ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಥೇರ್ ಪಾಂಚಾಲಿ’ ಸಣ್ಣ ಹಾದಿಯ ದೊಡ್ಡ ಪಯಣ

Last Updated 9 ನವೆಂಬರ್ 2018, 19:30 IST
ಅಕ್ಷರ ಗಾತ್ರ

21ನೇ ಶತಮಾನದ ಜಗತ್ತಿನ ಸರ್ವಶ್ರೇಷ್ಠ 100 ಚಿತ್ರಗಳ ಸಾಲಿನಲ್ಲಿ ನಿರ್ದೇಶಕ ಸತ್ಯಜೀತ್ ರೇ ಅವರ ‘ಪಥೇರ್ ಪಾಂಚಾಲಿ’ ಚಿತ್ರವು 15ನೇ ಸ್ಥಾನ ಪಡೆದಿದೆ. 1900 ಮತ್ತು 2000ನೇ ಇಸವಿವರೆಗಿನ ಎಲ್ಲಾ ವಿದೇಶಿ ಭಾಷೆಗಳ ಚಲನಚಿತ್ರಗಳನ್ನು ಸೂಕ್ಷ್ಮವಾಗಿ ಅವಲೋಕಿಸಿರುವ ಪ್ರಮುಖ ವಿಮರ್ಶಕರು ‘ಪಥೇರ್ ಪಾಂಚಾಲಿ’ಗೆ ಪ್ರಮುಖ 20 ಸ್ಥಾನದೊಳಗೆ ಅವಕಾಶ ನೀಡಿರುವುದು ವಿಶೇಷ.

ವಿದೇಶಿ ಭಾಷೆಗಳ ಚಲನಚಿತ್ರಕ್ಕೆ ಸಂಬಂಧಿಸಿದಂತೆ ಬಿಬಿಸಿ (ಸಂಸ್ಕೃತಿ ವಿಭಾಗ) ಇತ್ತೀಚೆಗೆ ನಡೆಸಿರುವ ಸಮೀಕ್ಷೆಯಲ್ಲಿ ಈ ಅಂಶವನ್ನು ದೃಢಪಡಿಸಿದೆ. ಸರ್ವಶ್ರೇಷ್ಠ ಚಿತ್ರಗಳ ಸಾಲಿನಲ್ಲಿ ಭಾರತೀಯ ಚಿತ್ರವೊಂದು ಆಯ್ಕೆ ಆಗಿರುವುದು ಒಂದೆಡೆ ಸಂತಸದ ವಿಷಯವಾದರೆ, ಮತ್ತೊಂದೆಡೆ ಏಕಮಾತ್ರ ಚಿತ್ರ ಎಂಬುದು ಕಳವಳಕಾರಿ ವಿಷಯವೂ ಹೌದು. ಕಾರಣ: ಪ್ರಾದೇಶಿಕ ಭಾಷೆಗಳ ಚಿತ್ರರಂಗ ಸೇರಿದಂತೆ 100ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿರುವ ಭಾರತೀಯ ಚಿತ್ರರಂಗವು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಭಾವ ಬೀರುವಲ್ಲಿ ವಿಫಲವಾಯಿತೇ ಎಂಬ ಪ್ರಶ್ನೆ ಕಾಡುತ್ತದೆ.

ಇಂಗ್ಲಿಷ್ ಭಾಷೆಯ ಚಲನಚಿತ್ರಗಳಿಗೆ ಮಾತ್ರ ಸಮೀಕ್ಷೆ ಸೀಮಿತಗೊಳಿಸುತ್ತಿದ್ದ ಬಿಬಿಸಿ ಇದೇ ಮೊದಲ ಬಾರಿಗೆ ಕುತೂಹಲದಿಂದ ವಿದೇಶಿ ಚಲನಚಿತ್ರಗಳ ಸಮೀಕ್ಷೆ ನಡೆಸಲು ಮುಂದಾಯಿತು. ಅದಕ್ಕೆಂದೇ 43 ದೇಶಗಳಿಂದ 41 ಭಾಷೆಗಳು ಬಲ್ಲ 209 ವಿಮರ್ಶಕರನ್ನು ಆಯ್ಕೆ ಮಾಡಿತು. ಆಯಾ ಕಾಲಘಟ್ಟ, ವರ್ಷದ ಚಲನಚಿತ್ರಗಳನ್ನು ವೀಕ್ಷಿಸಿದ ವಿಮರ್ಶಕರು ಅಂತಿಮ ಫಲಿತಾಂಶ ಬಹಿರಂಗಪಡಿಸಿದಾಗ, ನಿಜಕ್ಕೂ ಅಚ್ಚರಿಗೆ ಎಡೆ ಮಾಡಿಕೊಟ್ಟಿತು.

ಒಟ್ಟು 24 ದೇಶಗಳ 100 ಚಿತ್ರಗಳನ್ನು ಸರ್ವಶ್ರೇಷ್ಠವೆಂದು ಪರಿಗಣಿಸಲಾಯಿತು. 19 ಭಾಷೆಗಳಲ್ಲಿ 67 ನಿರ್ದೇಶಕರು ನಿರ್ದೇಶಿಸಿದ ಚಿತ್ರಗಳನ್ನು ಆಯ್ಕೆ ಮಾಡಲಾಯಿತು. ಫ್ರೆಂಚ್ ಭಾಷೆಯ ಅತಿ ಹೆಚ್ಚು 27 ಚಿತ್ರಗಳು ಆಯ್ಕೆಯಾದರೆ, ಮ್ಯಾಂಡರೀನ್ (ಚೀನಿ ಭಾಷೆಯ ಒಂದು ಪಂಗಡ) ಭಾಷೆಯ 12 ಚಿತ್ರಗಳು, ಇಟಾಲಿಯನ್ ಮತ್ತು ಜಪಾನಿ ಭಾಷೆಯ 11 ಚಿತ್ರಗಳು ಆಯ್ಕೆಯಾದವು. ಕೆಲ ಭಾಷೆಗಳಂತೂ ಒಂದೊಂದೇ ಚಲನಚಿತ್ರ ಪ್ರತಿನಿಧಿಸುಲ್ಲಿ ಮಾತ್ರ ಯಶಸ್ವಿಯಾದವು. ನಾಲ್ವರು ಮಹಿಳಾ ನಿರ್ದೇಶಕರ ಚಿತ್ರಗಳು ಮಾತ್ರ ಆಯ್ಕೆಯಾಗಿರುವುದು ವಿಶೇಷ.

ಶತಮಾನಗಳ ಇತಿಹಾಸ ಹೊಂದಿರುವ ಭಾರತೀಯ ಚಿತ್ರರಂಗದ ಚಲನಚಿತ್ರಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಭಾವ ಬೀರುವಲ್ಲಿ ಯಾಕೆ ವಿಫಲವಾಗಿವೆ ಎಂಬ ಪ್ರಶ್ನೆ ಚಿತ್ರರಸಿಕರಲ್ಲಿ ಕಾಡುತ್ತಿದೆ.

ಆಸ್ಕರ್ ಪ್ರಶಸ್ತಿ ಸೇರಿದಂತೆ ಅಂತರರಾಷ್ಟ್ರೀಯ ಮಟ್ಟದ ಪ್ರಶಸ್ತಿ ಗಳಿಸುವಲ್ಲಿ ಭಾರತೀಯ ಚಿತ್ರರಂಗದ ವಿವಿಧ ಭಾಷೆಗಳ ಚಲನಚಿತ್ರಗಳು ಯಶಸ್ಸು ಕಾಣುವುದಿಲ್ಲ. ರಿಚರ್ಡ್‌ ಅಟೆನಬರೊ ನಿರ್ಮಾಣದ ‘ಗಾಂಧಿ’, ಇತ್ತೀಚಿನ ‘ಸ್ಲಂ ಡಾಗ್ ಮಿಲಿಯೇನರ್’ ಹೊರತುಪಡಿಸಿದರೆ ಬೇರೆ ಭಾರತೀಯ ಚಿತ್ರಗಳು ಆಸ್ಕರ್ ಪ್ರಶಸ್ತಿಯ ಸಮೀಪ ಕೂಡ ಬರಲು ಸಾಧ್ಯವಾಗಲಿಲ್ಲ. ಭಾರತೀಯ ಚಿತ್ರಗಳು ಸುದೀರ್ಘವಿರುತ್ತವೆ ಎಂಬುದು ಕಾರಣವೇ? ಚಿತ್ರಕಥೆ ಗಟ್ಟಿತನ ಇರುವುದಿಲ್ಲವೇ? ಹಾಲಿವುಡ್‌ ಚಿತ್ರಗಳಿಗೆ ಮಾತ್ರವೇ ಆದ್ಯತೆ ನೀಡಲಾಗುವುದೇ? ಏಷ್ಯಾ ಖಂಡದ ಚಿತ್ರೋದ್ಯಮ ಹಾಲಿವುಡ್‌ಗೆ ಪೈಪೋಟಿ ನೀಡುವಷ್ಟು ಬೆಳೆದಿಲ್ಲವೇ ಎಂಬ ಹಲವು ಪ್ರಶ್ನೆಗಳಿವೆ. ಉತ್ತರ ಸಿಗಬೇಕಿದೆ.

ಬಡಕುಟುಂಬದ ಗೀತೆ...

ವರ್ಷ 1955ರಲ್ಲಿ ತೆರೆ ಕಂಡ ಪಥೇರ್ ಪಾಂಚಾಲಿ 6 ದಶಕಗಳ ನಂತರವೂ ತನ್ನ ಪ್ರಭಾವ ಕಾಯ್ದುಕೊಂಡಿದೆ. ಪಶ್ಚಿಮ ಬಂಗಾಳ ನಿರ್ಮಿಸಿದ ಈ ಚಿತ್ರವನ್ನು ಸತ್ಯಜೀತ್ ನಿರ್ದೇಶಿಸಿದ್ದು ಅಲ್ಲದೇ ಚಿತ್ರಕಥೆಯನ್ನು ಬರೆದರು. ಈ ಚಿತ್ರವು ಹಲವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಬಾಚಿಕೊಂಡಿತು. ಗ್ರಾಮೀಣ ಕುಟುಂಬದ ಸ್ಥಿತಿಗತಿ ಆಧರಿಸಿದ ಈ ಕಪ್ಪುಬಿಳುಪಿನ ಚಿತ್ರವು ಬಡತನ, ಜೀವನಶೈಲಿ, ಪ್ರೇಮ, ಪ್ರಾಮಾಣಿಕತೆ ಎಲ್ಲವನ್ನೂ ಪ್ರುಸ್ತತಪಡಿಸಿತು.

ಪಶ್ಚಿಮ ಬಂಗಾಳದ ನಿಶ್ಚಿಂದಿಪುರ ಗ್ರಾಮದಲ್ಲಿ ವಾಸವಿರುವ ಅರ್ಚಕನಿಗೆ (ಹರಿಹರ ರಾಯ್) ಕುಟುಂಬ ನಿಭಾಯಿಸುವುದು ಕಷ್ಟವಾಗುತ್ತದೆ. ಅರ್ಚಕನ ಪತ್ನಿಯು (ಸರ್ಬಜಯಾ) ಕಷ್ಟಪಟ್ಟು ಪುತ್ರಿ (ದುರ್ಗಾ) ಮತ್ತು ಪುತ್ರ (ಅಪ್ಪು) ಬೆಳೆಸಲು ಪ್ರಯತ್ನಿಸುತ್ತಾಳೆ. ಸಂಕಷ್ಟದ ಸುಳಿಯಲ್ಲಿ ಇದ್ದರೂ ದುರ್ಗಾ ಮತ್ತು ಅಪ್ಪು ಅಪರೂಪಕ್ಕೊಮ್ಮೆ ಸಂತಸದ ಕ್ಷಣಗಳನ್ನು ಕಳೆಯುತ್ತಾರೆ. ರೈಲಿನ ಶಬ್ದ, ಹೊಲದಲ್ಲಿ ಓಡಾಟ ಖುಷಿ ಕೊಡುತ್ತದೆ. ದುಡಿಮೆಗೆಂದು ಪಟ್ಟಣಕ್ಕೆ ಹೋಗುವ ಹರಿಹರ ರಾಯ್ ಗ್ರಾಮಕ್ಕೆ ಮರಳುವ ವೇಳೆಗೆ ದುರ್ಗಾ ಜ್ವರಕ್ಕೆ ತುತ್ತಾಗಿ ಸಾವನ್ನಪ್ಪಿರುತ್ತಾಳೆ. ಬಡತನದಿಂದ ದಿಕ್ಕು ತೋಚದೇ ಕುಟುಂಬವು ಗ್ರಾಮವನ್ನು ತೊರೆಯುತ್ತದೆ.

ಚಿತ್ರಗಳನ್ನೇ ಉಸಿರಾಗಿಸಿಕೊಂಡಿದ್ದ ಸತ್ಯಜೀತ್ ರೇ ಅವರು ಚಿತ್ರ ನಿರ್ಮಾಣ ಮತ್ತು ನಿರ್ದೇಶನಕ್ಕೆ ತಮ್ಮಿಡೀ ಜೀವನ ಸಮರ್ಪಿಸಿದರು. ಅವರು ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಪಾತ್ರರಾದರು. ಜೀವಮಾನ ಸಾಧನೆಗೆ ಸತ್ಯಜೀತ್ ರೇ ಅವರಿಗೆ 1992ರಲ್ಲಿ ಆಸ್ಕರ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ತೀವ್ರ ಅನಾರೋಗ್ಯದ ಕಾರಣ ಅವರಿಗೆ ಸಮಾರಂಭಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಅವರ ನಿವಾಸದಲ್ಲೇ ಪ್ರಶಸ್ತಿ ನೀಡಲಾಯಿತು. ಅದರ ವಿಡಿಯೋ ಸಮಾರಂಭದಲ್ಲಿ ಪ್ರದರ್ಶಿಸಲಾಯಿತು. ಅದೇ ವರ್ಷ ಅವರಿಗೆ ಭಾರತರತ್ನ ನೀಡಲಾಯಿತು. ಅದೇ ವರ್ಷ ಅವರು ನಿಧನರಾದರು. ವಿಶೇಷವೆಂದರೆ, ಅವರ ಚಿತ್ರವು ಒಮ್ಮೆಯೂ ಆಸ್ಕರ್ ಪ್ರಶಸ್ತಿ ನಾಮನಿರ್ದೇಶನಗೊಂಡಿರಲಿಲ್ಲ. ಆದರೆ, ಅವರನ್ನು ಪ್ರಶಸ್ತಿ ನೀಡಿ ಗೌರವಿಸುವಲ್ಲಿ ಆಸ್ಕರ್ ಪ್ರಶಸ್ತಿ ಹೆಮ್ಮೆಪಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT