ಟಿಪ್ಪು ಜಯಂತಿ: ಬಿಜೆಪಿಯಿಂದ ಅವಕಾಶವಾದಿ ರಾಜಕಾರಣ: ಈಶ್ವರ ಖಂಡ್ರೆ

7
ಕಮಲ ಪಾಳಯದ ಮುಖಂಡರ ವಿರುದ್ಧ ಹರಿಹಾಯ್ದ ಕೆಪಿಸಿಸಿ ಕಾರ್ಯಾಧ್ಯಕ್ಷ

ಟಿಪ್ಪು ಜಯಂತಿ: ಬಿಜೆಪಿಯಿಂದ ಅವಕಾಶವಾದಿ ರಾಜಕಾರಣ: ಈಶ್ವರ ಖಂಡ್ರೆ

Published:
Updated:
Deccan Herald

ಚಾಮರಾಜನಗರ: ‘ಟಿಪ್ಪು ಸುಲ್ತಾನ್‌ ಜಯಂತಿ ವಿಚಾರದಲ್ಲಿ ಬಿಜೆಪಿ ಅವಕಾಶವಾದಿ ಮತ್ತು ಅನುಕೂಲಸಿಂಧು ರಾಜಕಾರಣ ಮಾಡುತ್ತಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರು ಶನಿವಾರ ಆಕ್ರೋಶ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಇದೇ ಬಿಜೆಪಿ ಮುಖಂಡರು ಈ ಹಿಂದೆ ಟಿಪ್ಪು ಜಯಂತಿ ಆಚರಿಸಿದ್ದರು. ಆದರೆ, ಈಗ ರಾಜಕೀಯ ದುರುದ್ದೇಶದಿಂದ ಟಿಪ್ಪು ಮತಾಂಧ ಎಂದು ಹೇಳುತ್ತಿದ್ದಾರೆ. ಇವರಿಗೆ ಯಾವ ನೈತಿಕತೆ ಇದೆ' ಎಂದು ಹರಿಹಾಯ್ದರು.

'ಶೃಂಗೇರಿ, ಕೊಲ್ಲೂರು, ಶ್ರೀರಂಗಪಟ್ಟಣ, ನಂಜನಗೂಡು ಸೇರಿದಂತೆ ಹಲವು ದೇವಾಲಯಗಳನ್ನು ಟಿಪ್ಪು ಅಭಿವೃದ್ಧಿ ಪಡಿಸಿದ್ದ' ಎಂದು ಅವರು ಹೇಳಿದರು.

ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರು ಗೈರಾಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 'ಮುಖ್ಯಮಂತ್ರಿ ಅವರು ಈಗಾಗಲೇ ಗೈರಾಗಿರುವುದಕ್ಕೆ ಕಾರಣ ನೀಡಿದ್ದಾರೆ. ಸಮ್ಮಿಶ್ರ ಸರ್ಕಾರವೇ ಜಯಂತಿ ಆಚರಣೆಗೆ ನಿರ್ಧಾರ ಕೈಗೊಂಡಿರುವುದರಿಂದ ಅವರು ಬರಲಿಲ್ಲ, ಇವರು ಬರಲಿಲ್ಲ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ' ಎಂದು ಸಮಜಾಯಿಷಿ ನೀಡಿದರು.

ಜನರ ಒಪ್ಪಿಗೆ: ರಾಜ್ಯದ ಮೈತ್ರಿ ಸರ್ಕಾರವನ್ನು ಜನ ಒಪ್ಪಿದ್ದಾರೆ. ಈಚೆಗೆ ಐದು ಕ್ಷೇತ್ರಗಳಲ್ಲಿ ನಡೆದ ಚುನಾವಣೆಯ ಫಲಿತಾಂಶ ಇದನ್ನು ಸಾರಿ ಹೇಳಿದೆ. ಮೈತ್ರಿ ಪಕ್ಷಗಳಿಗೆ ಅಭೂತಪೂರ್ವ ಗೆಲುವು ಸಿಕ್ಕಿದೆ. ಶಿವಮೊಗ್ಗದಲ್ಲಿ ಗೆಲುವಿನ ಅಂತರದಲ್ಲಿ ಭಾರಿ ಇಳಿಮುಖವಾಗಿದೆ' ಎಂದು ಅವರು ಹೇಳಿದರು.

‘ಮುಂಬರುವ ಲೋಕಸಭಾ ಚುನಾವಣೆ ಯಲ್ಲೂ ಮೈತ್ರಿ ಮಾಡಿಕೊಂಡು ಎಲ್ಲ 28 ಕ್ಷೇತ್ರ ಗಳಲ್ಲಿ ಗೆಲ್ಲಲು ಪ್ರಯತ್ನ ಮಾಡುತ್ತಿದ್ದೇವೆ’ ಎಂದು ಅವರು ತಿಳಿಸಿದರು.

ಕೇಂದ್ರದ ವಿರುಧ್ಧ ವಾಗ್ದಾಳಿ: ಈಶ್ವರ ಖಂಡ್ರೆ ಅವರು ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದರು.

ನೋಟು ರದ್ಧತಿ, ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ, ತೈಲ, ಅನಿಲ ಬೆಲೆ ಏರಿಕೆ, ಸಿಬಿಐ, ಆರ್‌ಬಿಐ ಬಿಕ್ಕಟ್ಟುಗಳನ್ನು ಪ್ರಸ್ತಾಪಿಸಿದ ಅವರು, ಈ ಸರ್ಕಾರ ಇಡೀ ದೇಶದ ಅರ್ಥ ವ್ಯವಸ್ಥೆಯನ್ನೇ ಹಾಳುಗೆಡವಿದೆ ಎಂದು ಆರೋಪಿಸಿದರು.

ನಮ್ಮದೇ ಗೆಲುವು: ‘ಚಾಮರಾಜನಗರ ಕಾಂಗ್ರೆಸ್‌ನ ಭದ್ರಕೋಟೆ. ಮುಂದಿನ ಲೋಕಸಭೆಯಲ್ಲೂ ನಮ್ಮ ಅಭ್ಯರ್ಥಿಯೇ ಗೆಲ್ಲಲಿದ್ದಾರೆ. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ’ ಎಂದು ಅವರು ಹೇಳಿದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಪಿ.ಮರಿಸ್ವಾಮಿ, ಕೆಪಿಸಿಸಿ ಕಾರ್ಯದರ್ಶಿ ನರೇಂದ್ರ, ಜಿಲ್ಲಾ ಪಂಚಾಯಿತಿ ಸದಸ್ಯ ಸದಾಶಿವಮೂರ್ತಿ ಮತ್ತು ಜಿಲ್ಲಾ ಕಾಂಗ್ರೆಸ್‌ ಮಾಧ್ಯಮ ಸಂಚಾಲಯ ಅರುಣ್‌ ಕುಮಾರ್‌ ಇದ್ದರು.

‘ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸುವುದಿಲ್ಲ’

‘ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ತಪ್ಪು ಮಾಡಿದ್ದೆವು’ ಎಂಬ ಸಚಿವ ಡಿ.ಕೆ. ಶಿವಕುಮಾರ್ ಅವರು ನೀಡಿರುವ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ, '‌ಅವರ ಹೇಳಿಕೆಗೂ ಸರ್ಕಾರ, ಪಕ್ಷಕ್ಕೂ ಸಂಬಂಧವಿಲ್ಲ ಎಂದು ಹಲವು ಮುಖಂಡರು ಈಗಾಗಲೇ ಹೇಳಿದ್ದಾರೆ. ಈಗ ಅದು ಮುಗಿದ ಅಧ್ಯಾಯ. ವೀರಶೈವ ಲಿಂಗಾಯತ ಎರಡೂ ಒಂದೇ. ಈ ವಿಚಾರದಲ್ಲಿ ನನ್ನ ಅಭಿಪ್ರಾಯವನ್ನು ಹಿಂದಿನ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಹೇಳಿದ್ದೇನೆ. ಹಾಗಾಗಿ ಈಗ ಅದರ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ' ಎಂದು ಖಂಡ್ರೆ ಉತ್ತರಿಸಿದರು.

‘ಮಹಾಘಟ‌ಬಂಧನ್‌ಗೆ ರಾಹುಲ್‌ ಗಾಂಧಿಯೇ ನಾಯಕ’

‘ರಾಷ್ಟ್ರಮಟ್ಟದಲ್ಲಿ ಬಿಜೆಪಿ ವಿರುದ್ಧ ರೂಪುಗೊಳ್ಳುತ್ತಿರುವ ‘ಮಹಾಘಟಬಂಧನ್‌’ನಲ್ಲಿ ಕಾಂಗ್ರೆಸ್‌ ಅತಿ ದೊಡ್ಡ ಪಾಲುದಾರ ಪಕ್ಷ. ಹಾಗಾಗಿ ರಾಹುಲ್‌ ಗಾಂಧಿ ಅವರೇ ಅದರ ನಾಯಕರಾಗಲಿದ್ದಾರೆ’ ಎಂದು ಈಶ್ವರ ಖಂಡ್ರೆ ಹೇಳಿದರು.

‘ಮುಂದಿನ ಲೋಕಸಭಾ ಚುನಾವಣೆಯಲ್ಲಿ ಒಂದು ವೇಳೆ ಅಧಿಕಾರಕ್ಕೆ ಬಂದರೆ, ರಾಹುಲ್‌ ಅವರು ಪ್ರಧಾನಿಯಾಗಲಿದ್ದಾರೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !