ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ‘ರಜನಿ ಸ್ಟೈಲ್‌’ಕಾಮಿಡಿಗೂ ಸೈ, ಖಳನಾಗಲೂ ಜೈ

Last Updated 23 ಮೇ 2019, 19:30 IST
ಅಕ್ಷರ ಗಾತ್ರ

ಸೂಪರ್‌ ಸ್ಟಾರ್ ರಜನಿಕಾಂತ್ ಜಗತ್ಪ್ರಸಿದ್ಧ. ಆದರೆ, ಈ ರಜನಿಕಾಂತ್ ಕನ್ನಡದಲ್ಲಿ ಪ್ರಸಿದ್ಧ. ಒಮ್ಮೆ ಶೂಟಿಂಗ್‌ ಮುಗಿಸಿ ಮಧ್ಯರಾತ್ರಿಯಲ್ಲಿ ವಾಪಸ್ ಬರುತ್ತಿದ್ದಾಗ ಮದ್ಯಸೇವನೆ ತಪಾಸಣೆಗಾಗಿ ಪೊಲೀಸರು ಕಾರು ಅಡ್ಡಗಟ್ಟಿದರಂತೆ. ಹೆಸರೇನು ಅಂತ ಕೇಳಿದಾಗ ಇವರು ‘ರಜನಿಕಾಂತ್‌’ ಎಂದರು. ಆ ಕೂಡಲೇ ‘ಕುಡಿದು ನಾಟಕ ಆಡ್ತೀಯಾ’ ಎಂದು ಪೊಲೀಸ್‌ ಶೈಲಿಯಲ್ಲಿ ತರಾಟೆಗೆ ತೆಗೆದುಕೊಂಡರಂತೆ. ಹಿರಿಯ ಸಂಚಾರ ಪೊಲೀಸ್ ಅಧಿಕಾರಿ ಎದುರು ಹಾಜರುಪಡಿಸಿದಾಗ. ‘ಸರ್ ಕುಡಿದಿಲ್ಲ. ನಿಜವಾಗಿಯೂ ನನ್ನ ಹೆಸರು ರಜನಿಕಾಂತ್‌’ ಎಂದು ಡ್ರೈವಿಂಗ್ ಲೈಸನ್ಸ್‌ ಮುಂದಿಟ್ಟಾಗ ಹೆಸರಿನ ಪೂರ್ವಾಪರ ವಿಚಾರಿಸಿ ಕಳುಹಿಸಿದ ಪ್ರಸಂಗ ನೆನಪಿಸಿಕೊಂಡು ನಕ್ಕರು ರಜನಿಕಾಂತ್‌.

‘ರಜನಿ’ಎಂದರೆ ರಾತ್ರಿ. ಕಾಂತಾ ಎಂದರೆ ದಳಪತಿ ಅಥವಾ ಎಲ್ಲರ ಗಮನ ಸೆಳೆಯುವ ವ್ಯಕ್ತಿ ಎಂದರ್ಥ. ರಾತ್ರಿ ಹುಟ್ಟಿದ ಕಾರಣಕ್ಕಾಗಿ ನಾಮಬಲ ಆಧರಿಸಿಯೇ ಅಪ್ಪ – ಅಮ್ಮ ಈ ಹೆಸರಿಟ್ಟಿದ್ದಾರೆ ಎಂದು ಗುಟ್ಟೊಂದ ಬಿಚ್ಚಿಟ್ಟರು. ಮೈಸೂರಿನ ‘ಕಾವಾ’ದಲ್ಲಿ ಫೋಟೊಗ್ರಫಿ ಜರ್ನಲಿಸಂನಲ್ಲಿ ಡಿಪ್ಲೊಮಾ ಮುಗಿಸಿ ಪ್ರವೃತ್ತಿಯಾಗಿ ರಂಗಭೂಮಿ ಆಯ್ಕೆ ಮಾಡಿಕೊಂಡರು. ನೀನಾಸಂ ಸೇರಲು ಪ್ರಯತ್ನಿಸಿ ವಿಫಲರಾದರು. ಕೆ.ವಿ.ಅಕ್ಷರ ಅವರ ಸಲಹೆ ಮೇರೆಗೆ ಮಂಡ್ಯ ರಮೇಶ್ ನೇತೃತ್ವದ ‘ನಟನ’ ತಂಡ ಸೇರಿ ರಂಗಭೂಮಿಯಲ್ಲಿ ಪಕ್ವತೆ ಸಾಧಿಸಿದರು.

ಒಮ್ಮೆ ನಾಗತಿಹಳ್ಳಿಯಲ್ಲಿ ‘ಚೋರ ಚರಣದಾಸ’ ನಾಟಕದಲ್ಲಿ ಇವರ ಅಭಿನಯ ಮೆಚ್ಚಿದ ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಅವರ ನಿರ್ದೇಶನದ ‘ಒಲವೇ ಜೀವನ ಲೆಕ್ಕಾಚಾರ’ ಸಿನಿಮಾದಲ್ಲಿ ಅವಕಾಶ ನೀಡಿದರು. ಇಲ್ಲಿಂದಲೇರಜನಿಕಾಂತ್‌ ಸಿನಿಮಾ ಜರ್ನಿ ಆರಂಭವಾಯಿತು. ‘ಮೋಜಿನ ಸೀಮೆ ಆಚೆ ಒಂದೂರು’ ನಾಟಕ ವೀಕ್ಷಿಸಿದ ನಟ, ನಿರ್ದೇಶಕ ರಮೇಶ್‌ ಅರವಿಂದ್, ‘ವೆಂಕಟ್‌ ಇನ್‌ ಸಂಕಟ್‌’ ಸಿನಿಮಾದಲ್ಲಿ ಕಾಮಿಡಿ ಪಾತ್ರ ನೀಡಿದರು. ಕ್ರೇಜಿ ಕುಟುಂಬ, ಕ್ರಿಸ್‌ಮಸ್‌, ಜಾಕ್ಸನ್ ಸಿನಿಮಾಗಳಲ್ಲಿ ಹಾಸ್ಯ ನಟರಾಗಿ ಈಗಾಗಲೇ ಛಾಪು ಮೂಡಿಸಿದ್ದಾರೆ.

ತೆರೆ ಕಾಣಲು ಸಿದ್ಧವಾಗಿರುವ ಕೃಷ್ಣ ಗಾರ್ಮೆಂಟ್ಸ್‌, ಬಡ್ಡಿ ಮಗನ ಲೈಪು, ಟಕ್ಕರ್‌ ಸಿನಿಮಾಗಳಲ್ಲಿ ಅವರದ್ದು ವಿಭಿನ್ನ ಕಾಮಿಡಿ ಪಾತ್ರ. ಈಟಿವಿ ಕನ್ನಡ ವಾಹಿನಿಯಲ್ಲಿ (ಈಗಿನ ಕಲರ್ಸ್ ಕನ್ನಡ) ಹಿಂದೆ ಪ್ರಸಾರವಾದ ಗುಪ್ತಗಾಮಿನಿ, ಜೀ ವಾಹಿನಿಯ ದಿಬ್ಬಣ ಧಾರಾವಾಹಿಯಲ್ಲಿ ನಟಿಸಿದರೂ ಅಷ್ಟೇನೂ ಹೆಸರು ಬರಲಿಲ್ಲ. ಕಾಮಿಡಿಯಿಂದ ಖಳನ ಪಾತ್ರಕ್ಕೆ ಹೊರಳಿಕೊಂಡರು. ‘ದೇವಿ’ ಧಾರಾವಾಹಿಯಲ್ಲಿ ಮಯ್ಯಾಡಿ ಜನ್ನನ ಪಾತ್ರ ಅವರಿಗೆ ಹೆಸರು ತಂದು ಕೊಟ್ಟಿತು. ಇದರ ಮೂಲಕ ಗಂಭೀರವಾದ ಖಳನ ಪಾತ್ರದಲ್ಲೂ ಅಭಿನಯಿಸುವ ಕಲಾ ಚಾತುರ್ಯ ಬೆಳೆಸಿಕೊಂಡರು.

ಉತ್ತಮ ಪಾತ್ರವೊಂದು ಅವಕಾಶ ಸೃಷ್ಟಿಸಬೇಕು. ಆದರೆ, ಎಂಟು ತಿಂಗಳ ಕಾಲ ಧಾರಾವಾಹಿ, ಸಿನಿಮಾ, ರಂಗಭೂಮಿಯಲ್ಲಿ ಅವಕಾಶಗಳಿಲ್ಲದೆ ರಜನಿಕಾಂತ್‌ ಅಜ್ಞಾತರಾಗಿ ಕಾಲ ಕಳೆದರು. ಒಪ್ಪೊತ್ತಿನ ಊಟಕ್ಕೂ ಪರದಾಡಿದರು. ಮೊಬೈಲ್‌ ರೀಚಾರ್ಜ್‌ಗೂ ಹಣವಿಲ್ಲದೆ ಅನ್ಯ ಮನಸ್ಕರಾಗಿ ಬಾಡಿಗೆ ಕೊಠಡಿಯಲ್ಲೇ ಉಳಿದರು. ಭೇಟಿಯಾಗಲು ಬಂದ ಸ್ನೇಹಿತರೊಬ್ಬರು ಇವರ ಪರಿಸ್ಥಿತಿಗೆ ಮರುಗಿ ಸಹಾಯದ ಹಸ್ತ ಚಾಚಿದರು. ಮತ್ತೆ ಶೂನ್ಯದಿಂದ ಬದುಕು ಆರಂಭಿಸಿ ನಾಟಕ, ಧಾರಾವಾಹಿ, ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಂಡರು.

‘ಸಣ್ಣ– ಪುಟ್ಟ ಪಾತ್ರಗಳ ಮೂಲಕ ಕಲಾವಿದನಾಗಲು ಹೊರಟಾಗ ಕುಟುಂಬ ಸದಸ್ಯರು, ಸಂಬಂಧಿಗಳಿಂದ ಸಹಕಾರ ಸಿಗಲಿಲ್ಲ. ಒಲವೇ ಜೀವನ ಲೆಕ್ಕಚಾರ ಸಿನಿಮಾಗೆ ಸಿಕ್ಕ ಸಂಭಾವನೆಯಲ್ಲಿ ಬೈಕ್‌ ಖರೀದಿಸಿದೆ. ಬೈಕ್‌ಗೆ ವಿಮೆ ಮಾಡಿಸಲು ತಂದೆ ಜತೆ ಮೈಸೂರಿನ ವಿಮಾ ಕಚೇರಿಯೊಂದಕ್ಕೆ ಹೋಗಿದ್ದೆ. ಮೊದಲಿಗೆ ಅಲ್ಲಿನ ಸಿಬ್ಬಂದಿ ತಂದೆಗೆ ಸ್ಪಂದಿಸಲಿಲ್ಲ. ಕೊಠಡಿ ಹೊರಗೆ ಕೆಲಗಂಟೆ ಹೊತ್ತು ಕಾದಿದ್ದ ನಾನು ಒಳ ಪ್ರವೇಶಿಸಿದೆ. ತಕ್ಷಣವೇ ಅಲ್ಲಿನ ಒಬ್ಬ ಸಿಬ್ಬಂದಿ ‘ವಿಶ್ವಾಸ್‌’ ಎಂದು ಕರೆದು ಕುಶಲೋಪರಿ ವಿಚಾರಿಸಿದರು. ‘ದಿಬ್ಬಣ’ ಧಾರಾವಾಹಿಯಲ್ಲಿ ವಿಶ್ವಾಸ್ ನನ್ನ ಪಾತ್ರದ ಹೆಸರಾಗಿತ್ತು. ಕ್ಷಣಾರ್ಧದಲ್ಲಿ ವಿಮೆ ಕೆಲಸ ಮುಗಿಸಿಕೊಟ್ಟರು. ಅಪ್ಪನ ಮುಖದಲ್ಲಿ ಖುಷಿ ಕಂಡೆ. ದೂರವಾಗಿದ್ದ ಕುಟುಂಬದ ಸದಸ್ಯರು, ಸಂಬಂಧಿಗಳು ಈಗ ಹತ್ತಿರವಾಗಿದ್ದಾರೆ. ಒಳ್ಳೆ ಹಾದಿಯಲ್ಲೇ ಸಾಗುತ್ತಿರುವ ಬಗ್ಗೆ ಅವರಿಗೆಲ್ಲಾ ಮೆಚ್ಚುಗೆ ಇದೆ’ ಎನ್ನುವ ಖುಷಿ ಅವರದ್ದು.

‘2006ರಲ್ಲಿ ಉಪೇಂದ್ರ ಅಭಿನಯದ ‘ಮಸ್ತಿ’ ಸಿನಿಮಾಗೆ 8 ಮಂದಿ ಕಲಾವಿದರು ಆಯ್ಕೆಯಾಗಿದ್ದೆವು. ಬೆಂಗಳೂರಿನಲ್ಲಿ ಸಿನಿಮಾ ಮುಹೂರ್ತ ಏರ್ಪಾಡಾಗಿತ್ತು. ಮೈಸೂರಿನಿಂದ ಬರುವಾಗ ಬಿಡದಿ ಸಮೀಪ ಕಾರು ಅಪಘಾತಕ್ಕೆ ಈಡಾಯಿತು. ಗಂಭೀರವಾದ ಗಾಯಗಳೊಂದಿಗೆ ಬದುಕಿ ಉಳಿದೆವು. ಮೊದಲ ಸಿನಿಮಾದ ಕನಸು ನುಚ್ಚುನೂರಾಯಿತು. ಆರೋಗ್ಯ ಚೇತರಿಸಿಕೊಳ್ಳಲು ವರ್ಷ ಹಿಡಿಯಿತು’ ಎಂದು 13 ವರ್ಷಗಳ ಕಲಾ ಬದುಕಿನ ಏಳು ಬೀಳು ತೆರೆದಿಟ್ಟರು ರಜನಿಕಾಂತ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT