ಸೆಲ್ಫಿಹಾಡುಗಳ ಜೊತೆ...

7
ಲೈಫ್ ಜೊತೆ ಒಂದ್ ಸೆಲ್ಫಿ

ಸೆಲ್ಫಿಹಾಡುಗಳ ಜೊತೆ...

Published:
Updated:

ಸಮೃದ್ಧಿ ಮಂಜುನಾಥ್ ನಿರ್ಮಾಣದ ಚಿತ್ರ ‘ಲೈಫ್ ಜೊತೆ ಒಂದ್ ಸೆಲ್ಫಿ’. ಇದನ್ನು ನಿರ್ದೇಶಿಸುತ್ತಿರುವವರು ದಿನಕರ್‌ ಎಸ್. ಈ ಚಿತ್ರದ ಹಾಡುಗಳ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ಒಂದು ತಾರಾ ಹೋಟೆಲ್‌ನಲ್ಲಿ ನಡೆಯಿತು. ಮಂಜುನಾಥ್ ಅವರು ಈ ಕಾರ್ಯಕ್ರಮವನ್ನು ಅದ್ಧೂರಿಯಾಗಿಯೇ ಆಯೋಜಿಸಿದ್ದರು.

‘ನಾನು ನಿರ್ಮಾಪಕರಿಗೆ ಈ ಚಿತ್ರದ ಕಥೆಯನ್ನು ಪೂರ್ತಿಯಾಗಿ ಹೇಳುವ ಮುನ್ನವೇ ಅವರು ಇದಕ್ಕೆ ಹಣ ಹೂಡಲು ಒಪ್ಪಿಕೊಂಡರು. ಚಿತ್ರ ನಿರ್ಮಾಣಕ್ಕೆ ಒಪ್ಪಿಕೊಳ್ಳಲು ಅವರು (ಮಂಜುನಾಥ್) ತೆಗೆದುಕೊಂಡ ಸಮಯ ಎರಡು ನಿಮಿಷಗಳು ಮಾತ್ರ’ ಎಂದು ಚಿತ್ರಕ್ಕೆ ಸಂಬಂಧಿಸಿದ ತೆರೆಯ ಹಿಂದಿನ ಕಥೆಯನ್ನು ತೆರೆದಿಟ್ಟರು ದಿನಕರ್. ಹೊಸ ಹುಡುಗರನ್ನು ಇಟ್ಟುಕೊಂಡು ಈ ಸಿನಿಮಾ ಮಾಡುವ ಇರಾದೆ ದಿನಕರ್‌ ಅವರದ್ದಾಗಿತ್ತು. ಆದರೆ, ‘ಕಥೆ ಚೆನ್ನಾಗಿದೆ. ಹಾಗಾಗಿ ಹೊಸಬರ ಬದಲು ಸ್ಟಾರ್ ನಟ–ನಟಿಯರನ್ನೇ ಇಟ್ಟುಕೊಂಡು ಸಿನಿಮಾ ಮಾಡಬಹುದಲ್ಲವೇ’ ಎನ್ನುವ ಸಲಹೆ ದಿನಕರ್ ಅವರಿಗೆ ಬಂತು. ಹಾಗಾಗಿ ಅವರು ಪ್ರೇಮ್, ಪ್ರಜ್ವಲ್ ಮತ್ತು ಹರಿಪ್ರಿಯಾ ಅವರನ್ನು ತಾರಾಗಣದಲ್ಲಿ ಇಟ್ಟುಕೊಂಡು ಚಿತ್ರ ಮಾಡಿದ್ದಾರೆ.

ದಿನಕರ್‌ ಅವರು ಈ ಸಿನಿಮಾ ವಿಚಾರದಲ್ಲಿ ಅಂದುಕೊಂಡಿದ್ದ ಕೆಲವು ಪ್ರಮುಖ ಕೆಲಸಗಳೆಲ್ಲ ಒಂದೇ ಒಂದು ದಿನದಲ್ಲಿ ಅಡತಡೆಗಳಿಲ್ಲದೆ ಪೂರ್ಣಗೊಂಡವಂತೆ. ಈ ಚಿತ್ರದಲ್ಲಿ ಸುಧಾರಾಣಿ ಅವರೂ ಅಭಿನಯಿಸಿದ್ದಾರೆ. ಸುಧಾರಾಣಿ ಅಭಿನಯಿಸಿದ ಒಂದು ಸಾಹಸಮಯ ಸನ್ನಿವೇಶ ಚಿತ್ರದಲ್ಲಿದ್ದು, ಅದಕ್ಕೆ ತದ್ರೂಪಿಯನ್ನು ಬಳಸಿಕೊಳ್ಳಲಾಗುವುದು ಎಂದು ನಿರ್ದೇಶಕರು ತಿಳಿಸಿದ್ದರಂತೆ. ಆದರೆ ಸುಧಾರಾಣಿ ಅವರು, ‘ಆ ಸನ್ನಿವೇಶವನ್ನು ನಾನೇ ಅಭಿನಯಿಸುವೆ. ತದ್ರೂಪಿಯ ಅಗತ್ಯ ಇಲ್ಲ’ ಎಂದು ಖಡಾಖಂಡಿತವಾಗಿ ಹೇಳಿದ್ದರಂತೆ.

‘ಚಿತ್ರದ ಕಥೆಯನ್ನು ದಿನಕರ್ ಅವರು ನನ್ನ ಬಳಿ ಹೇಳಿದಾಗ, ಕನ್ನಡದ ಜೊತೆಯಲ್ಲೇ ತೆಲುಗಿನಲ್ಲೂ ಇದನ್ನು ಸಿನಿಮಾ ಮಾಡು ಎಂದು ನಾನು ಹೇಳಿದ್ದೆ. ಈ ಚಿತ್ರದಲ್ಲಿ ನನಗೆ ಮೊದಲು ಇಷ್ಟವಾಗಿದ್ದು ಶೀರ್ಷಿಕೆ’ ಎಂದರು ಮಂಜುನಾಥ್.

ಹರಿಪ್ರಿಯಾ ಅವರು ಈ ಚಿತ್ರದಲ್ಲಿ ರಶ್ಮಿ ಎನ್ನುವ ಪಾತ್ರ ನಿಭಾಯಿಸುತ್ತಿದ್ದಾರೆ. ‘ಸಿನಿಮಾದ ಕೆಲಸಗಳು ಚೆನ್ನಾಗಿ ನಡೆದವು’ ಎಂದರು ಹರಿಪ್ರಿಯಾ. ‘ಈ ಚಿತ್ರದಲ್ಲಿ ನನ್ನ ಪಾತ್ರ ಬಹಳ ವಿಭಿನ್ನವಾಗಿದೆ. ವೈಯಕ್ತಿಕವಾಗಿ ಕೂಡ ಈ ಚಿತ್ರ ನನಗೆ ಖುಷಿ ಕೊಟ್ಟಿದೆ’ ಎಂದರು ಸುಧಾರಾಣಿ. ಚಿತ್ರಕ್ಕೆ ಸಂಗೀತ ನೀಡಿದವರು ಹರಿಕೃಷ್ಣ.

ಹಾಡುಗಳ ಬಿಡುಗಡೆ ಕಾರ್ಯಕ್ರಮದ ಕೇಂದ್ರಬಿಂದು ಆಗಿದ್ದ ದರ್ಶನ್ ಅವರು, ‘ಸಮೃದ್ಧಿ ಸಮೂಹವು ವಿರಾಟ್ ರೂಪದಲ್ಲಿ ಬೆಳೆಯಲಿ. ಈ ಸಿನಿಮಾ ಜನರನ್ನು ತಲುಪಲಿ’ ಎಂದು ಹಾರೈಸಿದರು. ಸಚಿವ ಸಿ.ಎಸ್. ಪುಟ್ಟರಾಜು ಅವರೂ ಕಾರ್ಯಕ್ರಮಕ್ಕೆ ಬಂದಿದ್ದರು. ‘ನಾನು ತೂಗುದೀಪ ಶ್ರೀನಿವಾಸ್ ಅಭಿಮಾನಿ. ಹಾಗೆಯೇ ಅವರ ಮಗನ (ದರ್ಶನ್) ಅಭಿಮಾನಿ ಕೂಡ ಹೌದು’ ಎಂದರು ಪುಟ್ಟರಾಜು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !