ಆದಾಯ ತೆರಿಗೆ ಅಧಿಕಾರಿಗಳ ಹೆಸರಿನಲ್ಲಿ ವಂಚನೆ

7
ಆದಾಯ ತೆರಿಗೆ ಇಲಾಖೆ ಅಧಿಕಾರಿ ಹೆಸರಿನಲ್ಲಿ ವಂಚನೆ; ಹೋಟೆಲ್ ಸಪ್ಲೇಯರ್‌ ಬಂಧನ

ಆದಾಯ ತೆರಿಗೆ ಅಧಿಕಾರಿಗಳ ಹೆಸರಿನಲ್ಲಿ ವಂಚನೆ

Published:
Updated:
ಲಂಗ್ ಮುನ್

ಬೆಂಗಳೂರು: ಆದಾಯ ತೆರಿಗೆ ಅಧಿಕಾರಿಗಳ ಹೆಸರಿನಲ್ಲಿ ಹಣ ಪಡೆದು ವಂಚಿಸಿದ ಆರೋಪದಡಿ, ಲಂಗ್ ಮುನ್ ಪಾನ್‌ ಎಂಬಾತನನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಮಣಿಪುರದ ಆರೋಪಿ, ನಾಲ್ಕು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ. ಹೋಟೆಲ್‌ವೊಂದರಲ್ಲಿ ಸಪ್ಲೇಯರ್ ಆಗಿ ಕೆಲಸಕ್ಕೆ ಸೇರಿದ್ದ. ವಂಚನೆ ಕೃತ್ಯ ಎಸಗುವುದಕ್ಕಾಗಿಯೇ ಕರ್ಣಾಟಕ ಬ್ಯಾಂಕ್‌ನ ಶಾಖೆಯಲ್ಲಿ ಖಾತೆ ತೆರೆದಿದ್ದ. ಮೂರೇ ತಿಂಗಳಿನಲ್ಲಿ ಆತ, ₹8 ಲಕ್ಷ ವಹಿವಾಟು ನಡೆಸಿರುವುದು ದಾಖಲೆಗಳಿಂದ ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.

ಅಮೃತಹಳ್ಳಿಯಲ್ಲಿ ಔಷಧಿ ಮಳಿಗೆ ಇಟ್ಟುಕೊಂಡಿರುವ ಶಂಕರ್‌ ಎಂಬುವರು ಆದಾಯ ತೆರಿಗೆ ಹಾಗೂ ಜಿಎಸ್‌ಟಿ‌ ಸಂಬಂಧ ಆನ್‌ಲೈನ್‌ನಲ್ಲಿ ಅರ್ಜಿ ಭರ್ತಿ ಮಾಡಿದ್ದರು. ಮರುದಿನವೇ ಆದಾಯ ತೆರಿಗೆ ಇಲಾಖೆ ಅಧಿಕಾರಿ ಹೆಸರಿನಲ್ಲಿ ಶಂಕರ್‌ ಮೊಬೈಲ್‌ಗೆ ಸಂದೇಶ ಕಳುಹಿಸಿದ್ದ ಆರೋಪಿ, ‘ನಿಮಗೆ ತೆರಿಗೆ ಮರುಪಾವತಿ ಆಗಿದೆ. ಈ ಲಿಂಕ್‌ ಮೂಲಕ ಸ್ವ–ವಿವರ ಭರ್ತಿ ಮಾಡಿ’ ಎಂದಿದ್ದ.

ಅದನ್ನು‌ ನಂಬಿದ್ದ ಶಂಕರ್, ಸಂದೇಶದಲ್ಲಿದ್ದ ಲಿಂಕ್‌ ಬಳಸಿ ಬ್ಯಾಂಕ್‌ ಖಾತೆ ಸಂಖ್ಯೆ ಸೇರಿ ಹಲವು ಮಾಹಿತಿಯನ್ನು ಅಪ್‌ಲೋಡ್‌ ಮಾಡಿದ್ದರು. ಜೂನ್ 13ರಂದು ಅವರ ಬ್ಯಾಂಕ್ ಖಾತೆಯಿಂದ ₹40 ಸಾವಿರ ಡ್ರಾ ಆಗಿತ್ತು. ಬಳಿಕ, ಆ ಬಗ್ಗೆ ದೂರು ನೀಡಿದ್ದರು ಎಂದು ಪೊಲೀಸರು ವಿವರಿಸಿದರು.

ಎಟಿಎಂ ಘಟಕದಲ್ಲಿ ಹಣ ಡ್ರಾ: ಶಂಕರ್‌ ಅವರ ಖಾತೆಯಿಂದ ಕರ್ಣಾಟಕ ಬ್ಯಾಂಕ್‌ನ ಕೊತ್ತನೂರು ಶಾಖೆಯ ಖಾತೆಗೆ ಹಣ ವರ್ಗಾವಣೆ ಆಗಿದ್ದ ಮಾಹಿತಿ ಲಭ್ಯವಾಗಿತ್ತು. ಆ ಶಾಖೆಗೆ ಹೋಗಿ ವಿಚಾರಿಸುವಷ್ಟರಲ್ಲೇ ಆರೋಪಿ, ಎಟಿಎಂ ಘಟಕದಿಂದ ಹಣ ಡ್ರಾ ಮಾಡಿಕೊಂಡಿದ್ದ ಎಂದು ಪೊಲೀಸರು ಹೇಳಿದರು.

ಖಾತೆ ತೆರೆಯಲು ಬ್ಯಾಂಕ್‌ಗೆ ನೀಡಿದ್ದ ದಾಖಲೆಗಳನ್ನು ಆಧರಿಸಿ ಆರೋಪಿಯನ್ನು ಬಂಧಿಸಲಾಯಿತು. ಆರೋಪಿಯು ಹಲವರನ್ನು ವಂಚಿಸಿ ಖಾತೆಗೆ ಹಣ ಜಮೆ ಮಾಡಿಸಿಕೊಂಡಿದ್ದಾನೆ. ಬಳಿಕ ಆ ಹಣವನ್ನು ತಕ್ಷಣವೇ ಡ್ರಾ ಮಾಡಿಕೊಂಡಿರುವುದನ್ನು ಆತನೇ ಒಪ್ಪಿಕೊಂಡಿದ್ದಾನೆ ಎಂದರು.

ಕಮಿಷನ್‌ ಆಸೆಗಾಗಿ ಕೃತ್ಯ: ‘ಇತ್ತೀಚೆಗೆ ಭೇಟಿಯಾಗಿದ್ದ ವ್ಯಕ್ತಿಗಳಿಬ್ಬರು, ಬ್ಯಾಂಕ್ ಖಾತೆಯ ಸಂಖ್ಯೆ ಪಡೆದುಕೊಂಡಿದ್ದರು. ಖಾತೆಗೆ ಹಣ ಬರುತ್ತದೆ. ಅದನ್ನು ನಮಗೆ ತಂದುಕೊಟ್ಟರೆ ಕಮಿಷನ್‌ ಕೊಡುವುದಾಗಿ ಹೇಳಿದ್ದರು’ ಎಂದು ಆರೋಪಿ ಮಾಹಿತಿ ನೀಡಿರುವುದಾಗಿ ಪೊಲೀಸರು ಹೇಳಿದರು. 

ಸಪ್ಲೇಯರ್ ಕೆಲಸಕ್ಕಾಗಿ ಆರೋಪಿ ಲಂಗ್ ಮುನ್ ಪಾನ್‌, ₹6 ಸಾವಿರ ಸಂಬಳ ಪಡೆಯುತ್ತಿದ್ದ. ಐಶಾರಾಮಿ ಜೀವನಕ್ಕಾಗಿ ಆತ ಕೃತ್ಯ ಎಸಗಲು ಆರಂಭಿಸಿದ್ದ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ
ಎಂದರು.

ತೆರಿಗೆ ಪಾವತಿ ಮಾಡಲು ಅರ್ಜಿ ಸಲ್ಲಿಸಿದ್ದ ಶಂಕರ್‌ ಅವರ ಮಾಹಿತಿಯನ್ನು ಆರೋಪಿ ಹೇಗೆ ತಿಳಿದುಕೊಂಡ ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ. ಪ್ರಕರಣದಲ್ಲಿ ಹಲವರು ಶಾಮೀಲಾಗಿರುವ ಅನುಮಾನವಿದ್ದು, ಅವರನ್ನು ಪತ್ತೆ ಹಚ್ಚುತ್ತಿದ್ದೇವೆ ಎಂದು ಪೊಲೀಸರು ವಿವರಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !