ಫ್ಲೆಕ್ಸ್ ತೆರವು ಕಾರ್ಯಾರಣೆ: ಅಧಿಕಾರಿಗಳ ಮೈಮುಟ್ಟಿದರೆ ಹುಷಾರ್

7
ಅಡ್ಡಿಪಡಿಸುವವರಿಗೆ ಹೈಕೋರ್ಟ್‌ ಎಚ್ಚರಿಕೆ

ಫ್ಲೆಕ್ಸ್ ತೆರವು ಕಾರ್ಯಾರಣೆ: ಅಧಿಕಾರಿಗಳ ಮೈಮುಟ್ಟಿದರೆ ಹುಷಾರ್

Published:
Updated:
Deccan Herald

ಬೆಂಗಳೂರು: ನಗರದ ಫ್ಲೆಕ್ಸ್ ತೆರವು ಕಾರ್ಯಾಚರಣೆ ವೇಳೆ ಕಾರ್ಮಿಕರ ಮೇಲೆ ಹಲ್ಲೆ ನಡೆಸಿರುವ ಪ್ರಕರಣಗಳ ಬಗ್ಗೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಶುಕ್ರವಾರ ಕೆಂಡಾಮಂಡಲವಾಗಿದ್ದು, ‘ಯಾರಾದರೂ ಅಧಿಕಾರಿಗಳ ಮೈ ಮುಟ್ಟಿದರೆ ಅವರಿಗೆ ತಕ್ಕ ಶಾಸ್ತಿ ಮಾಡಲಾಗುವುದು’ ಎಂದು ಕಠಿಣ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತಂತೆ ಬೆಳಗ್ಗೆ ನಗರ ಪೊಲೀಸ್ ಕಮಿಷನರ್ ಟಿ. ಸುನೀಲ್ ಕುಮಾರ್ ಅವರನ್ನು ಕೋರ್ಟ್‌ಗೆ ಕರೆಯಿಸಿಕೊಂಡ ದಿನೇಶ್ ಮಾಹೇಶ್ವರಿ, ‘ಮೊದಲು ಬೆಂಗಳೂರಿನಲ್ಲಿರುವ ಎಲ್ಲ ರೀತಿಯ ಫ್ಲೆಕ್ಸ್, ಬ್ಯಾನರ್‌ ಮತ್ತು ಹೋರ್ಡಿಂಗ್ಸ್‌ (ದೊಡ್ಡ ಫಲಕ) ತೆರವುಗೊಳಿಸಬೇಕು. ಅವು ಯಾರಿಗೇ ಸೇರಿದ್ದೂ ಸರಿ, ಮುಲಾಜಿಲ್ಲದೇ ಕಿತ್ತು ಹಾಕಿ’ ಎಂದು ಮತ್ತೊಮ್ಮ ಖಡಕ್ ಎಚ್ಚರಿಕೆ ನೀಡಿದರು.

‘ಹಲ್ಲೆ ನಡೆಸಿದವರ ವಿರುದ್ಧ ಪ್ರಕರಣ ದಾಖಲಿಸಿದ್ದೀರಾ’ ಎಂದು ಅಡ್ವೊಕೇಟ್ ಜನರಲ್ ಉದಯ ಹೊಳ್ಳ, ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್‌, ರಾಜ್ಯ ಪ್ರಾಸಿಕ್ಯೂಟರ್ ಎಚ್.ಎಸ್. ಚಂದ್ರಮೌಳಿ ಮತ್ತು ಬರಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪರ ವಕೀಲ ವಿ.ಶ್ರೀನಿಧಿ ಅವರನ್ನು ನ್ಯಾಯಪೀಠ ಪ್ರಶ್ನಿಸಿತು.

ಇದಕ್ಕೆ ಉತ್ತರಿಸಿದ ಉದಯ ಹೊಳ್ಳ ಅವರು, ‘ಹೌದು ಸ್ವಾಮಿ, ಎಫ್‌ಐಆರ್ ದಾಖಲಾಗಿದೆ’ ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ದಿನೇಶ್‌ ಮಾಹೇಶ್ವರಿ, ‘ಆರೋಪಿಗಳು ಜಾಮೀನು ಕೋರಿ ಅರ್ಜಿ ಸಲ್ಲಿಸಿದರೆ ಅವುಗಳನ್ನು ಅಧೀನ ನ್ಯಾಯಾಲಯ ಹೈಕೋರ್ಟ್‌ ರಿಜಿಸ್ಟ್ರಾರ್‌ ಅವರಿಗೆ ಕಳುಹಿಸಿಕೊಡಬೇಕು. ಹೈಕೋರ್ಟ್‌ನ ರೋಸ್ಟರ್ ಬೆಂಚ್‌ಗಳು ಈ ಅರ್ಜಿಗಳನ್ನು ವಿಶೇಷ ನಿಗಾವಹಿಸಿ, ಅಪರೂಪದ ಪ್ರಕರಣಗಳೆಂದು ಪರಿಗಣಿಸಿ ವಿಚಾರಣೆ ನಡೆಸುತ್ತವೆ’ ಎಂದು ಆದೇಶಿಸಿದರು.

ದಿನೇಶ್‌ ಮಾಹೇಶ್ವರಿ ನೀಡಿದ ಎಚ್ಚರಿಕೆಯ ಮುಖ್ಯಾಂಶಗಳು:

* ಆರೋಪಿಗಳ ವಿರುದ್ಧ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಕಲಂ 120 ಬಿ (ಸಮಾಜದ ಶಾಂತಿ ಕದಡಿದ ಆರೋಪ) ಅನುಸಾರ ಪ್ರಕರಣ ದಾಖಲಿಸಿ ತಕ್ಕ ಪಾಠ ಕಲಿಸಿ.

* ಸರ್ಕಾರಿ ಅಧಿಕಾರಿಗಳ ಮೈಮುಟ್ಟವುದು ಎಂದರೆ ಏನೆಂದುಕೊಂಡಿದ್ದಾರೆ?

* ಇಂಥವರಿಗೆಲ್ಲ ಏನು ಮಾಡಬೇಕೆಂದು ನನಗೆ ಚೆನ್ನಾಗಿ ಗೊತ್ತಿದೆ.

* ಪೊಲೀಸರು ಯಾವುದೇ ಕಾರಣಕ್ಕೂ ಹಿಂಜರಿಯದೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು.

* ಈ ಪ್ರವೃತ್ತಿಯ ಅಪರಾಧಿಗಳನ್ನು ಕೋರ್ಟ್ ಬಡಪಟ್ಟಿಗೆ ಬಿಡುವುದಿಲ್ಲ. ಅಗತ್ಯ ಬಿದ್ದರೆ ಈ ಪ್ರಕರಣಗಳ ವಿಚಾರಣೆಗೆ ವಿಶೇಷ ಮ್ಯಾಜಿಸ್ಟ್ರೇಟ್ ನೇಮಕ ಮಾಡುತ್ತೇನೆ.

* ಶೀಘ್ರ ವಿಚಾರಣೆ ನಡೆಸಿ ತಪ್ಪಿತಸ್ಥರನ್ನು ಸರಿಯಾದ ಜಾಗಕ್ಕೆ ಕಳಿಸಲಾಗುವುದು.

* ನಾವು ಯಾರ ಬಗ್ಗೆಯೂ ಪೂರ್ವಗ್ರಹ ಭಾವನೆ ಹೊಂದಿಲ್ಲ.

* ಅಧಿಕಾರಿಗಳಿಗೆ ತಮ್ಮ ಕೆಲಸ ಏನೆಂದು ಗೊತ್ತಿರಬೇಕು. ಗೊತ್ತಿಲ್ಲದಿದ್ದರೆ ಗೊತ್ತು ಮಾಡಿಕೊಳ್ಳಬೇಕು. ಒಂದು ವೇಳೆ ಗೊತ್ತಿಲ್ಲದೆ ಹೋದರೆ ಹೇಗೆ ಗೊತ್ತು ಮಾಡಿಕೊಳ್ಳಬೇಕು ಎಂದು ನಾನು ತೋರಿಸಬಲ್ಲೆ.

* ಈ ರೀತಿಯ ಪ್ರಕರಣಗಳು ವ್ಯವಸ್ಥೆಯನ್ನು ಅಶಾಂತಗೊಳಿಸುವ ಕೃತ್ಯಗಳು. ಅದಕ್ಕೆ ಕಾರಣವಾಗುವ ಕಿಡಿಗೇಡಿಗಳನ್ನು ಕೋರ್ಟ್‌ ಸುಮ್ಮನೆ ಬಿಡುವುದಿಲ್ಲ.

* ಈ ರೀತಿಯ ಅಪರಾಧಕ್ಕೆ ಯಾರಾದರೂ ಕುಮ್ಮಕ್ಕು ನೀಡುತ್ತಿರಬಹುದೇ ಎಂಬ ಸಂಶಯವಿದೆ. ಹಾಗೊಂದು ವೇಳೆ  ಇದ್ದರೆ ನಾನದನ್ನು ತಿಲಮಾತ್ರವೂ ಸಹಿಸುವುದಿಲ್ಲ.

* ಬೆಂಗಳೂರು ಶಿಸ್ತಿಗೆ ಹೆಸರಾದ ನಗರ. ಸಭ್ಯ ನಾಗರಿಕರ ತವರೂರು. ಇಲ್ಲಿ ಪುಂಡಾಟಿಕೆ, ಗೂಂಡಾಗಿರಿ, ಕ್ರಿಮಿನಲ್ ಪ್ರವೃತ್ತಿಗೆ ಒಂಚೂರು ಜಾಗವಿಲ್ಲ.

* ನಗರದಲ್ಲಿ ಎಲ್ಲಿಯಾದರೂ ಒಂದೇ ಒಂದು ಫ್ಲೆಕ್ಸ್ ಕಣ್ಣಿಗೆ ಬಿದ್ದರೂ ಸಹಿಸುವುದಿಲ್ಲ. ಅದು ನಿರ್ಜನ ಪ್ರದೇಶವೇ ಆಗಿರಲಿ. ನಗರದಲ್ಲಿ ಫ್ಲೆಕ್ಸ್ ಹಾಗೂ ಬ್ಯಾನರ್ ಹಾಕವು ಪ್ರವೃತ್ತಿ ಕೊನೆಗೊಳ್ಳಬೇಕು.

* ಈ ದಿಸೆಯಲ್ಲಿ ಪೊಲೀಸರು ಹಾಗೂ ಬಿಬಿಎಂಪಿ ಅಧಿಕಾರಿಗಳು 24x7 ಕೆಲಸ ಮಾಡಬೇಕು.

* ಈಗಾಗಲೇ ಗಸ್ತು ತಿರುಗುತ್ತಿರುವ ಪೊಲೀಸ್ ಕಾರ್ಯಪಡೆಗಳು ಫ್ಲೆಕ್ಸ್ ಹಾಕುವವರ ಬಗ್ಗೆ ನಿಗಾ ವಹಿಸಬೇಕು.

* ಸಿಸಿಟಿವಿ ಕ್ಯಾಮೆರಾಗಳಲ್ಲಿ ಈ ರೀತಿಯ ಚಟುವಟಿಕೆಗಳನ್ನು ಪರಿಶೀಲಿಸಿ, ಫ್ಲೆಕ್ಸ್, ಬ್ಯಾನರ್ ಹಾಕಿದವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು.

* ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾದ ದೃಶ್ಯಾವಳಿಗಳನ್ನು ಒಂದು ತಿಂಗಳಿಗೂ ಹೆಚ್ಚು ಕಾಲ ಅಥವಾ ಶಾಶ್ವತವಾಗಿ ಉಳಿಸಿಕೊಳ್ಳುವಂಥ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವ ಬಗ್ಗೆ ಪೊಲೀಸರು ಗಮನ ಹರಿಸಬೇಕು.

* ಇನ್ನು ಮುಂದೆ ಎಲ್ಲಿಯಾದರೂ ಒಂದೇ ಒಂದು ಫ್ಲೆಕ್ಸ್ ಕಂಡು ಬಂದರೆ ಅದಕ್ಕೆ ಪೊಲೀಸ್ ಕಮಿಷನರ್ ಅವರೇ ಉತ್ತರದಾಯಿ ಆಗಿರುತ್ತಾರೆ.

* ಯಾರೋ ಕಂತ್ರಾಟುದಾರರು ಫ್ಲೆಕ್ಸ್ ತೆರವಿಗೆ ಅಡ್ಡಿಪಡಿಸಿದ್ದಾರೆ ಎಂದು ಇಂದು ಬೆಳಗ್ಗೆ ನಾನು ಪತ್ರಿಕೆಗಳಲ್ಲಿ ಗಮನಿಸಿದ್ದೇನೆ. ಯಾರು ಆ ಮಹಾಶಯ?  ಆತನನ್ನು ಕೋರ್ಟ್‌ಗೆ ಕರೆತಂದು ನಿಲ್ಲಿಸಿ ಎಂದು ಶ್ರೀನಿಧಿಗೆ ತಾಕೀತು.

* ಬೆಂಗಳೂರಿನಲ್ಲಿ ಬಹಳಷ್ಟು ಸಮಸ್ಯೆಗಳಿವೆ ಅವುಗಳ ಮೂಲೋತ್ಪಾಟನೆಯಾಗಬೇಕು.

* ಆ ದಿಸೆಯಲ್ಲಿ ಫ್ಲೆಕ್ಸ್ ಮತ್ತು ಬ್ಯಾನರ್ ತೆರವು ಕಾರ್ಯಾಚರಣೆ ಆರಂಭಿಕ ಹೆಜ್ಜೆ.

ಪೊಲೀಸ್ ಕಮಿಷನರ್‌ಗೆ ನಿರ್ದೇಶನ

‘ಆರೋಪಿಗಳ ವಿರುದ್ಧ ಕೈಗೊಂಡಿರುವ ಕ್ರಮಗಳ ಬಗ್ಗೆ ಇದೇ 8ಕ್ಕೆ ಪ್ರಮಾಣಪತ್ರದ ಮೂಲಕ ವರದಿ ಸಲ್ಲಿಸಿ’ ಎಂದು ಕಮಿಷನರ್‌ ಅವರಿಗೆ ನ್ಯಾಯಪೀಠ ಆದೇಶಿಸಿದೆ.

‘ಕಾರ್ಯಾಚರಣೆ ವೇಳೆ ಅಧಿಕಾರಿಗಳಿಗೆ ರಕ್ಷಣೆ ಕೊಡಿ. ನೀವೇನು ಮಾಡುತ್ತೀರೋ ಗೊತ್ತಿಲ್ಲ. ಆದರೆ ಬೆಂಗಳೂರು ಸ್ವಚ್ಛವಾಗಬೇಕು’ ಎಂದು ತಾಕೀತು ಮಾಡಿದೆ.

* ಫ್ಲೆಕ್ಸ್‌ ಹಾಕುವ ಪ್ರವೃತ್ತಿ ಕ್ರಿಮಿನಲ್ ಮನೋಭಾವದ ವ್ಯಕ್ತಿಗಳಲ್ಲೇ ಹೆಚ್ಚಾಗಿ ಇದ್ದಂತಿದೆ.
–ದಿನೇಶ್‌ ಮಾಹೇಶ್ವರಿ, ಮುಖ್ಯ ನ್ಯಾಯಮೂರ್ತಿ

ಬರಹ ಇಷ್ಟವಾಯಿತೆ?

  • 27

    Happy
  • 1

    Amused
  • 0

    Sad
  • 0

    Frustrated
  • 1

    Angry

Comments:

0 comments

Write the first review for this !