ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವದ ಗಮನ ಸೆಳೆದ ಕೆಜಿಎಫ್‌, ಕಾಂತಾರ

Last Updated 24 ಮಾರ್ಚ್ 2023, 3:55 IST
ಅಕ್ಷರ ಗಾತ್ರ

ಬೆಂಗಳೂರು: ಕೆಜಿಎಫ್‌, ಕೆಜಿಎಫ್‌–2 ಹಾಗೂ ಕಾಂತಾರ ಚಿತ್ರಗಳಿಂದಾಗಿ ವಿಶ್ವ ಚಿತ್ರರಂಗದ ಗಮನವನ್ನು ಕರ್ನಾಟಕ ಸೆಳೆದಿದೆ ಎಂದು ಚಿತ್ರಕಥೆ ರಚನಾಕಾರ ವಿ.ವಿಜಯೇಂದ್ರ ಪ್ರಸಾದ್‌ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಧಾನಸೌಧದ ಮುಂಭಾಗ ಗುರುವಾರ ಹಮ್ಮಿಕೊಂಡಿದ್ದ 14ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಕನ್ನಡದ ಮೇರುನಟ ರಾಜ್‌ಕುಮಾರ್‌ ಹೇಳಿದಂತೆ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು. ಮೆಟ್ಟಿದರೆ ಕನ್ನಡ ಮಣ್ಣು ಮೆಟ್ಟಬೇಕು’. ನಾನು ಕನ್ನಡದ ನೆಲದಲ್ಲಿ ಹುಟ್ಟದಿದ್ದರೂ, ಮದುವೆಯಾಗಿರುವುದು ಕನ್ನಡನಾಡಲ್ಲಿ. ಮಗಳು ಜನಿಸಿದ್ದು ಈ ನೆಲದಲ್ಲಿ. ಆ ಮೂಲಕ ಕರ್ನಾಟಕದ ಜತೆಗಿನ ನನ್ನ ಬಾಂಧವ್ಯ ಬೆಸೆದಿದೆ’ ಎಂದರು.

ಚಲನಚಿತ್ರೋತ್ಸವ ಉದ್ಘಾಟಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ರಾಜ್ಯದಲ್ಲಿ ಅತ್ಯಾಧುನಿಕ ಸೌಲಭ್ಯಗಳಿರುವ ಅಂತರಾಷ್ಟ್ರೀಯ ತಂತ್ರಜ್ಞಾನ ಒಳಗೊಂಡ ‘ಫಿಲ್ಮ್‌ಸಿಟಿ’ ನಿರ್ಮಾಣಕ್ಕೆ ತ್ವರಿತ ನಿರ್ಧಾರ ತೆಗೆದುಕೊಳ್ಳಲಾಗುವುದು. ಈಗಾಗಲೇ ಸಣ್ಣ, ನಗರ ಪಟ್ಟಣಗಳಲ್ಲಿ ಕಿರುಚಿತ್ರಮಂದಿರಗಳ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿದೆ. 200 ಚಿತ್ರಗಳಿಗೆ ಸಬ್ಸಿಡಿ ನೀಡಲಾಗುತ್ತಿದೆ’ ಎಂದರು.

ಡಿಜಿಟಲೀಕರಣದ ನಂತರ ಚಿತ್ರಗಳ ನಿರ್ಮಾಣದ ಸ್ವರೂಪವೂ ಬದಲಾಗಿದೆ. ಬದುಕಿನ ವೇಗಕ್ಕೆ ತಕ್ಕಂತೆ ಚಿತ್ರಗಳ ನಿರ್ಮಾಣವಾಗುತ್ತಿವೆ. ಅಂತರರಾಷ್ಟ್ರೀಯ ತಂತ್ರಜ್ಞಾನ ಬಳಕೆ, ವಸ್ತು ನಿಷ್ಠ ಕಥೆಗಳಿಂದಾಗಿ ಕನ್ನಡ ಚಿತ್ರಗಳು ಗಮನ ಸೆಳೆಯುತ್ತಿವೆ. ಸ್ಥಳೀಯ ಆಚರಣೆಗಳ ಕಥೆ ಒಳಗೊಂಡ ಕಾಂತಾರ ವಿದೇಶಗಳಲ್ಲೂ ಸದ್ದು ಮಾಡುತ್ತಿದೆ ಎಂದರು.

ಕಂದಾಯ ಸಚಿವ ಆರ್‌.ಅಶೋಕ, ನಟ ಅಂಬಿಷೇಕ್‌ ಅಂಬರೀಶ್‌, ನಟಿಯರಾದ ಸಪ್ತಮಿಗೌಡ, ಹರ್ಷಿಕಾ ಪೂಣಚ್ಚ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಅಶೋಕ್ ಕಶ್ಯಪ್‌, ರಿಜಿಸ್ಟ್ರಾರ್‌ ಜಿ. ಹಿಮಂತರಾಜು, ಮುಖ್ಯಮಂತ್ರಿ ಪ್ರಧಾನ ಕಾರ್ಯದರ್ಶಿ ಎನ್‌.ಮಂಜುನಾಥ್‌ ಪ್ರಸಾದ್, ವಾರ್ತಾ ಇಲಾಖೆ ಆಯುಕ್ತ ಪಿ.ಎಸ್.ಹರ್ಷ, ಕಲಾತ್ಮಕ ನಿರ್ದೇಶಕ ಎಚ್‌.ಎನ್‌.ನರಹರಿರಾವ್‌, ಸಂಸದ ಮುನಿಸ್ವಾಮಿ, ಶಾಸಕ ರಾಜುಗೌಡ, ಎಂ.ಕೃಷ್ಣಪ್ಪ ಉಪಸ್ಥಿತರಿದ್ದರು.

ಗಮನ ಸೆಳೆಯುವ ಕನ್ನಡ ಚಿತ್ರಗಳು

‘ಭಾರತೀಯ ಸಿನಿಮಾಗಳಲ್ಲಿ ಕನ್ನಡದ ಚಿತ್ರಗಳಿಗೆ ವಿಶೇಷ ಸ್ಥಾನವಿದೆ. ರಾಜ್ಯದ ಹಲವು ನಟರು, ತಂತ್ರಜ್ಞರ ಜತೆ ಕೆಲಸ ಮಾಡಿದ್ದೇನೆ. ರಾಜ್ಯದ ಚಲನಚಿತ್ರೋತ್ಸವದಲ್ಲಿ ಭಾಗವಹಿಸಲು ಸಂತಸವಾಗಿದೆ’ ಎಂದು ಹಿಂದಿ ಸಿನಿಮಾ ನಿರ್ದೇಶಕ ಗೋವಿಂದ ನಿಹಲಾನಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT