿರೆ, ಉಡುಪಿ ಸುತ್ತಮುತ್ತ ಫೆ.22ರಿಂದ ಆರಂಭವಾಗಲಿದೆ. 

‘ಕೋಣ ಎನ್ನುವುದು ನಮ್ಮ ಚಿತ್ರದ ಭಾಗ. ಒಂದು ಕಂಬಳದ ಹಿಂದೆ ಇರುವ ಶ್ರಮ ಊಹೆಗೆ ನಿಲುಕದ್ದು. ಅದರ ಹಿಂದೆ ಒಂದು ಜೀವನವಿದೆ. ಚಂದ್ರಶೇಖರ್‌ ಅವರು ಬರೆದಿರುವ ಕಥೆ ಇದಾಗಿದೆ. ಇದು ನಮ್ಮ ಮಣ್ಣಿನ ಸಿನಿಮಾ. ‘ಕಾಂತಾರ’ ಸಿನಿಮಾದ ಕಥೆಗೂ ನಮ್ಮ ಕಥೆಗೂ ಯಾವುದೇ ಸಂಬಂಧವಿಲ್ಲ. ಇಲ್ಲಿ ದೈವಾರಾಧನೆ ಅಂಶಗಳಿಲ್ಲ. ಜಾತ್ರೆ, ಕಂಬಳದ ಘಮಲಿದೆ. ಕಂಬಳದ ಕೋಣಗಳನ್ನು ಮನೆಯ ಸದಸ್ಯರೆಂಬಂತೆ ಸಾಕುತ್ತಾರೆ. ನಮ್ಮ ಕಥೆಯೂ ಅಂತಹದೇ ಸೂಕ್ಷ್ಮವನ್ನು ಹೇಳುತ್ತದೆ. ಕೃಷಿ ಚಟುವಟಿಕೆಯ ಜೊತೆಗೆ ಕಂಬಳದಲ್ಲಿ ಭಾಗವಹಿಸುವ ತಂಡಗಳಿವೆ. ಇನ್ನೊಂದು ಕಂಬಳಕ್ಕಾಗಿಯೇ ಕೋಣಗಳನ್ನು ಬೆಳೆಸುತ್ತಾರೆ. ಹೀಗೆ ಎರಡು ಕ್ಲಾಸ್‌ಗಳಿವೆ. ಕಂಬಳದ ಮೇಲಿನ ಆಸೆ, ಪ್ರೀತಿಗೋಸ್ಕರ ಭಾಗವಹಿಸುವಾತ, ವಾಣಿಜ್ಯ ಉದ್ದೇಶದಿಂದಲೇ ಭಾಗವಹಿಸುವವರ ವಿರುದ್ಧ ಗೆದ್ದಾಗ ಆಗುವ ಪರಿಣಾಮವೇನು ಎನ್ನುವ ಸೂಕ್ಷ್ಮ ವಿಚಾರವನ್ನು ಕಥೆ ಹೇಳುತ್ತದೆ. ಹೀಗಾಗಿ ಇದು ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಘರ್ಷ’ ಎಂದು ಕಥಾಹಂದರವನ್ನು ವಿವರಿಸಿದರು ಗುರುದತ್‌. 

‘ಚೀತಾ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ಕಾಲಿಗೆ ಸಣ್ಣ ಗಾಯವಾಗಿತ್ತು. ಸದ್ಯ ಇದರಿಂದ ಚೇತರಿಸಿಕೊಳ್ಳುತ್ತಿದ್ದೇನೆ. ಇಲ್ಲವಾದಲ್ಲಿ ‘ಚೀತಾ’ ಚಿತ್ರೀಕರಣ ಈಗಾಗಲೇ ಮುಗಿಯಬೇಕಿತ್ತು. ಸದ್ಯ ‘ಕರಾವಳಿ’ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದು, ನಡುವೆ ಚೀತಾ ಪೂರ್ಣಗೊಳಿಸಲಿದ್ದೇನೆ. ‘ಕರಾವಳಿ’ಗಾಗಿ ಆ ಭಾಗದ ಕನ್ನಡ ಭಾಷೆಯನ್ನು ಕಲಿಯುತ್ತಿದ್ದೇನೆ. ‘ಧನಂಜಯ’ ಎಂಬ ಪಾತ್ರದಲ್ಲಿ ನಾನು ಕಾಣಿಸಿಕೊಳ್ಳಲಿದ್ದು, ಕಂಬಳದ ಕೋಣಗಳ ಜೊತೆ ತರಬೇತಿ ಪಡೆಯಬೇಕಾಗಿದೆ. ಕಂಬಳದ ಕೋಣಗಳನ್ನು ಬೆಳೆಸುವ ಕುಟುಂಬದಿಂದ ಬಂದಾತ ಈತ. ಕೋಣಗಳ ಜೊತೆ ‘ಧನಂಜಯ’ ಬೆಳೆಯುತ್ತಾನೆ. 80 ದಿನಗಳ ಕಾಲ ಚಿತ್ರದ ಚಿತ್ರೀಕರಣ ನಡೆಯಲಿದೆ. ಈ ಸಿನಿಮಾ ಮುಂದಿನ ವರ್ಷ ಬಿಡುಗಡೆಯಾಗಲಿದೆ. ಈ ವರ್ಷ ‘ಮಾಫಿಯಾ’, ‘ಗಣ’ ಮತ್ತು ‘ರಾಕ್ಷಸ’ ಬಿಡುಗಡೆಯಾಗಲಿದೆ’ ಎಂದರು ಪ್ರಜ್ವಲ್‌.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT