ರಸ್ತೆ ಮೇಲೆ ಬಿದ್ದ ಬಾವುಟಗಳ ‘ಫ್ಲ್ಯಾಗಥಾನ್’

7

ರಸ್ತೆ ಮೇಲೆ ಬಿದ್ದ ಬಾವುಟಗಳ ‘ಫ್ಲ್ಯಾಗಥಾನ್’

Published:
Updated:
Deccan Herald

ಆಗಸ್ಟ್‌ ಹದಿನೈದರ ಬೆಳಗ್ಗೆ ಕತ್ತೆತ್ತಿ, ಹಣೆಗೆ ಕೈ ಇಟ್ಟು, ಸೆಲ್ಯೂಟ್‌ ಹೊಡೆದು ನಮಿಸುವ ಧ್ವಜ ಆ ನಂತರ ಏನಾಗುತ್ತದೆ? ಎದೆಗಂಟಿಸಿಕೊಂಡಿದ್ದ ಬ್ಯಾಡ್ಜ್, ಗಾಡಿ ಮೇಲೆ ಗಾಳಿಯಲ್ಲಿ ಪಟಪಟನೆ ಸದ್ದು ಮಾಡುವ ತಿರಂಗಾ, ಮಕ್ಕಳ ಕೈಗೆ ಬಾವುಟ ಕೊಟ್ಟು, ಭಾರತೀಯ ಮಕ್ಕಳೆನಿಸಿಕೊಂಡ ಕ್ಷಣ, ಭಾರತ್‌ ಮಾತಾಕಿ ಜೈ ಎಂದು ಕೂಗಿ, ಆ ರೋಮಾಂಚನ ಅನುಭವಿಸಿದ, ದೇಶಭಕ್ತಿ ಆವರ್ಭವಿಸಿದ ಆ ಕ್ಷಣಗಳೆಲ್ಲ ಅದೆಷ್ಟು ಬೇಗ, ತಮ್ಮ ಉದ್ವೇಗ ಮತ್ತು ಭಾವನೆಗಳನ್ನು ಕಳೆದುಕೊಳ್ಳುತ್ತವೆ?

ಅಂದು ಧ್ವಜವಂದನೆ ಮುಗಿದ ನಂತರ ಅವು ಎಲ್ಲೆಲ್ಲಿಯೂ ಕಾಣಸಿಗುತ್ತವೆ. ರಸ್ತೆ ಮೇಲೆ, ಫುಟ್‌ಪಾತ್‌ ಬದಿಯಲ್ಲಿ, ಆಟದ ಮೈದಾನ, ಉದ್ಯಾನಗಳಲ್ಲಿ, ಮರಗಳ ನಡುವೆ... ಎದೆಗೊತ್ತಿಕೊಂಡ ತ್ರಿವರ್ಣ ಧ್ವಜ, ಕಾಲಡಿಗೆ ಬಂದರೂ ಗಮನಿಸುವುದಿಲ್ಲ. ಅದಾಗಲೇ ಮುಗಿದು ಹೋದ ಸಂಭ್ರಮ. ಕಸದ ಬುಟ್ಟಿಯಲ್ಲಿ ಕಂಡರೂ ಏನೆನಿಸದು... ಆಗಸ್ಟ್‌ ಪಂದರಾ ಮುಗಿದೇ ಹೋಯಿತು. ಇನ್ನೇನಿದ್ದರೂ ಜನವರಿ 26ರವರೆಗೂ ಕಾಯಬೇಕು...

ಭಾವಭಕ್ತಿಯ ನಂತರದ ಬಾವುಟಗಳೇನಾಗುತ್ತವೆ? ಏನು ಮಾಡಬೇಕು? ಇಂಥವೆರಡು ಪ್ರಶ್ನೆಗಳೊಂದಿಗೆ ಆರಂಭವಾಗಿರುವುದೇ ‘ಫ್ಲ್ಯಾಗಥಾನ್‌’. ಎಲ್ಲೆಂದರಲ್ಲಿ ಬಿಸಾಡಿದ ಬಾವುಟಗಳನ್ನು ಹೆಕ್ಕಿ ತೆಗೆಯುವುದು ‘ನಮ್ಮ ಹೆಮ್ಮೆ’ ತಂಡದ ದೇಶಭಕ್ತಿ.ಪ್ಲಾಸ್ಟಿಕ್ ಬಾವುಟಗಳನ್ನು ಕೊಳ್ಳಬೇಡಿ, ಕೊಂಡರೂ ಅವುಗಳನ್ನು ಎಲ್ಲೆಂದರಲ್ಲಿ ಬಿಸಾಡಬೇಡಿ ಎನ್ನುತ್ತಾ ‘ಫ್ಲ್ಯಾಗಥಾನ್’ ಮೂಲಕ ಮತ್ತೆ ಬರುತ್ತಿದೆ ‘ನಮ್ಮ ಹೆಮ್ಮೆ’.

ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಕ್ಕೆಂದೆ ಬಾವುಟಗಳನ್ನು ಕೊಳ್ಳುವ ಕೆಲವರು ಅವುಗಳನ್ನು ಎಲ್ಲೆಂದರಲ್ಲಿ ಬಿಸಾಡುತ್ತಿದ್ದಾರೆ. ಇನ್ನೂ ಕೆಲವರು ಬೈಕ್‌ಗಳಿಗೆ, ಕಾರುಗಳಿಗೆ ಪ್ಲಾಸ್ಟಿಕ್ ಹಾಗೂ ಬಟ್ಟೆಯ ಬಾವುಟಗಳು, ಬ್ಯಾಡ್ಜ್‌ ರೂಪದ ಲೋಹದ ಬಾವುಟಗಳನ್ನು ಅಂಟಿಸುತ್ತಾರೆ. ವಾಹನಗಳ ಚಾಲನೆ ವೇಳೆ ಅವುಗಳು ಗಾಳಿಯ ರಭಸಕ್ಕೆ ಕಳಚಿ ರಸ್ತೆ ಮೇಲೆ ಬೀಳುತ್ತವೆ. ಹೀಗೆ ಬಿದ್ದ ಬಾವುಟಗಳನ್ನು ಹೆಕ್ಕಿ ತೆಗೆಯುವುದೇ ‘ಫ್ಲ್ಯಾಗಥಾನ್’.


ಫ್ಲ್ಯಾಗಥಾನ್‌ನಲ್ಲಿ ಪಾಲ್ಗೊಂಡ ‘ನಮ್ಮ ಹೆಮ್ಮೆ’ ತಂಡದ ಸದಸ್ಯರು

ಸ್ವಾತಂತ್ರ್ಯ ದಿನಾಚರಣೆ ಬಳಿಕ ಈ ತಂಡದ ಸದಸ್ಯರು ಒಂದೆಡೆ ಸೇರುತ್ತಾರೆ. ಆ ಜಾಗದ ಸುತ್ತಲಿನ ಪ್ರಮುಖ ರಸ್ತೆಗಳಿಗೆ ಪ್ರತ್ಯೇಕವಾಗಿ ಗುಂಪು ಗುಂಪಾಗಿ ಹೋಗುವ ಸದಸ್ಯರು ರಸ್ತೆಯಲ್ಲಿ ಬಿದ್ದ ಬಾವುಟಗಳನ್ನು ತೆಗೆದುಕೊಂಡು ಬರುತ್ತಾರೆ. ಹೀಗೆ, ತಾವು ತಂದ ಚೆನ್ನಾಗಿರುವ ಬಾವುಟಗಳನ್ನು ಶಾಲಾ ಮಕ್ಕಳಿಗೆ ಕೊಟ್ಟು ಜೋಪಾನವಾಗಿಟ್ಟುಕೊಳ್ಳುವಂತೆ ತಿಳಿಸುತ್ತಾರೆ. ಹಾಳಾದ ಬಾವುಟಗಳನ್ನು, ಹೊಸ ಬಾವುಟಗಳನ್ನಾಗಿಸುವ ಸಾಧ್ಯತೆಯಿದ್ದಲ್ಲಿ ರಿಸೈಕಲ್‌ಗೂ ಯತ್ನಿಸುತ್ತಾರೆ. ಮರುಬಳಕೆಗೆ ಸಾಧ್ಯವಿದ್ದಲ್ಲಿ ಜತನದಿಂದ ಕಾಪಿಡುತ್ತಾರೆ. ಪ್ಲಾಸ್ಟಿಕ್ ಬಾವುಟಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತಾರೆ.

ಈ ತಂಡದ ರೂವಾರಿ ಕಿಶೋರ್ ಪಟವರ್ಧನ್. ಅವರ ಸಮಾಜಸೇವೆಗೆ ಕೈಜೋಡಿಸಿದವರು ಪತ್ನಿ ರಶ್ಮಿ ಗೋಖಲೆ. ರಿಯಲ್ ಎಸ್ಟೇಟ್ ವ್ಯವಹಾರ ಮಾಡುವ ಕಿಶೋರ್ ಅವರಿಗೆ ಬಾವುಟಗಳೆಂದರೆ ಅಪಾರ ಗೌರವ.

‘ಸ್ವಾತಂತ್ರ್ಯ ದಿನದಂದು ಶಾಲಾ–ಕಾಲೇಜುಗಳು, ಸರ್ಕಾರಿ ಕಚೇರಿಗಳು, ಸಾರ್ವಜನಿಕ ಸ್ಥಳಗಳ ಬಳಿ ತ್ರಿವರ್ಣಧ್ವಜ ರಾರಾಜಿಸುವುದನ್ನು ನೋಡುವುದೇ, ದೊಡ್ಡ ಸಂಭ್ರಮ. ಬಾವುಟ ಹಾರಾಡುವುದನ್ನು ನೋಡುತ್ತಿದ್ದರೆ ನಾವು ಭಾರತೀಯನೆಂಬ ಹೆಮ್ಮೆ ಮೂಡುತ್ತದೆ. ಅದೇ ಬಾವುಟ ರಸ್ತೆ ಮೇಲೆ ಬಿದ್ದಿದ್ದರೆ ನಾವೂ ಭಾರತೀಯರೇ ಎಂಬ ಸಂಶಯ ಕಾಡುತ್ತದೆ’ ಎನ್ನುತ್ತಾರೆ ಕಿಶೋರ್.

‘ನಾಲ್ಕು ವರ್ಷಗಳ ಹಿಂದೆ ಸ್ವಾತಂತ್ರ್ಯ ದಿನದಂದು ಮಧ್ಯಾಹ್ನ ರಸ್ತೆಯೊಂದರಲ್ಲಿ ನಡೆದುಕೊಂಡು ಹೋಗುತ್ತಿದ್ದೆ. ಎಲ್ಲೆಂದರಲ್ಲಿ ಬಾವುಟಗಳು ಬಿದ್ದಿದ್ದವು. ಅದರಲ್ಲಿ ಪ್ಲಾಸ್ಟಿಕ್ ಬಾವುಟಗಳೂ ಇದ್ದವು. ಹೀಗಾಗಿ, ‘ಪ್ಲಾಸ್ಟಿಕ್ ಬಾವುಟಗಳನ್ನು ಕೊಳ್ಳಬೇಡಿ. ಕೊಂಡರೂ ಅವುಗಳನ್ನು ಎಲ್ಲೆಂದರಲ್ಲಿ ಬಿಸಾಡಬೇಡಿ’ ಎನ್ನುತ್ತಲೇ ಫ್ಲ್ಯಾಗಥಾನ್ ಆರಂಭಿಸಿದೆವು’ ಎನ್ನುತ್ತಾರೆ.


ಕಿಶೋರ್ ಪಟವರ್ಧನ್

ಈ ಬಾರಿಯ ‘ಫ್ಲ್ಯಾಗಥಾನ್‌’ ಜೊತೆ ಮಕ್ಕಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ‘ಧ್ವಜವು ಆಟದ ವಸ್ತುವಲ್ಲ ಎಂಬುದನ್ನು ಮಕ್ಕಳಿಗೆ ತಿಳಿಸಬೇಕಿದೆ. ದೇಶ, ದೇಶಪ್ರೇಮದ ಬಗ್ಗೆ ಬಾಲ್ಯದಲ್ಲಿ ತಿಳಿಸಿದರೆ, ಅದು ಅವರ ಮನಸ್ಸಿನಲ್ಲಿ ಆಳವಾಗಿ ಬೇರೂರುತ್ತದೆ’ ಎನ್ನುವುದು ತಂಡದ ಆಶಯ. ಇದು ಈ ತಂಡದ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಬಗೆ.

ಎಲ್ಲಿ ಮತ್ತು ಯಾವಾಗ?

ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಮುಗಿದ ಬಳಿಕ, ಮಧ್ಯಾಹ್ನ 3ಕ್ಕೆ ಕಬ್ಬನ್ ಉದ್ಯಾನದಲ್ಲಿ ಈ ತಂಡದ ಸದಸ್ಯರು ಸೇರಲಿದ್ದಾರೆ. ಬಳಿಕ ಐದು ತಂಡಗಳಾಗಿ ಬೇರ್ಪಡುವ ಅವರೆಲ್ಲರೂ ವಿವಿಧ ರಸ್ತೆಗಳಿಗೆ ಹೋಗಿ ಅಲ್ಲಿ ಬಿದ್ದಿರುವ ಬಾವುಟಗಳನ್ನು ಸಂಗ್ರಹಿಸಿ, ವಾಪಸ್ ಉದ್ಯಾನಕ್ಕೆ ಬರಲಿದ್ದಾರೆ. ರಸ್ತೆಗಳ ಮಧ್ಯೆ ಸಿಗುವ ಸಾರ್ವಜನಿಕರಲ್ಲಿ ತ್ರಿವರ್ಣಧ್ವಜದ ಮಹತ್ವ ತಿಳಿಸಲಾಗುತ್ತದೆ. ಆಸಕ್ತರು ತಂಡದ ಜೊತೆ ಕೈಜೋಡಿಸಿ ‘ಫ್ಲ್ಯಾಗಥಾನ್’ನಲ್ಲಿ ಪಾಲ್ಗೊಳ್ಳಬಹುದು.

ಸಂಪರ್ಕ: 9945175050

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !