ಅರರರ ಅರರರ ರಾ.. ಕೇಸರಿಯಾ...

7

ಅರರರ ಅರರರ ರಾ.. ಕೇಸರಿಯಾ...

Published:
Updated:
Deccan Herald

ಅರರರೆ ಅರರರಾ... ಪಧಾರೋ ಮಾರೆ... ದೇಸ್‌... ರಾಜಸ್ಥಾನಿ ಭಾಷೆಯಲ್ಲಿ ದಯಮಾಡಿಸಿ, ನಮ್ಮೂರಿಗೆ ಎಂದು ಕರೆಯುವ ಕಲಾವಿದರ ಕಂಚಿನ ಕಂಠ, ಅಲ್ಲಿಯ ಹಾರ್ಮೋನಿಯಂನೊಂದಿಗೆ ಏಕತ್ರವಾಗುತ್ತದೆ. ನರನಾಡಿಗಳಲ್ಲಿ ಉತ್ಸಾಹ ತುಂಬಿ ತುಳುಕುವಂತಹ ರಾಜಸ್ಥಾನಿ ಜನಪದ ಗೀತೆಗಳು, ಕಚ್ಚಿ ಘೋಡಿಯ ಹೆಜ್ಜೆಗಳು, ಆ ಕುದುರೆಯ ಠೀವಿ, ಗಾಂಭೀರ್ಯ, ನಡಿಗೆ, ಹೆಜ್ಜೆ, ಕುಣಿತ ಎಲ್ಲವೂ ನಮ್ಮೊಳಗೊಂದು ಹೊಸತನ್ನು ಹುಟ್ಟು ಹಾಕುತ್ತವೆ... ಅಂಗಳದಲ್ಲಿ ಕುಳಿತು ಈ ಕುಣಿತ ನೋಡುವಾಗಲೇ ಹಾಡುಗಳು ಬದಲಾಗುತ್ತವೆ... ತಾರಕಕ್ಕೇರಿದ ಧ್ವನಿ, ಮಂದ್ರಕ್ಕೆ ಇಳಿಯುವಾಗಲೇ ಅಲ್ಲೊಂದು ಬೊಂಬೆ ಉತ್ಸವ ಆರಂಭವಾಗುತ್ತದೆ. ಇದರಲ್ಲಿ ಒಂದಷ್ಟು ಹಾಡು, ಕುಣಿತ.. ಸೂತ್ರಬೊಂಬೆಗಳು ಇಷ್ಟಗಲದ ಘಾಗ್ರಾ ಹಿಡಿದು ನರ್ತಿಸುವುದನ್ನು ನೋಡುವುದೇ ಚಂದ...

ಮುಂಡಿ ಡಾನ್ಸ್‌ ಎಂಬ ಬೊಂಬೆಯ ನೃತ್ಯವಂತೂ ನಕ್ಕು, ನಗಿಸಿ, ಹೊಟ್ಟೆ ಹುಣ್ಣಾದಾಗಲೇ ನೆನಪಾಗುವುದು, ನಾವಿಲ್ಲಿ ಬಂದಿದ್ದು ಹೊಟ್ಟೆಗಾಗಿ... ಅಷ್ಟರಲ್ಲಿಯೇ ನಮ್ಮನ್ನು ಹೋಟೆಲ್‌ನ ಮ್ಯಾನೇಜರ್‌ ಕಿಶೋರ್‌ ಟೇಬಲ್‌ವರೆಗೂ ಕರೆದೊಯ್ಯುತ್ತಾರೆ. ಅಂಡಾಕಾರದ ತಟ್ಟೆಯಲ್ಲಿ, ಆಟಕ್ಕಿಡುವಂಥ ಪುಟ್ಟ ಪುಟಾಣಿ ಬಟ್ಟಲುಗಳು. ತುತ್ತೆತ್ತಿಕೊಳ್ಳಲು ಮೂರು ಬೆರಳು ಮಾತ್ರ ಹೋಗುವಂತಿರುವ ಆ ಬಟ್ಟಲನ್ನು ನೋಡುವುದೇ ಚಂದ.

ರಾಜಸ್ಥಾನದ ರಾಜ್‌ಮಹಲಿನಂತಿರುವ ಕಮಾನುಗಳು, ಕುರ್ಚಿಗಳು ಎಲ್ಲವೂ ನಮ್ಮನ್ನು ರಾಜಸ್ಥಾನದಂಗಳಕ್ಕೇ ಕರೆದೊಯ್ಯುತ್ತವೆ. ಬೆಳ್ಳಿ ತಟ್ಟೆ, ಬಟ್ಟಲು, ಅಲ್ಲಿಯವರ ಆತಿಥ್ಯ, ಒಂದಷ್ಟು ಹೊತ್ತಾದರೂ ರಾಜಮನೆತನದವರಂತೆ ಅನುಭಿಸಲು ಅನುವು ಮಾಡಿಕೊಡುತ್ತದೆ.

ಸಾಮಾನ್ಯವಾಗಿ ರಾಜಸ್ಥಾನಿ ಖಾದ್ಯಗಳ ಬಗ್ಗೆ ದಕ್ಷಿಣ ಭಾರತದ ಬಹುತೇಕರಿಗೆ ಪರಿಚಯವಿಲ್ಲದ ಕಾರಣ, ಹತ್ತಿರ ನಿಂತು ಖಾದ್ಯಗಳ ಬಗ್ಗೆ ವಿವರಿಸುತ್ತಾ ತಿನ್ನುವ ವಿಧಾನವನ್ನೂ ತಿಳಿಸಿಕೊಡುತ್ತಾರೆ. 20 ರಿಂದ 25 ಮಂದಿ ಪರಿಚಾರಕರಿದ್ದು, ಅವರ ಉಡುಗೆ, ವೇಷ–ಭೂಷಣಗಳು ರಾಜಸ್ಥಾನಿ ಸಂಸ್ಕೃತಿಯನ್ನೇ ಪ್ರತಿಬಿಂಬಿಸುತ್ತವೆ. ಅಡುಗೆ ತಯಾರಿಸುವವರು ಕೂಡ ರಾಜಸ್ಥಾನದವರೇ. ದಾಲ್‌ ಭಾಟಿ ಚೂರ್ಮ, ಮೊದಲು ಭಾಟಿ ಬಡಿಸುತ್ತಾರೆ. ಗೋಧಿ ಹಿಟ್ಟು ರವೆಯ ಈ ಖಾದ್ಯಕ್ಕೆ ಪಂಚ್‌ದಾಲ್‌ ಸುರಿಯುತ್ತಾರೆ. ನಮ್ಮನೆಯ ತೊವ್ವೆಯಂತೆಯೇ ಕಾಣಿಸುವ ಇದರಲ್ಲಿ ಹೆಸರು, ತೊಗರಿ, ಉದ್ದು, ಕಡಲೆ, ಚನ್ನಂಗಿ ಮುಂತಾದ ಬೇಳೆಗಳ ಕೂಟದು. ಅದಕ್ಕೆ ಚೂರ್ಮಾ ನಮ್ಮ ಮೈಸೂರು ಪಾಕಿನ ಪುಡಿಯಂತಿದ್ದರೂ ಇದರಲ್ಲಿಯ ಅಂಟು ಬೇರೆಯದೇ ರುಚಿ ನೀಡುತ್ತದೆ. ಇದು ಸಜ್ಜೆಯ ಅಂಬಲಿ. ಸೂಪಿನಂತೆ ಮೊದಲು ಕುಡಿಯಿರಿ. ಇದು ಸಾಸಿವೆ ನೀರು.. ಊಟದ ನಂತರ ಕುಡಿಯಿರಿ. ಜೀರ್ಣಕ್ಕೆ ಸಹಕಾರಿ.. ಹೀಗೆ ಹೇಳುತ್ತಲೇ ಹಲವಾರು ಖಾದ್ಯಗಳು ನಮ್ಮ ತಟ್ಟೆಗೆ ಬಂದಿಳಿಯುತ್ತವೆ.

ಎಲ್ಲವೂ ಮಿನಿಯೇಚರ್‌ ಆಕಾರದಲ್ಲಿ. ಇಡೀ ವಾತಾವರಣವೇ ಮಿನಿ ರಾಜಸ್ಥಾನದಂತೆ. ಇದಕ್ಕಾಗಿ ರಾಜಸ್ಥಾನ ಕಲಾವಿದ ತಂಡ ಬೀಡು ಬಿಟ್ಟಿದ್ದು, ನಿತ್ಯವೂ 15ರಿಂದ 20 ನಿಮಿಷ ಅವಧಿಯ ನಾಲ್ಕು ಅಥವಾ ಐದು ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾರೆ.

‘ರಾಜಸ್ಥಾನಿ ಸಂಸ್ಕೃತಿ, ಸಾಂಪ್ರದಾಯ ಮತ್ತು ಆಹಾರ ಪದ್ಧತಿಗಳನ್ನು ದಕ್ಷಿಣ ಭಾರತದವರಿಗೂ ತಲುಪಿಸುವ ಉದ್ದೇಶದಿಂದ ನಮ್ಮ ಸಹೋದರ ಸಿದ್ದಾರ್ಥ ಗೋಯೆಂಕಾ ಅವರು ನಾಲ್ಕು ವರ್ಷಗಳಿಂದ ಈ ಆಹಾರ ಮೇಳವನ್ನು ಆಯೋಜಿಸುತ್ತಾ ಬಂದಿದ್ದಾರೆ. ಹಿಂದಿನ ಮೇಳಗಳೆಲ್ಲಾ ಜೆ.ಪಿ. ನಗರದ ಶಾಖೆಯಲ್ಲಿ ನಡೆದಿದ್ದವು. ಈ ಬಾರಿ ಮಾತ್ರ ಸದಾಶಿವನಗರದ ಈ ಹೊಸ ಶಾಖೆಯಲ್ಲಿ ಆಯೋಜಿಸಿದ್ದೇವೆ’ ಎಂದು ರೆಸ್ಟೊರೆಂಟ್‌ನ ಮಾಲೀಕರಾದ ವಿಶಾಖ ಅವರು ಮೇಳದ ಬಗ್ಗೆ ವಿವರಿಸಿದರು.

‘ಹೊಸ ಬಗೆಯ ಖಾದ್ಯಗಳನ್ನು ಪರಿಚಯಿಸುವುದು ಈ ಮೇಳದ ಉದ್ದೇಶ. ಗ್ರಾಹಕರನ್ನು ಅತಿಥಿಗಳಂತೆ ಆದರಿಸಬೇಕೆಂಬುದು ನಮ್ಮ ಅಭಿಲಾಷೆ. ಹೀಗಾಗಿಯೇ ಗ್ರಾಹಕರು ಕೇಳಿದಷ್ಟು ಆಹಾರ ಬಡಿಸುತ್ತೇವೆ. ಅಡುಗೆಗಾಗಿ ಬಳಸುವ ಎಲ್ಲ ಮಸಾಲೆ ಪದಾರ್ಥಗಳನ್ನು ರಾಜಸ್ಥಾನದಿಂದಲೇ ತರಿಸಿಕೊಳ್ಳುತ್ತೇವೆ. ರೈತರ ಹೊಲಗಳಿಂದಲೇ ತರಕಾರಿ ಖರೀದಿಸಿ ತರುತ್ತೇವೆ. ಆಯಾ ದಿನಕ್ಕೆ ಸರಿಹೊಂದುವಂತೆ ಮಾತ್ರ ಅಡುಗೆ ತಯಾರಿಸುತ್ತೇವೆ. ಇಂದು ತಯಾರಿಸಿದ ಖಾದ್ಯಗಳನ್ನು ಮರುದಿನ ಬಳಸುವುದಿಲ್ಲ. ಒಟ್ಟಿನಲ್ಲಿ ಗ್ರಾಹಕರಿಗೆ ತಾಜಾತನದ ಅನುಭವ ನೀಡುವುದಷ್ಟೇ ನಮ್ಮ ಗುರಿ ಎಂದು ಅವರು ಸಂತೋಷದಿಂದ ಹೇಳುತ್ತಾರೆ.  ಈ ಮೇಳ ಇದೇ 7ರ ವರೆಗೆ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !