ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ.26 ಸಂವಿಧಾನ ದಿನ | ಹಿಂದೆಂದಿಗಿಂತ ಅತ್ಯಗತ್ಯ ಸಂವಿಧಾನ ಜಾಗೃತಿ

Published 24 ನವೆಂಬರ್ 2023, 0:30 IST
Last Updated 24 ನವೆಂಬರ್ 2023, 0:30 IST
ಅಕ್ಷರ ಗಾತ್ರ

‘ಸಂವಿಧಾನ ಒಂದು ಯಂತ್ರದ ಹಾಗೆ, ಅದಕ್ಕೆ ಜೀವವಿಲ್ಲ. ಸಂವಿಧಾನವನ್ನು ಯಾರು ನಿಯಂತ್ರಿಸುತ್ತಾರೋ, ಯಾರು ಅದನ್ನು ಕಾರ್ಯಗತಗೊಳಿಸುತ್ತಾರೋ ಅವರಿಂದಲೇ ಅದಕ್ಕೆ ಜೀವ ಬರುತ್ತದೆ. ಆದ್ದರಿಂದ, ಜನರು ಆಯ್ಕೆ ಮಾಡುವ ವ್ಯಕ್ತಿ ಸದ್ಗುಣಿಯಾಗಿರಬೇಕು, ಆತನಿಗೆ ಎಲ್ಲರನ್ನೂ ಒಳಗೊಳ್ಳುವ ಗುಣ ಇರಬೇಕು. ಒಂದು ವೇಳೆ ಜನರು ಆಯ್ಕೆ ಮಾಡಿದ ವ್ಯಕ್ತಿಗೆ ಈ ಯಾವ ಗುಣಗಳೂ ಇಲ್ಲದಿದ್ದರೆ, ಸಂವಿಧಾನವೂ ಈ ದೇಶವನ್ನು ರಕ್ಷಿಸಲು ಸಾಧ್ಯವಿಲ್ಲ...’

ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಡಾ. ಅಂಬೇಡ್ಕರ್‌ ಅವರು 1949ರ ನವೆಂಬರ್‌ 26ರಂದು ಸಂವಿಧಾನವನ್ನು ಅಂಗೀಕರಿಸುವ ನಿರ್ಣಯವನ್ನು ಮಂಡಿಸಿದ್ದರು. ಇದಕ್ಕೆ ಸಂವಿಧಾನ ಸಭೆ ಒಪ್ಪಿಗೆ ನೀಡುವುದಕ್ಕೂ ಮೊದಲು, ರಾಷ್ಟ್ರಪತಿ ರಾಜೇಂದ್ರ ಪ್ರಸಾದ್‌ ಅವರು ಆಡಿದ ಮಾತುಗಳಿವು. ಸಂವಿಧಾನವನ್ನು ಸಭೆಯು ಅಂಗೀಕರಿಸಿದ ಇದೇ ದಿನವನ್ನು ‘ಸಂವಿಧಾನ ದಿನ’ವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ.

ಚರ್ಚೆ, ಸಂವಿಧಾನ ಮತ್ತು ಭಾಷಣ: ಸಂವಿಧಾನದ ಕರಡು ಸಿದ್ಧಗೊಂಡಿದ್ದು ಕರಡು ರಚನಾ ಸಮಿತಿಯಿಂದ. ಆದರೆ, ಅದನ್ನು ಅಂಗೀಕರಿಸಿದ್ದು ಸಂವಿಧಾನ ಸಭೆ, ಅದೂ ಸುದೀರ್ಘವಾದ ಚರ್ಚೆಯ ಮೂಲಕವಾಗಿ. ‘ಸ್ವಾತಂತ್ರ್ಯ ಸಂಗ್ರಾಮದ ಹೋರಾಟಕ್ಕಿಂತಲೂ ದೇಶ ಕಟ್ಟುವ ಈ ಪ್ರಕ್ರಿಯೆಯೇ ಹೆಚ್ಚು ಮಹತ್ವದ್ದು ಮತ್ತು ಹೆಚ್ಚು ಕಠಿಣವಾದುದು’ ಎಂದು ಇದೇ ಭಾಷಣದಲ್ಲಿ ಪ್ರಸಾದ್‌ ಅವರು ಅಭಿಪ್ರಾಯಪಟ್ಟಿದ್ದರು. ಅಂತೆಯೇ, ಸಂವಿಧಾನದ ಪ್ರತಿಯೊಂದು ವಿಧಿ, ಉಪವಿಧಿಗಳ ಪ್ರತಿಯೊಂದು ವಾಕ್ಯ, ಕೆಲವೊಮ್ಮೆ ಪ್ರತಿಯೊಂದು ಪದವನ್ನೂ ಸಭೆಯು ಗಂಭೀರವಾಗಿ, ಎಲ್ಲಾ ಆಯಾಮಗಳಲ್ಲಿಯೂ ಚರ್ಚಿಸಿದೆ. ಚರ್ಚೆಯನ್ನೇ ನಡೆಸದೆ ಒಮ್ಮಿಂದೊಮ್ಮೆಲೆ ಯಾರದ್ದೇ ಅಭಿಪ್ರಾಯವನ್ನು, ಭಿನ್ನಾಭಿಪ್ರಾಯವನ್ನು ಸಭೆಯು ತಿರಸ್ಕಾರ ಮಾಡಿಲ್ಲ. ಎಲ್ಲ ಭಿನ್ನಾಭಿಪ್ರಾಯಗಳಿಗೂ ಅಂಬೇಡ್ಕರ್‌ ಸೇರಿದಂತೆ ಹಿರಿಯರು ಸ್ಪಷ್ಟನೆ ನೀಡಿದ್ದಾರೆ. ಆದ್ದರಿಂದ ಸಂವಿಧಾನ ರಚನೆಯಲ್ಲಿ ‘ಚರ್ಚೆ’ಯು ಬಹಳ ಮುಖ್ಯವಾದ ಹಾಗೂ ನಿರ್ಣಾಯಕ ಪಾತ್ರವಹಿಸಿದೆ ಎನ್ನುವುದು ಸ್ಪಷ್ಟ.

ಚರ್ಚೆಯ ಮೂಲಕವೇ ದೇಶವನ್ನು ಕಟ್ಟಿದ ಅಂದಿನ ನಾಯಕರು, ಅಂದಿನ ಸಂಸತ್ತು ಮತ್ತು ಇಂದಿನ ಜನನಾಯಕರು ಹಾಗೂ ಸಂಸತ್ತನ್ನು ಗಮನಿಸಿದರೆ, ವ್ಯತ್ಯಾಸ ಗಾಢವಾಗಿ ತೋರುತ್ತದೆ. ಆಡಳಿತಾರೂಢ ಪಕ್ಷದ ನಾಯಕರು, ವಿರೋಧ ಪಕ್ಷಗಳ ನಾಯಕರ ನಡುವಿನ ಕೂಗಾಟ, ಜಗಳಗಳ ಮಧ್ಯೆ ಚರ್ಚೆ ನಡೆಯದೆಯೇ ಮಸೂದೆಗಳು ಪಾಸಾಗುತ್ತಿವೆ. //ಇಂಥ ಮಸೂದೆಗಳ ಬಗ್ಗೆ ಸಂಸತ್ತು ಸದ್ಯಸರಿಗಾಗಲೀ, ಜನರಿಗಾಗಲೀ ಗಮನಕ್ಕೇ ಬರುವುದಿಲ್ಲ//. ರಾಜಕೀಯ ಮಹತ್ವ ಪಡೆದ ವಿಷಯಗಳು ಮಾತ್ರವೇ ಕೆಲವು ಹೊತ್ತುಗಳ ಚರ್ಚೆಗೆ ಒಳಪಡುತ್ತವಷ್ಟೆ. ಇತ್ತೀಚಿನ ವರ್ಷಗಳಲ್ಲಿ ನಡೆದ ಸಂಸತ್ತಿನ ಪ್ರಕ್ರಿಯೆಗಳನ್ನು ಗಮನಿಸಿದಾಗ, ಚರ್ಚೆಗಿಂತ ಭಾಷಣವೇ ಹೆಚ್ಚು ಪ್ರಾಧಾನ್ಯ ಪಡೆದುಕೊಂಡಂತೆ ತೋರುತ್ತಿದೆ. ಚರ್ಚೆಯಲ್ಲಿ ಭಾಗವಹಿಸದೇ, ಕೊನೆಯಲ್ಲಿ ದೀರ್ಘ ಭಾಷಣೆ ಮಾಡುವ ಸಂಪ್ರದಾಯಕ್ಕೆ ಸಂಸತ್ತು ಸಾಕ್ಷಿಯಾಗುತ್ತಿದೆ.

ಸಂವಿಧಾನ ಮತ್ತು ಜನರ ಭಾಗವಹಿಸುವಿಕೆ: ಸಂವಿಧಾನದ ಆಶಯಗಳಿಗೆ ವಿರುದ್ಧವಾದ ಹಲವು ಘಟನೆಗಳಿಗೆ ದೇಶ ಸಾಕ್ಷಿಯಾಗುತ್ತಿದೆ. ಸಂವಿಧಾನವನ್ನು ಬದಲಾವಣೆ ಮಾಡುವ ಹೇಳಿಕೆಯನ್ನು ರಾಜಕೀಯ ನಾಯಕರು ಆಗಿಂದಾಗೆ ನೀಡುತ್ತಲೇ ಇದ್ದಾರೆ. ಇದಕ್ಕಾಗಿ ಜನರನ್ನು ಸಜ್ಜುಗೊಳಿಸುವ ಕಾರ್ಯವೂ ಸಾಮಾಜಿಕ ಜಾಲತಾಣಗಳ ಮೂಲಕ ನಡೆಯುತ್ತಿದೆ. ನೂತನ ಸಂಸತ್ತು ಉದ್ಘಾಟನೆ ಸಂದರ್ಭದಲ್ಲಿ ಸಂಸದರಿಗೆ ನೀಡಿದ ಸಂವಿಧಾನದ ಪ್ರತಿಯ ಪ್ರಸ್ತಾವನೆಯಲ್ಲಿ, ಜಾತ್ಯತೀತ ಹಾಗೂ ಸಮಾಜವಾದ ಪದವನ್ನು ತೆಗೆಯಲಾಗಿತ್ತು. ಮೂಲ ಸಂವಿಧಾನ ಪ್ರಸ್ತಾವನೆಯನ್ನು ನೀಡಲಾಗಿತ್ತು ಎಂದು ಕೇಂದ್ರ ಸರ್ಕಾರ ಸಮರ್ಥನೆ ನೀಡಿತ್ತು. ಈ ಬಗ್ಗೆ ದೊಡ್ಡ ಮಟ್ಟದ ಚರ್ಚೆಯಾಗಿತ್ತಾದರೂ ಸಾಮಾನ್ಯರಿಗೆ ಇದರ ಪರಿಣಾಮ ಅರಿವಿಗೆ ಬರಲಿಲ್ಲ. ಸಂವಿಧಾನ ಬದಲಾವಣೆ ಬಗ್ಗೆ ಅನಂತಕುಮಾರ್ ಹೆಗಡೆ ಅವರು ಹೇಳಿಕೆ ನೀಡಿದಾಗ ಕೂಡ ಸಾಮಾನ್ಯ ಜನರಿಗೆ ಇದರ ಪರಿಣಾಮ ತಿಳಿಯಲಿಲ್ಲ. ಸಾಮಾಜಿಕ ಜಾಲತಾಣಗಳ ಮೂಲಕ ಈ ಎಲ್ಲಾ ಕ್ರಿಯೆಗಳಿಗೆ ಸಮರ್ಥನೆಗಳನ್ನು ತುಂಬುವ ಕಾರ್ಯವೇ ನಡೆಯುತ್ತಿದೆ ಮತ್ತು ನಡೆದಿದೆ.

ಸಂವಿಧಾನ ರಚನೆಯ ಬಗ್ಗೆ ಜನರು ಎಷ್ಟು ಕುತೂಹಲಿಗಳಾಗಿದ್ದರು ಎಂದರೆ, ಸಂವಿಧಾನ ಸಭೆ ಆರಂಭವಾಗಿ ಸಂವಿಧಾನವು ಅಂಗೀಕಾರವಾದ ದಿನದವರೆಗೆ 53,000ಕ್ಕೂ ಹೆಚ್ಚು ಜನ ವೀಕ್ಷಕರ ಗ್ಯಾಲರಿಗೆ ಬಂದುಹೋಗಿದ್ದರಂತೆ. ಇದು ರಾಜೇಂದ್ರ ಪ್ರಸಾದ್‌ ಅವರು ನ. 26ರಂದು ಮಾಡಿದ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಕುತೂಹಲಕಾರಿ ಅಂಶ. ಸಭೆಯಲ್ಲಿ ನಡೆಯುತ್ತಿದ್ದ ಚರ್ಚೆಯನ್ನು ಜನರು ಗಂಭೀರವಾಗಿ ಕೇಳುತ್ತಿದ್ದರು ಮತ್ತು ಸಂವಿಧಾನದ ಕುರಿತು ಅವರಿಗೂ ಆಸಕ್ತಿ ಇತ್ತು ಎನ್ನುವುದಕ್ಕೆ ಇದು ಪುರಾವೆ. ಆದರೆ, ಇಂದು ಜನರು ರಾಜಕೀಯ ಬಣ್ಣದ ಮೂಲಕವಾಗಿ ಸಂವಿಧಾನವನ್ನು ಪರಿಗಣಿಸುವಂಥ ಸ್ಥಿತಿ ನಿರ್ಮಾಣವಾಗಿದೆ. ಸಂವಿಧಾನದ ಆಶಯಗಳನ್ನು ರಾಜಕೀಯ ಪಕ್ಷಗಳ ಕನ್ನಡಿ ಮೂಲಕವಾಗಿ ನೋಡುವ ಪ್ರವೃತ್ತಿ ಬೆಳೆಯುತ್ತಿದೆ. 

ಕಾಲೇಜುಗಳಲ್ಲಿ ಪದವಿ ಸಂದರ್ಭದಲ್ಲಿ ಒಂದು ಸೆಮಿಷ್ಟರ್‌ಗೆ ‘ಸಂವಿಧಾನ’ ಪಠ್ಯವನ್ನು ಓದುವುದು ಕಡ್ಡಾಯ. ಅದಕ್ಕೆ ಶೇ 75ರಷ್ಟು ಹಾಜರಿಯೂ ಕಡ್ಡಾಯ. ಆದರೆ, ಈ ತರಗತಿಗಳಲ್ಲಿ ಸಂವಿಧಾನದ ಕುರಿತು ಯಾವ ಮುತುವರ್ಜಿಯಿಂದ ಹೇಳಿಕೊಡಲಾಗುತ್ತಿದೆ ಎನ್ನುವುದುನ್ನು ಗಮನಿಸಬೇಕಾಗಿದೆ. ಇಲ್ಲಿ ಸಂವಿಧಾನವನ್ನು ಅತ್ಯಂತ ಯಾಂತ್ರಿಕವಾಗಿ ಹೇಳಿಕೊಡಲಾಗುತ್ತಿದೆಯಷ್ಟೆ. ಈ ನೆಲೆಯಲ್ಲಿ ಜನಸಾಮಾನ್ಯರಿಗೆ, ಯುವಜನತೆಗೆ ರಾಜಕೀಯ ಬಣ್ಣಗಳಿಲ್ಲದ ಸಂವಿಧಾನದ ಓದು ಅತ್ಯಗತ್ಯವಾಗಿದೆ. ಈ ಎಲ್ಲಾ ಕಾರಣಕ್ಕಾಗಿಯೂ ಹಿಂದೆಂದಿಗಿಂತ ಈಗ ‘ಸಂವಿಧಾನ ದಿನ’ವು ಹೆಚ್ಚು ಮಹತ್ವ ಪಡೆದುಕೊಂಡಿದೆ.

ಆಧಾರ: ಸಂವಿಧಾನ ಸಭೆಯ ಚರ್ಚೆಗಳು, ಪಿಟಿಐ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT