ಶನಿವಾರ, ಜುಲೈ 2, 2022
25 °C

ಸರೊಗಸಿ ಮೂಲಕ ಮಮ್ಮಿಯಾದ ಪ್ರಿಯಾಂಕಾ ಚೋಪ್ರಾ: ಏನಿದು ಬಾಡಿಗೆ ತಾಯ್ತನ?

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಅವರ ಪತಿ, ಗಾಯಕ ನಿಕ್ ಜೊನಾಸ್ ದಂಪತಿ ಬಾಡಿಗೆ ತಾಯ್ತನದ (ಸರೊಗಸಿ) ಮೂಲಕ ಮಗು ಪಡೆದಿದ್ದಾರೆ. ಅನೇಕ ಅಭಿಮಾನಿಗಳು ಪ್ರಿಯಾಂಕಾ ಏಕೆ ಬಾಡಿಗೆ ತಾಯಿ ಮೂಲಕ ಮಗು ಪಡೆದರು? ಎಂದು ಪ್ರಶ್ನಿಸುತ್ತಿದ್ದಾರೆ.

ಕೆಲವು ಮಾಧ್ಯಮಗಳ ವರದಿ ಪ್ರಕಾರ ಸಹಜವಾಗಿ ಮಗು ಪಡೆಯುವುದಕ್ಕೆ ಪ್ರಿಯಾಂಕಾಗೆ ಆರೋಗ್ಯ ಸಮಸ್ಯೆಗಳಿರಲಿಲ್ಲ. ಆದರೆ, ಅವರಿಗೆ 39 ವಯಸ್ಸು. ಹೀಗಾಗಿ ಈ ವಯಸ್ಸಿನಲ್ಲಿ ಗರ್ಭಧರಿಸಿ ಮಗು ಪಡೆಯಲು ಹೋದರೆ ತೊಂದರೆ ಆಗಬಹುದು ಎಂದು ಬಾಡಿಗೆ ತಾಯ್ತನದ ಮೂಲಕ ಮಗು ಪಡೆದಿದ್ದಾರೆ ಎನ್ನಲಾಗಿದೆ.

ಆದರೆ, ಈ ಬಗ್ಗೆ ಪ್ರಿಯಾಂಕಾ ದಂಪತಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇನ್ನು ಮಗುವಿನ ವಿಚಾರವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಪ್ರಿಯಾಂಕಾ, ‘ನಾವು ಬಾಡಿಗೆ ತಾಯ್ತನದ ಮೂಲಕ ಮಗು ಪಡೆದಿದ್ದೇವೆ. ಈ ವಿಶೇಷ ಸಂದರ್ಭದಲ್ಲಿ ಎಲ್ಲರೂ ನಮ್ಮ ಖಾಸಗಿತನವನ್ನು ಗೌರವಿಸಬೇಕು ಎಂದು ಕೇಳಿಕೊಳ್ಳುತ್ತೇನೆ. ಈಗ ನಮ್ಮ ಕುಟುಂಬದ ಮೇಲೆ ಗಮನ ಹರಿಸಿದ್ದೇವೆ’ ಎಂದು ಹೇಳಿಕೊಂಡಿದ್ದಾರೆ.

ಆದರೆ, ಮಗು ಗಂಡೋ? ಹೆಣ್ಣೋ? ಎಂಬುದನ್ನು ಪ್ರಿಯಾಂಕಾ ಖಚಿತಪಡಿಸಿಲ್ಲ. ಕೆಲ ಮಾಧ್ಯಮಗಳು ಈ ದಂಪತಿ ಹೆಣ್ಣು ಮಗು ಪಡೆದಿದ್ದಾರೆ ಎಂದು ವರದಿ ಮಾಡಿವೆ. ಪ್ರಿಯಾಂಕಾ ಹಾಗೂ ನಿಕ್ ಜೊನಾಸ್ 2018 ರ ಡಿಸೆಂಬರ್‌ನಲ್ಲಿ ಜೈಪುರದಲ್ಲಿ ಮದುವೆಯಾಗಿದ್ದರು. ಸದ್ಯ ಅಮೆರಿಕದಲ್ಲಿ ನೆಲೆಸಿದ್ದಾರೆ.

ಈ ಸುದ್ದಿಯನ್ನು ಹಂಚಿಕೊಂಡಿದ್ದಕ್ಕೆ ನಿಕ್ ದಂಪತಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು, ಹಿತೈಷಿಗಳು ಶುಭಾಶಯ ಕೋರುತ್ತಿದ್ದಾರೆ.


ಪ್ರಿಯಾಂಕಾ ಚೋಪ್ರಾ

ಏನಿದು ಬಾಡಿಗೆ ತಾಯ್ತನ?
* ಕೆಲವು ಪ್ರಕರಣಗಳಲ್ಲಿ ಮಕ್ಕಳಾಗದ ದಂಪತಿಗಾಗಿ (ಅಥವಾ ಮಕ್ಕಳನ್ನು ಬಯಸುವ ಪುರುಷ ಇಲ್ಲವೆ ಮಹಿಳೆಗಾಗಿ) ಬೇರೊಬ್ಬ ಮಹಿಳೆ ಗರ್ಭ ಧರಿಸಿ, ಮಗುವನ್ನು ಹೆತ್ತು ಕೊಡುವ ಪ್ರಕ್ರಿಯೆಯೇ ಬಾಡಿಗೆ ತಾಯ್ತನ

* ಮಗು ಬೇಕೆಂದು ಇಚ್ಛಿಸಿದ ದಂಪತಿಯ ಪರವಾಗಿ ಗರ್ಭವನ್ನು ಧರಿಸಿ, ಒಂಬತ್ತು ತಿಂಗಳವರೆಗೆ ಭ್ರೂಣದ ಬೆಳವಣಿಗೆಗೆ ಸಹಕರಿಸಿ, ಹೆರಿಗೆ ಮಾಡಿಸಿಕೊಂಡ ಬಳಿಕ ಮಗುವನ್ನು ಅದರ ಪಾಲಕರಿಗೆ ಒಪ್ಪಿಸಲು ಬಾಡಿಗೆ ತಾಯಿ ಮತ್ತು ಅದರ ಪಾಲಕರ ಮಧ್ಯೆ ಮೊದಲೇ ಒಪ್ಪಂದ ಏರ್ಪಟ್ಟಿರುತ್ತದೆ. (ಕೆಲವು ಸೆಲಿಬ್ರಿಟಿಗಳು ತಮ್ಮ ಅಂಗಸೌಷ್ಟವ ಹಾಳಾಗುತ್ತದೆ ಎಂದು ಈ ಅವಕಾಶ ಬಳಸಿಕೊಳ್ಳುತ್ತಾರೆ)

* ದೈಹಿಕವಾಗಿ ಅಥವಾ ವೈದ್ಯಕೀಯವಾಗಿ ಮಕ್ಕಳನ್ನು ಪಡೆಯಲು ಸಾಧ್ಯವೇ ಇಲ್ಲದ ದಂಪತಿಯು ಮಗು ಹೊಂದುವ ತನ್ನ ಆಸೆಯನ್ನು ಬಾಡಿಗೆ ತಾಯ್ತನದ ಮೂಲಕ ಈಡೇರಿಸಿಕೊಳ್ಳಲು ಸಾಧ್ಯ

* ಬಾಡಿಗೆ ತಾಯ್ತನದಲ್ಲಿ ಎರಡು ವಿಧ: ಒಂದು ಸಾಂಪ್ರದಾಯಿಕ (traditional) ಬಾಡಿಗೆ ತಾಯ್ತನವಾದರೆ, ಮತ್ತೊಂದು ಗರ್ಭಧಾರಣೆ (gestational) ಬಾಡಿಗೆ ತಾಯ್ತನ

* ಸಾಂಪ್ರದಾಯಿಕ ವಿಧಾನದಲ್ಲಿ ಬಾಡಿಗೆ ತಾಯಿಯ ಅಂಡಾಣುವನ್ನೇ ಬಳಸಲಾಗುತ್ತದೆ. ಮಗುವನ್ನು ಬಯಸಿದ ತಂದೆ ಇಲ್ಲವೆ ದಾನಿಯಿಂದ ಪಡೆದ ವೀರ‍್ಯಾಣುವಿನ ಮೂಲಕ ಗರ್ಭಧಾರಣೆಗೆ ಅನುವು ಮಾಡಿಕೊಡಲಾಗುತ್ತದೆ. ಈ ವಿಧಾನದಲ್ಲಿ ಹುಟ್ಟುವ ಮಗು, ಬಾಡಿಗೆ ತಾಯಿಯೊಂದಿಗೆ ವಂಶವಾಹಿ ಸಂಬಂಧ ಹೊಂದಿರುತ್ತದೆ

* ಗರ್ಭಧಾರಣೆಯ ಇನ್ನೊಂದು ವಿಧಾನದಲ್ಲಿ ಮಗು ಬಯಸಿದ ತಂದೆ–ತಾಯಿಯಿಂದಲೇ ಪಡೆದ ಅಂಡಾಣು ಮತ್ತು ವೀರ‍್ಯಾಣುನನ್ನು ಬಳಸಲಾಗುತ್ತದೆ. ಈ ವಿಧಾನದಲ್ಲಿ ಭ್ರೂಣ ಬೆಳೆಯಲು ಮಾತ್ರ ಬಾಡಿಗೆ ತಾಯಿಯ ಗರ್ಭಾಶಯ ಬಳಕೆಯಾಗುತ್ತದೆ. ಹೀಗಾಗಿ ಈ ರೀತಿ ಜನಿಸಿದ ಮಗುವಿನ ಜತೆ ಬಾಡಿಗೆ ತಾಯಿಯು ಯಾವುದೇ ವಂಶವಾಹಿ ಸಂಬಂಧ ಹೊಂದಿರುವುದಿಲ್ಲ

* ಬಾಡಿಗೆ ತಾಯ್ತನ (ನಿಯಂತ್ರಣ) ಮಸೂದೆಯು ಗರ್ಭಧಾರಣೆ ವಿಧಾನದ ಬಾಡಿಗೆ ತಾಯ್ತನಕ್ಕೆ ಅವಕಾಶ ನೀಡುತ್ತದೆ ಹಾಗೂ ಅದರ ನಿಯಂತ್ರಣಕ್ಕೂ ನಿಯಮಗಳನ್ನು ಹೊಂದಿದೆ

* ಸದ್ಯದ ಸನ್ನಿವೇಶದಲ್ಲಿ ಬಾಡಿಗೆ ತಾಯ್ತನವು ಪರೋಪಕಾರಿ ಆಗಿರಬಹುದು ಅಥವಾ ವಾಣಿಜ್ಯದ ಉದ್ದೇಶವನ್ನೂ ಹೊಂದಿರಬಹುದು. ಪರೋಪಕಾರಿ ಬಾಡಿಗೆ ತಾಯ್ತನದಲ್ಲಿ ವೈದ್ಯಕೀಯ ವೆಚ್ಚ ಹಾಗೂ ವಿಮಾ ಸೌಲಭ್ಯವನ್ನಷ್ಟೇ ಪಡೆದರೆ, ವಾಣಿಜ್ಯ ಉದ್ದೇಶದ ಬಾಡಿಗೆ ತಾಯ್ತನದಲ್ಲಿ ವೈದ್ಯಕೀಯ ವೆಚ್ಚದ ಜತೆಗೆ ಆರ್ಥಿಕ ಪ್ರಯೋಜನವನ್ನೂ ಪಡೆಯಲಾಗುತ್ತದೆ

ಯಾರಿಗೆ ಅವಕಾಶ?
* ಗರ್ಭಕೋಶದಲ್ಲಿ ಸಮಸ್ಯೆ ಹೊಂದಿ ಸ್ವಂತವಾಗಿ ಗರ್ಭಧರಿಸಿ ಮಗು ಪಡೆಯುವುದು ಅಸಾಧ್ಯ ಎನಿಸಿದ ಮಹಿಳೆಯು ಬಾಡಿಗೆ ತಾಯ್ತನದ ನೆರವು ಪಡೆಯಬಹುದು

* ಹೆರಿಗೆ ಸಂದರ್ಭ ಇಲ್ಲವೆ ಕ್ಯಾನ್ಸರ್‌ನಂತಹ ಕಾಯಿಲೆಯಿಂದ ಗರ್ಭಕೋಶವನ್ನೇ ತೆಗೆಸಿಕೊಂಡ ಮಹಿಳೆ ಸಹ ಈ ಸೌಲಭ್ಯ ಪಡೆಯಲು ಅವಕಾಶ ಉಂಟು
* ರಷ್ಯಾ, ಜಾರ್ಜಿಯಾ, ಉಕ್ರೇನ್‌, ಕೊಲಂಬಿಯಾ, ಇರಾನ್‌ ಹಾಗೂ ಅಮೆರಿಕದ ಕೆಲವು ರಾಜ್ಯಗಳಲ್ಲಿ ವಾಣಿಜ್ಯ ಉದ್ದೇಶದ ಬಾಡಿಗೆ ತಾಯ್ತನಕ್ಕೂ ಅವಕಾಶವಿದೆ

ಬಾಡಿಗೆ ತಾಯಿ ಮೂಲಕ ಮಗು ಪಡೆದ ಸೆಲೆಬ್ರಿಟಿಗಳು
ಬಾಡಿಗೆ ತಾಯ್ತನದ ಮೂಲಕ ಬಾಲಿವುಡ್‌ನ ಹಲವು ತಾರೆಗಳು ಮಕ್ಕಳನ್ನು ಪಡೆದಿದ್ದಾರೆ. ಕರಣ್‌ ಜೋಹರ್‌, ಸಾರಾ ಜೆಸ್ಸಿಕಾ ಪಾರ್ಕರ್‌, ಶಾರೂಕ್‌ ಖಾನ್‌, ತುಷಾರ್‌ ಕಪೂರ್‌, ಏಕ್ತಾ ಕಪೂರ್‌, ಅಮೀರ್‌ ಖಾನ್‌, ಸನ್ನಿ ಲಿಯೋನ್‌, ಸೊಹೈಲ್‌ ಖಾನ್‌, ಫರ್ಹಾ ಖಾನ್‌, ಶಿಲ್ಪಾ ಶೆಟ್ಟಿ ಅದರಲ್ಲಿ ಮುಖ್ಯವಾದವರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು