ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಡಿಸಲು ಹೋಲುವ ಮೂತಿ ಪತಂಗ...

ಕೀಟ ಪ್ರಪಂಚ
Last Updated 13 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ಹೈದರಾಬಾದಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಪ್ಲಾಂಟ್ ಹೆಲ್ತ್ ಮ್ಯಾನೇಜ್‍ಮೆಂಟ್ (NIPHM) ತರಬೇತಿಗೆ ನಿಯೋಜನೆಗೊಂಡಾಗ, ಬೆಳ್ಳಂಬೆಳಗ್ಗೆ ಕೀಟಗಳ ಚಿತ್ರ ಸೆರೆಹಿಡಿಯಲು ಅಲ್ಲಲ್ಲಿ ಹೋಗಿ ಬರುತ್ತಿದ್ದೆ.

ಅಲ್ಲಿನ ಒಂದು ಕಟ್ಟಡದ ಚೂಪಾದ ಗೋಡೆಯ ಅಂಚಿನಲ್ಲಿ ಒಣಗಿದ ಎಲೆಯ ತರಹದ ಒಂದು ವಸ್ತು ಭಾಸವಾಯಿತು. ಅದು ಗಾಳಿಗೂ ಅಲುಗಾಡದಂತೆ, ಮಿಸುಕಾಡದಂತೆ ನನ್ನನ್ನು ಗಾಢವಾಗಿಯೇ ಕಾಡತೊಡಗಿತು. ಆ ಗೋಡೆಯ ಅಂಚಿನಲ್ಲಿ ಎಲೆ ನಿಂತಿರಲು ಸಾಧ್ಯವೇ ಇಲ್ಲವೆಂದು ಇನ್ನು ಹತ್ತಿರ ಹೋಗಿ ಒಂದೆರೆಡು ನಿಮಿಷಗಳ ಕಾಲ ನಿಂತು ನೋಡುತ್ತಾ ಅಲ್ಲೇ ಮೈಮರೆತೆ. ಅದೆಷ್ಟು ಮುಗ್ಧ, ನಯವಾದ ಮಖಮಲ್ಲಿನ ಮೈ ಹೊದಿಕೆ, ಮುಂದಕ್ಕೆ ಚಾಚಿರುವ ಮೂತಿ, ಬಾಚಣಿಗೆಯಂತಹಮೀಸೆಗಳನ್ನು ನಿಮಿರಿಸಿಕೊಂಡು ಹಸುಗೂಸಿನಂತೆ ಕೂತು ಸೂರ್ಯೋದಯದ ಹಿತವಾದ ಶಾಖವನ್ನ ಅನುಭವಿಸುತ್ತಿತ್ತು. ಇದು ಒಂದೂವರೆ ಅಂಗುಲ ಗಾತ್ರದ ಲ್ಯಾಪೆಟ್ ಪತಂಗ.

ಲ್ಯಾಸಿಯೋಕ್ಯಾಂಪಿಡೆ (Lasio campidae) ಇದರ ಕುಟುಂಬ. ತನ್ನ ನಾಲ್ಕು ರೆಕ್ಕೆಗಳಲ್ಲಿ ಹಿಂಬದಿಯ ಎರಡು ರೆಕ್ಕೆಗಳು ನೆಲಕ್ಕೆ ಹಾಸಿರುವಂತೆ ಮತ್ತು ಮುಂಭಾಗದ ಎರಡು ರೆಕ್ಕೆಗಳು ಗುಡಿಸಲಿನ ಮೇಲ್ಛಾವಣಿಯಂತೆ ಹಿಡಿದು ಕೂರುವುದು ಈ ಪತಂಗದ ವಿಶೇಷ. ಇದರ ಬಾಯಿಯು ಬೇರೆ ಪತಂಗಗಳಿಗಿಂತ ಭಿನ್ನವಾಗಿದ್ದು ಅರ್ಧ ಸೆಂಟಿಮೀಟರ್‌ನಷ್ಟು ಮುಂದಕ್ಕೆ ಚಾಚಿ, ಎಲೆಯ ತೊಟ್ಟಿನಂತೆ ಕಾಣುತ್ತದೆ. ತನ್ನ ಶತ್ರುಗಳಿಂದ ತಪ್ಪಿಸಿಕೊಳ್ಳಲು ಈ ಮಾರ್ಪಾಟು. ಚಾರ್ಲ್ಸ್‌ ಡಾರ್ವಿನ್‌ನ ಜೀವ ವಿಕಾಸ ಸಿದ್ಧಾಂತ ‘Survival of the fittest’ ಸ್ಮರಿಸಬಹುದು. ಹಾಗಾಗಿ ಈ ಪತಂಗವನ್ನು ‘ಸ್ನೌಟ್ ಮಾತ್’ (Snout moth) ಎಂದು ಕರೆಯುತ್ತಾರೆ. ಮೂತಿ ಪತಂಗವೆಂದು ನಾವು ಹೆಸರಿಡಬಹುದು. ಈ ರೀತಿಯ ಬಾಯಿ ಅಭಿವೃದ್ಧಿಗೊಳ್ಳದೇ ಏನನ್ನೂ ತಿನ್ನಲು ಯೋಗ್ಯವಾಗಿರುವುದಿಲ್ಲ (vestigial mouth parts). ಲಾರ್ವಾವಸ್ಥೆಯಲ್ಲಿ ತಿಂದ ಆಹಾರವನ್ನೇ ಶೇಖರಿಸಿಕೊಂಡು ಸಂಪೂರ್ಣ ಜೀವನವನ್ನು ಪೂರೈಸುತ್ತವೆ. ಇದರ ಮರಿಗಳು ಕಂಬಳಿಹುಳುಗಳಂತಿದ್ದು, ಮೈತುಂಬ ಕೇಶಹೊದಿಕೆ, ಕಿರುಗಾಲುಗಳೂ ಚರ್ಮ ಮತ್ತು ಕೂದಲುಗಳಿಂದ ಆವರಿಸಿವೆ. ಹಾಗಾಗಿ ಈ ಕೀಟಗಳನ್ನು ಲ್ಯಾಪೆಟ್ ಪತಂಗಗಳೆಂದೂ (Lappet moth) ಕರೆಯುವುದುಂಟು.

ಮರಿಗಳು ತನ್ನ ಎಂಜಲನ್ನು ನೂಲನ್ನಾಗಿ ಪರಿಪರ್ತಿಸಿ ಕವಲೊಡೆದ ರೆಂಬೆ, ಕೊಂಬೆಗಳಲ್ಲಿ ಹತ್ತಿಯ ಬಟ್ಟೆಯಂತೆ, ಥೇಟ್ ವಲಸಿಗರ ಜೋಪಡಿಗಳಂತೆ, ಗೂಡುಗಳನ್ನು ಕಟ್ಟಿಕೊಂಡು ಅದರೊಳಗೆ ನೆಲೆಸುತ್ತವೆ. ಈ ಪ್ರಕ್ರಿಯೆಯಿಂದ ಇವಕ್ಕೆ ಟೆಂಟ್ ಕ್ಯಾಟರ್‌ ಪಿಲ್ಲರ್‌ಗಳೆಂದೂ (Tent caterpillar) ಹೆಸರಿದೆ. ಈ ಮರಿಗಳು ಲಾರ್ವಾವಸ್ಥೆ ಮತ್ತು ಕೋಶಾವಸ್ಥೆ ಪೂರೈಸಿ ಪ್ರೌಢ ಪತಂಗಗಳಾಗಿ ಹೊರಹೊಮ್ಮುತ್ತವೆ. ಹೆಣ್ಣು ಪತಂಗವು ಕೋಶದಿಂದ ಹೊರ ಬಂದ ತಕ್ಷಣ ಫಿರಮೋನ್ ಎಂಬ ರಾಸಾಯನಿಕ ಸ್ರವಿಸಿ ಗಂಡು ಪತಂಗವನ್ನು ಆಕರ್ಷಿಸಿ ಸಂಜೆ ಹೊತ್ತಿನಲ್ಲಿ ಸಮಾಗಮವಾಗುತ್ತದೆ. ಅದೇ ಸಂಜೆ ಹೆಣ್ಣು ಮರದ ಕವಲೊಡೆದ ರೆಂಬೆ, ಕೊಂಬೆಗಳ ಸುತ್ತ ಮೊಟ್ಟೆಗಳನ್ನಿಟ್ಟು ಜೋಪಡಿಗಳನ್ನು ನಿರ್ಮಿಸಲು ಅನುವು ಮಾಡಿಕೊಡುತ್ತದೆ.

ಮೊಟ್ಟೆಗಳು ಒಣಗಬಾರದೆಂದು ನೊರೆಯಂತಹ ದ್ರವವನ್ನು ಹರಡುತ್ತದೆ. ಮೊಟ್ಟೆಯಿಟ್ಟ ಕೆಲವೇ ಗಂಟೆಗಳಲ್ಲಿ ಹೆಣ್ಣು ಸಾವನ್ನಪ್ಪುತ್ತದೆ. ಇಲ್ಲಿ ಹೆಣ್ಣಿನ ಜೀವಿತಕಾಲ ತೀರಾ ಕ್ಷಣಿಕವಾಗಿದ್ದು ಮಕ್ಕಳನ್ನು ನೋಡುವ ಸೌಭಾಗ್ಯವೂ ಇಲ್ಲ.

ಗಂಡು ಪತಂಗವು ಒಂದೆರೆಡು ವಾರ ಜೀವಿಸುತ್ತದೆ. ಸಾಮಾನ್ಯವಾಗಿ ಈ ಪತಂಗಗಳು ನಿಶಾಚರಿಗಳು. ಈ ಪತಂಗದ ಮರಿಗಳು (ಕಂಬಳಿಹುಳುಗಳು) ಪೀಡೆಗಳಾಗಿ ಪರಿಣಮಿಸಿ ಹಲವು ಬೆಳೆಗಳನ್ನು ತಿಂದು ನಾಶ ಮಾಡುತ್ತವೆ.

ನೂರ್ ಸಮದ್ ಅಬ್ಬಲಗೆರೆ ಅವರು ಕೃಷಿ ಅಧಿಕಾರಿಗಳು, ಶಿವಮೊಗ್ಗ

ಚಿತ್ರಗಳು : ಲೇಖಕರವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT