‘ನಗರದ ವಿದ್ಯಾವಂತರಿಗೆವನ್ಯ ಜೀವಿಗಳ ಸಂರಕ್ಷಣೆ ಮಹತ್ವ ತಿಳಿಸಿಕೊಡಬೇಕಿದೆ...’

7

‘ನಗರದ ವಿದ್ಯಾವಂತರಿಗೆವನ್ಯ ಜೀವಿಗಳ ಸಂರಕ್ಷಣೆ ಮಹತ್ವ ತಿಳಿಸಿಕೊಡಬೇಕಿದೆ...’

Published:
Updated:
Deccan Herald

ವನ್ಯಜೀವಿಗಳ ಬಗ್ಗೆ ತಿಳಿವಳಿಕೆ ನೀಡುವುದು ಎಂದರೆ ವನ್ಯಸಂಪತ್ತು–ಮರಗಳ ಬಗ್ಗೆ ಕಾಳಜಿ ವಹಿಸುವುದು ಎಂದೇ ಅರ್ಥ. ಮರಗಳು ಇರದೇ ವನ್ಯಜೀವಿಗಳಿಲ್ಲ, ವನ್ಯಜೀವಿಗಳಿಲ್ಲದೇ ಕಾಡು ಸಮೃದ್ಧವಾಗುವುದೂ ಕಷ್ಟ. ಇವೆಲ್ಲ ಒಂದಕ್ಕೊಂದು ಬೆಸೆದುಕೊಂಡಿರುವ ಜೀವಜಾಲದ ವಿಸ್ಮಯ.

ವನ್ಯಜೀವಿಗಳಲ್ಲಿ ವಿವಿಧ ಪ್ರಾಣಿ, ಪಕ್ಷಿಗಳು ಸೇರುತ್ತವೆ. ಮರಕ್ಕಾದರೆ ಒಂದೇ ಕಡೆ ಜೀವನ,ಅವುಗಳಿಗೆ ಬೇಕಾದ ಗೊಬ್ಬರ ಪ್ರಾಣಿ, ಪಕ್ಷಿಗಳಿಂದ ಸಿಕ್ಕಿದರೆ, ಪರಾಗಸ್ಪರ್ಶವನ್ನು ಕೆಲವು ಪಕ್ಷಿಗಳು, ಚಿಟ್ಟೆ, ಕೀಟಗಳು ಸೇರಿ ಮಾಡುತ್ತವೆ.ಹಾಗೆಯೇ ಪ್ರಾಣಿಗಳು ಕೂಡ ಕಾಡನ್ನೇ ಆಶ್ರಯಿಸಿ ಬದುಕುತ್ತವೆ.

ವನ್ಯಜೀವಿಗಳಿಗೆ ಬಹಳಷ್ಟು ಸಲ ನೈಸರ್ಗಿಕವಾಗಿ ಬರುವ ವಿಪತ್ತು, ರೋಗ ರುಜಿನಗಳಿಗಿಂತ ಮಾನವನಿಂದ ಬರುವ ಆಪತ್ತುಗಳೇ ಹೆಚ್ಚು. ಮಾಂಸಕ್ಕಾಗಿ ಬೇಟೆಯಾಡುವುದು ಒಂದೆಡೆಯಾದರೆ, ಮೋಜಿನ ಪ್ರವಾಸಕ್ಕಾಗಿ ಬರುವ ಜನರು ಮಾಡುವ ಅನಾಹುತಗಳು ಅನೇಕ. ಪ್ರವಾಸಕ್ಕೆಂದು ಕಾಡುಮೇಡು ಅಲೆಯುವ ಜನರು ಪ್ಲಾಸ್ಟಿಕ್‌ ಬಾಟಲ್, ತಿಂಡಿ ತಿನಿಸುಗಳನ್ನು ಕಟ್ಟಿಕೊಂಡು ಬಂದ ಪಾಲಿಥಿನ್ ಬ್ಯಾಗ್‌ಗಳು, ಗುಟ್ಕಾ, ತಂಬಾಕು ಪಾಕೀಟುಗಳನ್ನು ಕಾಡಿನಲ್ಲಿ ಬೀಸಾಡಿ ಹೋಗುತ್ತಾರೆ. ಅವುಗಳನ್ನು ತಿನ್ನುವ ಪ್ರಾಣಿಗಳು ಬಹಳಷ್ಟು ಸಲ ಜೀರ್ಣವಾಗದೇ ಅಸುನೀಗಿದ ಉದಾಹರಣೆಗಳಿವೆ. ಹೀಗೆ ಸತ್ತುಬಿದ್ದು ಪ್ರಾಣಿಗಳ ಹೊಟ್ಟೆಯಲ್ಲಿ ಕೇಜಿಗಟ್ಟಲೇ ಪಾಲಿಥಿನ್‌ ಬ್ಯಾಗ್‌ಗಳು ದೊರಕಿವೆ. ಈ ಬಗ್ಗೆ ಸಾಕಷ್ಟು ಎಚ್ಚರಿಕೆ ವಹಿಸಲೇ ಬೇಕಾಗಿದೆ.

ಇನ್ನು ಆಹಾರಕ್ಕಾಗಿ ಆಡು, ಕುರಿಗಳನ್ನು ಸಾಕುವವರು ಇವುಗಳನ್ನು ಮೇಯಿಸಲು ಕಾಡಿಗೆ ಕರೆದುಕೊಂಡು ಹೋಗುತ್ತಾರೆ. ಆದರೆ ಮತ್ತೆ ಸಮೃದ್ಧವಾಗಿ ಹುಲ್ಲು ಬೆಳೆಯಲೆಂದು ಕಾಡಿಗೆ ಬೆಂಕಿ ಹಾಕಿ ಅನಾಹುತ ಮಾಡುತ್ತಾರೆ. ಕಾಡಿನ ಬೆಂಕಿಯಿಂದ ಭಾರಿ ಅನಾಹುತಗಳಾಗುತ್ತವೆ. ಎಷ್ಟೋ ಪ್ರಾಣಿ, ಪಕ್ಷಿಗಳು ಸಾಯುತ್ತವೆ. ಮಾಂಸಕ್ಕಾಗಿ ಪ್ರಾಣಿಗಳನ್ನು ಸಾಕುವುದಾದರೆ ಅವರು ತಮ್ಮ ಮನೆಗಳಲ್ಲಿ ಸಾಕಿಕೊಳ್ಳುವುದು ಶ್ರೇಯಸ್ಕರ. ಅಷ್ಟಕ್ಕೂ ಇಲ್ಲಿ ದೊಡ್ಡ ಮಟ್ಟದಲ್ಲಿ ಸಾಕುವ ಪ್ರಾಣಿಗಳ ಮಾಂಸ ರಫ್ತಾಗುವುದು ವಿದೇಶಗಳಿಗೆ. ಒಂದು ಕೆ.ಜಿ.ಮಾಂಸಕ್ಕೆ 35 ಸಾವಿರ ಲೀಟರ್‌ ನೀರು ಖರ್ಚಾಗುತ್ತದೆ. ಹೀಗಾಗಿ ನೀರಿನ ಮಿತವ್ಯಯ ಕೂಡ ಗಮನ ಹರಿಸುವಂಥದ್ದೇ ಆಗಿದೆ.

ಇನ್ನು ಬಹಳಷ್ಟು ಜನರು ಶೋಕಿಗಾಗಿ ಮನೆಯಲ್ಲಿ ಗಿಳಿಸಾಕುವುದು, ಮೀನುಗಳನ್ನು ಸಾಕುವುದು, ಪ್ರಾಣಿ, ಪಕ್ಷಿಗಳನ್ನು ಸಾಕುವುದು ಮಾಡುತ್ತಾರೆ. ಇದು ಕೂಡ ತಪ್ಪು. ಇವುಗಳನ್ನು ಕೂಡ ತಡೆಯಬೇಕಿದೆ. ಜತೆಗೆ ಮನೆಯಲ್ಲಿ ವ್ಯರ್ಥವಾಗಿ ಚೆಲ್ಲುವ ನೀರು, ಆಹಾರದ ಬಗ್ಗೆಯೂ ಗಮನ ಹರಿಸಬೇಕು. ಇವುಗಳ ಬಗ್ಗೆಲ್ಲ ಮಕ್ಕಳಿಗೆ ಮಾಹಿತಿ ನೀಡಿ ಅರಿವು ಮೂಡಿಸಬೇಕಿದೆ.

ಬಹಳಷ್ಟು ಸಲ ವನ್ಯಸಂಪತ್ತು, ವನ್ಯ ಜೀವಿಗಳ ಸಂರಕ್ಷಣೆ ಬಗ್ಗೆ , ಪರಿಸರ ಉಳಿಸುವ ಬಗ್ಗೆ ಗ್ರಾಮೀಣ ಭಾಗದವರಿಗೆ ಅರಿವು ಮೂಡಿಸುವುದಕ್ಕಿಂತ ನಗರದ, ವಿದ್ಯಾವಂತ ಜನರಿಗೇ ಹೆಚ್ಚಿನ ಅರಿವು ಮೂಡಿಸಬೇಕಾದ ಅಗತ್ಯವಿದೆ ಎನ್ನುತ್ತಾರೆ ಧಾರವಾಡ ವಲಯದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ಸಿ. ಅವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !