ಶ್ರುತಿ– ರಾಮ್‌ ದಾಂಪತ್ಯಗೀತೆ!

7

ಶ್ರುತಿ– ರಾಮ್‌ ದಾಂಪತ್ಯಗೀತೆ!

Published:
Updated:
Deccan Herald

ಶ್ರುತಿ ಹರಿಹರನ್‌ ಮತ್ತು ನೃತ್ಯ ನಿರ್ದೇಶಕ ರಾಮ್‌ಕುಮಾರ್‌ ನಡುವೆ ಪ್ರೇಮದ ಹೂ ಅರಳಿದ್ದು ಹಳೆಯ ಸುದ್ದಿ. ನಿಜಜೀವನದಲ್ಲಿ ಪ್ರೇಮದ ಸವಿ ಸವಿಯುತ್ತಿರುವ ಅವರು ತೆರೆಯ ಮೇಲೆ ಗಂಡು– ಹೆಣ್ಣಿನ ಸಂಬಂಧದಲ್ಲಿನ ಇನ್ನಷ್ಟು ಸೂಕ್ಷ್ಮ ಎಳೆಗಳನ್ನು ಬಿಡಿಸಿ ತೋರಿಸಲು ಸಿದ್ಧರಾಗಿದ್ದಾರೆ. ಪ್ರೀತಿಗಿರುವ ಮಾಧುರ್ಯದೊಟ್ಟಿಗೆ ಸಂಬಂಧದ ಗರ್ಭದಲ್ಲಿಯೇ ಅಡಗಿರುವ ತಲ್ಲಣಗಳನ್ನೂ ಅಭಿವ್ಯಕ್ತಿಸಲು ಅವರಿಗೆ ವೇದಿಕೆಯಾಗಿರುವುದು ಒಂದು ಆಲ್ಬಂ ಸಾಂಗ್‌.

ಹೌದು, ಶ್ರುತಿ ಮತ್ತು ರಾಮ್‌ ಮೊದಲ ಬಾರಿಗೆ ತೆರೆಯ ಮೇಲೆ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಗೊಮ್ಟೇಶ್‌ ಉಪಾಧ್ಯೆ ಅವರು ನಿರ್ದೇಶಿಸುತ್ತಿರುವ ‘ಪ್ರೇಮ’ ಎಂಬ ವಿಡಿಯೊ ಆಲ್ಬಂ ಅವರು ತೆರೆಯನ್ನು ಹಂಚಿಕೊಳ್ಳುತ್ತಿದ್ದು, ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಈ ಆಲ್ಬಂ ಬಿಡುಗಡೆಯಾಗಲಿದೆ.

‘‘ಗೊಮ್ಟೇಶ್‌ ಅವರ ‘ನೀನೆ’ ಎಂಬ ವಿಡಿಯೊ ಆಲ್ಬಂ ಅನ್ನು ನಾನು ನೋಡಿದ್ದೆ. ತುಂಬ ಚೆನ್ನಾಗಿ ಮಾಡಿದ್ದರು. ಅದರ ನಂತರವೂ ಎರಡು ಮೂರು ವಿಡಿಯೊ ಆಲ್ಬಂ ಮಾಡಿದ್ದರು. ‘ಪ್ರೇಮ’ ಆಲ್ಬಂನಲ್ಲಿ ನಟಿಸುವಂತೆ ಕೇಳಿಕೊಂಡು ನನ್ನ ಬಳಿ ಬಂದಾಗ ನನಗೆ ತುಂಬ ಇಷ್ಟವಾಗಿದ್ದು ಸ್ಕ್ರಿಪ್ಟ್‌. ಪ್ರೇಮದ ಕಲ್ಪನೆಯಲ್ಲಿಯೇ ಸಂಬಂಧದ ಹಲವು ಬಹುಸೂಕ್ಷ್ಮ ಎಳೆಗಳನ್ನು ಬಿಡಿಸಿಡುವ ಪ್ರಯತ್ನವನ್ನು ಅವರು ಮಾಡಿದ್ದಾರೆ. ದಂಪತಿಯ ಮಧ್ಯ ಒಂದಿಷ್ಟು ವರ್ಷಗಳ ನಂತರ ಸಂಬಂಧದಲ್ಲಿ ಆಗುವ ಪಲ್ಲಟಗಳು ಅದರ ಪರಿಣಾಮಗಳ ಕುರಿತು ಕಥನಾತ್ಮಕವಾಗಿ ನಿರೂಪಿಸುತ್ತಾರೆ ನಿರ್ದೇಶಕರು. ನಾಲ್ಕೇ ನಿಮಿಷದಲ್ಲಿ ಒಂದು ಗಾಢವಾದ ಕಥೆಯನ್ನು ಹೇಳಿದ್ದಾರೆ’’ ಎಂದು ನಿರ್ದೇಶಕರನ್ನು ಪ್ರಶಂಸಿಸುವ ಶ್ರುತಿ, ತಮ್ಮ ಸಹನಟ ರಾಮ್‌ಕುಮಾರ್‌ ಅವರ ಕುರಿತು ಹೇಳಲು ಮರೆಯುವುದಿಲ್ಲ. 

‘ರಾಮ್‌ ಮತ್ತು ನನ್ನ ಪರಿಚಯ ಹತ್ತು ವರ್ಷ ಹಳೆಯದು. ನೃತ್ಯಗಾರರಾಗಿ, ನೃತ್ಯ ಸಂಯೋಜಕರಾಗಿ ಅವರ ಜತೆ ಕೆಲಸ ಮಾಡಿದ ಅನುಭವ ಇತ್ತು. ಈಗ ಮೊದಲ ಬಾರಿಗೆ ಒಟ್ಟಿಗೆ ನಟಿಸುತ್ತಿದ್ದೇವೆ. ನಮ್ಮಿಬ್ಬರ ನಡುವಿನ ಹೊಂದಾಣಿಕೆಯ ಕಾರಣದಿಂದ ಈ ಆಲ್ಬಂನಲ್ಲಿ ನಟಿಸುವುದು ಕಷ್ಟ ಅನಿಸಲೇ ಇಲ್ಲ. ನನ್ನ ಪಾಲಿಗೆ ಇದೊಂದು ಕಲಿಕೆಯ ಪ್ರಕ್ರಿಯೆ’ ಎಂದು ಪ್ರತಿಕ್ರಿಯಿಸುತ್ತಾರೆ.

‘ಇದು ದಕ್ಷಿಣ ಭಾರತದ ನಾಲ್ಕು ಭಾಷೆಯವರು ಸೇರಿಕೊಂಡು ಮಾಡಿದ ಆಲ್ಬಂ ಇದು’ ಎನ್ನುತ್ತಾರೆ ನಿರ್ದೇಶಕ ಗೊಮ್ಟೇಶ್‌ ಉಪಾಧ್ಯೆ. ‘ನಾನು ಬೆಂಗಳೂರಿನವನು, ಇದಕ್ಕೆ ಛಾಯಾಗ್ರಹಣ ಮಾಡಿರುವ ಯಾಮಿನಿ ಯಜ್ಞಮೂರ್ತಿ ಚೆನ್ನೈನವರು, ಸಂಗೀತ ಸಂಯೋಜಿಸಿರುವ ಫಣಿ ಕಲ್ಯಾಣ್‌ ಹೈದರಾಬಾದ್‌ನವರು. ಹೀಗೆ ಬೇರೆ ಬೇರೆ ಭಾಷೆಯ ಪ್ರತಿಭಾವಂತರು ಸೇರಿಕೊಂಡು ಮಾಡಿದ ಆಲ್ಬಂ ಇದು’ ಎನ್ನುವುದು ಅವರ ವಿವರಣೆ.

‘ದಂಪತಿಗಳ ಮಧ್ಯೆ ಕಮರಿದ ಪ್ರೇಮ ಮತ್ತೆ ಚಿಗುರಿಕೊಳ್ಳುವ ಕಥೆಯನ್ನು ಈ ಆಲ್ಬಂನಲ್ಲಿ ಹೇಳಹೊರಟಿದ್ದೇವೆ. ಈ ಸ್ಕ್ರಿಪ್ಟ್‌ ಬರೆದಾಗಲೇ ನನ್ನ ಮನಸಲ್ಲಿ ಶ್ರುತಿ ಹರಿಹರನ್‌ ಇದಕ್ಕೆ ಹೊಂದುತ್ತಾರೆ ಅನಿಸಿತ್ತು. ಅವರು ನನ್ನ ಹಳೆಯ ಸ್ನೇಹಿತೆ. ಆದ್ದರಿಂದ ಪ್ರೀತಿಯಿಂದಲೇ ಒಪ್ಪಿಕೊಂಡು ನಟಿಸಿದ್ದಾರೆ’ ಎನ್ನುತ್ತಾರೆ ಗೊಮ್ಟೇಶ್‌. ಐದುವರೆ ನಿಮಿಷದ ಈ ವಿಡಿಯೊ ಆಲ್ಬಂ ಅನ್ನು ಚೆನ್ನೈ ನಗರ ಮತ್ತು ಸಮುದ್ರ ತೀರದಲ್ಲಿ ಮೂರು ದಿನಗಳ ಕಾಲ ಚಿತ್ರೀಕರಿಸಿದ್ದಾರೆ ಅವರು. ಈಗಾಗಲೇ ಚಿತ್ರೀಕರಣ ಮತ್ತು ಸಂಕಲನದ ಕೆಲಸ ಮುಗಿದಿದೆ. ಸೆಪ್ಟೆಂಬರ್‌ನಲ್ಲಿ ಯೂ ಟ್ಯೂಬ್‌ನಲ್ಲಿ ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ.  ಈ ಆಲ್ಬಂಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಕನ್ನಡದಲ್ಲಿ ಕಿರಣ್‌ ಕಾವೇರಪ್ಪ ಸಾಹಿತ್ಯ ಬರೆಯುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !