ಶುಕ್ರವಾರ, ಡಿಸೆಂಬರ್ 6, 2019
19 °C

'ಕೇದಾರನಾಥ್' ನಿರ್ದೇಶಕರ ಮನವಿ ತಳ್ಳಿಹಾಕಿದ ಉತ್ತರಾಖಂಡ ಸರ್ಕಾರ

Published:
Updated:

ನವದೆಹಲಿ: ‘ಕೇದಾರನಾಥ್’ ಚಿತ್ರದ ಮೇಲೆ ಹೇರಿರುವ ನಿಷೇಧ ತೆರವುಗೊಳಿಸಬೇಕು ಎಂದು ನಿರ್ದೇಶಕ ಅಭಿಷೇಕ್ ಕಪೂರ್ ಮಾಡಿಕೊಂಡಿರುವ ಮನವಿಯನ್ನು ಉತ್ತರಾಖಂಡ ಸರ್ಕಾರ ತಳ್ಳಿ ಹಾಕಿದೆ. ದೇಗುಲದ ಪರಿಸರದಲ್ಲಿ ರೊಮಾನ್ಸ್ ದೃಶ್ಯಗಳನ್ನು ಚಿತ್ರೀಕರಿಸಿರುವ ಈ ಚಿತ್ರದಿಂದ ಸಮಾಜದಲ್ಲಿ ಶಾಂತಿ ಕದಡುವ ಸಂಭವವಿದೆ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ.

ಈ ಸಿನಿಮಾದ ಕಥೆಯೂ ಆಕ್ಷೇಪಾರ್ಹವಾಗಿದ್ದು ಕೋಮು ಭಾವನೆಗಳನ್ನು ಕೆರಳಿಸುವಂತಿದೆ. ಎರಡೂ ಸಮುದಾಯಗಳ ನಡುವೆ ಅಶಾಂತಿಗೆ ಕಾರಣವಾಗಬಹುದು ಎಂದು ಅಭಿಪ್ರಾಯಪಟ್ಟಿರುವ ಪ್ರವಾಸೋದ್ಯಮ ಸಚಿವ ಸತ್ಪಾಲ್ ಮಹಾರಾಜ್, ಚಿತ್ರದ ಹೆಸರು ಬದಲಿಸಲು ಅಗತ್ಯಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಪವಿತ್ರ ಸ್ಥಳದ ಹೆಸರನ್ನು ಹೀಗೆ ದುರ್ಬಳಕೆ ಮಾಡಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದರು.

ನಿರ್ದೇಶಕ ಕಪೂರ್, 'ಚಿತ್ರದ ಮೇಲಿನ ನಿಷೇಧ ತೆರವುಗೊಳೊಸುವಂತೆ ನಾನು ಉತ್ತರಾಖಂಡ ಸರ್ಕಾರವನ್ನು ಕೋರುತ್ತೇನೆ' ಎಂದು ಮಾಡಿದ್ದ ಟ್ವೀಟ್ ಗೆ ಸತ್ಪಾಲ್ ಮೇಲಿನಿಂತೆ ಪ್ರತಿಕ್ರಿಯಿಸಿದ್ದಾರೆ.

'ಈ ಚಿತ್ರವು ಎರಡೂ ಸಮುದಾಯಗಳ ನಡುವೆ ಶಾಂತಿ, ಸೌಹಾರ್ದ ಮತ್ತು ದ್ವೇಷಶಮನದ ಭಾವನೆ ಮೂಡಿಸುವ ಉದ್ದೇಶ ಹೊಂದಿದೆ. ಇಂಥ ಅವಕಾಶವನ್ನು ನಮಗೆ ನಿರಾಕರಿಸಬೇಡಿ' ಎಂದು ಕಪೂರ್ ಕೋರಿದ್ದರು.

'ಈ ಚಿತ್ರವು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತದೆ. ಚಿತ್ರದ ನಾಯಕ-ನಾಯಕಿ ಪವಿತ್ರ ದೇಗುಲದ ಹಿನ್ನೆಲೆಯಲ್ಲಿ ಸಲ್ಲಾಪ ನಡೆಸುವ ದೃಶ್ಯಗಳನ್ನು ಹೊಂದಿದೆ. ಹೀಗಾಗಿ ನಿಷೇಧ ತೆರವುಗೊಳಿಸುವ ಸಾಧ್ಯತೆ ಇಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ಮತ್ತು ಸಾರಾ ಅಲಿಖಾನ್ ಈ ಚಿತ್ರದ ನಾಯಕ-ನಾಯಕಿ. ದೇಶದ ಇತೆರೆಡೆ ಚಿತ್ರಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ನವೆಂಬರ್ ತಿಂಗಳಲ್ಲಿ ಚಿತ್ರದ ಟೀಸರ್ ಬಿಡುಗಡೆಯಾಗಿತ್ತು. ನಂತರದ ದಿನಗಳಲ್ಲಿ ಕೇದಾರನಾಥದ ತೀರ್ಥ ಪುರೋಹಿತರು (ಪೂಜಾರಿಗಳು) ಚಿತ್ರದ ಬಿಡುಗಡೆಯನ್ನು ವಿರೋಧಿಸಿದ್ದರು. 

'ಸಿನಿಮಾ ನಿಷೇಧಿಸುವ ಸರ್ಕಾರದ ನಿರ್ಧಾರ ಸಮಂಜಸವಾಗಿದೆ. ಇದು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತದೆ. ಮಾತ್ರವಲ್ಲ, ಲವ್ ಜಿಹಾದ್ ಗೆ ಉತ್ತೇಜನ ನೀಡುತ್ತದೆ' ಎಂದು ಕೇದಾರನಾಥದ ಪುರೋಹಿತರ ಸಂಘದ ಅಧ್ಯಕ್ಷ ವಿಷ್ಣುಶುಕ್ಲ 'ಹಿಂದೂಸ್ತಾನ್ ಟೈಮ್ಸ್'ಗೆ ಪ್ರತಿಕ್ರಿಯಿಸಿದ್ದಾರೆ.

ಪ್ರತಿಕ್ರಿಯಿಸಿ (+)