ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಭೂಮಿ: ಪಾತ್ರಗಳಿಲ್ಲದ ಭಿನ್ನ ನಿರೂಪಣಾ ಕ್ರಮ

ಲಿಂಗರಾಜು ಮಳವಳ್ಳಿ
Published 20 ಜನವರಿ 2024, 23:48 IST
Last Updated 20 ಜನವರಿ 2024, 23:48 IST
ಅಕ್ಷರ ಗಾತ್ರ

‘ಕಪ್ಪು ಮನುಜರು ನಾವು ಕಪ್ಪು ಮನುಜರು
ಈ ಮಣ್ಣ ಕರಿಯೊಡಲ ಕೆಸರಲ್ಲಿ ಮಿಂದು ಬಂದವರು...’– ಈ ಹಾಡಿಲ್ಲದ ದಲಿತ ಚಳವಳಿಯನ್ನು ಊಹಿಸಲು ಸಾಧ್ಯವೇ?

ಕಳ್ಳುಬಳ್ಳಿ ಸಂಬಂಧದಂತೆ ಹೋರಾಟದ ಹಾಡುಗಳೊಂದಿಗೆ ದಲಿತ ಚಳವಳಿ ಬೆಸೆದು, ಬೆಳೆದು ಬಂದಿದೆ. ದಲಿತ ಸಂಘಟನೆಗಳ ಯಾವುದೇ ಹೋರಾಟ, ಕಾರ್ಯಕ್ರಮಗಳಿರಲಿ ಈಗಲೂ ಹೋರಾಟದ ಹಾಡಿನೊಂದಿಗೆ ಶುರುವಾಗುವ ಪ್ರತೀತಿ ಮುಂದುವರಿದಿದೆ. ಇಂಥದ್ದೊಂದು ಪರಂಪರೆಯನ್ನು ಆಧರಿಸಿ ಹಾಡುಗಳೊಂದಿಗೆ ದಲಿತ ಚಳವಳಿ ಬೆಳೆದುಬಂದ ಕಥನವನ್ನು ರಂಗಭೂಮಿ ಮೂಲಕ ನಿರೂಪಿಸುವ ಪ್ರಯತ್ನ ನಡೆದಿರುವುದು ವರ್ತಮಾನದ ದೃಷ್ಟಿಯಿಂದ ಮಹತ್ವದ್ದು.

ರಂಗಕರ್ಮಿ ಕೆ.ಪಿ.ಲಕ್ಷ್ಮಣ್ ವಿನ್ಯಾಸಗೊಳಿಸಿರುವ ‘ಪಂಚಮ ಪದ’ ಎಂಬ ನಾಟಕ, ಚಂದ್ರಶೇಖರ್ ನಿರ್ದೇಶನದಲ್ಲಿ ರವೀಂದ್ರ ಕಲಾಕ್ಷೇತ್ರ ಮತ್ತು ರಂಗಶಂಕರದಲ್ಲಿ ಪ್ರದರ್ಶನಗಳನ್ನು ಕಂಡಿದೆ. ದಲಿತ ಚಳವಳಿಯ ಚರಿತ್ರೆಗೆ ಮಹತ್ವದ ದಾಖಲೆಯಾಗಿರುವ ‘ಪಂಚಮ ಪತ್ರಿಕೆ’ ಮತ್ತು ‘ಹಾಡು’ ಎರಡನ್ನೂ ಒಟ್ಟು ತಂದು ‘ಪಂಚಮ ಪದ’ ಆಗಿದೆ.

ರಾಜ್ಯದ ಜನ ಚಳವಳಿಗಳ ಇತಿಹಾಸದಲ್ಲಿ ಎಪ್ಪತ್ತು ಮತ್ತು ಎಂಬತ್ತರ ದಶಕದ ಅವಧಿ ಗುರುತರವಾದುದು. ಎಡ ಚಳವಳಿ, ರೈತ ಚಳವಳಿಯ ಜೊತೆಗೆ ದಲಿತ ಚಳವಳಿಯೂ ಸಂಘಟಿತ ರೂಪ ಪಡೆದ ಮಹತ್ವದ ಘಟ್ಟ ಅದು. ದಲಿತ ಚಳವಳಿಯ ವೈಶಿಷ್ಟ್ಯವೆಂದರೆ, ಅದು ಹಾಡುಗಳೊಂದಿಗೆ ಬೆಳೆದದ್ದು. ಇದಕ್ಕೆ ಕಾರಣಗಳು ಹಲವಿದ್ದರೂ ಕವಿ ಸಿದ್ದಲಿಂಗಯ್ಯ, ದೇವನೂರ ಮಹಾದೇವ, ಕೆ.ಬಿ.ಸಿದ್ದಯ್ಯ, ಕೋಟಿಗಾನಹಳ್ಳಿ ರಾಮಯ್ಯ, ಇಂದೂಧರ ಹೊನ್ನಾಪುರ ಅವರಂತಹ ಬರಹಗಾರರು ದಲಿತ ಚಳವಳಿಯ ಮುಖ್ಯ ಭೂಮಿಕೆಯಲ್ಲಿದ್ದುದು ಮತ್ತೊಂದು ಮಹತ್ವದ ಕಾರಣ ಎನಿಸುತ್ತದೆ.

‘ನೆನ್ನೆ ದಿನ ನನ್ನ ಜನ’, ‘ಬರುತಿಹೆವು ನಾವು ಬರುತಿಹೆವು’, ‘ಕೋಟಿ ಕೋಟಿ ತಾರೆಗಳಲ್ಲಿ ಲಕ್ಷಾಂತರ ನೋವುಗಳಲ್ಲಿ ನೀ ಹುಟ್ಟಿ ಬೆಳೆದೆಯಮ್ಮ ನನ್ನ ತಂಗಿ ಅನಸೂಯ’, ‘ಈ ನಾಡ ಮಣ್ಣಿನಲ್ಲಿ ಮಣ್ಣಾದ ಜನಗಳ ಕಥೆಯ’, ‘ಕಪ್ಪು ಮನುಜರು’ ಎಂಬ ಹಾಡುಗಳು ಭಾರಿ ಜನಪ್ರಿಯತೆಯನ್ನು ಗಳಿಸಿದ್ದವು. ಅಂದು ಹರಿದು ಬಂದ ಅದೇ ಹಾಡುಗಳು ಇಂದಿಗೂ ಯುವ ತಲೆಮಾರಿನ ಕಂಠದಲ್ಲೂ ಹೊಮ್ಮುತ್ತಿವೆ.

ಜಂಗಮ ತಂಡ ಪ್ರಸ್ತುತಪಡಿಸಿದ 'ಪಂಚಮ ಪದ' ನಿರೀಕ್ಷೆಯಂತೆ ಹಾಡಿನೊಂದಿಗೆ ಆರಂಭಗೊಂಡು ದಲಿತ ಚಳವಳಿಯ ಪ್ರಮುಖ ಘಟ್ಟಗಳನ್ನು ಪ್ರಸ್ತುತಪಡಿಸುತ್ತಾ, ಆ ಚಳವಳಿಯ ಚರಿತ್ರೆಯನ್ನು 90 ನಿಮಿಷದಲ್ಲಿ ಪಕ್ಷಿನೋಟದಂತೆ ಕಟ್ಟಿಕೊಡುತ್ತದೆ. ಒಟ್ಟು ನಾಟಕದಲ್ಲಿ ಪಾತ್ರಗಳೇ ಇಲ್ಲ; ಬದಲಾಗಿ ನಿರೂಪಣೆ ಮತ್ತು ಹಾಡುಗಳೇ ಇಲ್ಲಿನ ಪಾತ್ರಗಳು. ಅಭಿನಯಕ್ಕೆ ಹೆಚ್ಚಿನ ತಾವಿಲ್ಲ.

ರಂಗಭೂಮಿಯಲ್ಲಿ ವಸ್ತುವಿನ ಜತೆಗೆ ಅಭಿನಯ ಮತ್ತು ಬೆಳಕು ಮುಖ್ಯವಾಗುತ್ತದೆಯಾದರೂ, ಇಲ್ಲಿ ಇವರೆಡೂ ರಂಗಾಸಕ್ತರಿಗೆ ಕೊಂಚ ನಿರಾಸೆಯನ್ನು ಮೂಡಿಸುತ್ತವೆ. ಚರಿತ್ರೆಯನ್ನು ಪರಿಣಾಮಕಾರಿಯಾಗಿ ನಿರೂಪಿಸುವುದೇ ಇದರ ಉದ್ದೇಶ. ಹೀಗಾಗಿ ಇದೊಂದು ವಿನೂತನ ಪ್ರಯೋಗವೆಂದು ಹೇಳಬಹುದು.

ನಾಟಕದಲ್ಲಿ ತುಮಕೂರಿನ ದಲಿತ ಚಿಕ್ಕತಿಮ್ಮಯ್ಯನ ಕೊಲೆ ಆಧರಿಸಿ ಕೆ.ಬಿ.ಸಿದ್ದಯ್ಯನವರು ಬರೆದ ‘ಈ ನಾಡ ಮಣ್ಣಿನಲ್ಲಿ ಮಣ್ಣಾದ ಜನಗಳ ಕಥೆ’ ಹಾಡು ಕಣ್ಣಾಲಿಗಳನ್ನು ಒದ್ದೆಯಾಗಿಸುತ್ತದೆ. ಅನಸೂಯ ಪ್ರಕರಣ ಸೇರಿದಂತೆ ದಲಿತ ಚಳವಳಿಯ ಆಯ್ದ ಪ್ರಮುಖ ಪ್ರಕರಣಗಳನ್ನು ನರೇಟ್ ಮಾಡುತ್ತಲೇ ಎಲ್ಲಿಯೂ ಬೋರು ಹೊಡೆಸದೇ, ಪ್ರೇಕ್ಷಕರನ್ನು ಭಾವುಕರನ್ನಾಗಿಸುತ್ತಲೇ ಕ್ಲೈಮ್ಯಾಕ್ಸ್ ತಲುಪುತ್ತದೆ.

ಕ್ಲೈಮ್ಯಾಕ್ಸ್‌ನಲ್ಲಿ ದಲಿತರ ವಿಮೋಚನೆ ಅಂಬೇಡ್ಕರ್ ವಾದದಲ್ಲೇ ಇದೆ ಎಂಬಲ್ಲಿಗೆ ತಂದು ನಿಲ್ಲಿಸುತ್ತಾರೆ. ‘ಮಲಗಿದವರ ಕೂರಿಸಿದೆ, ನಿಲ್ಲಿಸುವವರು ಯಾರು?’ ಎಂಬ ಸಿದ್ದಲಿಂಗಯ್ಯನವರ ಪ್ರಶ್ನೆ ಏಳುತ್ತದೆ. ಅದಕ್ಕೆ, ಅಂಬೇಡ್ಕರ್ ಅವರೇ ‘ಎದ್ದು ನಿಲ್ಲುವುದು ಹೇಗೆಂದು ಹೇಳಿ ಹೋಗಿದ್ದಾರೆ, ಛಲದ ಜೊತೆಗೆ ಬಲದ ಪಾಠವನ್ನೂ ಹೇಳಿಕೊಟ್ಟು ಹೋಗಿದ್ದಾರೆ, ಹೀಗಾಗಿ ದಲಿತರ ವಿಮೋಚನೆ ಅಂಬೇಡ್ಕರ್ ವಾದದಲ್ಲೇ ಇದೆ’ ಎಂಬುದನ್ನು ಗಟ್ಟಿದನಿಯಲ್ಲಿ ಹೇಳಲು ಪ್ರಯತ್ನಿಸಲಾಗಿದೆ. ಕಟ್ಟುವಿಕೆಯ ಇಂತಹ ಸೂಕ್ಷ್ಮದಿಂದಾಗಿ ‘ಪಂಚಮ ಪದ’ ಒಂದು ಶ್ಲಾಘನೀಯ ಪ್ರಯೋಗವಂತೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT