ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಕ್ರಮ್ ಚಿತ್ರ ವಿಮರ್ಶೆ: ಅಭಿಮಾನದ ಮೂಸೆಯಲ್ಲಿ ಅದ್ದಿದ ಥ್ರಿಲ್ಲರ್

Last Updated 3 ಜೂನ್ 2022, 11:01 IST
ಅಕ್ಷರ ಗಾತ್ರ

ಚಿತ್ರ: ವಿಕ್ರಮ್ (ತಮಿಳು)
ನಿರ್ಮಾಣ: ಕಮಲ ಹಾಸನ್, ಆರ್. ಮಹೇಂದ್ರನ್
ನಿರ್ದೇಶನ: ಲೋಕೇಶ್ ಕನಕರಾಜ್
ತಾರಾಗಣ: ಕಮಲ ಹಾಸನ್, ವಿಜಯ್ ಸೇತುಪತಿ, ಫಹಾದ್ ಫಾಸಿಲ್, ಗಾಯತ್ರಿ ಶಂಕರ್, ನರೇನ್, ಸೂರ್ಯ.

‘ಖೈದಿ’ ತಮಿಳು ಚಿತ್ರ ಮುಕ್ತಾಯಗೊಂಡಿದ್ದ ದೃಶ್ಯದ ಒಂದು ಬಿಂದುವನ್ನು ಎತ್ತಿಕೊಂಡು, ಅದನ್ನು ಕಮಲ ಹಾಸನ್ ಅಭಿಮಾನಿ ತಾವು ಎಂಬ ಮೂಸೆಯಲ್ಲಿ ಅದ್ದಿ ಅದ್ದಿ ಚಿತ್ರಕಥೆಯನ್ನು ಲೋಕೇಶ್ ಕನಕರಾಜ್ ವಿಸ್ತರಿಸಿ ಬರೆದಿದ್ದಾರೆ. ಮೊದಲರ್ಧದಲ್ಲಿ ಕಮಲ ಹಾಸನ್ ಚಿತ್ರದಲ್ಲಿ ತಾವು ಇಲ್ಲವೇ ಇಲ್ಲವೇನೊ ಎನ್ನುವಷ್ಟು ಕಡಿಮೆ ಅವಧಿ ಕಾಣಿಸಿಕೊಳ್ಳುವರು. ಆಮೇಲೆ ಅವರೇಕೆ ಕಾಣಿಸಿಕೊಳ್ಳಲಿಲ್ಲ ಎಂಬುದು ಅನಾವರಣಗೊಳ್ಳುತ್ತಾ ಹೋಗುತ್ತದೆ. ನಿರೂಪಣೆಯಲ್ಲಿ ತೋರುವ ದೃಶ್ಯಕ್ಕೂ ಅದಕ್ಕೆ ಇನ್ನೆಲ್ಲೋ ಕೊಂಡಿಯನ್ನೂ ಕಲ್ಪಿಸುವ ‘ಆಟ’ವನ್ನು ಚಿತ್ರಕಥೆಯಲ್ಲಿ ಲೋಕೇಶ್ ಆಡಿದ್ದಾರೆ.

1980ರ ದಶಕದಲ್ಲಿ ಇದೇ ಹೆಸರಿನ ಕಮಲ ಹಾಸನ್ ಸಿನಿಮಾ ಬಂದಿತ್ತು. ಅದಕ್ಕೂ ಇದಕ್ಕೂ ಸುಖಾಸುಮ್ಮನೆ ಸಂಬಂಧ ಕಲ್ಪಿಸಿರುವ ನಿರ್ದೇಶಕರು, ದೃಶ್ಯಗಳ ಹೆಣಿಗೆಯಲ್ಲಿ ತಮ್ಮತನದ ದಾರಿಯಲ್ಲೇ ನಡೆದಿದ್ದಾರೆ.

ಸಿನಿಮಾ ಶುರುವಾದ ಸ್ವಲ್ಪವೇ ಹೊತ್ತಿನಲ್ಲಿ ಕಮಲ ಹಾಸನ್ ಸಾಯುತ್ತಾರೆ. ಅದಾದ ಮೇಲೆ ಕೆಲವರ ಹೆಣಗಳು ಉರುಳುತ್ತವೆ. ಮುಸುಕುಧಾರಿಗಳ ತಂಡವೊಂದು ಈ ಕೃತ್ಯ ಮಾಡುತ್ತಿರುತ್ತದೆ. ಅದರ ಬೆನ್ನುಹತ್ತುವ ಪೊಲೀಸರಿಗೆ ಕೆಲಸ ಮಾಡುವ ಏಜೆನ್ಸಿಯೊಂದರ ಮುಖಂಡನಾಗಿ ಫಹಾದ್ ಫಾಸಿಲ್ ಕಣಕ್ಕಿಳಿಯುತ್ತಾರೆ. ಅವರ ಶೋಧನೆಯಲ್ಲಿ ವ್ಯಕ್ತಗೊಳ್ಳುವ ಸಂಗತಿಗಳು ಮುಂದೇನು, ಏನಾಗಿದೆ ಎರಡನ್ನೂ ಪ್ರೇಕ್ಷಕ ಊಹಿಸುವಂತೆ ಮಾಡುತ್ತವೆ. ಹಾಗೆ ಊಹೆ ಮಾಡುತ್ತಿರುವಾಗಲೇ ಧುತ್ತೆಂದು ಕಮಲ ಹಾಸನ್ ಪ್ರತ್ಯಕ್ಷರಾಗುವ ಮೂಲಕ ಚಿತ್ರ ಮಧ್ಯಂತರಕ್ಕೆ ತಕ್ಕಂಥ ಸಿನಿಮೀಯ ಬಿಂದುವಿನ ಮೇಲೆ ಬಂದು ನಿಲ್ಲುತ್ತದೆ.

ಸಿನಿಮಾದುದ್ದಕ್ಕೂ ತೆರೆಮೇಲೆ ಹೆಚ್ಚು ಕಾಣುವವರು ಫಹಾದ್. ‘ಮಾಸ್ಟರ್’ ಚಿತ್ರದಲ್ಲಿ ರಕ್ಕಸ ಸ್ವರೂಪದ ಪಾತ್ರಧಾರಿಯಾಗಿದ್ದ ವಿಜಯ್ ಸೇತುಪತಿ, ಈ ಚಿತ್ರದಲ್ಲೂ ಅಂಥದ್ದೇ ಜಾಯಮಾನದ ಪಾತ್ರವನ್ನು ಜೀವಿಸಿದ್ದಾರೆ.

ಕಮಲ ಹಾಸನ್ ಅವರ ವಯಸ್ಸನ್ನೂ ಲಕ್ಷ್ಯಕ್ಕೆ ತೆಗೆದುಕೊಂಡು ಇಂತಹ ಪಾತ್ರಕ್ಕೆ ರಕ್ತ–ಮಾಂಸ ತುಂಬಲು ಹೆಚ್ಚೇ ಬುದ್ಧಿ ಖರ್ಚು ಮಾಡಬೇಕು. ಥ್ರಿಲ್ಲರ್‌ ಪ್ರಕಾರಕ್ಕೆ ಅದನ್ನು ಒಗ್ಗಿಸಿ, ಸಿನಿಮೀಯ ಭಾವುಕತನವನ್ನು ಇಡುಕಿರಿದು ಲೋಕೇಶ್ ಸ್ಕ್ರಿಪ್ಟ್‌ ರೂಪಿಸಿರುವುದು ಶ್ಲಾಘನೀಯ.

ಮೊದಲರ್ಧದಲ್ಲಿ ದಟ್ಟವಾಗಿ ಮೂಡುವ ವಿವರಗಳ ಏಕತಾನತೆ ಆಗೀಗ ಬೋರ್ ಹೊಡೆಸುತ್ತದಾದರೂ ಅದರಿಂದ ಬಲು ಬೇಗ ಆಚೆಗೆ ಕರೆತರುವ ತಿರುವನ್ನೂ ಒಳಗೊಳ್ಳುವುದು ಆಸಕ್ತಿಕರ.

ಕಮಲ ಹಾಸನ್ ಈ ಬಗೆಯ ನಿರೂಪಣೆಗೆ ಹಾಗೂ ಬಹು ತಾರಾಗಣದ ಪ್ರಯೋಗಕ್ಕೆ ಒಡ್ಡಿಕೊಂಡು, ನಿರ್ಮಾಪಕರೂ ಆಗಿರುವುದು ಮೆಚ್ಚತಕ್ಕ ಸಂಗತಿ. ಅಭಿನಯದಲ್ಲೂ ಅವರದ್ದು ಹಳೆಯ ಹದವರಿತ ಲಯ. ಫಹಾದ್ ಸಹಜಾಭಿನಯದಿಂದ ಮತ್ತೆ ಗುರುತು ಮೂಡಿಸಿದ್ದಾರೆ. ವಿಜಯ್ ಸೇತುಪತಿ ಖಳಮೂರ್ತಿಯಾಗಿ ಕಾಡುತ್ತಾರೆ. ಪಾತ್ರಗಳ ಚಲನೆಗೆ ಒಗ್ಗಿಕೊಂಡೇ ಹೆಚ್ಚು ಚಲಿಸುವ ಗಿರೀಶ್ ಗಂಗಾಧರನ್ ಕ್ಯಾಮೆರಾ ಕೈಚಳಕಕ್ಕೂ ಅಂಕಗಳು ಸಲ್ಲಬೇಕು. ಅನಿರುದ್ಧ್ ರವಿಚಂದರ್ ಹಿನ್ನೆಲೆ ಸಂಗೀತದ ವಾದ್ಯ ಸಂಯೋಜನೆ ಸಮಕಾಲೀನ ಅಭಿರುಚಿಗೆ ತಕ್ಕಂತಿದೆ.

ಚಿತ್ರದ ಕೊನೆಯಲ್ಲಿ ಮತ್ತೊಬ್ಬ ತಾರಾ ವರ್ಚಸ್ಸಿನ ನಟ ಸೂರ್ಯ ಕೆಲವು ನಿಮಿಷಗಳಷ್ಟೆ ಕಾಣಿಸಿಕೊಳ್ಳುತ್ತಾರೆ. ಲೋಕೇಶ್ ತರಹದ ನಿರ್ದೇಶಕರ ಪ್ರಯೋಗಗಳಿಗೆ ಒಬ್ಬರಾದ ಮೇಲೆ ಒಳಪಡಲು ಮುಂದಾಗುತ್ತಿರುವ ಸೂಚನೆ ಇದಾಗಿದ್ದರಂತೂ ಮುಂದಿನ ದಿನಗಳು ಇನ್ನಷ್ಟು ಆಸಕ್ತಿ ಕೆರಳಿಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT