ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ ನಿರ್ದೇಶನದ ಕನಸು ಹೊತ್ತ ಭುವನ್‌ ‘ನಂದನ’ಯಾನ

Published 22 ಜೂನ್ 2023, 16:10 IST
Last Updated 22 ಜೂನ್ 2023, 16:10 IST
ಅಕ್ಷರ ಗಾತ್ರ

ಎ.ಪಿ.ಎಸ್‌

ಎಂಜಿನಿಯರಿಂಗ್‌ ಓದಿ ಸಿನಿಮಾದತ್ತ ಹೆಜ್ಜೆ ಇಟ್ಟವರು ಸ್ಯಾಂಡಲ್‌ವುಡ್‌ನಲ್ಲಿ ಹಲವರಿದ್ದಾರೆ. ಸದ್ಯ ಇದೇ ಕನಸು ಹೊತ್ತು ಹೆಜ್ಜೆ ಇಡುತ್ತಿದ್ದಾರೆ ಭುವನ್‌. ಕಿರುತೆರೆಯಲ್ಲಿ ‘ನಂದನ್‌’ ಎಂದೇ ಖ್ಯಾತಿ ಪಡೆದಿರುವ ಭುವನ್‌ ಸದ್ಯ ಬೆಂಗಳೂರಿನ ದಯಾನಂದ ಸಾಗರ್‌ ಕಾಲೇಜಿನಲ್ಲಿ ಅಂತಿಮ ವರ್ಷದ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸಿನಿಮಾದ ಗೀಳು ಇಟ್ಟುಕೊಂಡೇ ಬೆಳೆದು, ರಂಗಭೂಮಿಯ ನಂಟು, ನೃತ್ಯ ನಿರ್ದೇಶನದ ಅನುಭವದಿಂದಲೇ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡು ಬಣ್ಣದ ಲೋಕಕ್ಕೆ ಹೆಜ್ಜೆ ಇಟ್ಟವರು ಇವರು. ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಪುಣ್ಯವತಿ’ ಧಾರಾವಾಹಿಯಲ್ಲಿ ನಂದನ್‌ ಎಂಬ ಪಾತ್ರದ ಮುಖಾಂತರ ಕಿರುತೆರೆ ಪಯಣ ಆರಂಭಿಸಿರುವ ಭುವನ್‌ ಸಿನಿಮಾ ನಿರ್ದೇಶನದ ಕನಸು ಹೊತ್ತು ಸಾಗುತ್ತಿದ್ದಾರೆ. ಅವರೊಂದಿಗೆ ಒಂದು ಪುಟ್ಟ ಮಾತುಕತೆ... 

‘ನನ್ನ ಹುಟ್ಟೂರು ಬೆಂಗಳೂರು. ತಂದೆ ತಾಯಿ ಹಾಸನದವರು. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದರೂ, ಹೊರಗಡೆ ಓಡಾಡುವ ಹುಚ್ಚು ಇರಲಿಲ್ಲ. ಬದಲಾಗಿ ಸಿನಿಮಾ ನೋಡುವ ರೂಢಿ ಜಾಸ್ತಿ. ಹೀಗಾಗಿ ಅನುಭವಗಳು ಹಾಗೂ ಸಿನಿಮಾಗಳ ಮೂಲಕವೇ ನನ್ನ ವ್ಯಕ್ತಿತ್ವ ರೂಪುಗೊಳ್ಳುತ್ತಾ ಬಂದಿದೆ. ಇದುವೇ ಬಣ್ಣದ ಲೋಕದತ್ತ ನನ್ನನ್ನು ಮತ್ತಷ್ಟು ಸೆಳೆಯಿತು. ಕನ್ನಡ ಹಾಡುಗಳ ಬಗ್ಗೆ ನನಗೆ ಎಲ್ಲಿಲ್ಲದ ಆಸಕ್ತಿ. ನೃತ್ಯದಲ್ಲಿ ಆಸಕ್ತಿ ಇದ್ದ ಕಾರಣ ಎಂಟನೇ ತರಗತಿಯಲ್ಲಿ ನೃತ್ಯ ತರಬೇತಿಗೆ ಸೇರಿದ್ದೆ. ಶಾಲಾ ವಾರ್ಷಿಕೋತ್ಸವಗಳಲ್ಲಿ ಎಲ್ಲರೂ ಹಿಂದಿ ಹಾಡಿಗೆ ಡ್ಯಾನ್ಸ್‌ ಮಾಡುವುದನ್ನು ಕಂಡು, ಒಂದು ತಂಡ ಕಟ್ಟಿ ಕೇವಲ ಕನ್ನಡ ಹಾಡುಗಳನ್ನೇ ಆಯ್ದುಕೊಂಡು ಒಂದು ಪ್ರದರ್ಶನ ನೀಡಿದ್ದೆ. ಇದು ಎಲ್ಲರಿಗೂ ಇಷ್ಟವಾಯಿತು. ಇದೇ ಮಾದರಿ ಪ್ರದರ್ಶನವನ್ನು ಕಾಲೇಜಿನಲ್ಲಿ, ಸದ್ಯ ಓದುತ್ತಿರುವ ಎಂಜಿನಿಯರಿಂಗ್‌ ಕಾಲೇಜಿನಲ್ಲೂ ನೀಡಿದೆ. ಯೂಟ್ಯೂಬ್‌ ಚಾನೆಲ್‌ ಕೂಡ ಪ್ರಾರಂಭಿಸಿದೆ’... ಹೀಗೆ ಬಣ್ಣದ ಲೋಕದ ಆರಂಭಿಕ ಹೆಜ್ಜೆಗಳನ್ನು ಭುವನ್‌ ಮೆಲುಕು ಹಾಕಿದರು. 

‘ಎಂಜಿನಿಯರಿಂಗ್‌ ಓದುತ್ತಿರುವ ಸಂದರ್ಭದಲ್ಲಿ ವಿದ್ಯಾಪೀಠದಲ್ಲಿರುವ ರಂಗಾಂತರ್ಯ ಎಂಬ ನಾಟಕ ತಂಡ ಸೇರಿಕೊಂಡೆ. ರಂಗಭೂಮಿಯ ನಂಟು ಇಲ್ಲಿಂದ ಆರಂಭ. ಕಿರುತೆರೆ ಅಥವಾ ಸಿನಿಮಾ ಕ್ಷೇತ್ರಕ್ಕೆ ಕಾಲಿಡಬೇಕು ಎನ್ನುವ ಆಸೆ ಇದ್ದರೂ ಎಂಜಿನಿಯರಿಂಗ್‌ ಮುಗಿಯಲಿ ಎಂದು ಕಾಯುತ್ತಿದ್ದೆ. ಆದರೂ ಕೆಲವರ ಒತ್ತಡದ ಕಾರಣ ಫೊಟೊಶೂಟ್‌ ಮಾಡಿಸಿಕೊಂಡು ಆಡಿಷನ್‌ಗಳಿಗೆ ಕಳುಹಿಸಿದ್ದೆ. ಅಂದು ಕಾಲೇಜಿನಲ್ಲಿ ಕ್ಯಾಂಪಸ್‌ ಇಂಟರ್‌ವ್ಯೂ ಇತ್ತು. ಒಂದು ಕಂಪನಿಯಲ್ಲಿ ಕೆಲಸಕ್ಕೆ ನಾನು ಆಯ್ಕೆಯಾಗಿದ್ದೆ. ಅದೇ ದಿನ ‘ಪುಣ್ಯವತಿ’ ಧಾರಾವಾಹಿಗೆ ಆಯ್ಕೆಯಾದ ಮಾಹಿತಿಯೂ ಸಿಕ್ಕಿತು. ಗುರಿ ಸ್ಪಷ್ಟವಾಗಿದ್ದ ಕಾರಣ ಬಣ್ಣದ ಲೋಕವನ್ನೇ ಆಯ್ದುಕೊಂಡೆ. ಶೂಟಿಂಗ್‌ ಆರಂಭವಾದಾಗ ಯಾವುದೇ ತರಬೇತಿ ಇರಲಿಲ್ಲ. ಏಕೆಂದರೆ ಕೇವಲ 15 ದಿನಗಳಲ್ಲಿ ಈ ಧಾರಾವಾಹಿ ಪ್ರಸಾರವಾಗಬೇಕಿತ್ತು. ಅದಕ್ಕಾಗಿ ಕಂತುಗಳ ಬ್ಯಾಂಕಿಂಗ್‌ ಅಗತ್ಯವಿತ್ತು. ಹೀಗಾಗಿ ನೇರವಾಗಿ ಚಿತ್ರೀಕರಣಕ್ಕೆ ಇಳಿದಿದ್ದೆವು. ಮೊದಲಿಗೆ ಕ್ಯಾಮೆರಾ ಮುಂದಿನ ನಟನೆಗೆ ಹೊಂದಿಕೊಳ್ಳುವುದು ಸವಾಲಾಗಿತ್ತು. ಈ ಸಂದರ್ಭದಲ್ಲಿ ಇಡೀ ತಂಡ ಜೊತೆಯಾಗಿ ನನ್ನ ಬೆನ್ನಿಗೆ ನಿಂತಿತ್ತು. ಧಾರಾವಾಹಿ ನಿರ್ದೇಶಕರು, ನಿರ್ಮಾಪಕರು ನೀಡಿದ ಬೆಂಬಲದಿಂದ ಇಂದು ‘ನಂದನ್‌’ ಆಗಿ ಮನೆಮನ ತಲುಪಿದ್ದೇನೆ’ ಎನ್ನುತ್ತಾರೆ ಭುವನ್‌. 

‘ಸಿನಿಮಾರಂಗಕ್ಕೂ ಹೆಜ್ಜೆ ಇಡುವ ಕನಸಿದೆ. ಕೇವಲ ನಟನಾಗಿ ಅಲ್ಲದೆ, ಒಳ್ಳೆಯ ಕಥೆಗಳನ್ನು ಬರೆದು ಈ ಕ್ಷೇತ್ರಕ್ಕೆ ಒಳ್ಳೆಯ ಕಂಟೆಂಟ್‌ಗಳನ್ನು ಕೊಡಬೇಕು ಎನ್ನುವ ಹಂಬಲ ನನ್ನದು’ ಎನ್ನುತ್ತಾ ಭುವನ್‌ ಚಂದನವನದಲ್ಲಿ ನಡೆದಾಡುವ ಕನಸು ಬಿಚ್ಚಿಟ್ಟರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT