ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

9 ವರ್ಷಗಳು ಉರುಳಿದರೂ ತಲೆ ಎತ್ತಲೇ ಇಲ್ಲ ‘ವಿಷ್ಣು ಸ್ಮಾರಕ’

Last Updated 18 ಸೆಪ್ಟೆಂಬರ್ 2018, 4:02 IST
ಅಕ್ಷರ ಗಾತ್ರ

ವಿಷ್ಣುವರ್ಧನ್‌ ನಮ್ಮನ್ನಗಲಿ 2019ರ ಡಿಸೆಂಬರ್ 30ಕ್ಕೆ ಹತ್ತು ವರ್ಷಗಳಾಗಲಿವೆ. 2010ರಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಯಡಿಯೂರಪ್ಪ ನೇತೃತ್ವದ ಅಂದಿನರಾಜ್ಯ ಸರ್ಕಾರ ನಿರ್ಧರಿಸಿತ್ತು. ಅದಕ್ಕಾಗಿ 10 ಕೋಟಿ ಹಣವನ್ನು ನೀಡುವುದಾಗಿ ಹೇಳಿತ್ತು. ಆದರೆ, ವಿಷ್ಣು ಸ್ಮಾರಕ ನಿರ್ಮಾಣದ ಯೋಜನೆ ರೂಪಿಸಿ, 9 ವರ್ಷಗಳು ಉರುಳಿದರೂ ಸ್ಮಾರಕ ತಲೆಎತ್ತಲೇ ಇಲ್ಲ.

ಮೈಲಸಂದ್ರ ಬಳಿಯ 10 ಎಕರೆ ವಿಸ್ತೀರ್ಣದ ‘ಅಭಿಮಾನ್ ಸ್ಟುಡಿಯೊ’ದಲ್ಲಿ ವಿಷ್ಣುವರ್ಧನ್ ಅಂತ್ಯಕ್ರಿಯೆ ಮಾ ಡಲಾಯಿತು. ಬಳಿಕ ಆ ಸ್ಟುಡಿಯೊದ ಜಾಗದಲ್ಲಿ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಯೋಜನೆಯನ್ನೂ ರೂಪಿಸಿತ್ತು.

ಸ್ಟುಡಿಯೊದ ನಿರ್ವಹಣೆಯನ್ನು ನಟ ಬಾಲಕೃಷ್ಣ ಅವರ ಕುಟುಂಬದವರು ನೋಡಿಕೊಳ್ಳುತ್ತಿದ್ದಾರೆ. ಸ್ಮಾರಕ ನಿರ್ಮಾಣಕ್ಕೆ ಬೇಕಾದ ಜಮೀನು ಸಂಬಂಧವಾಗಿ ಕೆಲವೊಂದು ವಿವಾದಗಳು ಹುಟ್ಟಿಕೊಂಡವು. ಅದರಿಂದಲೇ ಸ್ಮಾರಕ ನಿರ್ಮಾಣಕ್ಕೆ ತಡೆಬಿದ್ದಿತು.

ಸ್ಟುಡಿಯೊದ ಜಾಗ ಸರ್ಕಾರದ್ದು!
ವಾಸ್ತವವಾಗಿ ನೋಡುವುದಾದರೆ, ಅಭಿಮಾನ್ ಸ್ಟುಡಿಯೊದ ಜಾಗ ಬಾಲಕೃಷ್ಣ ಅವರ ಕುಟುಂಬಕ್ಕೆ ಸೇರಿದ್ದಲ್ಲ. ಒಟ್ಟು 20 ಎಕರೆ ವಿಸ್ತೀರ್ಣವಿದ್ದ ಸ್ಟುಡಿಯೊದ ಜಮೀನು ಸರ್ಕಾರದ್ದು. ಬಾಲಕೃಷ್ಣ ಅವರ ಕಲಾಸೇವೆಯನ್ನು ಗುರುತಿಸಿ, ಅವರಿಗೆ 99 ವರ್ಷಗಳ ವರೆಗೆ ಭೋಗ್ಯಕ್ಕೆಂದು ಆ ಜಮೀನನ್ನು ರಾಜ್ಯ ಸರ್ಕಾರ ನೀಡಿತ್ತು. ಅವರ ನೇತೃತ್ವದಲ್ಲೇ ಅಭಿಮಾನ್ ಸ್ಟುಡಿಯೊ ನಿರ್ಮಾಣ ಮಾಡಿ, ಅಭಿವೃದ್ಧಿ ಪಡಿಸಲಾಯಿತು.

‘ಬಾಲಕೃಷ್ಣ ಅವರ ನಿಧನದ ಬಳಿಕ ಅವರ ಮಗ ಗಣೇಶ್, ‘ತಂದೆಯ ನಿಧನದ ಬಳಿಕ ಸ್ಟುಡಿಯೊ ನಿರ್ವಹಣೆ ಕಷ್ಟವಾಗಿದೆ. 20 ಎಕರೆ ಜಮೀನಿನ ಪೈಕಿ 10 ಎಕರೆಯನ್ನು ಮಾರಾಟ ಮಾಡಿ, ಸ್ಟುಡಿಯೊ ಅಭಿವೃದ್ಧಿಗೊಳಿಸುತ್ತೇನೆ’ ಎಂದು ಎಸ್‌.ಎಂ.ಕೃಷ್ಣ ನೇತೃತ್ವದ ಸರ್ಕಾರಕ್ಕೆ ಪತ್ರ ಬರೆದು, ಷರತ್ತು ಬದ್ಧ ಅನುಮತಿ ಪಡೆದುಕೊಂಡಿದ್ದರು.

‘ಈಗ, ಉಳಿದ 10 ಎಕರೆ ಜಮೀನು ಸಹ ತಮ್ಮದೇ ಎಂಬ ರೀತಿಯಲ್ಲಿ ಬಾಲಕೃಷ್ಣ ಅವರ ಕುಟುಂಬಸ್ಥರು ವರ್ತಿಸುತ್ತಿದ್ದಾರೆ. ಹೀಗಾಗಿಯೇ, ಸ್ಮಾರಕ ನಿರ್ಮಾಣಕ್ಕೂವಿನಾಕಾರಣ ಅಡ್ಡಿಯುಂಟು ಮಾಡುತ್ತಿದ್ದಾರೆ’ ಎಂಬುದು ವಿಷ್ಣು ಸೇನಾ ಸಮಿತಿ ಅಧ್ಯಕ್ಷ ಶ್ರೀನಿವಾಸ ವೀರಕಪುತ್ರ.

ಬಾಲಕೃಷ್ಣ ಅವರ ಮಗ ಗಣೇಶ್ ಅವರನ್ನು ಸಂಪರ್ಕಿಸಿದಾಗ, ‘ಅಭಿಮಾನ್ ಸ್ಟುಡಿಯೊದಲ್ಲಿ ವಿಷ್ಣು ಸ್ಮಾರಕ ನಿರ್ಮಾಣ ವಿಚಾರ ಸಂಬಂಧ ನಾನು ಯಾವುದೇ ರೀತಿಯ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ಹೇಳಿ ಕರೆ ಸ್ಥಗಿತಗೊಳಿಸಿದರು. ವಿಷ್ಣು ಸ್ಮಾರಕ ಸಂಬಂಧಿತ ಬೆಳವಣಿಗೆಗಳಿಂದ ಬೇಸೆತ್ತ ಭಾರತಿ ವಿಷ್ಣುವರ್ಧನ್ ಅವರು ಮೈಸೂರಿನಲ್ಲಿ ಸ್ಮಾರಕ ಭವನ ನಿರ್ಮಾಣಕ್ಕೆ ಮನಸು ಮಾಡಿದ್ದರು. ಅವರ ಬೇಡಿಕೆಗನುಗುಣವಾಗಿಯೇ, ಸರ್ಕಾರ ಮೈಸೂರಿನಲ್ಲಿ 6 ಎಕರೆ ಜಮೀನು ಮಂಜೂರು ಮಾಡಿದೆ. ಆದರೆ, ‘ಆ ಜಮೀನು ರೈತರಿಗೆ ಸೇರಿದ್ದು,ಅದರಲ್ಲಿ ಸ್ಮಾರಕ ನಿರ್ಮಾಣ ಮಾಡಬಾರದು’ ಎಂದು ಕೆಲ ರೈತ ಸಂಘಟನೆಗಳು ವಾದ ಮಾಡುತ್ತಿವೆ. ಹೀಗಾಗಿ,ಆ ಜಮೀನಿಗೆ ಸಂಬಂಧಪಟ್ಟಂತೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕೋರ್ಟ್‌ ಸೂಚಿಸಿದೆ.

ಸಮಾಧಿ ಜಾಗ ಅಭಿವೃದ್ಧಿಯಾಗಲಿ
‘ವಿಷ್ಣು ಸ್ಮಾರಕವನ್ನು ಎಲ್ಲಿ ಬೇಕಾದರೂ, ಹೇಗೆ ಬೇಕಾದರೂ ನಿರ್ಮಿಸಿಕೊಳ್ಳಲಿ. ಅದಕ್ಕೆ ನಮ್ಮ ತಗಾದೆ ಇಲ್ಲ. ಆದರೆ, ಅಭಿಮಾನ್ ಸ್ಟುಡಿಯೊದಲ್ಲಿರುವ ವಿಷ್ಣುಜೀ ಅವರ ಸಮಾಧಿ ಜಾಗದೊಂದಗೆ ಅಭಿಮಾನಿಗಳಿಗೆ ಭಾವನಾತ್ಮಕ ಸಂಬಂಧವಿದೆ. ಆ ಜಾಗ ಅಭಿವೃದ್ದಿ ಕಾಣದೆ, ಅಭಿಮಾನಿಗಳನ್ನು ಅವಮಾನಿಸುತ್ತಿದೆ. ಹೀಗಾಗಿ, ವರನಟ ಡಾ.ರಾಜ್‌ಕುಮಾರ್ ಸಮಾಧಿ ಜಾಗದ ರೀತಿಯಲ್ಲೇ ಅಭಿವೃದ್ಧಿಗೊಳಿಸಬೇಕು ಎಂಬುದು ನಮ್ಮ ಬೇಡಿಕೆ. ಅದು ಈಡೇರುವವರೆಗೂ ಒಂದಲ್ಲ ಒಂದು ರೀತಿಯಲ್ಲಿ ಹೋರಾಟ ಮುಂದುವರೆಯುತ್ತಲೇ ಇರುತ್ತದೆ’ ಎನ್ನುತ್ತಾರೆ ಶ್ರೀನಿವಾಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT