ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟನೆ ಕನಸು, ಫೋಟೊಗ್ರಫಿ ಬದುಕು

Last Updated 3 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಕನ್ನಡ ರಂಗಭೂಮಿ, ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಛಾ‍ಪು ಮೂಡಿಸಿರುವನಟ ವಿಕ್ರಮ್‌ ಮೈಸೂರಿನವರು.ಮರಾಠಿ ಮಾತೃ
ಭಾಷೆಯ ಹಿನ್ನೆಲೆಯಿಂದ ಬಂದಿದ್ದರೂ ಕನ್ನಡಾಂಬೆಯ ಮಡಿಲಲ್ಲಿ ಬದುಕು ಕಟ್ಟಿಕೊಳ್ಳುತ್ತಿರುವ ಕಲಾರಾಧಕ. ಜೀ ಟಿ.ವಿಯಲ್ಲಿ ಪ್ರಸಾರವಾಗುತ್ತಿರುವ ‘ಮಹಾದೇವಿ’ ಧಾರಾವಾಹಿಯಲ್ಲಿ ಮಂತ್ರವಾದಿಚಂದ್ರಧರನ ಪಾತ್ರದಲ್ಲಿ ಪ್ರೇಕ್ಷಕರ ಮನಗೆಲ್ಲುತ್ತಿದ್ದಾರೆ. ತಮ್ಮ ಕಲಾಬದುಕಿನ ಕುರಿತು ‘ಸಿನಿಮಾ ಪುರವಣಿ’ಯೊಂದಿಗೆ ಅವರು ಹಲವು ಮಾಹಿತಿ ಹಂಚಿಕೊಂಡಿದ್ದಾರೆ.

ಇವರು ಬಾಲ್ಯದಲ್ಲಿ ವಿಪರೀತ ತುಂಟನಂತೆ. ಇದನ್ನು ಸಹಿಸದ ಪೋಷಕರು, ಮಂಡ್ಯ ರಮೇಶ್‌ ಅವರ ‘ನಟನ’ ಸಂಸ್ಥೆಯಲ್ಲಿ ರಜಾ– ಮಜಾ ಬೇಸಿಗೆ ಶಿಬಿರಕ್ಕೆ ಸೇರಿಸಿದ್ದರು. ಅಲ್ಲಿ ಕ್ರಿಕೆಟ್‌ ಆಟ ಬಿಟ್ಟರೆ ಮತ್ತೇನು ಗೊತ್ತಿಲ್ಲದ ವಿಕ್ರಮ್‌ ಚೆಂಡನ್ನು ಊಟದ ಡಬ್ಬಿ ಮೇಲೆ ಎಸೆದಿದ್ದರಂತೆ. ಈ ಪೋರನ ಎನರ್ಜಿ ಮತ್ತು ತುಂಟತನ ಕಂಡು ಮಂಡ್ಯ ರಮೇಶ್, ನಾಟಕ ತಂಡ ಸೇರುವಂತೆ ಕಿವಿಹಿಂಡಿದ್ದರಂತೆ. ಬಾಲ್ಯದಿಂದಲೇ ‘ನಟನ’ ಸಂಸ್ಥೆಯಲ್ಲಿ ವಿಕ್ರಮ್‌ಅಭಿನಯ ತಾಲೀಮು ಆರಂಭಿಸಿದರು. ಕನ್ನಡ ಭಾಷೆಯ ಉಚ್ಚಾರಣೆ ಗೊತ್ತಿಲ್ಲದೆ ಅವಮಾನಕ್ಕೂ ಒಳಗಾಗಿ, ನಿಂದಿಸಿದವರ ಎದುರೇ ಗೆಲ್ಲಬೇಕೆಂಬ ಛಲ ಇವರಲ್ಲಿ ಮೂಡಿತು. ಆಗಿನಿಂದ ಕನ್ನಡ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡು, ಹಿರಿಯ ನಟರ‌ ಸಂಭಾಷಣೆಯಏರಿಳಿತ, ಪದಗಳ ಉಚ್ಛಾರಣೆ ಗಮನಿಸುತ್ತಾ ಕನ್ನಡ ಭಾಷೆಯನ್ನು ಕಲಿತುಕೊಂಡೆ ಎನ್ನುತ್ತಾರೆ ವಿಕ್ರಮ್‌.

ಮಂಡ್ಯ ರಮೇಶ್ ನಿರ್ದೇಶನದ ‘ನೀಲಿ ಕುದುರೆ’, ‘ಆಲಿ ಬಾಬಾ ಮತ್ತು 40 ಕಳ್ಳರು’ ಮಕ್ಕಳ ನಾಟಕಗಳಲ್ಲಿ ಅಭಿನಯಿಸುವ ಅವಕಾಶ ಸಿಕ್ಕಾಗ ವಿಕ್ರಮ್‌ ನಟನಾ ಪ್ರತಿಭೆಗೆ ರಮೇಶ್‌ ನಿಜವಾದ ಸಾಣೆ ಹಿಡಿದಿದ್ದಾರೆ. ‘ಅಗ್ನಿ ಮತ್ತು ಮಳೆ’, ‘ಸಾಂಬಶಿವ ಪ್ರಹಸನ’, ‘ಒಂದು ಸೈನಿಕ ವೃತ್ತಾಂತ’ ನಾಟಕಗಳಲ್ಲಿ ತೋರಿದ ಅಭಿನಯ ಚಾತುರ್ಯ ನಟನಾ ಕ್ಷೇತ್ರದಲ್ಲಿಕಾಲೂರುವಂತೆ ಮಾಡಿತು ಎಂದು ಈ ನಟ ನೆನೆಯುತ್ತಾರೆ.

ಚಂದನ ವಾಹಿನಿಯಲ್ಲಿ ಈ ಹಿಂದೆ ಪ್ರಸಾರವಾದ ‘ಕಥಾ ಸರಿತಾ’ ಇವರ ನಟನೆಯ ಮೊದಲ ಧಾರಾವಾಹಿ. ನಂತರ, ಹಿರಿತೆರೆಗೆ ಜಿಗಿದು ಡಾ.ವಿಷ್ಣುವರ್ಧನ್‌ ಅವರ ‘ಸ್ಕೂಲ್ ಮಾಸ್ಟರ್’ ಚಿತ್ರದಲ್ಲಿ ಡ್ರಗ್ಸ್‌ ವ್ಯಸನಕ್ಕೆ ತುತ್ತಾದ ಬಾಲಕನ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸುದೀಪ್‌ ಅಭಿನಯದ ‘ಮಿಸ್ಟರ್‌ ತೀರ್ಥ’, ನಾಗತಿಹಳ್ಳಿ ಚಂದ್ರಶೇಖರ್‌ ಅವರ ‘ಒಲವೇ ಜೀವನ ಲೆಕ್ಕಾಚಾರ’, ಜಗ್ಗೇಶ್‌ ಮುಖ್ಯಭೂಮಿಕೆಯ ‘ನೀರ್‌ ದೋಸೆ’, ದುನಿಯಾ ವಿಜಯ್ ಅವರ ‘ವೀರಬಾಹು’ ಚಿತ್ರಗಳಲ್ಲಿಯೂ ಈ ನಟ ನಟಿಸಿದ್ದಾರೆ.

ಬೆಳ್ಳಿ ತೆರೆಯ ಅನುಭವದೊಂದಿಗೆ ಕಿರುತೆರೆಗೆ ಮರಳಿ ಬಂದ ಈ ನಟ ಹಲವು ಧಾರಾವಾಹಿಗಳಲ್ಲಿ ಅಭಿನಯ ಮುಂದುವರಿಸಿದ್ದಾರೆ. ಜೀ ಟಿ.ವಿಯಲ್ಲಿ ಈ ಹಿಂದೆ ಪ್ರಸಾರವಾದ ‘ದೇವಿ’, ‘ಪಾರ್ವತಿ ಪರಮೇಶ್ವರ’, ಕಲರ್ಸ್‌ ಕನ್ನಡದ ‘ಪಾ‍ಪಾ ಪಾಂಡು’, ‘ಸಿಲ್ಲಿ ಲಲ್ಲಿ’ ಧಾರಾವಾಹಿಗಳು ವಿಕ್ರಮ್‌ಗೆಹೆಸರು ತಂದುಕೊಟ್ಟಿವೆ. ನಿರ್ದೇಶನದಲ್ಲೂ ಛಾಪು ಮೂಡಿಸುತ್ತಿರುವ ವಿಕ್ರಮ್‌, ಹಸಿವು ಕುರಿತು ನಿರ್ದೇಶಿಸಿದ ಒಂದು ನಿಮಿಷದ ಸಾಕ್ಷ್ಯಚಿತ್ರ ಸೋಷಿಯಲ್‌ ಮೀಡಿಯಾಗಳಲ್ಲಿ ನೆಟ್ಟಿಗರ ಗಮನ ಸೆಳೆದಿದೆ.

ಇವರು ಮಾಡಿದ ಸ್ವಚ್ಛ ಭಾರತ್ ಸಾಕ್ಷ್ಯಚಿತ್ರ ಮೇರುನಟ ಅಮಿತಾಭ್ ಬಚ್ಚನ್ ಗಮನ ಸೆಳೆದು, ಅವರೊಂದಿಗೆ ಎನ್‌ಡಿಟಿವಿ ಸಂದ‌ರ್ಶನದಲ್ಲೂ ಈ ನಟ ಪಾಲ್ಗೊಂಡು ಗಮನ ಸೆಳೆದಿದ್ದಾರೆ.

ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ ಕುರಿತು ಮಹಿಳಾ ಆಯೋಗ ನಿರ್ಮಿಸಿರುವ ಸಾಮಾಜಿಕ ಸಂದೇಶದ ಕೆಲ ಕಿರುಚಿತ್ರಗಳ ನಿರ್ದೇಶನ ಮಾಡಿರುವ ಅನುಭವವೂ ಇವರಿಗಿದೆ. ಬಿಡುವಿನಲ್ಲಿಪುಸ್ತಕಗಳನ್ನು ಓದುವ ಅಭ್ಯಾಸ ಇರಿಸಿಕೊಂಡಿರುವ ಈ ನಟ, ವಾದ್ಯಗಳನ್ನು ನುಡಿಸುವ ಹವ್ಯಾಸಗಾರ. ನಟನೆ ಜತೆಗೆ ಫೋಟೊಗ್ರಫಿಯನ್ನೂ ಬದುಕಿನ ನಿರ್ವಹಣೆಗೆ ಅವಲಂಬಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT