ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣ ಗಾರ್ಮೆಂಟ್ಸ್‌ ಸಿನಿಮಾ ವಿಮರ್ಶೆ: ಸತ್ವ ಇಲ್ಲದ ಪ್ರೀತಿಯ ಪ್ರಹಸನ

Last Updated 21 ಜೂನ್ 2019, 10:29 IST
ಅಕ್ಷರ ಗಾತ್ರ

ಚಿತ್ರ: ಕೃಷ್ಣ ಗಾರ್ಮೆಂಟ್ಸ್‌

ನಿರ್ಮಾಣ: ಷಣ್ಮುಖ ಜಿ. ಬೆಂಡಿಗೇರಿ

ನಿರ್ದೇಶನ: ಸಿದ್ದು ಪೂರ್ಣಚಂದ್ರ

ತಾರಾಗಣ: ಭಾಸ್ಕರ್‌ ನೀನಾಸಂ, ರಶ್ಮಿತಾ, ಚಂದು ಗೌಡ, ರಾಜೇಶ್‌ ನಟರಂಗ ಮತ್ತು ವರ್ಧನ್‌ ತೀರ್ಥಹಳ್ಳಿ

ನಾಯಕಿ ಆ ಊರಿನ ಸೌಂದರ್ಯವತಿ. ಅವಳಿಗೆ ಮೂರ್ನಾಲ್ಕು ಗೆಳತಿಯರು. ಪ್ರತಿದಿನವೂ ಆಕೆ ಕಾಲೇಜಿಗೆ ಹೋಗುವುದು ಬಸ್ಸಿನಲ್ಲಿ. ಆಕೆಯನ್ನು ಹಿಂಬಾಲಿಸುವುದೇ ನಾಯಕನ ಕೆಲಸ. ಒಂದು ದಿನ ಅವಳಿಗೆ ಮದುವೆ ನಿಶ್ಚಯವಾಗುತ್ತದೆ. ಮನೆಯವರ ಈ ತೀರ್ಮಾನಕ್ಕೆ ಆಕೆಯದು ಕಟು ವಿರೋಧ. ಕೊನೆಗೆ ತಾನು ಪ್ರೀತಿಸಿದ ನಾಯಕನೊಂದಿಗೆ ಅವಳು ನಗರ ಪ್ರದೇಶಕ್ಕೆ ಪಲಾಯನ ಮಾಡಬೇಕು. ಆಗಲೇ ಪ್ರೇಮ ಕಥಾನಕ ಗರಿಗೆದರುವುದು. ಲಾಗಾಯ್ತಿನಿಂದಲೂ ಪ್ರೇಕ್ಷಕರು ಇಂತಹ ಚಿತ್ರಗಳನ್ನು ನೋಡಿಕೊಂಡು ಬರುತ್ತಿದ್ದಾರೆ. ‘ಕೃಷ್ಣ ಗಾರ್ಮೆಂಟ್ಸ್‌’ ಸಿನಿಮಾದ್ದೂ ಇದೇ ಕಥೆ.

ಪ್ರೇಮಿಗಳ ಕಥೆ ಹೇಳಲು ಚಿತ್ರದುದ್ದಕ್ಕೂ ಪ್ರಯಾಸಪಟ್ಟಿದ್ದಾರೆ ನಿರ್ದೇಶಕ ಸಿದ್ದು ಪೂರ್ಣಚಂದ್ರ. ಎಲ್ಲ ಸಿದ್ಧಸೂತ್ರಗಳನ್ನು ಬಳಸಿಕೊಂಡೇ ಗಾರ್ಮೆಂಟ್ಸ್‌ ಹಿಂದಿನ ಕತ್ತಲಕೂಪದ ಕಥೆ ಹೇಳುವ ಪ್ರಯತ್ನ ಮಾಡಿದ್ದಾರೆ.

ಮಗಳು ತಪ್ಪು ಮಾಡಿದರೂ ಅವಳ ಮೇಲಿನ ಅತಿಯಾದ ಪ್ರೀತಿಯಿಂದ ತಾಯಿ ಅಥವಾ ತಂದೆ ಕ್ಷಮಿಸುವುದುಎಲ್ಲ ಕಥೆಗಳಲ್ಲಿ ಕಂಡುಬರುವ ಸಾಮಾನ್ಯ ದೃಶ್ಯ. ಈ ಸಿನಿಮಾದಲ್ಲಿ ಆಕೆಯ ಚಿಕ್ಕಪ್ಪನಿಗೆಆ ಜವಾಬ್ದಾರಿ ನೀಡಿದ್ದಾರೆ ಅಷ್ಟೇ. ಕೊನೆಯಲ್ಲಿ ಮಹಿಳೆಯರಿಗೆ ಕಂಟಕನಾದ ಗಾರ್ಮೆಂಟ್ಸ್‌ನ ಕಾಮುಕ ಮಾಲೀಕನ ಕೊಲೆಗೆ ಸಸ್ಪೆನ್ಸ್‌ ಲೇಪನ ಬೆರೆಸಿ ಕೈತೊಳೆದುಕೊಳ್ಳುವ ಪ್ರಯತ್ನ ಮಾಡಿದ್ದಾರೆ.

ಈಗಾಗಲೇ ಹಲವು ಬಾರಿ ಪರದೆಯ ಮೇಲೆ ಪ್ರೇಕ್ಷಕರು ನೋಡಿರುವ ಪ್ರೇಮದ ವೃತ್ತದಿಂದ ಆಚೆ ಜಿಗಿಯುವ, ಹೊಸದನ್ನು ಪ್ರೇಕ್ಷಕರಿಗೆ ಉಣಬಡಿಸುವ ಉದ್ದೇಶವೇ ಈ ಸಿನಿಮಾಕ್ಕೆ ಇಲ್ಲ. ಹಳೆಯದನ್ನೇ ನವೀನ ರೀತಿಯಲ್ಲಿ ಪ್ರಸ್ತುತಪಡಿಸುವ ಕೌಶಲವೂ ನಿರ್ದೇಶಕರಿಗೆ ಸಿದ್ಧಿಸಿಲ್ಲ.

ಪ್ರಸ್ತುತ ಸಾವಿರಾರು ಮಹಿಳೆಯರು ಗಾರ್ಮೆಂಟ್ಸ್‌ಗಳಲ್ಲಿ ದುಡಿಯುತ್ತಿದ್ದಾರೆ. ಸೇವಾ ಭದ್ರತೆ ಇಲ್ಲದೆ ಬದುಕು ಸವೆಸುತ್ತಿದ್ದಾರೆ. ಅವರ ಪರಿಸ್ಥಿತಿ, ಮನಸ್ಥಿತಿ ಬಗ್ಗೆ ನಿರ್ದೇಶಕರಿಗೆ ಕಿಂಚಿತ್ತೂ ತಿಳಿವಳಿಕೆ ಇಲ್ಲ ಎಂಬುದಕ್ಕೆ ಸಿನಿಮಾದುದ್ದಕ್ಕೂ ಸಾಕಷ್ಟು ಪುರಾವೆಗಳು ಸಿಗುತ್ತವೆ. ಸಿನಿಮಾದ ಕೆಲವು ದೃಶ್ಯಗಳಲ್ಲಿ ಸಂಭಾಷಣೆ, ಚಿತ್ರಕಥೆಯ ನಿರೂಪಣಾ ಶೈಲಿಯು ಧಾರಾವಾಹಿಯ ಜಾಡು ಹಿಡಿಯುತ್ತದೆ. ಆಗ ತಬ್ಬಿಬ್ಬಾಗುವ ಸರದಿ ಪ್ರೇಕ್ಞಕರದ್ದು.

ಭಾಸ್ಕರ್‌ ನೀನಾಸಂ ಮತ್ತು ರಶ್ಮಿತಾ ಹಿರಿತೆರೆಯ ನಟನಾ ಪಟ್ಟು ಅರಿಯಲು ಸಾಕಷ್ಟು ಬೆವರು ಸುರಿಸಬೇಕಿದೆ. ಚಿದಾನಂದ್‌ ಚಂದ್ರಶೇಖರ್‌ ಛಾಯಾಗ್ರಹಣ ಚಿತ್ರಕ್ಕೆ ಹೊಸದೇನನ್ನೂ ನೀಡಿಲ್ಲ. ರಘು ಧನ್ವಂತ್ರಿ ಸಂಗೀತ ಸಂಯೋಜನೆಯಲ್ಲಿ ಹೊಸತನವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT