ಸಿಕ್ಸ್‌ ಪ್ಯಾಕ್ ನಟ

7

ಸಿಕ್ಸ್‌ ಪ್ಯಾಕ್ ನಟ

Published:
Updated:

‘ರಾ ಮಾ ರಾಮಾ ರೇ’ ಚಿತ್ರದ ಮೂಲಕ ಸಹೃದಯ ಸಿನಿಮಾ ಪ್ರೇಕ್ಷಕರ ಗಮನ ಸೆಳೆದಿದ್ದ ನಟರಾಜ್ ಅದರ ನಂತರ ತೆರೆಯ ಮೇಲೆ ಕಾಣಿಸಿಕೊಂಡಿರಲಿಲ್ಲ. ಇದೀಗ ಅವರು ನಾಯಕನಾಗಿ ನಟಿಸಿರುವ ‘ಕಳ್ಬೆಟ್ಟದ ದರೋಡೆಕೋರರು’ ತೆರೆಗೆ ಬರಲು ಸಜ್ಜಾಗಿದೆ. ಮೊದಲ ಚಿತ್ರದಲ್ಲಿ ಕೃಶಶರೀರದ ಮರಣದಂಡನೆಗೆ ಒಳಗಾದ ಕೈದಿಯಾಗಿ, ಎರಡನೇ ಚಿತ್ರದಲ್ಲಿ ಗಡ್ಡ ಮೀಸೆ ಬೋಳಿಸಿಕೊಂಡು ಪಡ್ಡೆ ಹುಡುಗನಾಗಿ ಕಾಣಿಸಿಕೊಂಡಿರುವ ನಟರಾಜ್‌ ಈ ಎರಡೂ ಚಿತ್ರದ ಇಮೇಜ್‌ನಿಂದ ಹೊರಬರಲು ನಿರ್ಧರಿಸಿದ್ದಾರೆ.

ಅದರ ಮೊದಲ ಹೆಜ್ಜೆಯಾಗಿ ಅವರು ತಮ್ಮ ಅಂಗಸೌಷ್ಠವಕ್ಕೆ ಒತ್ತುಕೊಟ್ಟಿದ್ದಾರೆ. ಹೌದು, ಆಪ್ತಬಳಗದಲ್ಲಿ ‘ನಟ’ ಎಂದೇ ಆತ್ಮೀಯವಾಗಿ ಕರೆಸಿಕೊಳ್ಳುವ ನಟರಾಜ್, ಇದೀಗ ದೇಹವನ್ನು ಕಠಿಣವಾಗಿ ದಂಡಿಸಿ ಸಿಕ್ಸ್‌ ಪ್ಯಾಕ್‌ ಮಾಡಿಕೊಂಡಿದ್ದಾರೆ. 

‘ಒಂದು ಸಿನಿಮಾದ ಮಾತುಕತೆ ನಡೆಯುತ್ತಿತ್ತು. ಆ ಪಾತ್ರ ಕಾಲೇಜು ಓದುವ ಕಟ್ಟುಮಸ್ತು ಹುಡುಗನ ಕಥೆ. ಆ ಪಾತ್ರಕ್ಕಾಗಿ ಸಿದ್ಧತೆ ಮಾಡಿಕೊಳ್ಳಬೇಕು ಎಂತಲೇ ವರ್ಕೌಟ್ ಆರಂಭಿಸಿದ್ದು. ಆದರೆ ಯಾವ್ಯಾವುದೋ ಕಾರಣದಿಂದ ಆ ಸಿನಿಮಾದಲ್ಲಿ ನಟಿಸಲು ಸಾಧ್ಯವಾಗಲಿಲ್ಲ. ಆದರೆ ವರ್ಕೌಟ್ ನಿಲ್ಲಿಸಲಿಲ್ಲ. ನಾನು ವರ್ಕೌಟ್ ಮಾಡುತ್ತಿದ್ದುದು ಶ್ರೀನಿವಾಸ ಗೌಡ ಅವರ ಜಿಮ್‌. ಅವರು ವರ್ಕೌಟ್ ಮಾಡ್ತಿದ್ದೀರಾ. ಇನ್ನಷ್ಟು ಶಿಸ್ತಿನಿಂದ ಮಾಡಿ ಸಿಕ್ಸ್‌ ಪ್ಯಾಕ್ ಮಾಡಿಕೊಳ್ಳಿ ಎಂದು ಹೇಳಿದರು. ಅದರ ಮಾತಿಗೆ ಒಪ್ಪಿಯೇ ಸಿಕ್ಸ್‌ ಪ್ಯಾಕ್ ಮಾಡಿಕೊಂಡಿದ್ದು’ ಎಂದು ವ್ಯಾಯಾಮ ವೃತ್ತಾಂತವನ್ನು ಬಿಚ್ಚಿಡುತ್ತಾರೆ ನಟ. 

ಸಿಕ್ಸ್‌ ಪ್ಯಾಕ್ ಮಾಡಬೇಕು ಎಂದರೆ ಆಹಾರಪದ್ಧತಿ ಕಟ್ಟುನಿಟ್ಟಾಗಿರಬೇಕು. ಮೆನುವಿನಲ್ಲಿ ಚಿಕನ್, ಮೊಟ್ಟೆಗಳಿಗೆ ಪ್ರಾತಿನಿಧ್ಯ ಇರುತ್ತದೆ. ಆದರೆ ನಟರಾಜ್ ಶುದ್ಧ ಸಸ್ಯಾಹಾರಿ. ‘ಮೇಷ್ಟ್ರೇ ನಾನು ನೀವು ಹೇಳಿದಷ್ಟು ಹೊತ್ತು ವರ್ಕೌಟ್ ಮಾಡುತ್ತೇನೆ. ಆದರೆ ಮಾಂಸಹಾರ ಮಾತ್ರ ಒಲ್ಲೆ’ ಎಂದು ಷರತ್ತು ಹಾಕಿಯೇ ಅವರು ಮುಂದುವರಿದಿದ್ದಂತೆ.

ಶ್ರೀನಿವಾಸ್ ಅವರೂ ಇದನ್ನು ಒಂದು ಸವಾಲಾಗಿ ಸ್ವೀಕರಿಸಿ ಚಪಾತಿ, ಮೊಳಕೆ ಕಾಳುಗಳು, ಹಣ್ಣು–ತರಕಾರಿಗಳ ಡಯಟ್‌ ಅನ್ನೇ ಸಿದ್ಧಪಡಿಸಿ ನಟರಾಜ್ ಅವರ ದೇಹವನ್ನು ಹುರಿಗಟ್ಟಿಸಿದ್ದಾರೆ. ಕಳೆದ ಮೂರು ತಿಂಗಳಿನಿಂದ ಜಿಮ್‌ನಲ್ಲಿ ಪ್ರತಿದಿನ ಬೆಳಿಗ್ಗೆ ಎರಡು ತಾಸು ಮತ್ತು ಸಂಜೆ ಎರಡು ತಾಸುಗಳ ಕಾಲ ಬೆವರು ಹರಿಸಿದ್ದಾರೆ ನಟ. ಪ್ರತಿ ಹದಿನೈದು ದಿನಕ್ಕೊಮ್ಮೆ ಡಯಟ್ ಬದಲಿಸುತ್ತಿದ್ದರಂತೆ.

‘ಶ್ರೀನಿವಾಸ ಮೇಷ್ಟ್ರು ತುಂಬ ಕಾಳಜಿವಹಿಸಿ ಪ್ರತಿದಿನ ವಿಚಾರಿಸುತ್ತಿದ್ದರು. ಆಹಾರಪದ್ಧತಿಯಲ್ಲಿ ಕಳ್ಳತನ ಮಾಡ್ತಿಲ್ಲ ಅಲ್ವಾ? ಎಂದು ಪದೆ ಪದೆ ಕೇಳುತ್ತಿದ್ದರು’ ಎಂದು ನೆನಪಿಸಿಕೊಳ್ಳುತ್ತಾರೆ.

ಯಾವ ಪಾತ್ರಕ್ಕಾಗಿ ವರ್ಕೌಟ್ ಮಾಡಲು ಆರಂಭಿಸಿದ್ದರೋ ಆ ಪಾತ್ರದಲ್ಲಿ ನಟಿಸಲು ಸಾಧ್ಯವಾಗದೇ ಹೋದರೂ ಈ ಅಂಗಸೌಷ್ಠವಕ್ಕೆ ಹೊಂದಾಣಿಕೆ ಆಗುವ ಇನ್ನಷ್ಟು ಪಾತ್ರಗಳು ಅವರನ್ನು ಅರಸಿಕೊಂಡು ಬಂದಿವೆ. ಸದ್ಯವೇ ಕಾಡಿನ ಕಥೆಯುಳ್ಳ ಒಂದು ಸಿನಿಮಾದಲ್ಲಿ ಅವರು ನಟಿಸಲಿದ್ದಾರೆ. ಈ ಚಿತ್ರದ ಪಾತ್ರಕ್ಕೆ ಇಂಥದ್ದೇ ಕಟ್ಟುಮಸ್ತುತನದ ಅಗತ್ಯ ಇತ್ತಂತೆ. ಡಿಸೆಂಬರ್‌ ತಿಂಗಳಲ್ಲಿ ಈ ಚಿತ್ರದ ಚಿತ್ರೀಕರಣ ಪ್ರಾರಂಭಗೊಳ್ಳಲಿದೆ. ಚಿತ್ರದ ಶೀರ್ಷಿಕೆ ಇನ್ನೂ ನಿಕ್ಕಿಯಾಗಿಲ್ಲ. 

ಹಾಗೆಯೇ ಡಿ. ಸತ್ಯಪ್ರಕಾಶ್ ಅವರ ಒಂದು ಕಥೆಗೂ ನಟ ನಾಯಕ. ಕಲಾವಿದನ ಬದುಕಿನ ಕಥೆಯನ್ನು ಇದು ಆಧರಿಸಿದೆ. ಹಾಗೆಯೇ ಔಟ್‌ ಆ್ಯಂಡ್ ಔಟ್ ಕಾಮಿಡಿ ಚಿತ್ರವೊಂದಕ್ಕೆ ಅವರು ಸಹಿ ಹಾಕಿದ್ದಾರೆ. ಈ ಚಿತ್ರದ ಕುರಿತು ತುಂಬ ಉತ್ಸಾಹದಿಂದ ಅವರು ಮಾತನಾಡುತ್ತಾರೆ.

 ‘ಯಾವುದೇ ದ್ವಂದ್ವಾರ್ಥ ಸಂಭಾಷಣೆಗಳಿಲ್ಲ, ಪಕ್ಕಾ ಕಮರ್ಷಿಯಲ್ ಹಾಸ್ಯ ಚಿತ್ರವೊಂದನ್ನು ಒಪ್ಪಿಕೊಂಡಿದ್ದೇನೆ. ಕಥೆ ನನಗಂತೂ ತುಂಬ ಇಷ್ಟವಾಗಿದೆ. ನಿರ್ದೇಶಕರು, ನಿರ್ಮಾಪಕರ ಹುಡುಕಾಟದಲ್ಲಿದ್ದಾರೆ. ಸದ್ಯವೇ ಆ ಕುರಿತು ಮಾಹಿತಿ ಹೊರಬೀಳಲಿದೆ’ ಎಂದು ಹೇಳುತ್ತಾರೆ ನಟ.

‘ಒಂದಕ್ಕಿಂತ ಇನ್ನೊಂದು ಭಿನ್ನವಾಗಿರುವ ಪಾತ್ರದಲ್ಲಿ ನಟಿಸಬೇಕು. ಆಯಾ ಪಾತ್ರಕ್ಕೆ ತಕ್ಕಂತೆ ನನ್ನನ್ನು ನಾನು ಮಾನಸಿಕವಾಗಿಯೂ, ದೈಹಿಕವಾಗಿಯೂ ಅಣಿಗೊಳಿಸಬೇಕು ಎನ್ನುವುದು ನನ್ನ ಎಂದಿನ ಬದ್ಧತೆ. ಅದಕ್ಕೆ ತಕ್ಕ ಹಾಗೆಯೇ ಈ ಸಿಕ್ಸ್‌ ಪ್ಯಾಕ್ ಮಾಡಿದ್ದೇನೆ’ ಎನ್ನುವ ನಟರಾಜ್‌, ಸದ್ಯಕ್ಕೆ ’ಕಳ್ಬೆಟ್ಟದ ದರೋಡೆಕೋರರು’ ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !