ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ಆಳ–ಅಗಲ: ವಿದೇಶಗಳಲ್ಲಿದ್ದರೆ ಚಿನ್ನ, ವ್ಯಾಪಾರವೂ ಚೆನ್ನ
ಆಳ–ಅಗಲ: ವಿದೇಶಗಳಲ್ಲಿದ್ದರೆ ಚಿನ್ನ, ವ್ಯಾಪಾರವೂ ಚೆನ್ನ
Published 3 ಜೂನ್ 2024, 0:20 IST
Last Updated 3 ಜೂನ್ 2024, 0:20 IST
ಅಕ್ಷರ ಗಾತ್ರ

ವಿಶ್ವದ ಎಲ್ಲ ದೇಶಗಳ ಸರ್ಕಾರಗಳ ಬಳಿಯೂ ಚಿನ್ನದ ಮೀಸಲು ಇದೆ. ಭಾರತವೂ ಇದಕ್ಕೆ ಹೊರತಲ್ಲ. ಹೀಗೆ ಸರ್ಕಾರಗಳು ಚಿನ್ನವನ್ನು ಮೀಸಲಿರಿಸಿಕೊಳ್ಳುವ ಪದ್ಧತಿ ಚಾಲ್ತಿಗೆ ಬಂದದ್ದು ಸುಮಾರು 1800ರ ವೇಳೆಗೆ ಎಂದು ಫೋಬ್ಸ್‌ ವಿವರಿಸಿದೆ. ದೇಶಗಳು ಅಥವಾ ಸರ್ಕಾರಗಳ ಕೇಂದ್ರೀಯ ಬ್ಯಾಂಕ್‌ಗಳು ಹೊರಡಿಸುವ ಕರೆನ್ಸಿ ನೋಟು ಮತ್ತು ನಾಣ್ಯಗಳ ಬದಲಿಗೆ, ಅಷ್ಟೇ ಮೌಲ್ಯದಷ್ಟು ಚಿನ್ನವನ್ನು ಸಂಗ್ರಹಿಸಿ ಇಡುತ್ತಿದ್ದವು. ಒಂದೊಮ್ಮೆ ಆ ನಾಣ್ಯ/ನೋಟುಗಳನ್ನು ಸರ್ಕಾರಕ್ಕೆ ವಾಪಸ್‌ ನೀಡಿದರೆ, ಅದರ ಬದಲಿಗೆ ಚಿನ್ನ ನೀಡಬೇಕಿತ್ತು. ವಿಶ್ವದ ಬಹುತೇಕ ಆರ್ಥಿಕತೆಗಳು ಈ ಪದ್ಧತಿಯನ್ನು ಅನುಸರಿಸುತ್ತಿದ್ದವು. ಇದನ್ನು, ‘ಗೋಲ್ಡ್‌ ಸ್ಟ್ಯಾಂಡರ್ಡ್‌’ ಎಂದು ಕರೆಯಲಾಗುತ್ತಿತ್ತು.  1970ರ ದಶಕದ ನಂತರ ಈ ಪದ್ಧತಿಯನ್ನು ಅಧಿಕೃತವಾಗಿ ಕೈಬಿಡಲಾಯಿತು. ಆದರೆ ಈಗಲೂ ಕೆಲವು ದೇಶಗಳು ತಮ್ಮಲ್ಲಿ ಚಲಾವಣೆಯಲ್ಲಿ ಇರುವ ಕರೆನ್ಸಿಯ ಮೌಲ್ಯದಷ್ಟೇ ಚಿನ್ನದ ಮೀಸಲನ್ನು ಹೊಂದಿವೆ.

ರೂಪಾಯಿಯ ಮೌಲ್ಯದಷ್ಟೇ ಚಿನ್ನವನ್ನು ಸಂಗ್ರಹಿಸಿ ಇಡುವ ಪದ್ಧತಿ ಭಾರತದಲ್ಲೂ ಜಾರಿಯಲ್ಲಿತ್ತು. ಆದರೆ ಜಾಗತಿಕ ಮಟ್ಟಡ ಟ್ರೆಂಡ್‌ನಂತೆ 70ರ ದಶಕದಲ್ಲಿ ಆ ಪದ್ಧತಿಯನ್ನು ಕೈಬಿಡಲಾಯಿತು. ಆದರೆ ಈಗಲೂ ಭಾರತದಲ್ಲಿ ಚಲಾವಣೆಯಲ್ಲಿ ಇರುವ ನಾಣ್ಯ ಮತ್ತು ನೋಟುಗಳ ಭದ್ರತೆಗಾಗಿ ಆರ್‌ಬಿಐ 308 ಟನ್‌ಗಳಷ್ಟು ಚಿನ್ನದ ಮೀಸಲನ್ನು ಹೊಂದಿದೆ. ಇದರ ಜತೆಯಲ್ಲಿ ಬೇರೆ ಕಾರಣಗಳಿಗೂ ದೇಶಗಳು ಚಿನ್ನದ ಮೀಸಲನ್ನು ಹೊಂದುತ್ತವೆ. ಭಾರತದ ಬಳಿಯೇ ಈಗ 822.1 ಟನ್‌ನಷ್ಟು ಚಿನ್ನದ ಮೀಸಲು ಇದೆ.

ಎಲ್ಲಾ ದೇಶಗಳು ತಮ್ಮ ಇಡೀ ಚಿನ್ನದ ಮೀಸಲನ್ನು ತಮ್ಮಲ್ಲಿಯೇ ಇರಿಸಿಕೊಳ್ಳುವುದಿಲ್ಲ. ಏಕೆಂದರೆ ಸರ್ಕಾರದ ಚಿನ್ನದ ಮೀಸಲನ್ನು ಅಂತರರಾಷ್ಟ್ರೀಯ ವ್ಯಾಪಾರಕ್ಕೆ, ಜಾಗತಿಕ ಸಂಸ್ಥೆಗಳಿಂದ ಸಾಲ ಪಡೆಯಲು ಗ್ಯಾರಂಟಿಯಾಗಿ (ಅಡಮಾನವಲ್ಲ) ಬಳಸಿಕೊಳ್ಳಲಾಗತ್ತದೆ. ಹೀಗಾಗಿ ವಿಶ್ವದ ಅತ್ಯಂತ ಸುರಕ್ಷಿತ ಬ್ಯಾಂಕ್‌ಗಳಲ್ಲಿ ಚಿನ್ನದ ಮೀಸಲನ್ನು ಇರಿಸಲಾಗುತ್ತದೆ. ಹೀಗೆ ಚಿನ್ನದ ಮೀಸಲನ್ನು ಇರಿಸಿಕೊಳ್ಳುವ ಬ್ಯಾಂಕ್‌ಗಳಲ್ಲಿ ‘ಬ್ಯಾಂಕ್‌ ಆಫ್‌ ಇಂಗ್ಲೆಂಡ್‌’ ಮುಂಚೂಣಿಯಲ್ಲಿದೆ. ಜತೆಗೆ ‘ಬ್ಯಾಂಕ್‌ ಆಫ್‌ ಇಂಟರ್‌ನ್ಯಾಷನಲ್‌ ಸೆಟಲ್ಮೆಂಟ್‌’ನಲ್ಲೂ ಹಲವು ದೇಶಗಳು ಚಿನ್ನದ ಮೀಸಲನ್ನು ಇರಿಸುತ್ತವೆ.

ಇಂತಹ ಬ್ಯಾಂಕ್‌ಗಳಲ್ಲಿ ಚಿನ್ನದ ಮೀಸಲನ್ನು ಇರಿಸಿದ್ದರೆ, ದೇಶದ ಕೊಳ್ಳುವ ಸಾಮರ್ಥ್ಯ ಹೆಚ್ಚು ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಅಂತರರಾಷ್ಟ್ರೀಯ ಮಟ್ಟದ ವ್ಯಾಪಾರದ ಸಂದರ್ಭದಲ್ಲಿ, ಹಣ ಪಾವತಿ ಒಮ್ಮೆಗೇ ಆಗಿರುವುದಿಲ್ಲ. ಆದರೆ ಸರಕು ಮತ್ತು ಸೇವೆಗಳನ್ನು ನೀಡಲಾಗಿರುತ್ತದೆ. ಹಣವನ್ನು ನಂತರ ಪಾವತಿ ಮಾಡಲಾಗುತ್ತದೆ. ಒಂದೊಮ್ಮೆ ಸರಕು ಮತ್ತು ಸೇವೆಯನ್ನು ಒದಗಿಸಲಾಗಿದ್ದು, ಹಣ ಪಾವತಿ ಇನ್ನಷ್ಟೇ ಆಗಬೇಕಿರುತ್ತದೆ. ಆದರೆ ಅಂತಹ ಸಂದರ್ಭದಲ್ಲಿ ಹಣ ಪಾವತಿ ಮಾಡಬೇಕಿರುವ ದೇಶದೊಳಗೆ ಆಂತರಿಕ ಕಲಹ, ಆರ್ಥಿಕ ಮುಗ್ಗಟ್ಟು ಮತ್ತಿತರ ಸಮಸ್ಯೆಗಳು ತಲೆದೋರಿದರೆ ಹಣ ಪಾವತಿ ಕಷ್ಟವಾಗುತ್ತದೆ. ವಿದೇಶಗಳಲ್ಲಿ ಚಿನ್ನದ ಮೀಸಲು ಇದ್ದರೆ, ಅದನ್ನು ಬಳಸಿಕೊಂಡು ಹಣ ಪಾವತಿ ಮಾಡಬಹುದು. ಹೀಗಾಗಿಯೇ ಬಹುತೇಕ ದೇಶಗಳು ತಮ್ಮ ಒಟ್ಟು ಚಿನ್ನದ ಮೀಸಲಿನಲ್ಲಿ ಒಂದು ಭಾಗವನ್ನು ವಿದೇಶಗಳಲ್ಲಿ ಇರಿಸಿಕೊಳ್ಳುತ್ತವೆ. ಭಾರತವೂ ಹೀಗೆ ಸುಮಾರು 500 ಟನ್‌ಗಳಷ್ಟು ಚಿನ್ನವನ್ನು ವಿದೇಶಗಳಲ್ಲೇ ಇರಿಸಿತ್ತು. ಈಗ ಅದರಲ್ಲಿ 100 ಟನ್‌ಗಳಷ್ಟು ಚಿನ್ನದ ಮೀಸಲನ್ನು ಭಾರತಕ್ಕೆ ಸ್ಥಳಾಂತರಿಸಲಾಗಿದೆ.

ಏರಿಕೆಯ ಹಾದಿಯಲ್ಲಿ ಚಿನ್ನದ ಮೀಸಲು

ಇಪ್ಪತ್ತು ವರ್ಷಗಳಲ್ಲಿ ಕೇಂದ್ರ ಸರ್ಕಾರದ ಚಿನ್ನದ ಮೀಸಲು ಸುಮಾರು ಒಂದು ಪಟ್ಟು ಏರಿಕೆಯಾಗಿದೆ. ಯಾವುದೇ ದೇಶದ ಚಿನ್ನದ ಮೀಸಲು ಹೆಚ್ಚಾದಷ್ಟೂ ದೇಶದೊಳಗಿನ ಹಣಕಾಸು ವ್ಯವಸ್ಥೆ ಮತ್ತು ಜಾಗತಿಕ ವ್ಯಾಪಾರ–ವಹಿವಾಟು ಸಂಬಂಧ ಉತ್ತಮವಾಗಿ ಇರುತ್ತದೆ. ಈ ಕಾರಣದಿಂದಲೇ ವಿಶ್ವದ ದೊಡ್ಡ–ದೊಡ್ಡ ಆರ್ಥಿಕತೆಗಳು ಅಪಾರ ಪ್ರಮಾಣದ ಚಿನ್ನದ ಮೀಸಲು ಹೊಂದಿವೆ. 

ಚಿನ್ನದ ಮೀಸಲು ಹೆಚ್ಚು ಇರುವ ದೇಶದ ಕರೆನ್ಸಿಗೆ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಮನ್ನಣೆ ಇರುತ್ತದೆ.

ವಿಶ್ವದ ಎಲ್ಲಾ ಸರ್ಕಾರಗಳ ಬಳಿ ಇರುವ ಚಿನ್ನದ ಮೀಸಲಿನಲ್ಲಿ ಅಮೆರಿಕದ ಪಾಲು ಶೇ 71ಕ್ಕಿಂತಲೂ ಹೆಚ್ಚು. ಡಾಲರ್‌ ಮೌಲ್ಯಕ್ಕೆ ಅಮೆರಿಕದಲ್ಲಿನ ಚಿನ್ನದ ಮೀಸಲಿನ ಭದ್ರತೆ ಇದ್ದು, ಅದರ ಮೌಲ್ಯ
ಬಹುತೇಕ ಸ್ಥಿರವಾಗಿರುತ್ತದೆ. ಈ ಕಾರಣದಿಂದಲೇ ವಿಶ್ವದ ಬಹುತೇಕ ಆಮದು–ರಫ್ತು ವಹಿವಾಟುಗಳು
ಅಮೆರಿಕದ ಡಾಲರ್ ಮೂಲಕವೇ ನಡೆಯುತ್ತದೆ. 

ಭಾರತವು ಅತಿಹೆಚ್ಚು ಚಿನ್ನದ ಮೀಸಲು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಈಗ ಒಂಬತ್ತನೇ ಸ್ಥಾನದಲ್ಲಿದೆ.

ಜನರ ಚಿನ್ನ ಈ ಲೆಕ್ಕದಲ್ಲಿ ಇಲ್ಲ

ದೇಶದ ಚಿನ್ನದ ಮೀಸಲು ಎಂದರೆ ಅದು ಸಂಪೂರ್ಣವಾಗಿ ಸರ್ಕಾರಕ್ಕೆ ಸೇರಿದ ಚಿನ್ನ ಮಾತ್ರ. ಹೂಡಿಕೆ ರೂಪದಲ್ಲಿ, ನಾಣ್ಯದ ರೂಪದಲ್ಲಿ, ಒಡವೆಗಳ ರೂಪದಲ್ಲಿ ಜನರ ಬಳಿ ಇರುವ ಚಿನ್ನವನ್ನು ಇದು ಒಳಗೊಂಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT