ರೈತರ ತಡೆದ ಪೊಲೀಸರು: ವಡ್ಡೆಗೆರೆ ಕೆರೆಗೆ ಹರಿಯದ ನೀರು

ಶುಕ್ರವಾರ, ಜೂಲೈ 19, 2019
22 °C
ತೆರಕಣಾಂಬಿಯಿಂದ ಉತ್ತೂರು ಕೆರೆಯವರೆಗೆ ಪಾದಯಾತ್ರೆ, ಸಚಿವರು, ಶಾಸಕರ ವಿರುದ್ಧ ಪ್ರತಿಭಟನಾಕಾರರ ಆಕ್ರೋಶ

ರೈತರ ತಡೆದ ಪೊಲೀಸರು: ವಡ್ಡೆಗೆರೆ ಕೆರೆಗೆ ಹರಿಯದ ನೀರು

Published:
Updated:
Prajavani

ಗುಂಡ್ಲುಪೇಟೆ: ಜಿಲ್ಲಾಡಳಿತದ ಅನುಮತಿಗೆ ಕಾಯದೇ, ಉತ್ತೂರು ಕೆರೆಯಿಂದ ವಡ್ಡೆಗೆರೆಗೆ ಬಲವಂತವಾಗಿ ನೀರು ಹರಿಸಲು ರೈತರು ಸೋಮವಾರ ಮಾಡಿದ ಯತ್ನ ಯಶಸ್ವಿಯಾಗಲಿಲ್ಲ.

ಪೊಲೀಸರು ಹಾಗೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಮೋಟಾರ್‌ ಚಾಲನೆ ಮಾಡಲು ರೈತರಿಗೆ ಅವಕಾಶ ನೀಡಲಿಲ್ಲ. ಅಧಿಕಾರಿಗಳು ಮತ್ತು ರೈತರ ನಡುವೇ ವಾಗ್ವಾದವೇ ನಡೆಯಿತು. ಇದನ್ನು ಖಂಡಿಸಿ ರೈತರು ಸ್ಥಳದಲ್ಲಿಯೇ ಅನಿರ್ದಿಷ್ಟಾವಧಿ ಧರಣಿ ಕುಳಿತರು.

ನೀರು ಹರಿಸುವುದಕ್ಕೆ ಚಾಲನೆ ನೀಡುವುದಕ್ಕಾಗಿ ರೈತರು ಸೋಮವಾರ ಬೆಳಿಗ್ಗೆ ತೆರಕಣಾಂಬಿ ಗ್ರಾಮದಿಂದ ಪಾದಯಾತ್ರೆ ಮೂಲಕ ಉತ್ತೂರು ಕೆರೆಗೆ ತಲುಪಿದರು. ಬಿಗಿ ಭದ್ರತೆ ಕೈಗೊಂಡಿದ್ದ ಪೊಲೀಸರು, ಚಳವಳಿಗಾರರು ಪಂಪ್‌ಹೌಸ್‌ಗೆ ನುಗ್ಗದಂತೆ ತಡೆದರು, ಈ ಸಂದರ್ಭದಲ್ಲಿ ತಳ್ಳಾಟ, ನೂಕಾಟ ನಡೆಯಿತು.

ಆಕ್ರೋಶಗೊಂಡ ರೈತರು, ‘ಸ್ಥಳಕ್ಕೆ ಜಿಲ್ಲಾಧಿಕಾರಿ, ಪೊಲೀಸ್‌ ವರಿಷ್ಠಾಧಿಕಾರಿ, ಕಾಡಾ ಅಧಿಕಾರಿಗಳು ಬರಬೇಕು. ಇಲ್ಲದಿದ್ದರೆ ಕೆರೆಗೆ ಹಾರಿ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’ ಎಂದು ಬೆದರಿಸಿದರು. 

ಚಳವಳಿ ನಿರತರನ್ನು ಉದ್ದೇಶಿಸಿ ಮಾತನಾಡಿದ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಘಟಕದ ಕಾರ್ಯದರ್ಶಿ ಗುರುಪ್ರಸಾದ್‌ ಅವರು, ‘ಕುಡಿಯುವ ನೀರಿಗೆ ಆದ್ಯತೆ ಎನ್ನುತ್ತಿರುವ ಸರ್ಕಾರ, ಉತ್ತೂರು ಕೆರೆಯಿಂದ ವಡ್ಡಗೆರೆ ಕೆರೆವರೆಗೆ ಪೈಪ್‌ಲೈನ್‌ ಕಾಮಗಾರಿ ಪೂರ್ಣಗೊಂಡಿದ್ದರೂ ನೀರು ಬಿಡಲು ಮೀನಾ–ಮೇಷ ಎಣಿಸುತ್ತಿದೆ. ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ನಡುವಿನ ಭಿನ್ನಾಭಿಪ್ರಾಯದಿಂದ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್‌ ಮಾತನಾಡಿ, ‘ಜನರ ಹಣದಿಂದ ನಡೆದ ಕೆಲಸವನ್ನು ಜನರ ಉದ್ಧಾರಕ್ಕೆ ಬಳಸಲಾಗುತ್ತಿಲ್ಲ. ಈ ಕೂಡಲೇ ವಡ್ಡಗೆರೆ ಕೆರೆಗೆ ನೀರು ತುಂಬಿಸಬೇಕು’ ಎಂದು ಒತ್ತಾಯಿಸಿದರು.

‘ಶಾಸಕ ಸಿ.ಎಸ್.ನಿರಂಜನಕುಮಾರ್ ಸಹ ಈ ಪ್ರತಿಭಟನೆಯಲ್ಲಿ ಭಾಗವಹಿಸಬೇಕಿತ್ತು. ಅಧಿಕಾರ ಶಾಶ್ವತವಲ್ಲ. ಇದೇ ರೀತಿ ಆದರೆ ಮುಂದಿನ ದಿನಗಳಲ್ಲಿ ಅಧಿಕಾರದಿಂದ ಕೆಳಗಿಳಿಸುತ್ತೇವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ ಅವರಿಗೆ ಎಚ್ಚರಿಕೆ ನೀಡಿದರು.

ನವೆಂಬರ್‌ನಲ್ಲಿ ಬಿಡುತ್ತೇವೆ: ಮಧ್ಯಾಹ್ನದ ಬಳಿಕ ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಬಂದ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು, ‘ಈಗ ನೀರು ಬಿಡಲು ಸಾಧ್ಯವಿಲ್ಲ. ನವೆಂಬರ್‌ನಲ್ಲಿ ಕಾಮಗಾರಿ ಮುಗಿಯಲಿದ್ದು, ನಂತರ ಬಿಡಲಾಗುವುದು’ ಎಂದರು.

ಇದರಿಂದ ಮತ್ತಷ್ಟು ಆಕ್ರೋಶಗೊಂಡ ರೈತರು ಅಧಿಕಾರಿಗಳೊಂದಿಗೆ ವಾಗ್ವಾದ ಆರಂಭಿಸಿದರು.

ನಿಗಮದ ಎಂಜಿನಿಯರ್‌ ಶ್ರೀಕಂಠ ಪ್ರಸಾದ್ ಅವರು ಮಾತನಾಡಿ, ‘ಜುಲೈ 15ರೊಳಗೆ ಕೆಲಸ ಮುಗಿಸಿ ನೀರು ಬಿಡಲಾಗುತ್ತದೆ’ ಎಂದರು. ಇದರಿಂದ ಸಮಾಧಾನಗೊಳ್ಳದ ರೈತರು, ‘ಮೂರು ದಿನಗಳವರೆಗೆ ಪ್ರಾಯೋಗಿಕವಾಗಿ ನೀರು ಬಿಡಿ. ಬಳಿಕ ಕೆಲಸ ಮಾಡಿ’ ಎಂದು ಒತ್ತಡ ಹೇರಿದರು.

ಅಧಿಕಾರಿಗಳು ವಿವಿಧ ಕಾರಣಗಳು ನೀಡಿದರೂ ರೈತರು ಒಪ್ಪದೆ ಪ್ರತಿಭಟನೆ ಮುಂದುವರೆಸಿದರು. ಪ್ರತಿಭಟನೆಯಲ್ಲಿ ತಾಲ್ಲೂಕಿನ ರೈತ ಮುಖಂಡರು ಮತ್ತು ಐನೂರಕ್ಕೂ ರೈತರು ಭಾಗವಹಿಸಿದ್ದರು.

ಶಾಸಕರ ವಿರುದ್ಧ ಆಕ್ರೋಶ: ಪ್ರತಿಭಟನೆಯಲ್ಲಿ ನಿರತರಾಗಿದ್ದ ಸಚಿವರು ಸ್ಥಳೀಯ ಶಾಸಕ ಸಿ.ಎಸ್‌.ನಿರಂಜನ್‌ಕುಮಾರ್‌ ವಿರುದ್ಧ ಆಕ್ರೋಶ ಹೊರಹಾಕಿದರು.

‘ಶಾಸಕರು ಪ್ರತಿಭಟನೆಯಲ್ಲಿ ಭಾಗವಹಿಸದಿರುವುದು ಖಂಡನೀಯ. ಚಾಮರಾಜನಗರದಲ್ಲಿ ಮಾರ್ಚ್‌ 4ರಂದು ರೈತರು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಅವರು ಜಿಲ್ಲಾ ಉಸ್ತುವಾರಿ ಸಚಿವರ ಜೊತೆಗೆ ಹೋದಾಗಲೇ ನೀರು ಬರುವುದಿಲ್ಲ ಎಂದು ಗೊತ್ತಾಗಿದೆ. ಶಾಸಕರು ತಾವು ನೀರು ಬಿಡಿಸಿ ಮತಬ್ಯಾಂಕ್ ಅಭಿವೃದ್ಧಿ ಮಾಡಬೇಕು ಎಂದು ಕೊಂಡಿದ್ದಾರೆ. ಸಚಿವರ ಕಿವಿ ಹಿಂಡಿ ಕೆಲಸ ಮಾಡಲು ಆಗಿಲ್ಲ’ ಎಂದು ಕಡಬೂರು ಮಂಜು ಹರಿಹಾಯ್ದರು.

‘ಪ್ರತಿಭಟಿಸದಿದ್ದರೆ ಕೆರೆಗಳಿಗೆ ನೀರು ಬರುವುದಿಲ್ಲ’

ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಪ್ರಗತಿಪರ ಕೃಷಿಕ ಚಿನ್ನಸ್ವಾಮಿ ವಡ್ಡೆಗೆರೆ ಅವರು, ‘ಕಾಮಗಾರಿ ಪೂರ್ಣವಾಗದೇ ನೀರು ಬಿಡಲು ಸಾಧ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರು ಹೇಳುತ್ತಾರೆ. ರೈತರು ಪ್ರತಿಭಟಿಸದೆ ಹೋದರೆ ಕೆರೆಗಳಿಗೆ ನೀರು ಬರುವುದಿಲ್ಲ’ ಎಂದು ಹೇಳಿದರು.

‘ಇನ್ನೂ ₹25 ಕೋಟಿ ಕೆಲಸ ಬಾಕಿ ಇದೆ. ಯಾವುದೇ ಜನಪ್ರತಿನಿಧಿಗಳು ಇದರ ಬಗ್ಗೆ ಚಕಾರ ಎತ್ತುತ್ತಿಲ್ಲ. ಜಿಲ್ಲಾಡಳಿತ ನಿದ್ದೆ ಮಾಡುತ್ತಿದೆ. ಪ್ರಾಮಾಣಿಕವಾಗಿ ಕೆಲಸ ಮಾಡುವ ಅಧಿಕಾರಿಗಳನ್ನು ಜನಪ್ರತಿನಿಧಿಗಳು ವರ್ಗಾವಣೆ ಮಾಡಿಸುತ್ತಾರೆ. ನಿದ್ದೆಯಿಂದ ಎಚ್ಚರಿಸುವ ಕೆಲಸವನ್ನು ರೈತರೇ ಮಾಡಬೇಕಿದೆ’ ಎಂದರು. 

‘ಭ್ರಷ್ಟ, ಅಸಮರ್ಥ ಜಿಲ್ಲಾ ಉಸ್ತುವಾರಿ ಸಚಿವರನ್ನು ನಾವು ಪಡೆದಿದ್ದೇವೆ. ಇದು ಜಿಲ್ಲೆಯ ದುರಂತ, ಅವರು ಭ್ರಷ್ಟಾಚಾರದಲ್ಲಿ ಸಿಲುಕಿದಾಗಲೇ ರಾಜಿನಾಮೆ ನೀಡಿ ಎಂದು ಒತ್ತಾಯ ಮಾಡಬೇಕಿತ್ತು. ಇಂತಹವರನ್ನು ಇಟ್ಟುಕೊಂಡು ಜಿಲ್ಲೆ ಉದ್ಧಾರವಾಗುತ್ತದೆ ಎಂದು ಕನಸು ಕಾಣಬಾರದು. ಜಿಲ್ಲೆಯ ಅಭಿವೃದ್ಧಿ ಬಗ್ಗೆ ಅವರಲ್ಲಿ ಮಾಹಿತಿ ಇಲ್ಲ. ಒಂದು ಜನಾಂಗಕ್ಕೆ ಮಾತ್ರ ಮಂತ್ರಿ ಎಂದುಕೊಂಡು ಕೆಲಸ ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !