ಒಂದು ದೊಡ್ಡ ಬ್ರೇಕ್‌ನ ನಂತರ...

7

ಒಂದು ದೊಡ್ಡ ಬ್ರೇಕ್‌ನ ನಂತರ...

Published:
Updated:
Deccan Herald

‘ಟೀವಿ ಕಾರ್ಯಕ್ರಮಗಳು, ವಾರ್ತೆ ನೋಡುವಾಗ ಮತ್ತೆ ಮತ್ತೆ ಬಳಕೆಯಾಗುತ್ತಲೇ ಇರುವ ಸಾಲು ‘ಒಂದು ಸಣ್ಣ ಬ್ರೇಕ್‌ನ ನಂತರ’. ಅದೇ ಶೀರ್ಷಿಕೆಯನ್ನು ಇಟ್ಟುಕೊಂಡು ಈಗ ಸಿನಿಮಾ ಕೂಡ ಬರುತ್ತಿದೆ. ಸಿನಿಮಾ ಹಾಡುಗಳ ಬಿಡುಗಡೆ ಕಾರ್ಯಕ್ರಮ ಒಂದು ಸಣ್ಣ ಬ್ರೇಕ್‌ನ ನಂತರವೇ ಶುರುವಾಗುತ್ತಿದೆ’ ನಿರೂಪಕಿ ಹೀಗೆ ಕಾರ್ಯಕ್ರಮ ಆರಂಭಿಸುವ ಹೊತ್ತಿಗೆ ಸಣ್ಣದಲ್ಲ, ಒಂದೂವರೆ ಗಂಟೆಗಳ ಅವಧಿಯ ದೊಡ್ಡ ಬ್ರೇಕ್‌ ಮುಗಿದಿತ್ತು. ಕಾದು ಕಾದು ಸುಸ್ತಾದವರೆದುರು ಮೊದಲು ಮಾತಿಗೆ ಆರಂಭಿಸಿದ್ದು ನಿರ್ದೇಶಕ ಅಭಿಲಾಷ್ ಗೌಡ. 

‘ಇದು ನಿರ್ದೇಶಕನಾಗಿ ನನ್ನ ಮೊದಲ ಪ್ರಯತ್ನ. ಆದರೂ ಅನುಭವಸ್ಥರ ಸಹಕಾರ ಇದೆ. ಲೈಫಲ್ಲಿ ಪ್ರತಿಯೊಬ್ಬರಿಗೂ ಬ್ರೇಕ್ ಸಿಗತ್ತೆ. ಆ ಬ್ರೇಕ್‌ನ ನಂತರ ಬದುಕು ಬದಲಾಗುತ್ತದೆ. ಅಂಥ ಬ್ರೇಕ್‌ ಇಟ್ಟುಕೊಂಡೇ ಈ ಸಿನಿಮಾ ಮಾಡಿದ್ದೇವೆ’ ಎಂದರು ಅಭಿಲಾಷ್.

ಅವರ ಪ್ರಕಾರ ಕಥೆಯೇ ಈ ಚಿತ್ರದ ನಾಯಕ. ಸಂಗೀತವೇ ಸ್ಟಾರ್. ಹಾಗಂತ ನಟರು ಇಲ್ಲವೇ ಎಂದು ಅಚ್ಚರಿಪಡಬೇಡಿ, ಒಂದಲ್ಲ, ನಾಲ್ಕು ನಾಯಕರು ಈ ಸಿನಿಮಾದಲ್ಲಿದ್ದಾರೆ. ಅವರೆಲ್ಲರಿಗೂ ಒಬ್ಬಳೇ ನಾಯಕಿ ಇದ್ದಾಳೆ. ‘ಅಂಗವೈಕಲ್ಯ ಇರುವ ಅಸಹಾಯಕನೂ ಒಂದು ಹಂತದಲ್ಲಿ ಸಹನೆಗೆಡುತ್ತಾನೆ. ಆ ಸಂದರ್ಭದಲ್ಲಿ ಅವನಿಗೆ ಅಂಗವೈಕಲ್ಯ ಎನ್ನುವುದು ತಡೆಯಾಗುವುದಿಲ್ಲ. ತನ್ನ ಉದ್ದೇಶದಲ್ಲಿ ಹೇಗೆ ಯಶಸ್ವಿಯಾಗುತ್ತಾನೆ ಎನ್ನುವುದನ್ನು ಹೇಳಹೊರಟಿದ್ದೇವೆ’ ಎನ್ನುವುದು ನಿರ್ದೇಶಕರ ವಿವರಣೆ.

‘ಗೆಲ್ಲುವ ಉದ್ದೇಶದಿಂದಲೇ ಸಿನಿಮಾ ಮಾಡಿದ್ದೇವೆ. ಒಂದು ಸಿನಿಮಾ ಗೆಲ್ಲಲು ಏನೇನು ಬೇಕೋ ಎಲ್ಲವೂ ಇದರಲ್ಲಿದೆ’ ಎಂದೂ ಅವರು ಹೇಳಿದರು. ಚಿತ್ರದುದ್ದಕ್ಕೂ ಮಂಡ್ಯದ ಕನ್ನಡ ಬಳಸಿರುವುದೂ ಪ್ಲಸ್‌ ಆಗುತ್ತದೆ ಎಂಬ ನಂಬಿಕೆ ಚಿತ್ರತಂಡಕ್ಕಿದೆ.

ಹಿತನ್ ಹಾಸನ್ ಈ ಚಿತ್ರದ ಕಥೆ ಬರೆದಿದ್ದಾರೆ. ಚಿತ್ರದ ಸಂಗೀತ ಸಂಯೋಜನೆ ಮಾಡಿರುವ ಜತೆಗೆ ಒಂದು ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ ಕೂಡ. 

  ವೇದಿಕೆಯ ಪಕ್ಕದ ಒಂದು ಪೋಸ್ಟರ್‌ನಲ್ಲಿ ಬೆನ್ನುಮಾಡಿ ನಿಂತಿದ್ದ ಮನುಷ್ಯನ ಬೋಳುತಲೆ ಮಡಿಕೆಯ ಹಾಗೆ ಒಡೆದಿರುವ ಚಿತ್ರ ಇತ್ತು.  ಆ ಪೋಸ್ಟರ್ ಬಗ್ಗೆ ಕೇಳಿದಾಗ ‘ತಲೆ ಇದೆ, ಅದು ಬ್ರೇಕ್ ಆಗಿದೆ. ಬ್ರೇಕ್ ಆದ ಮೇಲೆ ಏನಾಗುತ್ತದೆ ಎನ್ನುವುದೇ ಕಥೆ’ ಎಂದು ಅಸ್ಪಷ್ಟವಾಗಿಯೇ ಹೇಳಿದರು.

ನಾಲ್ವರು ನಾಯಕರಿದ್ದರೂ ನಾಯಕಿ ಕೊನೆಯಲ್ಲಿ ಯಾರಿಗೂ ಸಿಗುವುದಿಲ್ಲವಂತೆ. ‘ಕನ್ನಡದಲ್ಲಿ ಏನೋ ಮಾಡಬೇಕು ಎಂಬ ಕಾರಣಕ್ಕೆ ಈ ಸಿನಿಮಾಗೆ ಹಣ ಹೂಡುತ್ತಿದ್ದೇನೆ’ ಎಂದರು ನಿರ್ಮಾಪಕ ಸರ್ವಶ್ರೀ.

‘ನಾಲ್ಕು ಜನಕ್ಕೂ ಸಿಗಲ್ಲ. ಆದ್ರೆ ಐದನೆಯವರೊಬ್ಬರಿದ್ದಾರೆ. ಅದು ಸಸ್ಪೆನ್ಸ್. ಸಿನಿಮಾದಲ್ಲಿ ಸಾಕಷ್ಟು ಟ್ವಿಸ್ಟ್‌ಗಳು ಇವೆ’ ಎಂದರು ಹಿತನ್. ಅವರ ಜತೆಗೆ ಕಿರಣ್ ಕೊಡ್ಲಿಪೇಟ, ದೋಸ್ತಿ ಸೂರ್ಯ, ಚೇತನ್ ನಾಯಕರಾಗಿ ನಟಿಸಿದ್ದಾರೆ. ಚೈತ್ರಾ ಈ ಚಿತ್ರದ ನಾಯಕಿ. ‘ಫ್ಯಾಮಿಲಿ ಗರ್ಲ್, ಕಾಲೇಜ್ ಲವ್ ಸ್ಟೋರಿ. ನಂತರ ಹಾರರ್ ಆಗುತ್ತ ಹೋಗುತ್ತದೆ. ಯಾರೂ ಊಹಿಸಲು ಸಾಧ್ಯವಿಲ್ಲ’ ಎಂದರು ಚೈತ್ರಾ. ನಾಗರಾಜ ಉಪ್ಪುಂದ ಛಾಯಾಗ್ರಹಣ ಚಿತ್ರಕ್ಕಿದೆ. ಮಂಡ್ಯ ಸುತ್ತಮುತ್ತ ಮತ್ತು ಮಡಿಕೇರಿಯಲ್ಲಿ ಚಿತ್ರೀಕರಣ ನಡೆಸಲಾಗಿದೆ.. ನವೆಂಬರ್ ಮೊದಲ ವಾರ ಚಿತ್ರ ಬಿಡುಗಡೆ ಮಾಡುವ ಆಲೋಚನೆಯಲ್ಲಿ ತಂಡವಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !