ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ.26 ಸಂವಿಧಾನ ದಿನ | ಸಂವಿಧಾನವ ಸಹಿಸದವರಿಂದ ಬದಲಿಸುವ ಅಭಿಯಾನ: ಯಮುನಾ ಗಾಂವ್ಕರ್

Published 24 ನವೆಂಬರ್ 2023, 0:30 IST
Last Updated 24 ನವೆಂಬರ್ 2023, 0:30 IST
ಅಕ್ಷರ ಗಾತ್ರ

ಕಾರವಾರ: ‘ಸಂವಿಧಾನವು ಇತಿಹಾಸ, ಪೌರನೀತಿ ಪುಸ್ತಕಕ್ಕೆ ಸೀಮಿತವಾಗಿ ಉಳಿಯದೆ ದೇಶದ ಪ್ರತಿ ಪ್ರಜೆಯನ್ನೂ ತಲುಪಬೇಕು ಎಂಬ ಧ್ಯೇಯದೊಂದಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ 1990ರ ದಶಕದಲ್ಲಿ ಹುಟ್ಟಿಕೊಂಡ ‘ಚಿಂತನ’ ಸಂಸ್ಥೆ ಸಂವಿಧಾನದ ಆಶಯಗಳನ್ನು ಜನರಿಗೆ ತಲುಪಿಸಲು ನಿರಂತರ ಪ್ರಯತ್ನ ನಡೆಸಿತು. 2009ರಿಂದ ಈಚೆಗೆ ಸ್ಪಷ್ಟ ಕಾರ್ಯಸೂಚಿ ಮೂಲಕ ಕಾರ್ಯರೂಪಕ್ಕೆ ತರಲು ಮುಂದಾದೆವು’ ಎಂದು ಹೊನ್ನಾವರ ತಾಲ್ಲೂಕಿನ ಕೆರೆಕೋಣದ ಸಹಯಾನ ಸಂಸ್ಥೆಯ ಸಂವಿಧಾನ ಓದು ಅಭಿಯಾನದ ರೂವಾರಿಗಳಲ್ಲಿ ಒಬ್ಬರಾದ ಯಮುನಾ ಗಾಂವ್ಕರ್ ಮಾತಿಗೆ ಇಳಿದರು.

‘ಸಹಯಾನ ಸಂಸ್ಥೆಯ ಸಂಚಾಲಕರಾಗಿದ್ದ ವಿಠ್ಠಲ ಭಂಡಾರಿ ‘ಸಂವಿಧಾನ ಓದು’ ಎಂಬ ಅಭಿಯಾನಕ್ಕೆ ಜೀವ ಕೊಟ್ಟವರು. ಅವರೊಟ್ಟಿಗೆ ‘ಸಮುದಾಯ ಕರ್ನಾಟಕ’ ಸಂಘಟನೆ ಕೈಜೋಡಿಸಿತು. ಆರಂಭದ ದಿನಗಳಲ್ಲಿ ಸಂವಿಧಾನದ ಮಹತ್ವದ ಅಂಶಗಳನ್ನು ಕರಪತ್ರಗಳಲ್ಲಿ ಮುದ್ರಿಸಿ ಅವುಗಳನ್ನು ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ಹಂಚುವ ಕೆಲಸ ಮಾಡಿದೆವು. ಜತೆಗೆ ಭಾರತೀಯ ಸಂವಿಧಾನ ಏಕೆ ಶ್ರೇಷ್ಠ ಮತ್ತು ಏಕೆ ಮಹತ್ವದ್ದು ಎಂಬುದನ್ನೂ ತಿಳಿಸುವ ಕಾರ್ಯಕ್ರಮಗಳು ಸಾಲುಸಾಲಾಗಿ ನಡೆದವು’ ಎಂದು ವಿವರಿಸುತ್ತ ಸಾಗಿದರು.

‘ದುರ್ಬಲ ವರ್ಗಗಳು ಮತ್ತು ಪ್ರಬಲ ವರ್ಗಗಳೆರಡರ ಹಿತವನ್ನೂ ಸಂವಿಧಾನವು  ಕಾಯುತ್ತದೆ. ಆದರೂ ಪ್ರಬಲ ವರ್ಗದ ಬಹುಪಾಲು ಜನರು ಮಾತ್ರ ಸಂವಿಧಾನವನ್ನು ವಿರೋಧಿಸುತ್ತಲೇ ಬಂದಿದ್ದಾರೆ. ಶ್ರಮ ಸಂಸ್ಕೃತಿಯ ಬಗ್ಗೆ ಅರಿವಿಲ್ಲದೆ ಸನಾತನ ಸಂಸ್ಕೃತಿಯನ್ನು ಮಾತ್ರ ಬಿತ್ತರಿಸುವ ಮತ್ತು ಅದೇ ಸಂಸ್ಕೃತಿಯನ್ನು ಪೋಷಿಸಲು ಯತ್ನಿಸುವ ಕಾರಣಕ್ಕೆ ಸಂವಿಧಾನ ಅವರಿಗೆ ಸಹ್ಯ ಆಗಿರಲಿಲ್ಲ. ಅಲ್ಲದೆ ‘ಸಂವಿಧಾನ ಬದಲಿಸುವ’, ‘ಸಂವಿಧಾನ ಸುಡುವ’ ಮನಃಸ್ಥಿತಿಯೂ ಬಹಿರಂಗಗೊಂಡ ಬಳಿಕ ಸಂವಿಧಾನ ಓದು ಬಲಪಡಿಸುವ ಮತ್ತು ಅಭಿಯಾನದ ರೂಪ ಕೊಡುವ ಕೆಲಸಕ್ಕೆ 2018ರಲ್ಲಿ ಅಧಿಕೃತವಾಗಿ ಚಾಲನೆ ಸಿಕ್ಕಿತ್ತು’ ಎಂದರು.

‘ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಅವರು ಸಂವಿಧಾನದ ಒಟ್ಟಾರೆ ಅಂಶಗಳನ್ನು ಸಂಕ್ಷಿಪ್ತವಾಗಿ ಅಕ್ಷರರೂಪಕ್ಕೆ ಇಳಿಸಿ ‘ಸಂವಿಧಾನ ಓದು’ ಕೈಪಿಡಿ ರಚಿಸಿದರು. ಇದನ್ನು ಸಹಯಾನ ಮತ್ತು ಸಮದಾಯ ಕರ್ನಾಟಕ ಸಂಸ್ಥೆಗಳು ಸೇರಿ ಪ್ರಕಟಿಸಿದವು. 2018ರ ಆಗಸ್ಟ್ 25ರ ಬಳಿಕ ರಾಜ್ಯವ್ಯಾಪಿ ಅಭಿಯಾನಕ್ಕೆ ಚಾಲನೆ ಸಿಕ್ಕಿತ್ತು. ಮುದ್ರಣಗೊಂಡ ಕೆಲವೇ ದಿನಗಳಲ್ಲಿ ಸಾವಿರಾರು ಪ್ರತಿಗಳು ಮಾರಾಟವೂ ಆದವು’ ಎಂದು ವಿವರಿಸಿದರು.

‘ಸಂವಿಧಾನ ಓದು ಅಭಿಯಾನ ಐದು ವರ್ಷಗಳ ಹಿಂದೆ ಆರಂಭವಾಗಿದ್ದರೂ ಸಂವಿಧಾನದ ಮಹತ್ವವನ್ನು ಯುವ ಪೀಳಿಗೆಯ ಜತೆಗೆ ಸಮಾಜಕ್ಕೆ ತಿಳಿಸಿಕೊಡುವ ಕೆಲಸ ‘ಕೆರೆಕೋಣ’ ಎಂಬ ಪುಟ್ಟ ಗ್ರಾಮದ ಮನೆ ಅಂಗಳದಿಂದ ಹಲವು ವರ್ಷಗಳ ಹಿಂದೆ ನಡೆದಿತ್ತು. ಸಂವಿಧಾನದ ಆಶಯಗಳನ್ನು ವೈಯಕ್ತಿಕ ಜೀವನದಲ್ಲೂ ಮೈಗೂಡಿಸಿಕೊಂಡಿದ್ದ ವಿಠ್ಠಲ ಭಂಡಾರಿ ಅಭಿಯಾನದ ಹಿಂದಿನ ಶಕ್ತಿ’ ಎನ್ನಲು ಅವರು ಮರೆಯಲಿಲ್ಲ. 

ವಿಠ್ಠಲ ಭಂಡಾರಿ

ವಿಠ್ಠಲ ಭಂಡಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT