ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನ್‌ ಹೇಳ್ತೀನಿ, ಕೇಳ್ಬೇಕು ನೀವಿವತ್ತು..! ವಿನಯ್‌ ವಿರುದ್ಧ ಗುಡುಗಿದ ಪ್ರತಾಪ್‌

Published 23 ಜನವರಿ 2024, 5:34 IST
Last Updated 23 ಜನವರಿ 2024, 5:34 IST
ಅಕ್ಷರ ಗಾತ್ರ

ಬೆಂಗಳೂರು: ಎದುರಾಳಿಗಳನ್ನು ಕುಗ್ಗಿಸಿ ಫಿನಾಲೆಗೆ ದಾರಿ ಮಾಡಿಕೊಳ್ಳುವ ತರಾತುರಿಯಲ್ಲಿ ಬಿಗ್‌ ಬಾಸ್‌ ಸ್ಪರ್ಧಿಗಳು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. 

ಬಿಗ್‌ ಬಾಸ್‌ ಕನ್ನಡ ಸೀಸನ್ 10ರ ಫಿನಾಲೆ ವಾರದಲ್ಲಿ ಸ್ಪರ್ಧಿಗಳ ನಡುವಿನ ಹಣಾಹಣಿ ಜೋರಾಗಿದೆ. ಈಗಿರುವ ಆರು ಸದಸ್ಯರು ತಮ್ಮ ಎದುರಾಳಿಗಳ ಮೇಲಿನ ಆಕ್ರೋಶವನ್ನು ವ್ಯಕ್ತಪಡಿಸಲು ಮುಂದಾಗಿದ್ದಾರೆ. 

ಜಿಯೊ ಸಿನಿಮಾದಲ್ಲಿ 24 ಗಂಟೆಯೂ ನೇರಪ್ರಸಾರವಾಗುವ ಬಿಗ್‌ ಬಾಸ್‌ ಕಾರ್ಯಕ್ರಮದಲ್ಲಿ ಎದುರಾಳಿಗಳ ಮೇಲಿನ ಆಕ್ರೋಶವನ್ನು ವ್ಯಕ್ತಪಡಿಸುವುದಕ್ಕೆ ಒಂದು ಅವಕಾಶವನ್ನು ನೀಡಲಾಗಿದೆ. ಸದಸ್ಯರ ಎದುರಿಗೆ ಆರು ಪಂಚಿಂಗ್ ಬ್ಯಾಗ್ ಇಟ್ಟು ಅವುಗಳ ಮೇಲೆ ಆರು ಸ್ಪರ್ಧಿಗಳ ಫೋಟೊ ಛಾಪಿಸಲಾಗಿದೆ. ಪ್ರತಿ ಸದಸ್ಯರೂ ತಾವು ಆಯ್ಕೆ ಮಾಡಿಕೊಳ್ಳುವ ಒಬ್ಬ ಸ್ಪರ್ಧಿಯ ಎದುರು ನಿಂತು ಆ ಸ್ಪರ್ಧಿಗೆ ಹೇಳಬೇಕೆಂದಿರುವ ಆಕ್ರೋಶದ ಮಾತುಗಳನ್ನು ಹೇಳಿ ಅವರ ಫೋಟೊ ಇರುವ ಬ್ಯಾಗ್‌ಗೆ ಪಂಚ್ ಮಾಡಬೇಕು.

ವಿನಯ್‌ ಅವರು ಪ್ರತಾಪ್ ಚಿತ್ರವಿರುವ ಬ್ಯಾಗ್ ಎದುರು ನಿಂತಿದ್ದಾರೆ. ‘ಪ್ರತಾಪ್, ನೀನು ನನ್ನ ಬಗ್ಗೆ ಸರಿಯಾಗಿ ಮಾತಾಡುವುದನ್ನು ಕಲಿತುಕೋ, ಇಲ್ಲಾಂದ್ರೆ ಪರಿಣಾಮ ಸರಿಯಾಗಿರಲ್ಲ’ ಎಂದು ಹೇಳಿ ಬಲವಾಗಿ ಪ್ರತಾಪ್ ಫೋಟೊ ಇರುವ ಬ್ಯಾಗ್ ಮೇಲೆ ಪಂಚ್ ಮಾಡಿದ್ದಾರೆ. 

ಅದೇ ಗತ್ತಿನಲ್ಲಿ ಪ್ರತಾಪ್‌ ಕೂಡ ವಿನಯ್‌ಗೆ ಪ್ರತಿಕ್ರಿಯಿಸಿದ್ದಾರೆ. ಸಾಮಾನ್ಯವಾಗಿ ಪ್ರತಾಪ್ ತಮ್ಮ ಬಗ್ಗೆ ಆರೋಪ ಬಂದಾಗ ಅವುಗಳಿಗೆ ಉತ್ತರಿಸುವಾಗ, ಸಾವಧಾನದಿಂದ ತಮಗೆ ಅನಿಸಿದ್ದನ್ನು ವಿವರಿಸುತ್ತಿದ್ದರು. ಎದುರುಗಡೆಯವರು ಎಷ್ಟೇ ಕಿರುಚಾಡಿದರೂ ತಾಳ್ಮೆ ಕಳೆದುಕೊಳ್ಳದೆ ತಣ್ಣನೆಯ ಧ್ವನಿಯಲ್ಲಿಯೇ ವಿವರಿಸುತ್ತಿದ್ದರು. ವಿನಯ್ ಜೊತೆಗಿನ ಜಗಳದಲ್ಲಿ ಕೆಲವೊಮ್ಮೆ ತಾಳ್ಮೆ ಕಳೆದುಕೊಂಡು ಏರುಧ್ವನಿಯಲ್ಲಿ ಕಿರುಚಾಡಿದ್ದೂ ಇತ್ತು. ಆದರೆ ಈ ಸಲ ವ್ಯಂಗ್ಯವಾಗಿಯೇ ವಿನಯ್‌ಗೆ ಉತ್ತರಿಸಿದ್ದಾರೆ.

ಕೈಗೆ ಬಾಕ್ಸಿಂಗ್ ಗ್ಲೌಸ್ ತೊಟ್ಟ ಪ್ರತಾಪ್, ವಿನಯ್ ಅವರನ್ನೆ ಅನುಕರಣೆ ಮಾಡಿದ್ದಾರೆ. ‘ನಿಮ್ಮ ಅರಚಾಟಕ್ಕೆ…. ವೋ ಪ್ರತಾಪ್… ಹೋ ಪ್ರತಾಪ್… ಪ್ರತಾಪ್ ಎಂದರೆ ಇಲ್ಲಿ ಯಾರೂ ಹೆದರಿಕೊಳ್ಳೋರಿಲ್ಲ. ನೀವು ಅತ್ತರೆ ಅದು ಪ್ರೀತಿ… ನಾನು ನನ್ನ ತಂದೆ-ತಾಯಿ ನೆನಪಿಸಿಕೊಂಡು ಅತ್ತರೆ ಅದು ಸಿಂಪತಿ’ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.

ಇದಕ್ಕೆ ಪ್ರತಿಯಾಗಿ ವಿನಯ್, ‘ನೀನು ನನಗೆ ಬುದ್ಧಿವಾದ ಹೇಳಬೇಕಾಗಿಲ್ಲ’ ಎಂದು ತಿರುಗೇಟು ಕೊಟ್ಟಿದ್ದಾರೆ. ಅದಕ್ಕೂ ಪ್ರತಾಪ್, ‘ಅಯ್ಯೋ ವಿನಯಣ್ಣ… ಭಯ ಅಣ್ಣ… ನಂಗೆ ಆಗ್ತಾ ಇಲ್ಲ ಅಣ್ಣಾ…’ ಎಂದು ಮುದುರಿದ ಹಾಗೆ ನಟಿಸಿದ್ದಾರೆ. ‘ನಿನಗೆ ಹೆದರಿಸೋದಕ್ಕಲ್ಲ ಮರಿ ನಾನು ಹೇಳ್ತಾ ಇರೋದು’ ಎಂದು ವಿನಯ್ ಹೇಳಿದರೆ, ‘ಕೇಳಿ ಅಣ್ಣಾ ನಾನ್ಹೇಳ್ತೀನಿ… ಕೇಳಿ… ಕೇಳ್ಬೇಕು ನೀವೀವತ್ತು’ ಎಂದು ಇನ್ನಷ್ಟು ಕೆಣಕಿದ್ದಾರೆ. ಇದರಿಂದ ವಿನಯ್‌ ಮತ್ತಷ್ಟು ಕೋಪಗೊಂಡಿದ್ದಾರೆ. ಇತ್ತ, ಪ್ರತಾಪ್‌ ನಟನೆ ನೋಡಿ ಮನೆಮಂದಿ ಮುಸಿ ಮುಸಿ ನಕ್ಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT