ಶನಿವಾರ, ನವೆಂಬರ್ 16, 2019
24 °C

ಪ್ಲಾಸ್ಟಿಕ್‌ ವಿರುದ್ಧ ‘ಪ್ಲಾಗ್ ರನ್’

Published:
Updated:
Prajavani

ಪ್ಲಾಸ್ಟಿಕ್ ಮಾಲಿನ್ಯದ ಅಪಾಯವನ್ನು ತಡೆಗಟ್ಟಲು ಯುನೈಟೆಡ್ ವೇ ಇಂಡಿಯಾ ಮತ್ತು ಗೋ ನೇಟಿವ್ ವಿಭಿನ್ನ ಕಾರ್ಯಕ್ರಮ ಪ್ಲಾಗ್ ರನ್ ಆಯೋಜಿಸಿದೆ. ಜನರು ತಮ್ಮ ಆಯ್ಕೆಯ ಸ್ಥಳಗಳಲ್ಲಿ ಹಾಗೂ ಮಾರ್ಗಗಳಲ್ಲಿ ಓಡುತ್ತಾ ಅಥವಾ ನಡೆಯುತ್ತಾ ಪ್ಲಾಸ್ಟಿಕ್  ಹೆಕ್ಕುವ ಕಾರ್ಯಕ್ರಮವಿದು.

ಗಾಂಧಿ ಜಯಂತಿ ಹಾಗೂ ಸ್ವಚ್ಚ ಭಾರತ ಅಭಿಯಾನ ಪ್ರಯುಕ್ತವಾಗಿ ಇಂಡಿಯಾ ಪ್ಲಾಗ್ ರನ್ ಕಾರ್ಯಕ್ರಮವನ್ನು ಅಕ್ಟೋಬರ್ 2 ರಂದು ದೇಶದಾದ್ಯಂತ 50 ಪ್ರಮುಖ ನಗರಗಳಲ್ಲಿ ಆಯೋಜಿಸಲಾಗಿದೆ.

2018ರಂದು ಏರ್ಪಡಿಸಿದ್ದ ಪ್ಲಾಗ್ ರನ್‌ನಲ್ಲಿ ಕೇವಲ 12 ಗಂಟೆಗಳಲ್ಲಿ 7,000 ಜನರು 33.4 ಟನ್ ಪ್ಲಾಸ್ಟಿಕ್ ಕಸವನ್ನು ಸಂಗ್ರಹಿಸಿದ್ದು ಗಿನ್ನಿಸ್ ದಾಖಲೆ ಪುಸ್ತಕ ಸೇರಿತ್ತು.

‘ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಪ್ರತಿದಿನ 25,940 ಟನ್ ಪ್ಲಾಸ್ಟಿಕ್ ಕಸ ಉತ್ಪಾದನೆಯಾಗುತ್ತಿದೆ. ಇದರಲ್ಲಿ  10,000 ಟನ್ ಕಸವು ಬೀದಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲೇ ಉಳಿಯುತ್ತಿದೆ. ಇದು ನೀರಿನ ಮೂಲಗಳಿಗೆ ಸೇರಿ  ಪರಿಸರ ಹಾಗೂ ಸಮುದ್ರ ಜಲಚರಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ’ ಎನ್ನುತ್ತಾರೆ ಯುನೈಟೆಡ್‌ ವೇ ಇಂಡಿಯಾ ಸಂಸ್ಥೆಯ ಸಿ.ಇ.ಓ ಮನೀಷ್ ಮೈಕಲ್.

‘ಇಂಡಿಯ ಪ್ಲಾಗ್ ರನ್ ಮರುಬಳಕೆಯನ್ನು ಪ್ರೋತ್ಸಾಹಿಸುತ್ತದೆ. ಪ್ಲಾಸ್ಟಿಕ್ ಕಸದ ಗುಂಡಿಗಳಲ್ಲಿ ಶೇಖರಣೆಯಾಗದೇ ಹೊಸ ರೂಪ ಪಡೆದು ಮರು ಬಳಕೆಯಾಗಬೇಕಿದೆ. ಯುವ ಸಮುದಾಯವನ್ನು ಒಳಗೊಂಡು, ವಿವಿಧ ಸ್ಥಳಗಳಲ್ಲಿ ಸಂರಕ್ಷಣಾ ಮಾದರಿಗಳನ್ನು ಉತ್ತೇಜಿಸುವ ದೂರ ದೃಷ್ಟಿಯನ್ನು ಪ್ಲಾಗ್ ರನ್ ಕಾರ್ಯಕ್ರಮ ಹೊಂದಿರುತ್ತದೆ. ಜನರಲ್ಲಿ ಅರಿವು ಮೂಡಿಸುವುದಕ್ಕೆ ಮತ್ತು ಪರಿಸರ ಸಂರಕ್ಷಣೆಗೆ ಆದ್ಯತೆ ನೀಡುತ್ತದೆ’ ಎಂದು ಯುನೈಟೆಡ್‌ ವೇ ಇಂಡಿಯಾ ಸಂಸ್ಥೆಯ ಅಧ್ಯಕ್ಷ ಶೈಲೇಶ್
ಹರಿಭಕ್ತಿ ಹೇಳಿದರು.

‘ಪ್ಲಾಗ್ ರನ್ ಎನ್ನುವುದು ಸ್ವೀಡನ್ ದೇಶ ಪರಿಚಯಿಸಿದ ಪರಿಕಲ್ಪನೆ. ಅದು ಕ್ರಮೇಣ ಯುರೋಪ್ ದೇಶಗಳಲ್ಲಿ ರೂಢಿಗೆ ಬಂದಿದೆ’ ಎಂದು ಗೋ ನೇಟಿವ್‌ನ ಅನ್ವಿತಾ ಪ್ರಶಾಂತ್‌ ಮಾಹಿತಿ ನೀಡಿದರು.

‘ಇಂಡಿಯಾ ಪ್ಲಾಗ್ ರನ್, ಸುಮಾರು 500 ಸ್ಥಳಗಳಲ್ಲಿ ಆಯೋಜಿಸಲಾಗುತ್ತಿದೆ. ಇದರಲ್ಲಿ  ನಾಗರಿಕರು ಭಾಗವಹಿಸಿ ಪರಿಸರ ಸ್ವಚ್ಛತೆಗೆ ನೆರವಾಗಲು ಅವಕಾಶ ಒದಗಿಸುತ್ತದೆ. ಕಾರ್ಪೋರೇಟ್ ಕಂಪನಿಗಳು ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಕಾರ್ಯರೂಪಕ್ಕೆ ತರಲು ಇದೊಂದು ಸುವರ್ಣಾವಕಾಶ’ ಎನ್ನುತ್ತಾರೆ ಕಾರ್ಯಕ್ರಮದ ಸಂಚಾಲಕ ರಾಮಕೃಷ್ಣ ಗಣೇಶ್. 

ಆಸಕ್ತರು  https://in.bookmyshow.com/sports/india-plog-run/ET00109980 ಅಥವಾ www.indiaplog.run ವೆಬ್‌ಸೈಟ್ ಮೂಲಕ ಹೆಸರು ನೊಂದಾಯಿಸಬಹುದು. ಓಟಗಾರರಿಗೆ ಗ್ಲೌಸ್, ಮಾಸ್ಕ್ ಮತ್ತು ಆಪ್ರನ್ ಕೂಡ ನೀಡಲಾಗುವುದು. ವೈಯಕ್ತಿಕ ಮತ್ತು ಕುಟುಂಬ ಸಮೇತವಾಗಿಯೂ ಭಾಗವಹಿಸಬಹುದು.

ಪ್ರತಿಕ್ರಿಯಿಸಿ (+)