ಮತ್ತೆ ಬಂತು ‘ಗುಲಾಬಿ ಗ್ಯಾಂಗು’

7

ಮತ್ತೆ ಬಂತು ‘ಗುಲಾಬಿ ಗ್ಯಾಂಗು’

Published:
Updated:
Deccan Herald

ನೃತ್ಯದ ಪ್ರದರ್ಶನ ನನ್ನನ್ನು ಚಿತ್ರರಂಗಕ್ಕೆ ಕರೆತಂತು ಎನ್ನುವ ನಯನಾ ಜೆ. ಸೂಡ ರಂಗಭೂಮಿಯ ಅದ್ಭುತ ಪ್ರತಿಭೆ. ಕನ್ನಡಕ್ಕೆ ‘ಗುಲಾಬಿ ಗ್ಯಾಂಗು’ ತರುವಲ್ಲಿ ಅವರ ಪಾತ್ರ ಮಹತ್ವದ್ದು. ‘ಅಸಹಾಯಕರೆಂದುಕೊಂಡಿದ್ದ ಹೆಣ್ಣುಮಕ್ಕಳ ಗ್ಯಾಂಗ್ ವಾರು’ ಎನ್ನುತ್ತಲೇ ಮತ್ತೆ ರಂಗವೇದಿಕೆ ಮೇಲೆ ಬರುತ್ತಿರುವ ಕಮಲಾದೇವಿಯ (ನಯನಾ) ಮಾತು ‘ಮೆಟ್ರೊ’ ಪುರವಣಿಯಲ್ಲಿ.

ರಂಗ ಭೂಮಿಯ ನಂಟು ಬೆಳೆದಿದ್ದು ಹೇಗೆ? 
ನಾನು ಓದಿದ್ದು, ಮಹದೇವಪುರ ಬಳಿಯ ಬಿ.ನಾರಾಯಣಪುರದ ಸರ್ಕಾರಿ ಶಾಲೆಯಲ್ಲಿ. ಆಗ ನನಗೆ 7 ವರ್ಷ. ನೃತ್ಯದ ಬಗ್ಗೆ ಬಾಲ್ಯದಿಂದಲೇ ಹುಚ್ಚು. ಶಾಲಾ ವಾರ್ಷಿಕೋತ್ಸವ ಹಾಗೂ ಸಭೆ ಸಮಾರಂಭಗಳಲ್ಲಿ ನೃತ್ಯ ಮಾಡುತ್ತಿದ್ದೆ. ನಮ್ಮ ಶಾಲೆಯ ನಾಟಕದ ಗುರು ಸಿ.ಲಕ್ಷ್ಮಣ್ ಅವರಿಗೆ ನನ್ನ ನೃತ್ಯ ಇಷ್ಟವಾಗಿ, ‘ನಾಟಕಕ್ಕೆ ಬರ್ತೀಯೇನೆ ಸುಂದರಿ’ ಎಂದು ಆಹ್ವಾನವಿತ್ತರು. ನಾನೂ ಒಪ್ಪಿಕೊಂಡೆ. ‘ಕಾರಣಿಕ ಶಿಶು’ ನನ್ನ ಮೊದಲ ನಾಟಕ. ಸಿ.ಲಕ್ಷ್ಮಣ್ ಅವರೇ ಅದನ್ನು ಬರೆದು ನಿರ್ದೇಶಿಸಿದ್ದರು. ಅವರೇ ನನ್ನ ರಂಗಭೂಮಿ ಗುರು.

ಎಂಥ ಪಾತ್ರಗಳನ್ನು ಮಾಡಬೇಕೆಂಬ ಆಸೆ? 
ರಂಗಭೂಮಿಗೆ ಬಂದ ಹೊಸದರಲ್ಲಿ, ಗಂಡು ಪಾತ್ರಗಳನ್ನು ಹೆಚ್ಚಾಗಿ ಮಾಡುತ್ತಿದ್ದೆ. ಕ್ರಮೇಣ ಹೆಣ್ಣು ಪಾತ್ರಗಳಿಗೂ ಒಗ್ಗಿಕೊಂಡೆ. ಮಹಿಳಾ ಪ್ರಧಾನವಾದ ‘ಗುಲಾಬಿ ಗ್ಯಾಂಗ್‌’ ನಾಟಕದ ಕಮಲಾದೇವಿ ರೀತಿಯ ಪಾತ್ರಗಳು ತುಂಬಾ ಇಷ್ಟ. ಸಮಾಜದ ತುಳಿತಕ್ಕೆ ಒಳಗಾದ ಹೆಣ್ಣುಮಕ್ಕಳು, ಸಾಮಾಜಿಕ ಪಿಡುಗುಗಳ ವಿರುದ್ಧ ಸೆಟೆದು ನಿಂತು ಹೇಗೆ ಗಟ್ಟಿಕೊಳ್ಳಬೇಕು ಎಂಬುದನ್ನು ಈ ನಾಟಕ ತೋರಿಸಿಕೊಟ್ಟಿದೆ. ಈ ನಾಟಕದ ಮೂಲಕ ಕೆಲ ಹೆಣ್ಣುಮಕ್ಕಳನ್ನು ಸಾಮಾಜಿಕವಾಗಿ ಗಟ್ಟಿಗೊಳಿಸಿದ ತೃಪ್ತಿ ನನಗಿದೆ. 

ನಿರ್ದೇಶನದತ್ತ ಆಸಕ್ತಿ ಬಂದಿದ್ದು ಹೇಗೆ ?
ಸಿ.ಲಕ್ಷ್ಮಣ್ ಅವರ ಗರಡಿಯಲ್ಲಿ 15 ವರ್ಷ ಕೆಲಸ ಮಾಡಿದೆ. ತೆರೆ ಹಾಗೂ ತೆರೆ ಹಿಂದಿನ ಎಲ್ಲ ಕೆಲಸಗಳ ಅನುಭವವಿದೆ. ಲಕ್ಷ್ಮಣ್ ಸರ್ ಅವರು ನಮ್ಮನ್ನು ಹುಡುಗಿ–ಹುಡುಗ ಎಂದು ತಾರತಮ್ಯ ಮಾಡದೇ ಸ್ವಾತಂತ್ರವಾಗಿ ಕೆಲಸ ಮಾಡಿಸುತ್ತಿದ್ದರು.

ನ್ಯಾಷನಲ್ ಕಾಲೇಜಿನಲ್ಲಿ ಓದುವಾಗ, ಅಂತರಕಾಲೇಜು ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ಸ್ನೇಹಿತರನ್ನು ಕಟ್ಟಿಕೊಂಡು ಲೋರ್ಖಾ ಅವರ ‘ಯರ್ಮ’ ನಾಟಕ ನಿರ್ದೇಶನ ಮಾಡಿದ್ದೆ. ಆ ಬಳಿಕ ಧನರಾಜ್ ಬುಗುಡಿಕರ್ ಅವರು ‘ಮೌನ ಕೋಗಿಲೆ’ ನಿರ್ದೇಶನಕ್ಕೆ ಅವಕಾಶ ಮಾಡಿಕೊಟ್ಟರು. ನಟನೆಯ ಜೊತೆ ಜೊತೆಗೆ ನಿರ್ದೇಶನದ ಹುಚ್ಚು ಹತ್ತಿಕೊಂಡಿತು. ‘ರಂಗಪಯಣ’ ರಂಗತಂಡ ಕಟ್ಟಿಕೊಂಡು ‘ಶ್ರದ್ಧಾ’ ನಾಟಕ ರಚನೆ ಮಾಡಿದೆವು. ಸಾ.ರಾ.ಅಬೂಬಕ್ಕರ್ ಅವರ ಕಾದಂಬರಿ ಆಧಾರಿತ, ‘ಚಂದ್ರಗಿರಿಯ ತೀರದಲ್ಲಿ’ ನಾಟಕವನ್ನು ನಿರ್ದೇಶನ ಮಾಡಿದೆ.

ಗುಲಾಬಿ ಗ್ಯಾಂಗ್ ಕತೆಯನ್ನೇ ಏಕೆ ಆರಿಸಿಕೊಂಡಿರಿ? 
ಪತಿ ರಾಜ್‌ಗುರು ಹೊಸಕೋಟೆ ಅವರಿಗೆ ‘ಗುಲಾಬಿ ಗ್ಯಾಂಗ್’ ಹೆಸರು ಹೆಚ್ಚು ಇಷ್ಟವಾಗಿತ್ತು. ಅದರ ಬಗ್ಗೆ ಆಳವಾಗಿ ತಿಳಿಯಲು ಹೋದಾಗ, ಉತ್ತರಪ್ರದೇಶದ ಸಂಪತ್‌ಪಾಲ್ ದೇವಿ ಬಗ್ಗೆ ಗೊತ್ತಾಯಿತು. ಸಂಪತ್‌ಪಾಲ್ ದೇವಿ ಅವರನ್ನು ಭೇಟಿಯಾಗಿ ಅವರೊಡನೆ 10 ದಿನ ಕಳೆದು ಅವರ ಜೀವನದ ಬಗ್ಗೆ ತಿಳಿದುಕೊಂಡೆವು. ಏನೂ ಓದದೆ, ಯಾವುದೇ ಆರ್ಥಿಕ ಬಲವಿಲ್ಲದೇ ಲಕ್ಷಾಂತರ ಮಂದಿ ಹೆಣ್ಣುಮಕ್ಕಳ ತಂಡವನ್ನು ಕಟ್ಟಿಕೊಂಡು ಸಾಮಾಜಿಕ ತೊಡಕುಗಳ ವಿರುದ್ಧ ಹೋರಾಡಿದವರು ಅವರು. ಅವರಿಂದ ಪ್ರೇರೇಪಿತರಾಗಿ ಅವರ ಕತೆಯನ್ನು ಉತ್ತರಕರ್ನಾಟಕ ಭಾಷೆಯ ಶೈಲಿಯಲ್ಲಿ ನಾಟಕವನ್ನಾಗಿಸಿದೆವು.

ಗುಲಾಬಿ ಗ್ಯಾಂಗು ಈಗ ಹೇಗೆ ಪ್ರಸ್ತುತ?
ದೈಹಿಕವಾಗಿ, ಮಾನಸಿಕವಾಗಿ ಹೆಣ್ಣಿನ ಮೇಲೆ ಶೋಷಣೆ ನಡೆಯುತ್ತಿದೆ. ಅದರ ವಿರುದ್ಧ ಮಹಿಳೆಯರು ಹಾಗೂ ಯುವತಿಯರು ಧ್ವನಿ ಎತ್ತುತ್ತಿಲ್ಲ. ಧ್ವನಿ ಎತ್ತದಂತೆ ಸುತ್ತಮುತ್ತಲಿನ ಸಮಾಜ ನಮ್ಮ ಮೇಲೆ ಅಘೋಷಿತ ನಿರ್ಬಂಧ ಹೇರಿದೆ. ಈ ಎಲ್ಲ ಸಾಮಾಜಿಕ ಸಂಕೋಲೆಗಳನ್ನು ಮೀರಿ, ಹೆಣ್ಣಿನ ಶೋಷಣೆ ವಿರುದ್ಧ ಧ್ವನಿ ಎತ್ತಬೇಕು ಎಂಬುದನ್ನು ಗುಲಾಬಿ ಗ್ಯಾಂಗು ತೋರಿಸಿಕೊಟ್ಟಿದೆ. ಇದು ಇಂದಿಗೂ, ಎಂದೆಂದಿಗೂ ಪ್ರಸ್ತುತ.

ಅತ್ಯಾಚಾರಕ್ಕೊಳಗಾದ ಹೆಣ್ಣನ್ನು ಅತ್ಯಂತ ನಿಕೃಷ್ಟವಾಗಿ ಕಾಣುವ ಜನರಿಗೆ ಬುದ್ಧಿ ಕಲಿಸುವ ಸಂದೇಶ ಈ ನಾಟಕದಲ್ಲಿದೆ. ಮೂಲೆಗೂಂಪಾದ ಹೆಣ್ಣು ಮನಸ್ಸುಗಳನ್ನು ಹೊರಗೆ ತರುವ ಪ್ರಯತ್ನ ಇದು. ಈ ನಾಟಕವನ್ನು ಪ್ರತಿ ಕಾಲೇಜು ಹಾಗೂ ಗ್ರಾಮಗಳಲ್ಲಿ ಪ್ರದರ್ಶಿಸಬೇಕು ಎಂಬ ಆಸೆ ಇದೆ.

ನಾಟಕದ ಮೂಲಕ ಏನು ಹೇಳಲು ಹೊರಟಿದ್ದೀರಿ?
‘ಗುಲಾಬಿ ಗ್ಯಾಂಗು’ ಅಸಹಾಯಕರೆಂದುಕೊಂಡಿದ್ದ ಹೆಣ್ಣುಮಕ್ಕಳ ಗ್ಯಾಂಗ್ ವಾರ್. ಅಂದರೆ, ಮಹಿಳೆಯರನ್ನು ಈ ಸಮಾಜ ಅಸಹಾಯಕರೆಂದುಕೊಂಡಿದೆ ಅಷ್ಟೇ. ಆದರೆ, ಅವರು ಅಸಹಾಯಕರಲ್ಲ ಎಂಬುದು ಅದರ ಅರ್ಥ. ಸ್ತ್ರೀ ಕುಲವನ್ನು ಸಂಘಟಿತಗೊಳಿಸುವುದು ಈ ನಾಟಕದ ಮೂಲ ಉದ್ದೇಶ. 

ನಾಟಕಕ್ಕೆ ಪ್ರತಿಕ್ರಿಯೆ ಹೇಗಿದೆ?
ನಿರೀಕ್ಷೆಗೂ ಮೀರಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಹೆಣ್ಣಿನ ಮೇಲೆ ದೌರ್ಜನ್ಯ ಎಸಗುವ ಮನಸುಗಳಿಗೆ ಈ ನಾಟಕ ಪರಿಣಾಮಕಾರಿಯಾಗಿ ತಟ್ಟಿದೆ. ಸಾಕಷ್ಟು ಮಂದಿ ಮಹಿಳೆಯರು ಹಾಗೂ ಯುವತಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ನಯನಾ, ಹಾಸ್ಟೆಲ್‌ಗೆ ನಡೆದುಕೊಂಡು ಹೋಗಲು ಹೆದರುತ್ತಿದ್ದೆ. ಈ ನಾಟಕ ನೋಡಿದ ಬಳಿಕ ಆ ಅಂಜಿಕೆ ದೂರವಾಗಿದೆ. ಗಂಡ ಹೊಡೆದರೆ ಹೊಡಿಸಿಕೊಳ್ಳಬೇಕು ಹಾಗೂ ಬೈಯ್ದರೆ ಬೈಯಿಸಿಕೊಳ್ಳಬೇಕು ಎಂದಷ್ಟೇ ಅಂದುಕೊಂಡಿದ್ದೆವು. ಈ ನಾಟಕ ನೋಡಿದ ಬಳಿಕ ಕುಡಿದು ಬಂದ ಗಂಡನಿಗೆ ನಾಲ್ಕು ಬಿಟ್ಟರೆ ಸರಿಹೋಗುತ್ತಾನೆ ಎಂಬುದು ಗೊತ್ತಾಗಿದೆ’ ಎಂದವರೂ ಸಾಕಷ್ಟು ಮಂದಿ ಇದ್ದಾರೆ.

ಲಿಮ್ಕಾ ದಾಖಲೆ ಬಗ್ಗೆ ಹೇಳಿ
‘55 ನಿಮಿಷದ ಒಂದು ಪ್ರೇಮಕತೆ’ಯನ್ನು ಒಂದೇ ದಿನ 9 ರಂಗವೇದಿಕೆಯಲ್ಲಿ, ಒಂದೇ ಸಮಯಕ್ಕೆ ಶುರು ಮಾಡಿ ಮುಗಿಸಿದೆವು. ಅದನ್ನು ಒಂದೇ ದಿನ 3 ಸಾವಿರಕ್ಕೂ ಅಧಿಕ ಮಂದಿ ನೋಡಿದ್ದರು. ಅದಕ್ಕೆ ಲಿಮ್ಕಾ ದಾಖಲೆಯಾಯಿತು. ಇದು ಕನ್ನಡ ರಂಗಭೂಮಿಯಲ್ಲೇ ಮೊದಲು.

ನಿಮ್ಮ ಕೆಲಸಕ್ಕೆ ಪತಿ ಹೇಗೆ ನೆರವಾಗುತ್ತಾರೆ ?
ತುಂಬಾ ಹಗ್ಗ ಜಗ್ಗಾಟಗಳ ನಡುವೆ ನಾನು ರಂಗಭೂಮಿಯಲ್ಲಿ ನೆಲೆಕಂಡುಕೊಂಡೆ. ಮದುವೆಗೂ ಹಿಂದೆ ನಿತ್ಯ 15 ಗಂಟೆ ಕೆಲಸ ಮಾಡುತ್ತಿದ್ದೆ. ಮದುವೆ ಬಳಿಕ 24 ಗಂಟೆಯೂ ರಂಗಭೂಮಿ ಕೆಲಸ. ಇಬ್ಬರೂ ಸಮಯದ ಪರಿಮಿತಿಯಿಲ್ಲದೆ ಬೆಳಿಗ್ಗೆಯಿಂದ ರಾತ್ರಿ ವರೆಗೆ ಕೆಲಸ ಮಾಡುತ್ತೇವೆ. ಪರಸ್ಪರ ಸಹಕಾರವಿದೆ. ನಮ್ಮಿಬ್ಬರಿಗೂ ರಂಗಭೂಮಿ ಬದುಕಾಗಿದೆ. 

ರಂಗಭೂಮಿಯಲ್ಲಿ ಹೆಣ್ಣುಮಕ್ಕಳಿಗೆ ಇರುವ ಅವಕಾಶಗಳೇನು?
ನಾನು ರಂಗಭೂಮಿಗೆ ಕಾಲಿಟ್ಟಾಗ ಹೆಣ್ಣುಮಕ್ಕಳಿಗೆ ಅಷ್ಟೊಂದು ಅವಕಾಶಗಳು ಇರಲಿಲ್ಲ. ಹೆಣ್ಣುಮಕ್ಕಳು ರಂಗಭೂಮಿಯಲ್ಲಿ ಕೆಲಸ ಮಾಡುತ್ತಿದ್ದರೆ ಅವರನ್ನು ತಾತ್ಸಾರ ಭಾವನೆಯಿಂದ ಕಾಣುತ್ತಿದ್ದರು. ರಂಗಭೂಮಿಯಲ್ಲಿ ಕೆಲಸ ಮಾಡುತ್ತಿದ್ದದ್ದಕ್ಕೆ ನನ್ನ ಬಗ್ಗೆ ಅಸಹ್ಯ ವ್ಯಕ್ತಪಡಿಸಿದುಂಟು. ಆದರೆ, ಈಗೀಗ ಎಲ್ಲ ವರ್ಗದ ಹೆಣ್ಣುಮಕ್ಕಳು ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವಕಾಶಗಳು ಹೆಚ್ಚುತ್ತಿವೆ. ಮಹಿಳಾ ಪ್ರದಾನ ನಾಟಕಗಳು ಹೆಚ್ಚಾಗುತ್ತಿವೆ. ಅವುಗಳನ್ನು ಹೆಚ್ಚಾಗಿ ಗಂಡಸರು ಬರೆದು ರಂಗಭೂಮಿಗೆ ಇಳಿಸುತ್ತಿರುವುದು ಖುಷಿಯ ಸಂಗತಿ.

ನಾಟಕದಿಂದ ಹೊಟ್ಟೆ ತುಂಬುತ್ತಾ..?
‌ಕಷ್ಟ, ರಂಗಭೂಮಿ ನೆಚ್ಚಿಕೊಂಡರೆ ತುಂಬಾ ಒದ್ದಾಟ, ಜಗ್ಗಾಟಗಳಿಂದ ಬದುಕು ಸಾಗಿಸಬೇಕು. ಸ್ಪರ್ಧೆಯೂ ಹೆಚ್ಚಾಗಿದೆ. ಇಲ್ಲೇ ಬದುಕು ಕಟ್ಟಿಕೊಳ್ಳುವ ದೃಢತೆ ಇದ್ದರೆ ಜೀವನ ಸರಾಗವಾಗಿ ಸಾಗುತ್ತದೆ.
***
ಕಥಾವಸ್ತು: ಸಂಪತ್‌ಪಾಲ್ ದೇವಿ (ಕನ್ನಡದ ಕಮಲಾದೇವಿ) ಜೀವನಾಧರಿಸಿದ ನಾಟಕ  
ರಂಗರೂಪ: ಪ್ರವೀಣ್ ಸೂಡಾ  
ನಿರ್ದೇಶನ, ವಿನ್ಯಾಸ: ರಾಜ್‌ಗುರು 
ತಂಡ: ರಂಗಪಯಣ 
ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ 
ಸಮಯ: ಇಂದು ಸಂಜೆ 6.30 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !