ಮೇವು ಅರಸಿ ಕುರಿಗಾಹಿಗಳ ಅಲೆದಾಟ..!

7
ನೀರಿಗಾಗಿ ತಪ್ಪದ ಪರದಾಟ; ಮೇವಿಲ್ಲದೆ ಜಾನುವಾರುಗಳ ಸಂಕಟ

ಮೇವು ಅರಸಿ ಕುರಿಗಾಹಿಗಳ ಅಲೆದಾಟ..!

Published:
Updated:
Prajavani

ಕಿಲಾರಹಟ್ಟಿ: ಸತತ ಭೀಕರ ಬರ ಕಿಲಾರಹಟ್ಟಿಯ (ಇಟ್ಟಂಗಿಹಾಳ ದೊಡ್ಡಿ) ಜನರನ್ನು ಕಂಗಾಲಾಗಿಸಿದೆ. ಇಲ್ಲಿನ ಕುರಿಗಾಹಿಗಳು, ಹೈನುಗಾರರು ದಿನದೂಡಲು ಹರಸಾಹಸ ನಡೆಸುತ್ತಿದ್ದಾರೆ.

ಕಿಲಾರಹಟ್ಟಿಯೊಂದರಲ್ಲೇ ಕನಿಷ್ಠ 500ರಿಂದ 600 ಮನೆಗಳಿವೆ. ಪ್ರತಿ ಮನೆಯಲ್ಲೂ ಕುರಿ ಸಾಕಣೆಯೇ ಪ್ರಧಾನ ಕಸುಬಾಗಿದೆ. ಇದರ ಜತೆಗೆ ಹೈನುಗಾರಿಕೆಯೂ ಈ ಕುಟುಂಬಗಳ ಆರ್ಥಿಕ ಸದೃಢತೆಗೆ ಕಾರಣೀಭೂತವಾಗಿದೆ.

ಗ್ರಾಮದ ಆಸುಪಾಸು ಗೋಮಾಳ ಹೆಚ್ಚಿರುವುದರಿಂದ ಇಲ್ಲಿನ ಜನರು, ತಮ್ಮ ಪೂರ್ವಿಕರ ಕಾಲದಿಂದಲೂ ಕುರಿ ಸಾಕಣೆ, ಎಮ್ಮೆ, ಆಕಳು ಸಾಕಣೆಯನ್ನೇ ತಮ್ಮ ಕಸುಬನ್ನಾಗಿಸಿಕೊಂಡಿದ್ದಾರೆ. ಈ ಹಿಂದೆ ಬರ ತಲೆದೋರಿದಾಗ, ಇಲ್ಲಿನ ಜನರು, ತಮ್ಮ ಕುರಿ ಹಿಂಡಿನೊಂದಿಗೆ ನೆರೆಯ ಯಾದಗಿರಿ, ಕಲಬುರ್ಗಿ ಜಿಲ್ಲೆಯ ನೀರಾವರಿ ಆಶ್ರಿತ ಪ್ರದೇಶಕ್ಕೆ ವಲಸೆ ಹೋಗುತ್ತಿದ್ದರು.

ಆದರೆ ಇದೀಗ ಚಿತ್ರಣ ಬದಲಾಗಿದೆ. ಆ ಭಾಗದಲ್ಲೂ ಕುರಿಗಳಿಗೆ ಬೇಕಿರುವ ಹಸಿರು ಮೇವು, ಒಣ ಮೇವಿನ ಲಭ್ಯತೆಯಿಲ್ಲದಿರುವುದರಿಂದ; ದಿಕ್ಕು ತೋಚದೆ ಕಂಗಾಲಾಗಿದ್ದಾರೆ. ಅನಿವಾರ್ಯವಾಗಿ ಈಗಾಗಲೇ 50% ಜನರು ತಮ್ಮ ಕುರಿ ಹಿಂಡಿನೊಂದಿಗೆ ಶಹಾಪುರ, ಸುರಪುರ ಭಾಗಕ್ಕೆ ಅಲೆದಾಟ ನಡೆಸಿದ್ದಾರೆ.

‘ವಲಸೆ ಹೋದವರನ್ನು ದೊಡ್ಡಿಯವರು ಸಂಪರ್ಕಿಸುತ್ತಿದ್ದಂತೆ; ನೀವು ಅಲ್ಲಿಯೇ ಸುತ್ತಮುತ್ತ ಕುರಿ ಮೇಯಿಸಿಕೊಂಡು ಕಾಪಾಡಿಕೊಳ್ಳಿ. ಇತ್ತ ದೂರ ಬರಬೇಡಿ. ಎಷ್ಟು ದೂರ ತೆರಳಿದರೂ ಮೇವು, ನೀರಿನ ಆಸರೆ ಸಿಗುತ್ತಿಲ್ಲ ಎನ್ನುತ್ತಿರುವುದು ಕಿಲಾರಹಟ್ಟಿಯ ಕುರಿಗಾಹಿಗಳ ಆತ್ಮಸ್ಥೈರ್ಯವನ್ನೇ ಕಳೆದಿದೆ’ ಎಂದು ದೊಡ್ಡಿಯ ಹಿರಿಯ ದೊಂಢಿಬಾ ತಾಂಬೆ ತಿಳಿಸಿದರು.

ಖರೀದಿಯೂ ತುಟ್ಟಿ:

‘ದೊಡ್ಡಿಯಲ್ಲಿ ಕನಿಷ್ಠ 10000 ಕುರಿಗಳಿವೆ. ಎರಡ್ಮೂರು ವರ್ಷದಿಂದ ಸಕಾಲಕ್ಕೆ ಮಳೆ ಸುರಿಯದಿದ್ದರಿಂದ ಹಸಿರೇ ಇಲ್ಲವಾಗಿದೆ. ಒಣ ಮೇವು ಕತ್ತರಿಸಿ ಹಾಕಲು ಸಿಗದಾಗಿದೆ. ಜೀವ ಉಳಿಸಿಕೊಳ್ಳಲು ಅನಿವಾರ್ಯವಾಗಿ ವಿಜಯಪುರ, ಬಸವನಬಾಗೇವಾಡಿ, ಇಂಡಿ, ಸಿಂದಗಿ ತಾಲ್ಲೂಕಿನ ಕಾಲುವೆ ಭಾಗದ ನೀರಾವರಿ ಆಶ್ರಿತ ಪ್ರದೇಶಕ್ಕೆ ವಲಸೆ ಹೋಗಿದ್ದಾರೆ.

ಎಲ್ಲಿ ಹೋದರೂ ಮೇವು ಸಿಗದಾಗಿದೆ. ಕುರಿಗಳ ರಕ್ಷಣೆಗಾಗಿ ಒಂದು ಟ್ರ್ಯಾಕ್ಟರ್‌ ತೊಗರಿ ಹೊಟ್ಟನ್ನು ₹ 3000–₹ 4000 ನೀಡಿ ಖರೀದಿಸುತ್ತಿದ್ದಾರೆ. ಒಂದೆರೆಡು ಅಡಿ ಎತ್ತರ ಬೆಳೆದು ಹಾನಿಗೀಡಾಗಿರುವ ಜೋಳದ ಹೊಲಗಳಲ್ಲಿ ಕುರಿ ಮೇಯಿಸಲು ರೈತರಿಗೆ ರೊಕ್ಕ ನೀಡುವ ಕಾಲ ಬಂದಿದೆ.

ಮೂರ್ನಾಲ್ಕು ಎಕರೆಯ ಹೊಲಕ್ಕೆ ₹ 5000 ಕೊಟ್ಟು ಮೂರ್ನಾಲ್ಕು ದಿನ ತಮ್ಮ ಕುರಿಗಳನ್ನು ಕೂಡಿಕೊಂಡು ಮೇಯಿಸುತ್ತಿದ್ದಾರೆ. ಇನ್ನಷ್ಟು ದಿನ ಕಳೆದರೆ ಏನು ಸಿಗದು. ಇಂಥ ಸಂದರ್ಭ ಏನು ಮಾಡಬೇಕೆಂಬುದು ತೋಚದಾಗಿದೆ. ಸರ್ಕಾರ, ಜಿಲ್ಲಾಡಳಿತವೇ ನಮ್ಮ ನೆರವಿಗೆ ಬರಬೇಕಿದೆ’ ಎನ್ನುತ್ತಾರೆ ದೊಡ್ಡಿಯ ಶೇಖಪ್ಪ ಭಜಂತ್ರಿ.

‘ನಮ್ಮಲ್ಲಿಯೇ ಇದ್ದ ಸಚ್ಚಿದಾನಂದ ಬಾಬಾ ಜಾನುವಾರು ಕಸಾಯಿಖಾನೆ ಪಾಲಾಗಬಾರದು ಎಂದು ಹಲ ವರ್ಷಗಳ ಹಿಂದೆ ಗೋಶಾಲೆಯೊಂದನ್ನು ಆರಂಭಿಸಿದ್ದರು. ಇದೀಗ 100 ಜಾನುವಾರುಗಳು ಇಲ್ಲಿವೆ. ಆದರೆ ಮೇವು–ನೀರಿನ ಕೊರತೆ ಬಾಧಿಸುತ್ತಿದೆ.

ಮೂರ್ನಾಲ್ಕು ವರ್ಷಗಳ ಹಿಂದೆ ಬಾಬಾ ಲಿಂಗೈಕ್ಯರಾದ ಬಳಿಕ, ಗೋಶಾಲೆ ನಿರ್ವಹಿಸುವುದು ಕಷ್ಟವಾಗಿದೆ. ಇಂಥ ಸಂದರ್ಭದಲ್ಲಾದರೂ ಜಿಲ್ಲಾಡಳಿತ ಮೇವು–ನೀರು ಒದಗಿಸಬೇಕು’ ಎಂದು ಶೇಖಪ್ಪ ಮನವಿ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !