ಶನಿವಾರ, ಮಾರ್ಚ್ 6, 2021
18 °C

ಸಮರಕಲೆ ಪ್ರವೀಣನ ‘ವಿದ್ಯುತ್‌’ ಸಂಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಹಿಂದಿಯ ‘ಫೋರ್ಸ್‌’, ‘ಕಮಾಂಡೊ’ ಮತ್ತು ‘ಕಮಾಂಡೊ2’, ತಮಿಳಿನ ‘ಬಿಲ್ಲಾ 2’ ‘ತುಪಾಕಿ’ಯಂತಹ ಸಿನಿಮಾಗಳನ್ನು ನೋಡಿದವರಿಗೆ ವಿದ್ಯುತ್‌ ಜಮ್‌ವಾಲ್ ಹೊಡೆದಾಟದ ಪಟ್ಟುಗಳು ಮರೆಯಲು ಸಾಧ್ಯವೇ ಇಲ್ಲ. ‘ಭಾರತದ ಬ್ರೂಸ್‌ಲಿ’ ಎಂಬ ಅಡ್ಡಹೆಸರು ವಿದ್ಯುತ್‌ಗೆ ಜಾಗತಿಕ ಮಟ್ಟದಲ್ಲಿ ಸಿಗಲು ಅವರ ಸಾಹಸ ದೃಶ್ಯಗಳಲ್ಲಿನ ತಾಜಾತನ.

ಮೂರನೇ ವಯಸ್ಸಿನಿಂದಲೇ ಕೇರಳದ ಸಮರ ಕಲೆ ಕಲರಿಪಯಟ್ಟುವಿನ ಮಟ್ಟುಗಳನ್ನು ಕರಗತ ಮಾಡಿಕೊಂಡರು ವಿದ್ಯುತ್. ಶಾಲೆಯಲ್ಲಿ ಇತರ ಮಕ್ಕಳು ಛದ್ಮವೇಷ ಸ್ಪರ್ಧೆಗೆ ಬಣ್ಣ ಬಳಿದುಕೊಂಡು ಕುಳಿತಿದ್ದರೆ ಈ ಬಾಲಕ ಕಲರಿಪಯಟ್ಟು ಜಿಗಿತಗಳನ್ನು ಮನಸ್ಸಿನಲ್ಲಿಯೇ ಅಭ್ಯಸಿಸಿಕೊಳ್ಳುತ್ತಾ ಕೂತಿರುತ್ತಿದ್ದ. ಬಹುಮಾನಗಳನ್ನೆಲ್ಲ ಬಾಚಿಕೊಂಡು ಇತರ ಬಾಲಕರ ಹೊಟ್ಟೆ ಉರಿಸುತ್ತಿದ್ದ. 

 ಜಮ್ಮುವಿನಲ್ಲಿ, ಸೇನಾಧಿಕಾರಿಯ ಮಗನಾಗಿ ಹುಟ್ಟಿ ಬೆಳೆದ ವಿದ್ಯುತ್‌ಗೆ ಮನೆಯ ವಾತಾವರಣವೇ ಶಿಸ್ತಿನ ಪಾಠಗಳನ್ನು ಕಲಿಸಿತ್ತು. ಎಳೆಯ ವಯಸ್ಸಿನಲ್ಲಿ ರೂಢಿಸಿಕೊಂಡ ಶಿಸ್ತು ಈಗ ವೃತ್ತಿ ಕ್ಷೇತ್ರದಲ್ಲಿ ಯಶಸ್ಸಿನ ಮೆಟ್ಟಿಲೇರಲು ನೆರವಾಗಿದೆ. 

ವಿದ್ಯುತ್‌ ಬಗ್ಗೆ ಈ ಭಾರತೀಯ ಚಿತ್ರರಂಗ ಮತ್ತೊಮ್ಮೆ ಮಾತನಾಡಲಾರಂಭಿಸಿದೆ. ಅಮೆರಿಕದ ‘ಲೂಪರ್‌’ ಎಂಬ ಸಂಸ್ಥೆ ಪಟ್ಟಿ ಮಾಡಿದ, ಜಗತ್ತಿನ ಆರು ಮಂದಿ ಸಮರಕಲೆ ‘ಮಾಸ್ಟರ್‌ಪೀಸ್‌’ಗಳಲ್ಲಿ ಒಬ್ಬರಾಗಿ ವಿದ್ಯುತ್‌ ಆಯ್ಕೆಯಾಗಿರುವುದು ಇದಕ್ಕೆ ಕಾರಣ. ಭಾರತೀಯ ಚಿತ್ರನಟನೊಬ್ಬನಿಗೆ ಸಿಕ್ಕಿದ ಅಪರೂಪದ ಗೌರವವಿದು. 

ನಾಯಕನೋ ಖಳನಾಯಕನೋ ಬೆರಳೆತ್ತಿದರೆ ಕಟ್ಟಡವನ್ನೇ ಎತ್ತಿದಂತೆ ಗ್ರಾಫಿಕ್ಸ್‌ ಚಳಕದಿಂದ ತೋರಿಸುವುದು ಈಗ ಸಾಮಾನ್ಯ. ವಿದ್ಯುತ್‌ ಜಮ್‌ವಾಲ್‌ನ ಹೊಡೆದಾಟದ ದೃಶ್ಯಗಳಿಗೆ ಯಾವ ಗ್ರಾಫಿಕ್ಸ್‌ ಆಗಲಿ ತ್ರೀಡಿ ಸ್ಪರ್ಶದ ಹಂಗು ಇರುವುದಿಲ್ಲ. ಎಲ್ಲವೂ ತಾಜಾ ದೃಶ್ಯಗಳು. ‘ಕಮಾಂಡೊ’ ಚಿತ್ರವನ್ನು ವಿದ್ಯುತ್‌ ಆವರಿಸಿಕೊಂಡಿದ್ದರು. ಚಿತ್ರದ ಗೆಲುವಿನ ಶಕ್ತಿಯಾದರು. ಅದಕ್ಕೂ ಮುಂಚೆ, ‘ಕಮಾಂಡೊ’ದ ಟ್ರೇಲರ್‌ ಬಿಡುಗಡೆಯಾಗಿ ಕೆಲವೇ ಗಂಟೆಗಳಲ್ಲಿ 10 ಲಕ್ಷಕ್ಕೂ ಅಧಿಕ ವೀಕ್ಷಣೆಯಾಗಿ ಸುದ್ದಿಯಾಗಿತ್ತು.

5 ಅಡಿ 10 ಇಂಚು ಎತ್ತರದ ವಿದ್ಯುತ್‌, ಹೊಡೆದಾಟಗಳನ್ನು ವರ್ಣರಂಜಿತವಾಗಿರಬೇಕಾದರೆ ತಮ್ಮ ಕಾಯದ ಕಟ್ಟುಮಸ್ತು ಕಾಪಾಡಬೇಕು ಎಂಬ ಗುಟ್ಟು ಮರೆಯುವುದಿಲ್ಲ. ದೇಹದಾರ್ಡ್ಯ ಕಾಪಾಡಿಕೊಳ್ಳಲು ಪ್ರೊಟೀನ್‌ಗಾಗಿ ಕೋಳಿ ಮಾಂಸ ಸೇವಿಸುವುದು ಸಾಮಾನ್ಯ. ಆದರೆ ವಿದ್ಯುತ್‌ ಪಕ್ಕಾ ಸಸ್ಯಾಹಾರಿ. 

‘ಆನೆ, ಘೇಂಡಾಮೃಗ, ಕುದುರೆಗಳು ಮಾಂಸಾಹಾರ ತಿನ್ನುತ್ತವೆಯೇ? ಅವುಗಳಂತೆ ನಾನೂ ಸಸ್ಯಾಹಾರಿ. ನನಗೆ ಬೇಕಾದ ಎಲ್ಲಾ ಪೌಷ್ಟಿಕಾಂಶಗಳನ್ನು ಸಸ್ಯಾಹಾರದಿಂದಲೇ ಪಡೆಯುತ್ತೇನೆ’ ಎಂದು ವಿದ್ಯುತ್‌ ತಮ್ಮನ್ನೇ ಗೇಲಿ ಮಾಡಿಕೊಳ್ಳುತ್ತಾರೆ.

ವಿದ್ಯುತ್‌ ಜಮ್‌ವಾಲ್‌ ಈಗ ‘ಪೆಟಾ’ದ ಜಾಹೀರಾತುಗಳಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ‘ಮಾಂಸಾಹಾರ ಬಿಟ್ಟುಬಿಡಿ ಸಸ್ಯಾಹಾರಿಗಳಾಗಿ’ ಎಂದು ಜಾಹೀರಾತಿಗಾಗಿ ವಿದ್ಯುತ್‌ ಹೇಳಿಕೆ ನೀಡಿದ್ದಾರೆ. ‘ಡಯಟ್‌ ಹೆಸರಿನಲ್ಲಿ ಕಾರ್ಬೊಹೈಡ್ರೇಟ್‌ ಪ್ರಮಾಣವನ್ನು ಏಕಾಏಕಿ ಕಡಿಮೆ ಮಾಡಬಾರದು. ನಮ್ಮ ಆಹಾರದಲ್ಲಿ ಉಪ್ಪೇ ಇರಬಾರದು, ನೀರೇ ಇರಬಾರದು ಎಂದು ಹೇಳಿದರೆ ಹಿಂದೆಮುಂದೆ ನೋಡದೆ ಬಿಟ್ಟುಬಿಡುತ್ತೀವಾ? ಹಾಗೆಯೇ ಕಾರ್ಬೊಹೈಡ್ರೇಟ್‌ ನಮ್ಮ ಮಿದುಳಿಗೆ ಶಕ್ತಿ ತುಂಬುವ ಅಂಶ. ಅದನ್ನು ಅವೈಜ್ಞಾನಿಕವಾಗಿ ಕಡಿಮೆ ಮಾಡಿದರೆ ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ನಮಗೆ ಆಸಕ್ತಿಯೇ ಇರುವುದಿಲ್ಲ. ಖಿನ್ನತೆ ಮತ್ತು ಕೋಪಕ್ಕೆ ತುತ್ತಾಗಬೇಕಾಗುತ್ತದೆ. ಹಾಗಾಗಿ ಯಾವುದೇ ಡಯಟ್‌ ಅತಿ ಆಗಬಾರದು’ ಎಂದು ಕಿವಿಮಾತು ಹೇಳುತ್ತಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು