ಶುಕ್ರವಾರ, ಫೆಬ್ರವರಿ 26, 2021
26 °C
ಪ್ರಾಣಿ ಪ್ರಪಂಚ

‘ಐಸ್‌ಏಜ್’ ಚಿತ್ರದ ವೀಸೆಲ್ ‘ಬಕ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಐಸ್‌ ಏಜ್‌ ಚಿತ್ರದ ಮೂರನೇ ಭಾಗದಲ್ಲಿ ಗಮನ ಸೆಳೆಯುವ ಪಾತ್ರ ‘ಬಕ್‌’. ಮುಂಗುಸಿ ಜಾತಿಗೆ ಸೇರಿದ ಈ ಪ್ರಾಣಿ, ಚಿತ್ರದಲ್ಲಿ ದೈತ್ಯ ಡೈನೊಸಾರ್‌ ಮೇಲೆ ಹಗೆ ಸಾಧಿಸುವುದು ಸ್ವಾರಸ್ಯ. ಈ ಮುಂಗುಸಿಯನ್ನು ಇಂಗ್ಲಿಷ್‌ನಲ್ಲಿ ವೀಸೆಲ್‌ (Weasel) ಎನ್ನುತ್ತಾರೆ. ಇಂದಿನ ಪ್ರಾಣಿ ಪ್ರಂಪಂಚದಲ್ಲಿ ಇದರ ಬಗ್ಗೆ ತಿಳಿಯೋಣ. ಇದರ ವೈಜ್ಞಾನಿಕ ಹೆಸರು ಮಸ್ಟೆಲಾ ನಿವಲಿಸ್‌ (Mustela nivalis). ಇದು ಬ್ರಿಟನ್‌ನಲ್ಲಿ ಕಾಣಸಿಗುವ ಪುಟ್ಟ ಮಾಂಸಾಹಾರಿ ಪ್ರಾಣಿಯಾಗಿದ್ದು, ಮಸ್ಟೆಲಿಡ್ಸ್ (Mustelids) ಕುಟುಂಬಕ್ಕೆ ಸೇರಿದೆ.

ಹೇಗಿರುತ್ತದೆ?

ಕಂದು ಮತ್ತು ಬಿಳಿ ಬಣ್ಣದ ದಟ್ಟವಾದ ಕೂದಲಿನಿಂದ ಕೂಡಿರುವ ತುಪ್ಪಳ ದೇಹವನ್ನು ಆವರಿಸಿರುತ್ತದೆ. ತಳಿಗನುಗುಣವಾಗಿ ಬಣ್ಣಗಳಲ್ಲಿ ವ್ಯತ್ಯಾಸಗಳಿರುತ್ತವೆ. ನೀಳವಾದ ದೇಹವನ್ನು ಹೊಂದಿರುವುದು ಇವುಗಳ ವಿಶೇಷ. ದೇಹದಂತೆ ಕತ್ತು ಕೂಡ ನೀಳವಾಗಿರುತ್ತದೆ. ಕಾಲುಗಳು ಪುಟ್ಟದಾಗಿದ್ದು, ಐದು ಬೆರಳುಗಳು ಇರುತ್ತವೆ. ಬಾಲ ನೀಳವಾಗಿದ್ದು ದಟ್ಟವಾಗಿ ಕೂದಲು ಬೆಳೆದಿರುತ್ತವೆ. ಮೂತಿ ನೀಳವಾಗಿದ್ದು, ಮೀಸೆಗಳು ಬೆಳೆದಿರುತ್ತವೆ. ಕಣ್ಣುಗಳು ಪುಟ್ಟದಾಗಿದ್ದು, ಕಂದು ಅಥವಾ ಕಪ್ಪು ಬಣ್ಣದಲ್ಲಿರುತ್ತವೆ. ಕಿವಿಗಳು ಅಗಲವಾಗಿ, ದೊಡ್ಡದಾಗಿದ್ದು, ವೃತ್ತಾಕಾರದಲ್ಲಿರುತ್ತವೆ.

ಎಲ್ಲಿದೆ?

ಮಧ್ಯ ಯುರೋಪ್ ಮತ್ತು ಪಶ್ಚಿಮ ಯುರೋಪ್‌ ರಾಷ್ಟ್ರಗಳಲ್ಲಿ ಇದರ ಸಂತತಿ ಹೆಚ್ಚಾಗಿದೆ. ಉತ್ತರ ಆಫ್ರಿಕಾ, ಪಶ್ಚಿಮ ಏಷ್ಯಾ, ಉತ್ತರ ಅಮೆರಿಕದ ಕೆಲವು ಭಾಗಗಳಲ್ಲೂ ಇದನ್ನು ಕಾಣಬಹುದು. ಆಸ್ಟ್ರೇಲಿಯಾ ಖಂಡದ ನ್ಯೂಜಿಲೆಂಡ್‌ಗೂ ಇದನ್ನು ಪರಿಚಯಿಸಲಾಗಿದೆ. ಬಂಡೆಗಳ ಬಿರುಕುಗಳಲ್ಲಿ, ನೆಲದಡಿಯ ಬಿಲಗಳಲ್ಲಿ ವಾಸಿಸುತ್ತದೆ. ಮುಂಗುಸಿ ಜಾತಿಗೆ ಸೇರಿದ ಸ್ಟೋಟ್‌ಗಳಂತೆಯೇ ಕಂಡರೂ ಬಾಲದ ತುದಿಯಲ್ಲಿ ಇದಕ್ಕೆ ಕಪ್ಪು ಬಣ್ಣದ ಕೂದಲು ಇರುವುದಿಲ್ಲ.

ಇದು ಇಂಗ್ಲೆಂಡ್, ಸ್ಕಾಟ್ಲೆಂಡ್‌ ಮತ್ತು ವೇಲ್ಸ್‌ನಲ್ಲಿ ಹೆಚ್ಚಾಗಿದ್ದರೂ ಐರ್ಲೆಂಡ್‌ನಲ್ಲಿ ಕಾಣದಿರುವುದು ಸ್ವಾರಸ್ಯ.

ಜೀವನಕ್ರಮ ಮತ್ತು ವರ್ತನೆ

ಇದು ನೋಡುವುದಕ್ಕೆ ಮುದ್ದಾಗಿ ಕಂಡರೂ ಉಗ್ರಸ್ವಭಾವದ ಪ್ರಾಣಿ. ದಿನವಿಡೀ ಆಹಾರ ಅರಸುತ್ತಾ ಒಂಟಿಯಾಗಿ ಸುತ್ತುತ್ತದೆ. ಆಹಾರ ಲಭಿಸುವ ಪ್ರಮಾಣಕ್ಕೆ ಅನುಗುಣವಾಗಿ ಪ್ರತಿಯೊಂದ ವೀಸೆಲ್ 4ರಿಂದ 8 ಹೆಕ್ಟೇರ್ ಪ್ರದೇಶದಲ್ಲಿ ಗಡಿ ಗುರುತಿಸಿಕೊಂಡಿರುತ್ತವೆ. ಮರಗಳನ್ನು ಏರುವ ಕಲೆ ಕರಗತ ಮಾಡಿಕೊಂಡಿದೆ. ಹಗಲು ಮತ್ತು ರಾತ್ರಿ ಎರಡೂ ಅವಧಿಯಲ್ಲಿ ಚುರುಕಾಗಿರುವುದು ಇದರ ವಿಶೇಷ. ನಿತ್ಯ, ದೇಹದ ತೂಕದ ಮೂರನೇ ಒಂದು ಭಾಗದಷ್ಟು ಆಹಾರ ಸೇವಿಸುತ್ತದೆ. ಸಂತಾನೋತ್ಪತ್ತಿ ಸಮಯದಲ್ಲಿ ಮಾತ್ರ ಗಂಡು ವೀಸೆಲ್ ಹೆಣ್ಣು ವೀಸೆಲ್‌ಗಾಗಿ ಅರಸುತ್ತಾ ಇತರೆ ವೀಸೆಲ್‌ಗಳ ಗಡಿಯೊಳಗೆ ಪ್ರವೇಶಿಸುತ್ತದೆ.

ಸಂತಾನೋತ್ಪತ್ತಿ

ಏಪ್ರಿಲ್‌ನಿಂದ ಆಗಸ್ಟ್‌ ತಿಂಗಳ ನಡುವಿನ ಅವಧಿ ಇದರ ಸಂತಾನೋತ್ಪತ್ತಿಗೆ ಪ್ರಶಸ್ತವಾಗಿರುತ್ತದೆ. ಈ ಸಮಯದಲ್ಲಿ ಮಾತ್ರ ಗಂಡು ಮತ್ತು ಹೆಣ್ಣು ಜೊತೆಯಾಗಿರುತ್ತವೆ. ವರ್ಷದಲ್ಲಿ ಒಂದು ಅಥವಾ ಎರಡು ಬಾರಿ ಮಾತ್ರ ಸಂತಾನೋತ್ಪತ್ತಿ ನಡೆಸುವ ಇದು, 5 ವಾರ ಗರ್ಭಧರಿಸಿ 4ರಿಂದ 6 ಮರಿಗಳಿಗೆ ಜನ್ಮ ನೀಡುತ್ತದೆ.

ಮರಿಗಳು ಜನಿಸಿದ 4 ವಾರಗಳವರೆಗೆ ತಾಯಿ ಆರೈಕೆಯಲ್ಲೇ ಬೆಳೆಯುತ್ತವೆ. ಅಲ್ಲಿಯವರೆಗೆ ಸ್ಪಷ್ಟವಾಗಿ ನೋಡುವ ಮತ್ತು ಕೇಳುವ ಸಾಮರ್ಥ್ಯ ಇರುವುದಿಲ್ಲ. 5ರಿಂದ 8 ವಾರಗಳ ನಂತರ ತಾಯಿಯೊಂದಿಗೆ ಆಹಾರ ಅರಸಿ ಹೋಗುತ್ತದೆ. ವರ್ಷದ ನಂತರ ವಯಸ್ಕ ಹಂತ ತಲುಪುತ್ತದೆ.

ಗೂಬೆ, ಬೆಕ್ಕು, ನರಿ, ತೋಳಗಳು ಇವನ್ನು ಹೆಚ್ಚಾಗಿ ಬೇಟೆಯಾಡುತ್ತವೆ. ಪ್ರಾಣಾಪಾಯ ಸ್ಥಿತಿಯಲ್ಲಿ ಇದು ಹೆಚ್ಚು ಚುರುಕಾಗಿ ವರ್ತಿಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತದೆ.

ಆಹಾರ

ಇದು ಸಂಪೂರ್ಣ ಮಾಂಸಾಹಾರಿ ಪ್ರಾಣಿ. ಸರೀಸೃಪಗಳು, ಮೊಲ, ಇಲಿಗಳನ್ನು ಬೇಟೆಯಾಡಿ ಭಕ್ಷಿಸುತ್ತದೆ. ಕಪ್ಪೆ, ಹಕ್ಕಿಗಳನ್ನೂ ತಿನ್ನುತ್ತದೆ. ಮರಗಳನ್ನು ಏರಿ ಹಕ್ಕಿಗಳ ಮೊಟ್ಟೆಗಳನ್ನೂ ಕಬಳಿಸುತ್ತದೆ.

ಸ್ವಾರಸ್ಯಕರ ಸಂಗತಿಗಳು

* ಗಾತ್ರದಲ್ಲಿ ತನಗಿಂತಲೂ ದೊಡ್ಡದಾದ ಕಾಡು ಮೊಲ ಮತ್ತು ಅಳಿಲುಗಳನ್ನು ಇದು ಬೇಟೆಯಾಡುತ್ತದೆ.

* ಅಪಾಯ ಎಂದೆನಿಸಿದರೆ ಮಾನವರ ಮೇಲೂ ದಾಳಿ ಮಾಡುತ್ತದೆ.

* ಇದರಲ್ಲಿ 10 ತಳಿಗಳನ್ನು ಗುರುತಿಸಲಾಗಿದೆ.

* ಚಳಿ ಮತ್ತು ಬೇಸಿಗೆ ಎರಡೂ ವಾತಾವರಣಗಳಿಗೆ ತ‌ಕ್ಕಂತೆ ಹೊಂದಿಕೊಳ್ಳುವ ಸಾಮರ್ಥ್ಯ ಇದಕ್ಕಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು