ಭಾನುವಾರ, ಸೆಪ್ಟೆಂಬರ್ 20, 2020
23 °C

ಅಪ್ಪಟ ಕಲಾವಿದ ಆಲೂರು ನಾಗಾರಾಜು

ಗುಡಿಹಳ್ಳಿ ನಾಗರಾಜ Updated:

ಅಕ್ಷರ ಗಾತ್ರ : | |

Prajavani

ವೃತ್ತಿ ರಂಗಭೂಮಿಯಲ್ಲಿ ಎರಡು–ಮೂರು ದಶಕಗಳ ಕಾಲ ಭಿಕ್ಷುಕನಿಂದ ರಾಜ ಮಹಾರಾಜರ ಪಾತ್ರಗಳಲ್ಲಿ ಮೆರೆದು ನಿವೃತ್ತಿ ಜೀವನವನ್ನು ತಮ್ಮ ಹಳ್ಳಿಯಲ್ಲಿ ಕಳೆಯುತ್ತಿರುವವರು ಈಗೇನು ಮಾಡುತ್ತಿರಬಹುದು? ಸಮಕಾಲೀನ ರಂಗಚಟುವಟಿಕೆಯೊಂದಿಗೆ ನಂಟು ಹೊಂದಿರುವರೆ? ಬಹುಶಃ ಇಲ್ಲ. ಎಲ್ಲ ಬದಲಾವಣೆಗಳಿಗೆ ಸಾಕ್ಷಿಪ್ರಜ್ಞೆಯಂತೆ ಪೇಪರ್ ಓದುತ್ತ, ಟಿವಿ ನೋಡುತ್ತ ತಮ್ಮೂರಿನಲ್ಲಿ ಕಾಲ ಕಳೆಯುತ್ತಿದ್ದಾರೆ. ಹೆಚ್ಚೆಂದರೆ ಇವರು ದೊಡ್ಡ ಕಲಾವಿದರಾಗಿದ್ದರು ಎಂದು ಊರ ಕೆಲ ಹಿರಿಯರು ಗೌರವ ನೀಡುತ್ತಿರಬಹುದು. ಅಂತಹ ಒಬ್ಬ ಪ್ರತಿಭಾವಂತ ಕಲಾವಿದನ ಪರಿಚಯ ಇದು:

ಉತ್ತರ ಕರ್ನಾಟಕದ ಎರಡು ದೊಡ್ಡ ನಾಟಕ ಕಂಪನಿಗಳಲ್ಲಿ ಅಭಿನಯಿಸಿ ವೈವಿಧ್ಯಮಯ ಪಾತ್ರಗಳಲ್ಲಿ ಹೆಸರು ಮಾಡಿದ ಆಲೂರು ನಾಗರಾಜು ವೃತ್ತಿರಂಗಭೂಮಿಯ ಹಿರಿಯ ಹೆಸರಾಂತ ಕಲಾವಿದರು. ಎಪ್ಪತ್ತೇಳು ವರ್ಷ ವಯಸ್ಸಿನ ನಾಗರಾಜು ಕಳೆದ ದಶಕದಿಂದ ತಮ್ಮೂರು ಆಲೂರಿನಲ್ಲೇ ನೆಲೆಸಿದ್ದಾರೆ. ಆಲೂರು ಚಾಮರಾಜನಗರ ತಾಲ್ಲೂಕಿನಲ್ಲಿದೆ.

ಮಲ್ಲಣ್ಣ-ಮಲ್ಲಮ್ಮ ದಂಪತಿಯ ಐವರು ಮಕ್ಕಳಲ್ಲಿ ನಾಗರಾಜು ಹಿರಿಯರು. 1942ರ ಮೇ 15ರಂದು ಜನಿಸಿದರು. ಏಳು ಎಕರೆ ಜಮೀನಿತ್ತು. ಜೊತೆಗೊಂದು ಪುಟ್ಟ ಬಟ್ಟೆಅಂಗಡಿ. ಶಾಲೆಯಲ್ಲಿ ದಕ್ಕಿದ್ದು ಅರೆಬರೆ ಶಿಕ್ಷಣ. ಮೈಸೂರು ಬನುಮಯ್ಯ ಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ, ಶಾರದಾ ವಿಲಾಸ ಕಾಲೇಜಿನಲ್ಲಿ ಪಿಯು ಶಿಕ್ಷಣ ಪಡೆದರು. ಅನಾಥಾಲಯದಲ್ಲಿ ವಾಸಿಸಿದ್ದ ನಾಗರಾಜು ಅಥವಾ ಅಂತಹ ಹುಡುಗರನ್ನು ನಗರದವರು ಹಚ್ಚಿಕೊಳ್ಳುತ್ತಿದ್ದುದು ಅಷ್ಟಕ್ಕಷ್ಟೆ. ಅಥವಾ ಇವರೇ ಅವರೊಂದಿಗೆ ಬೆರೆಯುತ್ತಿರಲಿಲ್ಲ! ಆಲೂರಿನಲ್ಲಿ ಓದುತ್ತಿದ್ದಾಗ ಊರವರು ಪ್ರದರ್ಶಿಸಿದ ‘ಕೃಷ್ಣಲೀಲೆ’ ನಾಟಕ ಅವರಿಗೆ ಹಿಡಿಸಿತ್ತು. ಹರಿಜನರ ಬೀದಿಯವರು ‘ಸಂಪೂರ್ಣ ರಾಮಾಯಣ’ ನಾಟಕ ಮಾಡಿದ್ದರು. ಅದರಲ್ಲಿನ ದಶರಥನ ಪಾತ್ರವಂತೂ ನಾಗರಾಜು ಮೇಲೆ ಬಹಳ ಪ್ರಭಾವ ಬೀರಿತ್ತು.

ಇನ್ನು ಮೈಸೂರಲ್ಲಿ ಓದುವಾಗ ಶಾಲೆ ಕಾಲೇಜಿನಲ್ಲಿ ನಾಟಕವಾದರೆ ತಪ್ಪದೇ ವೀಕ್ಷಿಸುತ್ತಿದ್ದರು. ಮಹಾದೇವಸ್ವಾಮಿಯವರ ಕರ್ನಾಟಕ ಥಿಯೇಟ್ರಿಕಲ್ಸ್‌ನವರ ‘ಹರಿಶ್ಚಂದ್ರ’, ‘ರಾಜಾ ವಿಕ್ರಮ’ ಗಾಢ ಪರಿಣಾಮ ಬೀರಿದ್ದವು. ಊರವರು ಒಮ್ಮೆ ‘ಪ್ರಭುಲಿಂಗಲೀಲೆ’ ನಾಟಕವಾಡಿದರು. ಅಭಿನಯಿಸುವ ಆಸಕ್ತಿ ತೋರಿದ್ದ ನಾಗರಾಜುಗೆ ಅದರಲ್ಲಿ ಕಲಿ ಮತ್ತು ಸಿದ್ದರಾಮನ ಪಾತ್ರ ನೀಡಲಾಗಿತ್ತು. ಚಾಮರಾಜನಗರದಲ್ಲಿ ಆಗ ಗುಬ್ಬಿ ಕಂಪನಿ ಕ್ಯಾಂಪ್ ಮಾಡಿತ್ತು. ವೀರಣ್ಣನವರ ಪುತ್ರ ಚನ್ನಬಸವಣ್ಣ ಆಗ ಮಾಲೀಕರು. ಈ ನಾಟಕ ನೋಡಲು ಆಲೂರಿಗೆ ಬಂದ ಅವರು ಹಳ್ಳಿ ಊರಲ್ಲಿ ಇಷ್ಟು ಮಾಡುವುದು ಹೆಚ್ಚಿಗೆ ಎಂದು ಬಹುವಾಗಿ ಮೆಚ್ಚಿಕೊಂಡರು. ಅಷ್ಟು ಮಾತಾಡಿದ್ದೇ ಸಾಕು ಎನ್ನುವಂತೆ ನಾಗರಾಜು ಚನ್ನಬಸವಣ್ಣನ ಬೆನ್ನು ಹತ್ತಿದರು. 1964 ರಲ್ಲಿ ಗುಬ್ಬಿ ಕಂಪನಿ ಸೇರಿದರು.

ಆಸಕ್ತಿ ನಾಟಕದಲ್ಲಿ

ಮುಂದೆ ಶಿಕ್ಷಣ, ಅಭಿನಯ ಎಲ್ಲ ಕಲಿತದ್ದು ನಾಟಕ ಕಂಪನಿಯಲ್ಲೇ. ಗುಬ್ಬಿ ಕಂಪನಿಯಲ್ಲಿ ಪ್ರತಿಭಾವಂತ ನಟ ನಟಿಯರ ಹಿಂಡೇ ಇತ್ತು. ಐದು ತಿಂಗಳು ಅಲ್ಲಿದ್ದರು. ಅಭಿನಯಕ್ಕೆ ಅವಕಾಶವೇ ಸಿಗಲಿಲ್ಲ! ಇಲ್ಲಿದ್ದು ಏನು ಪ್ರಯೋಜನ ಎಂದು ಹೇಳಕೇಳದೆ ಕಂಪನಿಯಿಂದ ಹೊರಬಂದು ಮೈಸೂರಿನಲ್ಲಿ ಗುರುತು ಪರಿಚಯದವರ ಜತೆ ತಂಗುತ್ತ, ಹವ್ಯಾಸಿ ನಾಟಕಗಳಲ್ಲಿ ಪಾತ್ರ ಮಾಡುತ್ತ ಹೋದರು. ಅಷ್ಟೊತ್ತಿಗೆ ನಾಗರಾಜು ಪಾತ್ರವನ್ನು ತಕ್ಕಮಟ್ಟಿಗೆ ಚೆನ್ನಾಗಿ ಮಾಡುವುದನ್ನು ಕಲಿತಿದ್ದರು. ಅವರ ಪಾತ್ರ ನೋಡಿದವರೊಬ್ಬರು ಗೋಕಾಕ ಕಂಪನಿಯ (ಶ್ರೀ ಶಾರದಾ ಸಂಗೀತ ನಾಟಕ ಮಂಡಳಿ) ಮಾಲೀಕ ಬಸವಣ್ಣೆಪ್ಪನವರಿಗೆ ಒಂದು ಪತ್ರ ಬರೆದು ‘ಈ ಯುವಕನಿಗೆ ಅಭಿನಯದಲ್ಲಿ ಅಪಾರ ಆಸಕ್ತಿ ಇದೆ, ಸೇರಿಸಿಕೊಳ್ಳಿ’ ಎಂದು ವಿನಂತಿಸಿದರು.

ಅಷ್ಟು ಶಿಫಾರಸು ಪತ್ರ ಸಿಕ್ಕಿದ್ದೇ ತಡ ನಾಗರಾಜು ಅವರು ಗೋಕಾಕ ಕಂಪನಿಯನ್ನು ಹುಡುಕಿಕೊಂಡು ಓಡೋಡಿ ಹೋದರು. ಯುವಕನ ಆಸಕ್ತಿಯನ್ನು ಗಮನಿಸಿದ ಬಸವಣ್ಣೆಪ್ಪ ಒಡನೆಯೇ ತಮ್ಮ ಶಿಷ್ಯನನ್ನಾಗಿ ಮಾಡಿಕೊಂಡರು. ಅದು 1966.

‘ನನಗೆ ನಿಜವಾದ ಶಿಕ್ಷಣ ಶುರುವಾಗಿದ್ದೇ ಅಲ್ಲಿಂದ. ಬಸವಣ್ಣೆಪ್ಪನವರೇ ನನ್ನ ಮೊದಲ ಗುರು. ನಟರ ಬಾಯಿ ಮೊದಲು ಶುದ್ಧವಾಗಲಿ ಎಂಬುದು ಅವರ ಇರಾದೆಯಾಗಿತ್ತು. ಪೌರಾಣಿಕ ನಾಟಕಗಳ ಸಂಭಾಷಣೆ ಹೇಳಿಕೊಡಲು ಶುರು ಮಾಡಿದರು. ಅವರು ಹೇಳಿಕೊಡುತ್ತಿದ್ದ ರೀತಿಯೇ ಬೇರೆ, ತುಂಬಾ ಆಕರ್ಷಕ. ನಾವು ಆ ಪಾತ್ರ ಮಾಡಲಿ, ಬಿಡಲಿ- ಎಲ್ಲ ಪಾತ್ರಗಳ ಮಾತುಗಳನ್ನು ಸಲೀಸಾಗಿ ಆಡಲು ಬರಬೇಕು ಎಂಬುದು ಅವರ ಉದ್ದೇಶವಾಗಿತ್ತು. ಅಸ್ಖಲಿತ ಕನ್ನಡ ಅಲ್ಲಿಯೇ ಬಂತು ಎಂದು ಹೇಳಬೇಕು’ ಎನ್ನುತ್ತಾರೆ ನಾಗರಾಜು.

‘ಸಂಭಾಷಣೆ ಹೇಳುವ ಪರಿಯಲ್ಲೇ ನಮಗೆ ಪಾತ್ರದ ಹಾವಭಾವ ಗೊತ್ತಾಗಿಬಿಡಬೇಕು. ಅಷ್ಟೊಂದು ಆಕರ್ಷಕವಾಗಿರುತ್ತಿತ್ತು- ಅವರು ಹೇಳಿಕೊಡುವ ಶೈಲಿ. ಮಾರುತೇಶ ಮಾಂಡ್ರೆಯವರ ‘ಪಡೆದ ಮುತ್ತು’ ನಾನು ಅವರ ಕಂಪನಿಯಲ್ಲಿ ಅಭಿನಯಿಸಿದ ಮೊದಲ ನಾಟಕ. ಏಳು ವರ್ಷ ಆ ಗರಡಿಮನೆಯಲ್ಲಿ ಪಟ್ಟುಗಳನ್ನು ಕಲಿತು ಊರಿಗೆ ಬಂದುಬಿಟ್ಟೆ. ಅಪ್ಪ ಆ ಕಾಲಕ್ಕೆ ಸಾವಿರ ರೂಪಾಯಿ ಖರ್ಚುಮಾಡಿ ಕಿರಾಣಿ ಅಂಗಡಿ ಇಟ್ಟುಕೊಟ್ಟರು. ಎರಡು ವರ್ಷ ನಡೆಸಿದೆ. ಉದ್ಧಾರ ಆಗಲಿಲ್ಲ. ಸಂಸಾರ ಸರಿ ಹೋಗಲಿಲ್ಲ. ಮತ್ತೆ ನಾಟಕ ಕಂಪನಿಯತ್ತಲೇ ಪಯಣ ಬೆಳೆಸಿದೆ’ ಎಂದು ಅವರು ಹೇಳುತ್ತಾರೆ.

‘ಬಿ.ಆರ್. ಅರಿಷಿಣಗೋಡಿಯವರ ಕಮತಗಿ ಹುಚ್ಚೇಶ್ವರ ನಾಟ್ಯಸಂಘ ಚನ್ನಪಟ್ಟಣದಲ್ಲಿ ಕ್ಯಾಂಪ್ ಮಾಡಿತ್ತು. ನೇರವಾಗಿ ಹೋಗಿ ಮಾಲೀಕ ಭೀಮಣ್ಣ ಅರಿಷಿಣಗೋಡಿಯವರನ್ನು ಭೇಟಿಯಾದೆ. ನಾಟಕ ಕಂಪನಿಗೆ ಸೇರಿಸಿಕೊಳ್ಳಿ ಎಂದೆ. ಅವರು ಸುಲಭವಾಗಿ ಒಪ್ಪಿಕೊಳ್ಳುವವರಲ್ಲ. ಗೋಕಾಕ ಕಂಪನಿಯಲ್ಲಿ ಸರ್ವೀಸ್ ಮಾಡಿದ ಕಾರಣಕ್ಕೋ ಏನೋ ಅಂತೂ ಒಪ್ಪಿಕೊಂಡರು. ಪಾತ್ರದ ಸ್ವಭಾವಕ್ಕನುಗುಣವಾಗಿ ಹೇಗೆ ಧ್ವನಿ ಬದಲಿಸಬೇಕು ಎಂಬುದನ್ನು ಪರಿಣಾಮಕಾರಿಯಾಗಿ ಹೇಳಿಕೊಟ್ಟರು. ನಾಲ್ಕು ವರ್ಷ ಅಲ್ಲಿದ್ದಿರಬೇಕು...’ ಎಂದು ನೆನೆಯುತ್ತಾರೆ.

‘ಆಲೂರಿನ ಜಮೀನು ಮಾರಿ ಗುಂಡ್ಲುಪೇಟೆಯಲ್ಲಿ ಜಮೀನು ತೆಗೆದುಕೊಂಡರೆ ಲಾಭದಾಯಕ... ಎಂದು ಯಾರೋ ಆಸೆ ಹಚ್ಚಿ ಕರೆದೊಯ್ದರು. ಜಮೀನು ಸಿಗಲಿಲ್ಲ. ಹೆಚ್ಚಿನ ಹಣವೂ ಉಳಿಯಲಿಲ್ಲ. ಅಳಿದುಳಿದ ಪುಟ್ಟ ಬಂಡವಾಳದಲ್ಲಿ ಸಣ್ಣದೊಂದು ಜವಳಿ ಅಂಗಡಿ ಇಟ್ಟುಕೊಂಡು ಹಾಗೂ ಹೀಗೂ ಐದು ವರ್ಷ (1984-89) ನಡೆಸುವ ಹೊತ್ತಿಗೆ ಸಾಕೆನಿಸಿತು’ ಎಂದರು.

ಹೊನ್ನಾವರ ಹೆಗಡೆ ಕಂಪನಿ

‘ನಾಟಕದ ಸೆಳೆತ ಬಿಡಲಿಲ್ಲ. ಗುಂಡ್ಲುಪೇಟೆಗೆ ಹೊನ್ನಾವರ ಹೆಗಡೆಯವರ ನಾಟಕ ಕಂಪನಿ 1989ರಲ್ಲಿ ಕ್ಯಾಂಪ್ ಮಾಡಿತು. ಆ ಕಂಪನಿಗೆ ನನ್ನನ್ನು ಕರೆಸಿಕೊಂಡರು. ಗುಂಡ್ಲುಪೇಟೆ, ನಂಜನಗೂಡು, ಮಳವಳ್ಳಿ ಕ್ಯಾಂಪ್‍ಗಳನ್ನು ಪೂರೈಸಿ ಕೆಲವು ತಿಂಗಳಿನಲ್ಲೇ ಬಿಟ್ಟುಬಿಟ್ಟೆ. ಅಲ್ಲಿ ಇಲ್ಲಿ ಹವ್ಯಾಸಿ ನಾಟಕದವರು ಕರೆದರೆ ಹೋಗಿ ಪಾತ್ರ ಮಾಡುತ್ತಿದ್ದೆ. ಅಲ್ಪ ಸಂಭಾವನೆಯಲ್ಲಿ ಕಾಲ ತಳ್ಳುವುದು ಕಷ್ಟವಾಯಿತು. 1998 ರಲ್ಲಿ ಮತ್ತೆ ಭೀಮಣ್ಣ ಅರಿಷಿಣಗೋಡಿಯವರ ಕ್ಯಾಂಪ್‍ಗೆ ಹೋದೆ. ಶಿರಸಿಯಲ್ಲಿ ಕ್ಯಾಂಪ್ ಮಾಡಿತ್ತು. ಅಲ್ಲಿಂದ ಅವರ ಕಂಪನಿ ನಿಲ್ಲುವವರೆಗೆ ಹೆಚ್ಚುಕಡಿಮೆ ಅಂದರೆ 2002ರವರೆಗೆ ಅವರ ಬಳಿಯೇ ಇದ್ದೆ. ಈ ಹಂತದಲ್ಲಿ ಭೀಮಣ್ಣನವರ ಬಳಿ ಮತ್ತೊಂದು ರೀತಿ ಕಲಿಕೆ. ಅದಕ್ಕೂ ಅವರೇ ಗುರುಗಳು’ ಎಂಬ ಮಾತು ಸೇರಿಸಿದರು.

‘ಪ್ರಚಾರ, ಪ್ರೋತ್ಸಾಹ ನನ್ನ ಜೀವನದಲ್ಲಿ ಅಷ್ಟಾಗಿ ಸಿಗಲಿಲ್ಲ. ಇವನು ನಾಟಕದವನು, ಸಾಲ ಕೊಡಬೇಡಿ ಎಂದು ತಂದೆಯೇ ಅಪಪ್ರಚಾರ ಮಾಡಿದರು. ಎರಡು ಬಾರಿ ಮದುವೆಯಾದರೂ ಕುಟುಂಬದ ನೆಮ್ಮದಿ ಉಳಿಯಲಿಲ್ಲ. ಇದ್ದೊಬ್ಬ ಮಗ ತೀರಿಕೊಂಡ. ನಾಟಕ ಕಂಪನಿಗಳಲ್ಲಿ ಯಾವ ನಟಿಯೊಂದಿಗೂ ಸಖ್ಯ ಬೆಳೆಸಲಿಲ್ಲ. ನಾಟಕ ಅಕಾಡೆಮಿ ಮಾಜಿ ಸದಸ್ಯ ನರಸಿಂಹಮೂರ್ತಿ ಆಗಾಗ ಅವಕಾಶ ಕೊಡಿಸಿದರು. ಮೈಸೂರಿನ ರಾಜರಾಜೇಶ್ವರಿ ವಸ್ತ್ರಾಲಂಕಾರದ ರಾಮಚಂದ್ರ, ಹಾರ್ಮೊನಿಯಂ ಮಾಸ್ಟ್ರಾದ ಕಿರಗಸೂರು ರಾಜಪ್ಪ ಮುಂತಾದವರು ನನ್ನನ್ನು ಗುರುತಿಸಿ ಗೌರವಿಸಿದ್ದಾರೆ...’ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು