ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ಕಲ್ಪಿಸಲು ಮೊದಲ ಆದ್ಯತೆ

ವರುಣಾ ಕ್ಷೇತ್ರದ ಶಾಸಕ ಡಾ.ಯತೀಂದ್ರ ಮನದಾಳ
Last Updated 10 ಜೂನ್ 2018, 10:37 IST
ಅಕ್ಷರ ಗಾತ್ರ

ಮೈಸೂರು: ‘ವರುಣಾ ಕ್ಷೇತ್ರದಲ್ಲಿ ಸಾಕಷ್ಟು ಯುವಕರು, ವಿದ್ಯಾವಂತರು ಇದ್ದಾರೆ. ಅವರಿಗೆ ಉದ್ಯೋಗ ಕಲ್ಪಿಸು ವುದು ನನ್ನ ಮುಂದಿರುವ ಮೊದಲ ಆದ್ಯತೆ’ ಹೀಗೆಂದು ‘ಪ್ರಜಾವಾಣಿ’ ಸಂದರ್ಶನದಲ್ಲಿ ಹೇಳಿದ್ದು ವರುಣಾ ಕ್ಷೇತ್ರದ ನೂತನ ಶಾಸಕ ಡಾ.ಯತೀಂದ್ರ.

ಅಪ್ಪ ಸಿದ್ದರಾಮಯ್ಯ ಪ್ರತಿನಿಧಿಸಿದ್ದ ವರುಣಾ ಕ್ಷೇತ್ರದಲ್ಲಿ ಈ ಬಾರಿ ಡಾ.ಯತೀಂದ್ರ ಗೆಲುವು ಸಾಧಿಸಿದ್ದಾರೆ. ಸತತ ಎರಡು ವರ್ಷಗಳಿಂದ ಈ ಕ್ಷೇತ್ರದಲ್ಲಿ ಸುತ್ತಾಡಿ ಜನರೊಂದಿಗೆ ನಡೆಸಿದ ಒಡನಾಟ ಅವರಿಗೆ ಯಶಸ್ಸು ತಂದುಕೊಟ್ಟಿದೆ. ‌‌ಕ್ಷೇತ್ರದ ಅಭಿವೃದ್ಧಿ ಹಾಗೂ ಇನ್ನಿತರ ವಿಚಾರಗಳನ್ನು ‘ಪ್ರಜಾವಾಣಿ’ ಜತೆ ಹಂಚಿಕೊಂಡಿದ್ದಾರೆ.

ನಿಮ್ಮ ಗೆಲುವಿಗೆ ಕಾರಣಗಳೇನು?

ತಂದೆ ಸಿದ್ದರಾಮಯ್ಯ ಕೈಗೊಂಡ ಕೆಲಸಗಳೇ ಕಾರಣ. ಮುಖ್ಯಮಂತ್ರಿ ಆಗಿದ್ದಾಗ ಕ್ಷೇತ್ರವನ್ನು ಸಾಕಷ್ಟು ಅಭಿವೃದ್ಧಿ ಪಡಿಸಿದ್ದಾರೆ. ಅದು ನನ್ನ ಕೈಹಿಡಿಯಿತು.

ಚುನಾವಣಾ ಪ್ರಚಾರದ ವೇಳೆ ಜನರಿಗೆ ಏನು ಭರವಸೆ ನೀಡಿದ್ದೀರಿ?

ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವುದಾಗಿ ಭರವಸೆ ನೀಡಿದ್ದೇನೆ. ಅಭಿವೃದ್ಧಿ ಕಾರ್ಯ ಗಳ ಜೊತೆ ನೆಮ್ಮದಿ ವಾತಾವರಣವೂ ಮುಖ್ಯ. ಜೊತೆಗೆ ಶಾಂತಿ ಸೌಹಾರ್ದ ಕಾಪಾಡಿಕೊಳ್ಳುವ ವಾತಾವರಣ ತುಂಬಾ ಮುಖ್ಯ. ಜಾತಿ, ಧರ್ಮಗಳ ನಡುವೆ ಸಾಮರಸ್ಯ ಮೂಡಿಸಬೇಕಿದೆ.

ಕ್ಷೇತ್ರದಲ್ಲಿ ಕಾಡುತ್ತಿರುವ ಪ್ರಮುಖ ಸಮಸ್ಯೆಗಳು ಏನು?

ನಿರುದ್ಯೋಗ ಸಮಸ್ಯೆ ದೊಡ್ಡದಾಗಿ ಬೆಳೆದು ನಿಂತಿದೆ. ಯುವಕರಿಗೆ ಬೇಕಾಗಿರುವುದು ಉದ್ಯೋಗ. ಈ ಸಮಸ್ಯೆ ನಿವಾರಿಸಲು ಮುಂದಿನ ದಿನಗಳಲ್ಲಿ ಪ್ರಯತ್ನಿಸುತ್ತೇನೆ. ವರುಣಾ ಕ್ಷೇತ್ರದಲ್ಲಿ ಕೆಲ ಕಾರ್ಖಾನೆಗಳು ಇವೆ. ಇಲ್ಲಿ ಸ್ಥಳೀಯರನ್ನು ಕಡೆಗಣಿಸಲಾಗಿದೆ. ಹೀಗಾಗಿ, ಕಂಪನಿಗಳ ಮುಖ್ಯಸ್ಥ ರೊಂದಿಗೆ ಮಾತನಾಡಿ ಸ್ಥಳೀಯರಿಗೆ ಆದ್ಯತೆ ನೀಡುವ ಬಗ್ಗೆ ಸಮಾಲೋಚನೆ ನಡೆಸುತ್ತೇನೆ.

ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ (ಪಿಎಚ್‌ಸಿ) ಸೌಲಭ್ಯದ ಕೊರತೆ ಇದೆ. ವೈದ್ಯರು ಹಾಗೂ ಸಿಬ್ಬಂದಿ ನೇಮಕಾತಿ ಅಗತ್ಯವಿದೆ. ಈ ಸಮಸ್ಯೆ ಬಗೆಹರಿಸಲು ಒತ್ತು ನೀಡಿ ಕೆಲಸ ಮಾಡುತ್ತೇನೆ.

ಕ್ಷೇತ್ರದ ಅಭಿವೃದ್ಧಿಗೆ ನೀವು ಹೊಂದಿರುವ ಯೋಜನೆಗಳೇನು?

ಚುನಾವಣಾ ಸಮಯದಲ್ಲಿ ಕ್ಷೇತ್ರವನ್ನು ಸುತ್ತಾಡಿದ್ದೇನೆ. ಇನ್ನೂ ಕೆಲ ಗ್ರಾಮಗಳಲ್ಲಿ ರಸ್ತೆ ನಿರ್ಮಿಸಬೇಕಿದೆ, ಕೆಲ ಭಾಗದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕಿದೆ. ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಬಹು ಗ್ರಾಮ ಯೋಜನೆಗಳನ್ನು ಪೂರ್ಣ ಗೊಳಿಸಬೇಕಿದೆ. ಕೆರೆಗಳಿಗೆ ನೀರು ತುಂಬಿಸಬೇಕು. ಮಕ್ಕಳನ್ನು ವಿದ್ಯಾವಂತ ರಾಗಿಸಬೇಕು. ಯಾರೂ ಶಾಲೆಯಿಂದ ಹೊರಗುಳಿಯಬಾರದು.

ಜನ ನಿಮ್ಮನ್ನು ಸಂಪರ್ಕಿಸಬೇಕೆಂದರೆ?

ವಾರಕ್ಕೆ 3–4 ದಿನ ನಾನು ಕ್ಷೇತ್ರದಲ್ಲಿ ಇರುತ್ತೇನೆ. ಯಾವುದೇ ಸಮಸ್ಯೆ ಇದ್ದರೂ ನನ್ನ ಬಳಿ ಹೇಳಿಕೊಳ್ಳಬಹುದು. ಶಾಸಕನಾಗಿಲ್ಲದ ಸಮಯದಲ್ಲೂ ಜನರ ಕುಂದುಕೊರತೆಗಳಿಗೆ ಸ್ಪಂದಿಸುತ್ತಿದ್ದೆ. ಆ ಕಾರ್ಯ ಈಗಲೂ ಮುಂದುವರೆಯಲಿದೆ.

ಡಾ.ಯತೀಂದ್ರ ಕುರಿತು…

ಮೈಸೂರು: ಡಾ.ಯತೀಂದ್ರ ಅವರು ವರುಣಾ ಕ್ಷೇತ್ರದಲ್ಲಿ ಚೊಚ್ಚಲ ಪ್ರಯತ್ನದಲ್ಲೇ ಭಾರಿ ಅಂತರದ ಗೆಲುವು ದಾಖಲಿಸಿದ್ದಾರೆ. ಸಮೀಪದ ಸ್ಪರ್ಧಿ ಬಿಜೆಪಿಯ ಟಿ.ಬಸವರಾಜು ಎದುರು 58,616 ಮತಗಳಿಂದ ಗೆದ್ದು ವಿಧಾನಸಭೆ ಪ್ರವೇಶಿಸಿದ್ದಾರೆ.

ಎಂಬಿಬಿಎಸ್‌, ಎಂ.ಡಿ ವ್ಯಾಸಂಗ ಮಾಡಿರುವ 37 ವರ್ಷ ವಯಸ್ಸಿನ ಯತೀಂದ್ರ, ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್‌ನಲ್ಲಿ ಒಂದು ವರ್ಷ ಹಿರಿಯ ಸಹಾಯಕರಾಗಿ ಕಾರ್ಯನಿರ್ವಹಿಸಿದ್ದರು. ಸಹೋದರ ರಾಕೇಶ್‌ ನಿಧನದ ಬಳಿಕ ರಾಜಕೀಯ ಕ್ಷೇತ್ರ ಪ್ರವೇಶಿಸಿ ವರುಣಾ ಕ್ಷೇತ್ರದ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ತಂದೆ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರ ಆಯ್ಕೆಮಾಡಿಕೊಂಡ ಕಾರಣ ವರುಣಾ ಕ್ಷೇತ್ರದಿಂದ ಕಣಕ್ಕಿಳಿದು ಯಶಸ್ಸು ಕಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT