ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಗಡಿ ಜಿಲ್ಲೆ ಬಳಿಯ ಗಾಜನೂರಿನ ಮೊಮ್ಮಗ ‘ಅಪ್ಪು’

ಜಿಲ್ಲೆಯ ಭಾಷೆ ಅಚ್ಚುಮೆಚ್ಚು, ತಂದೆಯ ಹುಟ್ಟೂರಿಗೆ ಬಿಡುವಾದಾಗಲೆಲ್ಲ ಭೇಟಿ
Last Updated 29 ಅಕ್ಟೋಬರ್ 2021, 10:20 IST
ಅಕ್ಷರ ಗಾತ್ರ

ಚಾಮರಾಜನಗರ: ‘ಅಪ್ಪು’, ನಟ ಪುನೀತ್‌ರಾಜ್‌ಕುಮಾರ್‌ ಅವರು ಗಡಿ ಜಿಲ್ಲೆ ಚಾಮರಾಜನಗರಕ್ಕೆ ಹೊಂದಿಕೊಂಡಿರುವ ತಮಿಳುನಾಡಿನ ತಾಳವಾಡಿಯ ಗಾಜನೂರಿನ ‘ಮೊಮ್ಮಗ’.

ತಮ್ಮ ತಂದೆ, ವರನಟ ಡಾ.ರಾಜ್‌ಕುಮಾರ್‌ ಅವರ ಹುಟ್ಟೂರು ಗಾಜನೂರಿನ ಬಗ್ಗೆ ಪುನೀತ್‌ ರಾಜ್‌ಕುಮಾರ್‌ ಅವರಿಗೆ ವಿಶೇಷ ಮಮತೆ ಇತ್ತು. ತಮಗೆ ಬಿಡುವಾದಾಗಲೆಲ್ಲ ಕುಟುಂಬ ಸಮೇತರಾಗಿ ಗಾಜನೂರಿಗೆ ಬರುತ್ತಿದ್ದರು. ತಮ್ಮ ಸೋದರತ್ತೆ (ಡಾ.ರಾಜ್‌ ಅವರ ತಂಗಿ ನಾಗಮ್ಮ) ಹಾಗೂ ಅವರ ಕುಟುಂಬದ ಸದಸ್ಯರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದರು.

ಡಾ.ರಾಜ್‌ ಅವರು ಜನಿಸಿದ ದೊಡ್ಡ ಗಾಜನೂರಿನ ಹಳೆಯ ಮನೆಗೆ ಭೇಟಿ ನೀಡುತ್ತಿದ್ದರು. ತಮ್ಮ ತಂದೆಯವರು ಓಡಾಡುತ್ತಿದ್ದ ಸ್ಥಳಗಳು, ತೋಟಗಳಲ್ಲಿ ಓಡಾಡಿ ಖುಷಿ ಪಡುತ್ತಿದ್ದರು. ಡಾ.ರಾಜ್‌ ಅವರು ಹೆಚ್ಚು ಹಚ್ಚಿಕೊಂಡಿದ್ದ ದೊಡ್ಡ ಆಲದ ಮರದ ಅಡಿಯಲ್ಲಿ ಕುಳಿತು ಸಮಯವನ್ನೂ ಕಳೆಯುತ್ತಿದ್ದರು.

ದೊಡ್ಡಗಾಜನೂರಿನಲ್ಲಿರುವ ಡಾ.ರಾಜ್‌ಕುಮಾರ್‌ ಅವರು ಹುಟ್ಟಿದ ‌ ಮನೆಗೆ ಪುನೀತ್‌ ರಾಜ್‌ಕುಮಾರ್‌ ಅವರು ಭೇಟಿ ವೀಕ್ಷಿಸಿದರು
ದೊಡ್ಡಗಾಜನೂರಿನಲ್ಲಿರುವ ಡಾ.ರಾಜ್‌ಕುಮಾರ್‌ ಅವರು ಹುಟ್ಟಿದ ‌ ಮನೆಗೆ ಪುನೀತ್‌ ರಾಜ್‌ಕುಮಾರ್‌ ಅವರು ಭೇಟಿ ವೀಕ್ಷಿಸಿದರು

ಗಾಜನೂರಿಗೆ ಬಂದ ತಕ್ಷಣ, ಮನೆಯ ಸುತ್ತಮುತ್ತ ಸೇರುತ್ತಿದ್ದ ಅಭಿಮಾನಿಗಳು ಹಾಗೂ ಸಾರ್ವಜನಿಕರೊಂದಿಗೆ ಆತ್ಮೀಯವಾಗಿ ಬೆರೆತು ತಾವೂ ಖುಷಿ ಪಡುತ್ತಿದ್ದರು.

ಕಳೆದ ಜುಲೈ ತಿಂಗಳ 30ರಂದು ಪುನೀತ್‌ ಅವರು ತಮ್ಮ ಪತ್ನಿ ಮಕ್ಕಳೊಂದಿಗೆ ಗಾಜನೂರಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಶಿವರಾಜ್‌ ಕುಮಾರ್‌ ಹಾಗೂ ಅವರ ಕುಟುಂಬದ ಸದಸ್ಯರೂ ಜೊತೆಗಿದ್ದರು. ಅದಕ್ಕೂ ಮೊದಲು 2020ರ ಡಿಸೆಂಬರ್‌ನಲ್ಲಿ ಸಾಕ್ಷ್ಯಚಿತ್ರವೊಂದರ ಚಿತ್ರೀಕರಣಕ್ಕಾಗಿ ಗಾಜನೂರಿಗೆ ಬಂದಿದ್ದರು. ಇದೇ ಸಂದರ್ಭದಲ್ಲಿ ಬಿಳಿಗಿರಿ ಹುಲಿ ಸಂರಕ್ಷಿತ ಪ್ರದೇಶದಲ್ಲೂ ನಡೆದಿದ್ದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು.

ಜಿಲ್ಲೆಯ ರಾಯಭಾರಿ: ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದಕ್ಕಾಗಿ ಜಿಲ್ಲಾಡಳಿತವು ಪುನೀತ್‌ ರಾಜ್‌ಕುಮಾರ್‌ ಅವರನ್ನು ಜಿಲ್ಲೆಯ ರಾಯಭಾರಿಯನ್ನಾಗಿ ನೇಮಕ ಮಾಡಲಾಗಿತ್ತು. ಸಂತಸದಿಂದಲೇ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದ ಅವರು, ಚಾಮರಾಜನಗರ ಜಿಲ್ಲೆಯನ್ನು ತಂದೆಯ ತವರೂರು ಎಂದು ಕರೆದಿದ್ದರು. ‘ನನ್ನನ್ನು ಜಿಲ್ಲೆಯ ರಾಯಭಾರಿಯಾಗಿ ಮಾಡಿರುವುದಕ್ಕೆ ಹೆಮ್ಮೆ ಇದೆ’ ಎಂದು ಹೇಳಿದ್ದರು.

ಡಾ.ರಾಜ್‌ ಕುಮಾರ್‌ ಅವರು ಇಷ್ಟಪಡುತ್ತಿದ್ದ ದೊಡ್ಡ ಆಲದ ಮರದ ಬುಡದಲ್ಲಿ ‘ಪವರ್‌ ಸ್ಟಾರ್‌’
ಡಾ.ರಾಜ್‌ ಕುಮಾರ್‌ ಅವರು ಇಷ್ಟಪಡುತ್ತಿದ್ದ ದೊಡ್ಡ ಆಲದ ಮರದ ಬುಡದಲ್ಲಿ ‘ಪವರ್‌ ಸ್ಟಾರ್‌’

ಪುನೀತ್‌ ಅವರನ್ನು ಜಿಲ್ಲೆಗೆ ಕರೆಸಿ ಒಂದು ಕಾರ್ಯಕ್ರಮ ಮಾಡಬೇಕು ಎಂಬ ಆಸೆಯನ್ನು ಜಿಲ್ಲಾಡಳಿತ ಹೊಂದಿತ್ತು. ಕೋವಿಡ್‌ ಅದಕ್ಕೆ ಅವಕಾಶ ನೀಡಿರಲಿಲ್ಲ.

ಚಾಮರಾಜನಗರದ ಕನ್ನಡವನ್ನು ಇಷ್ಟ ಪಡುತ್ತಿದ್ದ ಪುನೀತ್‌ ರಾಜ್‌ಕುಮಾರ್‌ ಅವರು, ‘ತಂದೆಯವರು ಮನೆಯಲ್ಲಿ ಚಾಮರಾಜನಗರದ ಭಾಷೆಯನ್ನೇ ಮಾತನಾಡುತ್ತಿದ್ದರು’ ಎಂದು ಟಿವಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು.

ಚಾಮರಾಜನಗರದೊಂದಿಗೆ ಅವರಿಗೆ ವ್ಯಾವಹಾರಿಕ ಸಂಬಂಧವೂ ಇತ್ತು. ಚಿತ್ರಗಳಲ್ಲಿ ನಟಿಸಲು ಆರಂಭಿಸುವುದಕ್ಕೂ ಮುನ್ನ ಅವರು ಕರಿಕಲ್ಲು (ಗ್ರ್ಯಾನೈಟ್‌) ವ್ಯಾಪಾರದಲ್ಲಿ ತೊಡಗಿದ್ದರು.

ಜಿಲ್ಲೆಯಲ್ಲಿ ಅವರಿಗೆ ಕರಿ ಕಲ್ಲು ಗಣಿ ಇರಲಿಲ್ಲ. ಆದರೆ, ಇಲ್ಲಿಂದ ಕರಿಕಲ್ಲು ಖರೀದಿಸಿ ಬೇರೆಕಡೆ ಮಾರಾಟ ಮಾಡುತ್ತಿದ್ದರು ಎಂದು ನೆನೆಪಿಸಿಕೊಳ್ಳುತ್ತಾರೆ ಕರಿಕಲ್ಲು ಉದ್ಯಮಿಗಳು.

ಗಾಜನೂರಿನಹಿರಿಯರೊಬ್ಬರೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿರುವ ಪುನೀತ್‌ ರಾಜ್‌ಕುಮಾರ್‌
ಗಾಜನೂರಿನಹಿರಿಯರೊಬ್ಬರೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿರುವ ಪುನೀತ್‌ ರಾಜ್‌ಕುಮಾರ್‌

ಮಧ್ಯಾಹ್ನದವರೆಗೂ ಮಾಹಿತಿ ಇರಲಿಲ್ಲ
ಡಾ.ರಾಜ್‌ ಅವರು ಹುಟ್ಟಿದ ಮನೆ ಹಾಗೂ ಅವರು ಧ್ಯಾನಕ್ಕೆ ಕುಳಿತುಕೊಳ್ಳುತ್ತಿದ್ದ ಆಲದ ಮರದ ಚಿತ್ರೀಕರಣಕ್ಕಾಗಿ ‘ಪ್ರಜಾವಾಣಿ’ ಶುಕ್ರವಾರ ಗಾಜನೂರಿಗೆ ಭೇಟಿ ನೀಡಿತ್ತು. ಪುನೀತ್ ಸೋದರತ್ತೆ ನಾಗಮ್ಮ ಅವರ ಮಗ ಗೋಪಾಲ್‌ ಅವರು ರಾಜ್‌ಕುಮಾರ್‌ ಅವರು ಇಷ್ಟಪಡುತ್ತಿದ್ದ ಆಲದ ಮರ, ಅವರ ಜಮೀನುಗಳನ್ನು ತೋರಿಸಿ, ಡಾ.ರಾಜ್‌ ಕುಮಾರ್‌, ಶಿವರಾಜ್‌ ಕುಮಾರ್‌ ಹಾಗೂ ಪುನೀತ್‌ ರಾಜ್‌ಕುಮಾರ್‌ ಅವರನ್ನು ಬಾಯ್ತುಂಬ ಹೊಗಳಿದ್ದರು.

ಪುನೀತ್‌ ರಾಜ್‌ಕುಮಾರ್‌ ಅವರನ್ನು ‘ಅಪ್ಪು’ ಎಂದೇ ಕರೆಯುತ್ತಿದ್ದ ಗೋಪಾಲ್‌ ಅವರು, ಪುನೀತ್‌ ವಿನಯ, ನಟನೆ, ನೃತ್ಯದ ಬಗ್ಗೆ ಮಾತನಾಡಿದ್ದರು. ರಸ್ತೆಯಲ್ಲಿ ಸಾಗುತ್ತಿರುವಾಗ ಗೋಪಾಲ್‌ ಅವರು, ಪುನೀತ್‌ ಅವರ ಹೆಸರಿನಲ್ಲಿದ್ದ ಜಮೀನು ತೋರಿಸಿದ್ದರು.

‘ಪ್ರಜಾವಾಣಿ’ಯು ಗಾಜನೂರಿನಿಂದ ಹೊರಡುವಾಗ ಮಧ್ಯಾಹ್ನ 12.30 ಆಗಿತ್ತು. ಅದುವರೆಗೂ ಕುಟುಂಬದವರಿಗೆ ಪುನೀತ್‌ ರಾಜ್‌ಕುಮಾರ್‌ ಅವರ ಆರೋಗ್ಯದಲ್ಲಿ ಆಗಿರುವ ವ್ಯತ್ಯಾಸದ ಬಗ್ಗೆ ಮಾಹಿತಿ ಇರಲಿಲ್ಲ.

ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಶುಕ್ರವಾರ ವಿಡಿಯೊ ಬಿಡುಗಡೆ ಮಾಡಿದರು. ನಟ ಪುನೀತ್‌ ರಾಜ್‌ಕುಮಾರ್‌ ಅವರು ವಿಡಿಯೊ ಕಾನ್ಫರೆನ್ಸ್‌ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು
ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಶುಕ್ರವಾರ ವಿಡಿಯೊ ಬಿಡುಗಡೆ ಮಾಡಿದರು. ನಟ ಪುನೀತ್‌ ರಾಜ್‌ಕುಮಾರ್‌ ಅವರು ವಿಡಿಯೊ ಕಾನ್ಫರೆನ್ಸ್‌ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT