ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವುಕ–ರೋಚಕ

Last Updated 1 ಜುಲೈ 2016, 14:18 IST
ಅಕ್ಷರ ಗಾತ್ರ

ಚಿತ್ರ: ನಾನಿ
ನಿರ್ಮಾಪಕ: ರಮೇಶ್ ಕುಮಾರ್ ಜೈನ್
ನಿರ್ದೇಶಕ: ಸುಮಂತ್ ಕೆ. ಗೊಲ್ಲಹಳ್ಳಿ
ತಾರಾಗಣ: ಮನೀಷ್, ಪ್ರಿಯಾಂಕಾ ರಾವ್, ಜೈ ಜಗದೀಶ್, ಸುಹಾಸಿನಿ

ಸಮರ್ಥ್ (ಮನೀಷ್) ಮತ್ತು ಆತನ ಹೆಂಡತಿ ಮಂತ್ರ (ಪ್ರಿಯಾಂಕಾ) ಹೊಸದಾಗಿ ಕೊಂಡುಕೊಂಡ ಮನೆಯಲ್ಲಿ ವಾಸ ಆರಂಭಿಸುತ್ತಾರೆ. ಸಮರ್ಥ್‌ಗೆ ಆ ಮನೆಯ ಮೇಲೆ ಭಾವನಾತ್ಮಕ ನಂಟು. ಆತನ ಹಿರಿಯರು ಬಾಳಿದ ಮನೆ ಅದು. ಕಾರಣಾಂತರದಿಂದ ಆ ಮನೆ ಸ್ವಲ್ಪ ಕಾಲ ಪರರ ಪಾಲಾಗಿತ್ತು. ಅವರು ಆ ಮನೆಗೆ ಬಂದ ನಂತರ  ನಡೆಯುವ ಒಂದೊಂದು ಬೆಳವಣಿಗೆಯೂ ಅದಕ್ಕೆ ಸಂಬಂಧಿಸಿದ ಇನ್ಯಾರಿಗೋ ಮೃತ್ಯುವಾಗಿ ಪರಿಣಮಿಸುತ್ತದೆ.

ಆತ್ಮವೊಂದು ಮಂತ್ರಳ ದೇಹದಲ್ಲಿ ಸೇರಿ ಮನೆಯವರನ್ನು ಪೀಡಿಸುತ್ತದೆ. ಕೊನೆಗೆ ಈ ದಂಪತಿಯ ಪ್ರಾಣಕ್ಕೇ ಕುತ್ತು ಬಂದಾಗ ಮಂತ್ರವಾದಿಯೊಬ್ಬನ ಪ್ರವೇಶವಾಗುತ್ತದೆ. ಮಂತ್ರಳ ಮೇಲೆ ಬರುವ ಆತ್ಮವನ್ನು ಓಡಿಸಲು ಮಂತ್ರವಾದಿ ಉಪಯೋಗಿಸುವ ತಂತ್ರಗಳಿಗೆ ಬೆಚ್ಚಿ ಆ ಮನೆಯ ಕಾವಲುಗಾರ ಹಿಂದಿನ ಕಥೆ ಹೇಳುತ್ತಾನೆ.

***
ಸಮರ್ಥ್ ಹೊಸದಾಗಿ ಖರೀದಿಸಿದ ಮನೆಯಲ್ಲಿ ಈ ಹಿಂದೆ ವಾಸವಿದ್ದ ದಂಪತಿಗೆ (ಸುಹಾಸಿನಿ ಮತ್ತು ಜೈ ಜಗದೀಶ್) ಮಕ್ಕಳಿರುವುದಿಲ್ಲ. ಗಂಡ ಉದ್ಯಮಿ. ಹೆಂಡತಿಗೆ ತಾಯ್ತನದ ಖುಷಿ ನೀಡುವ ಸಾಮರ್ಥ್ಯ ತನ್ನಲ್ಲಿಲ್ಲ ಎಂದು ಸಮಾಜಕ್ಕೆ ತಿಳಿದರೆ ತಾನು ತಲೆ ಎತ್ತಿ ಬಾಳುವುದು ಹೇಗೆ ಎಂಬ ದ್ವಂದ್ವ ಆತನಿಗೆ. ಅದಕ್ಕಾಗಿ ಆತ ಪ್ರಣಾಳ ಶಿಶು ಪಡೆಯಲು ಹೆಂಡತಿಯನ್ನು ಒಪ್ಪಿಸುತ್ತಾನೆ.

ಮಗು ಹಟ್ಟುವ ದಿನಗಳು ಹತ್ತಿರವಾದಂತೆ, ಈ ಮಗು ತನ್ನದಲ್ಲ, ಇದು ಸಮಾಜಕ್ಕೆ ತಿಳಿದರೆ ತನ್ನ ಘನತೆ ಮಣ್ಣಾಗುತ್ತದೆ ಎಂಬ ಆತಂಕದಲ್ಲಿ ಕೊರಗುತ್ತಾನೆ. ಅದರ ಪರಿಣಾಮವಾಗಿ, ಹುಟ್ಟಿ ಹನ್ನೊಂದು ವರ್ಷಗಳಾದರೂ ಮಗುವಿಗೆ ತಂದೆಯ ಪ್ರೀತಿಯೇ ಸಿಕ್ಕಿರುವುದಿಲ್ಲ. ಒಂದು ದಿನ ತಂದೆ ತಾಯಿ ಇಬ್ಬರೂ ಮಗಳನ್ನು ಮನೆಯಲ್ಲೇ ಬಿಟ್ಟು ಹೊರಗಡೆ ಹೋಗುತ್ತಾರೆ. ಹಾಗೆ ಹೋದವರು ಮರಳುವುದೇ ಇಲ್ಲ. ಮಗಳು ಮನೆಯಲ್ಲೇ ಸತ್ತು, ಆತ್ಮವಾಗಿ ಅಪ್ಪ–ಅಮ್ಮನ ಬರುವಿಗಾಗಿ ಕಾಯುತ್ತಿರುತ್ತಾಳೆ. ಆಕೆಯ ಹೆಸರು ನಾನಿ.

ಇವೆರಡೂ ಪ್ರತ್ಯೇಕ ಎಳೆಗಳಂತೆ ಕಂಡರೂ ಇವನ್ನು ಬೆಸೆಯುವ ಯತ್ನದಲ್ಲಿ ನಿರ್ದೇಶಕ ಸುಮಂತ್ ಗೊಲ್ಲಹಳ್ಳಿ ಬಹುತೇಕ ಸಫಲರಾಗಿದ್ದಾರೆ. ಗುಜರಾತ್‌ನಲ್ಲಿ ನಡೆದ ‘ನಾನಿ’ಯ ನೈಜ ಘಟನೆಗೆ ಹಾರರ್ ಸ್ಪರ್ಶ ನೀಡಿದ್ದಾರೆ. ಪೂರ್ವಾರ್ಧದಲ್ಲಿ ದೆವ್ವವನ್ನು ಇಟ್ಟುಕೊಂಡು ಹೆದರಿಸುವ ನಿರ್ದೇಶಕರು ವಿರಾಮದ ನಂತರ ಭಾವುಕ ಸನ್ನಿವೇಶಗಳನ್ನು ಕಟ್ಟಿಕೊಡುತ್ತಾರೆ. ಅವರ ಯತ್ನಕ್ಕೆ ಸೂಕ್ತ ಬೆಂಬಲವಾಗಿ ನಿಂತವರು ಪ್ರಿಯಾಂಕಾ, ಸುಹಾಸಿನಿ ಮತ್ತು ಬೇಬಿ ಸುಹಾಸಿನಿ. ಪ್ರಿಯಾಂಕಾ ನಟನೆಯಲ್ಲಿ ದೆವ್ವಕ್ಕೂ ಜೀವ ಬಂದಂತಿದೆ. ಬೇಬಿ ಸುಹಾಸಿನಿ ತನ್ನ ಮುಗ್ಧ ಮಾತುಗಳಿಂದಲೇ ನೋಡುಗನ ಭಾವಕೋಶದಲ್ಲಿ ಕೈಯಾಡಿಸುತ್ತಾಳೆ. ಸುಹಾಸಿನಿ ಅವರದು ಹದವಾದ ಅಭಿನಯ. ಮನೀಷ್ ಸಂಭಾಷಣೆ ಗಿಣಿ ಪಾಠ ಒಪ್ಪಿಸುವಂತಿದೆ.

ಹಾರರ್ ಚಿತ್ರಗಳಲ್ಲಿ ಹಾಡುಗಳು ಇರುವುದು ಕಮ್ಮಿ. ‘ನಾನಿ’ಯಲ್ಲಿ ನಾಲ್ಕು ಹಾಡುಗಳಿಗೆ ಜಾಗ ಮಾಡಲಾಗಿದೆ. ಹಾಡುಗಳನ್ನು ಕೇಳಿಸಿಕೊಳ್ಳುವಂತೆ ಹೊಸೆವ ಹೊಣೆಯನ್ನು ತ್ಯಾಗರಾಜ್ ಚೆನ್ನಾಗಿ ನಿಭಾಯಿಸಿದ್ದಾರೆ. ಹಿನ್ನೆಲೆ ಸಂಗೀತದಲ್ಲೇ ಪ್ರೇಕ್ಷಕನನ್ನು ಬೆಚ್ಚಿಬೀಳಿಸುವ ಗುರುಕಿರಣ್ ಪ್ರಯತ್ನ ಕೆಲವೆಡೆ ಅತಿರೇಕ ಎನ್ನುವಷ್ಟಿದೆ. ಅಲ್ಲಲ್ಲಿ ಸಂಭಾಷಣೆಯ (ಬಿ.ಎ. ಮಧು) ಕೊಂಡಿ ತಪ್ಪಿದೆ. ಛಾಯಾಗ್ರಹಣದ ವಿಚಾರದಲ್ಲಿ ಗುಂಡ್ಲುಪೇಟೆ ಸುರೇಶ್ ಕೆಲಸ ಅಚ್ಚುಕಟ್ಟು.
 

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT