ಕೇಶ ವರ್ಣ ನಿತ್ಯ ನೂತನ

7

ಕೇಶ ವರ್ಣ ನಿತ್ಯ ನೂತನ

Published:
Updated:
Deccan Herald

‘ಕೇಶ ವರ್ಣ’ ಸೌಂದರ್ಯದ ಮುಕುಟವಿದ್ದಂತೆ. ಅಂದವನ್ನು ಇಮ್ಮಡಿಗೊಳಿಸುವಲ್ಲಿ ಕೇಶರಾಶಿ ಹಾಗೂ ರಂಗಿನ ಪಾತ್ರ ಮಹತ್ವದ್ದು. ಹೆರಳಿನಲ್ಲಿ ಬಣ್ಣದ ಓಕುಳಿ ಆಡುವುದೆಂದರೆ ಅನೇಕರಿಗೆ ಮೆಚ್ಚು.

2018ರಲ್ಲಿ ವಿವಿಧ ಬಣ್ಣಗಳು ಹೆರಳನ್ನು ಶೃಂಗರಿಸಿದ್ದವು. ಕೆಲ ಬಣ್ಣಗಳು ಸೆಲೆಬ್ರಿಟಿಗಳಿಗೆ ಸೀಮಿತವಾದರೆ ಮತ್ತೆ ಕೆಲ ವರ್ಣಗಳು ಸಾಮಾನ್ಯರ ಮುಡಿಗೂ ಲಗ್ಗೆ ಇಟ್ಟಿತ್ತು. ಅದೆಷ್ಟೂ ಬಣ್ಣ, ವಿನ್ಯಾಸಗಳು ಕೆಲ ಋತು, ಹಬ್ಬ, ವಿಶೇಷ ಸಮಾರಂಭಗಳಲ್ಲಿ ಮಿಂಚಿ ಮರೆಯಾದರೆ, ಮತ್ತೆ ಕೆಲ ಬಣ್ಣಗಳು, ವರ್ಷದಾದ್ಯಂತ ಮನತಣಿಸಿದ್ದವು.

ನೀಳವಾದ ಕಪ್ಪು ಬಣ್ಣದ ಕೂದಲಿನ ತುದಿಗೆ ಕೆಂಪು ಬಣ್ಣ ಹಚ್ಚುವ ಟ್ರೆಂಡ್‌ ಈ ವರ್ಷದಾದ್ಯಂತ ಜನಪ್ರಿಯವಾಗಿತ್ತು.

ಪೀನಟ್ ಬಟರ್ ಮತ್ತು ಜೆಲ್ಲಿ ಹೇರ್‌: ಈ ವರ್ಷ ಮುನ್ನೆಲೆಯಲ್ಲಿದ್ದ ವಿನ್ಯಾಸವಿದು. ಕೂದಲಿಗೆ ತಿಳಿ ಕಡಲೆಕಾಯಿ ಬಣ್ಣವನ್ನು ಲೇಪಿಸಿ,  ಹೆರಳನ್ನು ಬೆಣ್ಣೆಯಷ್ಟೇ ಮೃದುವಾಗಿ ವಿನ್ಯಾಸಗೊಳಿಸಲಾಗುತ್ತದೆ. ನೈಸರ್ಗಿಕ ಸೌಂದರ್ಯ ಇಷ್ಟಪಡುವವರಿಗೆ ಇದು ಅಪ್ತವಾಗುತ್ತದೆ. ಪೀನಟ್‌ ಬಟರ್‌ನಿಂದ ಪ್ರಭಾವಿತವಾಗಿರುವ ಈ ವಿನ್ಯಾಸಕ್ಕೆ ನೇರಳೆ ಬಣ್ಣದ ಜೆಲ್ಲಿಯನ್ನೂ ಬಳಸಲಾಗುತ್ತದೆ. 

ನೇರಳೆ ಬಣ್ಣ: ಫಂಕಿ ಸ್ಟೈಲ್ ಹಾಗೂ ಫ್ಯಾನ್ಸಿ ಹೇರ್‌ಸ್ಟೈಲ್‌ ಇಷ್ಟಪಡುವವರು ಈ ಬಣ್ಣವನ್ನು ಹೆಚ್ಚಾಗಿ ಬಳಸುತ್ತಾರೆ. ಪ್ರಸಕ್ತ ವರ್ಷದಲ್ಲಿ ಸಿನಿಮಾ ತಾರೆಗಳು, ಸೆಲೆಬ್ರಿಟಿಗಳೇ ಈ ಬಣ್ಣವನ್ನು ನೆಚ್ಚಿಕೊಂಡಿದ್ದು ಹೆಚ್ಚು. ಆದಾಗ್ಯೂ ತೆಳುವಾದ ಹೆರಳನ್ನು ಹೊಂದಿದವರು ಈ ಬಣ್ಣ ಬಳಸಿದರೆ ಕೂದಲು ಹೆಚ್ಚು ದಟ್ಟವಾಗಿ ಕಾಣುತ್ತದಂತೆ. ನೀಳ ಕೂದಲಿಗಿಂತ, ಗುಂಗುರು ಅಥವಾ ಸುರುಳಿ ಕೂದಲು ಇರುವವರಿಗೆ ಈ ಬಣ್ಣ ಹೆಚ್ಚು ಒಪ್ಪುತ್ತದೆ ಎನ್ನುತ್ತಾರೆ ಫ್ಯಾಷನ್‌ ಪರಿಣಿತರು. 

ಬ್ರೈಟ್‌ ಬಟರ್‌ಬೀರ್: ಬಂಗಾರ ವರ್ಣ, ಹಳದಿ ಬಣ್ಣಗಳ ಮಿಶ್ರಣದ ಈ ವಿನ್ಯಾಸ ಈ ವರ್ಷವಿಡೀ ಅನೇಕರ ಮುಡಿಗೆ ವಿಶೇಷ ಮೆರುಗು ನೀಡಿತ್ತು. ಗಾಜಿನ ಲೋಟವೊಂದಕ್ಕೆ ಬೀರನ್ನು ಸುರಿದಾಗ ನೊರೆ ನೊರೆಯಾಗಿ ಲೋಟದಿಂದ ಉಕ್ಕುವುದು ಹೇಗೆ ಆಕರ್ಷಕವೊ, ಹಾಗೆಯೇ ಈ ಬಣ್ಣದ ಕೇಶರಾಶಿ ಕೂಡ ಬಲು ‌ಆಕರ್ಷಕ. ಹ್ಯಾರಿ ಪಾಟರ್‌ನಿಂದ ಸ್ಪೂರ್ತಿ ಪಡೆದ ಈ ವಿನ್ಯಾಸ ಬಾಲಿವುಡ್‌ನ ರಾತ್ರಿಯ ಸಮಾರಂಭಗಳಲ್ಲಿ ಕಳೆಗಟ್ಟಿತ್ತು.

ಹನಿ ಗೋಲ್ಡನ್‌ ಕಲರ್: ಜೇನುತುಪ್ಪವನ್ನು ತಲೆಗೆ ಹಚ್ಚಿಕೊಂಡರೆ ಕೂದಲು ಎಳೆವಯಸ್ಸಿನಲ್ಲಿಯೇ ಬಿಳಿಯಾಗುತ್ತದೆ ಎನ್ನುವುದು ಸಾಂಪ್ರದಾಯಿಕ ನಂಬಿಕೆ. ಆದರೆ ಮಧುವಿನ ಬಣ್ಣವನ್ನೇ ಕೂದಲಿಗೆ ಲೇಪಿಸಿಕೊಂಡರೆ ಹೇಗಿರುತ್ತದೆ? ಅಂತಹದೊಂದು ಪ್ರಯೋಗ ಈ ವರ್ಷದಾದ್ಯಂತ ಪ್ರಸ್ತುತವಾಗಿತ್ತು. ಅತ್ತ ಸಂಪೂರ್ಣ ಬಂಗಾರದ ವರ್ಣವೂ ಅಲ್ಲದ, ಇತ್ತ ಕೆಂಪೂ ಅಲ್ಲದ, ಜೇನುತುಪ್ಪದ ವರ್ಣ ಎಲ್ಲ ಬಣ್ಣದ ಚರ್ಮದವರಿಗೂ ಒಪ್ಪುತ್ತದೆ. ಹನಿ ಗೋಲ್ಡನ್‌ ಬಣ್ಣದ ಉಡುಪಿನೊಂದಿಗೆ ಈ ಬಣ್ಣದ ಕೇಶ ಆಕರ್ಷಕ ಎನ್ನುವುದು ಫ್ಯಾಷನ್‌ ಜಗತ್ತಿನ ಲೆಕ್ಕಾಚಾರ.

ಕಂದು ವರ್ಣ: ಅನೇಕ ವರ್ಷಗಳಿಂದ ಹೆರಳನ್ನು ಸಿಂಗರಿಸುತ್ತಿರುವ ವರ್ಣವಿದು.  ದಟ್ಟವಾದ ಅಥವಾ ದಟ್ಟವಿಲ್ಲದ ಎರಡೂ ಬಗೆಯ ಕೂದಲಿಗೂ ಇದು ಹೊಂದಿಕೆಯಾಗುತ್ತದೆ. ಇದರಲ್ಲಿ ಗಾಢ ಕಂದು, ನೈಸರ್ಗಿಕ ಕಂದು, ಚಾಕೊಲೇಟ್‌ ಕಂದು, ಕೆಂಪು ಮಿಶ್ರಿತ ಕಂದು ಸೇರಿದಂತೆ ವಿವಿಧ ಬಗೆಗಳಿವೆ. ಅದರಲ್ಲಿ ಆಲಿವ್ ಕಂದು ಮತ್ತು ಕೆಂಪು ಮಿಶ್ರಿತ ಕಂದು ಈ ವರ್ಷ ಮುನ್ನೆಲೆಗೆ ಬಂದಿತ್ತು.

ಫ್ಯಾಷನ್‌ ಜಗತ್ತಿನಲ್ಲಿ ನಿನ್ನೆಯದು ಹಳತು, ಇಂದಿನದಷ್ಟೇ ಹೊಸತು, ಇಂದು ನಿನ್ನೆಗಳ ಮಿಶ್ರಣ ನಾಳೆಗೆ ಪ್ರಸ್ತುತ. ಈ ಸೂತ್ರವನ್ನು ಆಧರಿಸಿ ಫ್ಯಾಷನ್‌ ಲೋಕದ ನಾಳೆಯತ್ತ ಎದುರು ನೋಡುತ್ತಿರುವ ಫ್ಯಾಷನ್‌ಪ್ರಿಯರು ಹೊಸ ವರ್ಣ, ಟ್ರೆಂಡ್‌ಗಳನ್ನು ಹೊತ್ತು ಬರುವ ಹೊಸ ವರ್ಷದ ಬರುವಿಕೆಗೆ ಕಾತರಿಸಿದ್ದಾರೆ.⇒v

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !