ಅರಿವಿನ ‘ಸ್ವಚ್ಛತಾ ಉತ್ಸವ’

ಮಂಗಳವಾರ, ಜೂನ್ 25, 2019
25 °C

ಅರಿವಿನ ‘ಸ್ವಚ್ಛತಾ ಉತ್ಸವ’

Published:
Updated:
Prajavani

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಪುಟ್ಟ ಗ್ರಾಮ ಅಡಿಗೋಣದಲ್ಲಿ ಹುಟ್ಟಿದ ‘ಅರಿವು ಬಳಗ’, ಸುತ್ತಮುತ್ತಲಿನ ಗ್ರಾಮಗಳಲ್ಲಿ ವಾರಕ್ಕೊಮ್ಮೆ ‘ಸ್ವಚ್ಛತಾ ಉತ್ಸವ’ ನಡೆಸುತ್ತಿದೆ. ಪ್ರತಿ ಭಾನುವಾರ ನಡೆಯುವ ಈ ಸ್ವಚ್ಛತಾ ಸೇವೆಯಲ್ಲಿ ಯುವಕರು ಸ್ವಯಂಪ್ರೇರಿತರಾಗಿ ಪಾಲ್ಗೊಂಡರೆ, ಹಿರಿಯರು, ಗ್ರಾಮೀಣ ಮಹಿಳೆಯರು, ನಿವೃತ್ತ ಅಧಿಕಾರಿಗಳು ಅವರಿಗೆ ಸಾಥ್ ನೀಡುತ್ತಿದ್ದಾರೆ.

ಅಂಕೋಲಾ ತಾಲ್ಲೂಕು ವ್ಯಾಪ್ತಿಯ ಬೈಲಕೇರಿ, ಅಡಿಗೋಣ, ಹೆಗ್ರೆ, ಕೇಶಗುಡ್ಡೆ, ಕುಮಟಾ ತಾಲ್ಲೂಕಿನ ಗೋಕರ್ಣ ವ್ಯಾಪ್ತಿಯ ಬಂಕಿಕೊಡ್ಲ, ಹನೇಹಳ್ಳಿ ಗ್ರಾಮದ ಸುತ್ತಮುತ್ತಲಲ್ಲಿ ಈ ಬಳಗದ ಸದಸ್ಯರು ಸ್ವಚ್ಛತಾ ಕಾರ್ಯ ಮಾಡುತ್ತಿದ್ದಾರೆ. ಮೂರು ಧ್ಯೇಯೋದ್ದೇಶಗಳೊಂದಿಗೆ ಹುಟ್ಟಿಕೊಂಡಿರುವ ಬಳಗವು ಜೂನ್ 2ಕ್ಕೆ 71ನೇ ವಾರದ ಸ್ವಚ್ಛತಾ ಕಾರ್ಯವನ್ನೂ ಪೂರ್ಣಗೊಳಿಸಿದೆ. 

ಯೋಗಾಭ್ಯಾಸ ಮಾಡಲು ಸಮೀಪದ ಹನೇಹಳ್ಳಿಗೆ ಬರುವ ವಿದೇಶಿಗರೂ ಈ ಬಳಗದೊಂದಿಗೆ ಸ್ವಯಂ ಪ್ರೇರಿತರಾಗಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಗಿಡಗಳಿಗೆ ನೀರೆರೆದು ತಂಡವನ್ನು ಶ್ಲಾಘಿಸುತ್ತಾರೆ.

‘ಸ್ವಚ್ಛ ನಮ್ಮೂರು’ ಮೊದಲ ಆದ್ಯತೆ 

‘ಊರು ಸ್ವಚ್ಛವಾದರೆ ದೇಶ ಸ್ವಚ್ಛ’ ಎಂಬಂತೆ, ‘ಸ್ವಚ್ಛ ನಮ್ಮೂರು’ ಕಾರ್ಯಕ್ಕೆ ಬಳಗ ಹೆಚ್ಚಿನ ಪ್ರಾಮುಖ್ಯ ನೀಡುತ್ತಿದೆ. ಊರ ಸುತ್ತಮುತ್ತಲಲ್ಲಿ ಸದಸ್ಯರೆಲ್ಲ ಸುತ್ತಾಡಿ, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸುತ್ತಾರೆ. ಅದನ್ನು ಒಂದು ರಿಕ್ಷಾದಲ್ಲಿ ಸಮೀಪದ ಗುಡ್ಡಕ್ಕೆ ಕೊಂಡೊಯ್ಯಲಾಗುತ್ತದೆ. ಅಲ್ಲಿ ವಿಲೇವಾರಿ ಮಾಡಲು ಆಳವಾದ ಹೊಂಡವೊಂದನ್ನು ತೆಗೆಯಲಾಗಿದ್ದು, ರಿಕ್ಷಾದಲ್ಲಿ ಕೊಂಡೊಯ್ದ ತ್ಯಾಜ್ಯವನ್ನು ಅಲ್ಲಿ ಸುರಿಯಲಾಗುತ್ತದೆ. ಇದರಿಂದಾಗಿ ತ್ಯಾಜ್ಯ ಗಾಳಿಯಲ್ಲಿ ಹಾರುವುದು ತಪ್ಪುತ್ತದೆ. ಜತೆಗೆ, ಅದನ್ನು ಸುಡುವುದರಿಂದ ಉಂಟಾಗುವ ಪರಿಸರ ಮಾಲಿನ್ಯವನ್ನು ತಡೆಯುವ ಉದ್ದೇಶ ಇದರ ಹಿಂದಿದೆ.

ಆರು ಗ್ರಾಮಗಳ ಪ್ರತಿ ಮನೆಗಳಿಗೆ ಚೀಲಗಳನ್ನು ವಿತರಿಸಿದ್ದಾರೆ. ಆ ಚೀಲಗಳಲ್ಲಿ ಜನರು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸಿಡುತ್ತಾರೆ. ‘ನಮ್ಮದೇ ತಂಡ ಮನೆ ಮನೆಗೆ ತೆರಳಿ ಅದನ್ನು ಪಡೆದು, ವಿಲೇವಾರಿ ಕೂಡ ಮಾಡುತ್ತದೆ’ ಎಂದು ಬಳಗದ ಸಂಸ್ಥಾಪನಾ ಅಧ್ಯಕ್ಷ ನಾಗರಾಜ ನಾಯಕ ಮಾಹಿತಿ ನೀಡಿದರು.

‘ನಮ್ಮಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಇಲ್ಲ. ಹೀಗಾಗಿ, ತಾತ್ಕಾಲಿಕವಾಗಿ ಗುಂಡಿಯಲ್ಲಿ ತ್ಯಾಜ್ಯವನ್ನು ಸಂಗ್ರಹ ಮಾಡಿಡುತ್ತಿದ್ದೇವೆ. ಸಮೀಪದ ಗೋಕರ್ಣದಲ್ಲಿ ಘಟಕ ಸ್ಥಾಪಿಸಲು ಜಿಲ್ಲಾ ಪಂಚಾಯ್ತಿಯಿಂದ ಸಿದ್ಧತೆ ನಡೆದಿದ್ದು, ಅದು ಆರಂಭವಾದ ಬಳಿಕ ಈ ತ್ಯಾಜ್ಯವನ್ನೆಲ್ಲ ಅಲ್ಲಿಗೆ ಕೊಂಡೊಯ್ದು ವಿಲೇವಾರಿ ಮಾಡಲಾಗುತ್ತದೆ’ ಎಂದು ಅವರು ತಿಳಿಸಿದರು.

‘ವೃಕ್ಷ ರಕ್ಷಾ’ದಿಂದ ‘ಅರಿವು ಬನ’

ಬಳಗದ ಸದಸ್ಯರು, ‘ಅರಿವು ಬನ’ವೊಂದನ್ನೂ ನಿರ್ಮಿಸಿದ್ದಾರೆ. ಅರಣ್ಯ ಇಲಾಖೆಯ ಸಹಕಾರದೊಂದಿಗೆ ವಿವಿಧ ಪ್ರಭೇದದ ಹಣ್ಣಿನ ಗಿಡಗಳನ್ನು ಇಲ್ಲಿ ನೆಡಲಾಗಿದ್ದು, ಅದಕ್ಕೆ ಪ್ರತಿ ಭಾನುವಾರ ಟ್ಯಾಂಕರ್ ಮೂಲಕ ನೀರು ತಂದು ಹಾಕಲಾಗುತ್ತದೆ. ಜಾನುವಾರು ಒಳ ಪ್ರವೇಶಿಸದಂತೆ ತಂತಿ ಬೇಲಿಯನ್ನು, ಗಿಡಗಳ ಸುತ್ತಲೂ ಕಂಬವನ್ನು ಹೂತು ರಕ್ಷಿಸಲಾಗುತ್ತಿದೆ.

ಜನರಿಗಾಗಿ ‘ಜಲ ಬಂಧ’

ಅರಣ್ಯ ಇಲಾಖೆಗೆ ಸಂಬಂಧಿಸಿದ ಜಾಗದಲ್ಲಿ ಚೆಕ್ ಡ್ಯಾಂ ನಿರ್ಮಿಸಿ, ನೀರು ಇಂಗಿಸುವ ಮಹತ್ವದ ಕಾರ್ಯಕ್ಕೆ ಬಳಗದ ಸದಸ್ಯರು ಮುಂದಾಗಿದ್ದಾರೆ. ಮಳೆ ನೀರು ಸಂಗ್ರಹದಿಂದಾಗಿ ಸುತ್ತಮುತ್ತಲಿನ ಬಾವಿಗಳಲ್ಲಿ ಬೇಸಿಗೆಯಲ್ಲಿಯೂ ನೀರಿನ ಒರತೆ ಕಾಣಿಸಿಕೊಳ್ಳುತ್ತಿದೆ. ಆ ಮೂಲಕ ಜನರಿಗಾಗಿ ‘ಜಲ ಬಂಧ’ ಕಾರ್ಯವನ್ನೂ ಯಶಸ್ವಿಯಾಗಿ ನಡೆಸಲಾಗಿದೆ.

ಅರಿವು ಬಳಗದ ಬಗ್ಗೆ..

ಅಂಕೋಲಾ ತಾಲ್ಲೂಕಿನ ಅಡಿಗೋಣದ ನಾಗರಾಜ ನಾಯಕ ‘ಅರಿವು ಬಳಗ’ದ ಸಂಸ್ಥಾಪನಾ ಅಧ್ಯಕ್ಷರು. ಶಿಕ್ಷಣಾಧಿಕಾರಿ ಆಗಿದ್ದ ಸಂದರ್ಭದಲ್ಲಿ ಅವರು ಅಂಕೋಲಾ ಪಟ್ಟಣದ ವಿವಿಧ ಕಡೆಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸುತ್ತಿದ್ದರು. ‘ಸ್ವಚ್ಛ ಸುಂದರ ಅಂಕೋಲಾ ನಮ್ಮ ಕನಸು’ ಧ್ಯೇಯದೊಂದಿಗೆ ವರ್ಷಕ್ಕೂ ಅಧಿಕ ಕಾಲ ಅವರು ಸ್ವಚ್ಛತೆಯನ್ನು ಮುಂದುವರಿಸಿಕೊಂಡು ಹೋಗಿದ್ದರು. ಆದರೆ, ಕುಮಟಾದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಹಿರಿಯ ಪ್ರಾಧ್ಯಾಪಕರಾಗಿ ವರ್ಗವಾದ ನಂತರ ಸ್ವಚ್ಛತಾ ಕಾರ್ಯವೂ ಅರ್ಧಕ್ಕೆ ನಿಂತು ಹೋಗಿತ್ತು. ನಂತರದಲ್ಲಿ ಪುನಃ 2017ರ ಅಕ್ಟೋಬರ್‌ ತಿಂಗಳಲ್ಲಿ ಅವರು ‘ಅರಿವು ಬಳಗ’ವನ್ನು ಅಸ್ತಿತ್ವಕ್ಕೆ ತಂದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !