ಸಿಂದಗಿಯಲ್ಲಿ ನೀರ್‌ ದೋಸೆ ಖ್ಯಾತಿಯ ರವಿ ಕುಂದಾಪುರ..!

7
ಬೋಂಡಾ ಸೂಪ್‌, ಮಿಡಚಿ ಬಜಿ, ಕಟ್‌ ಬಜಿ ಇಲ್ಲಿನ ಸ್ಪೆಷಲ್‌

ಸಿಂದಗಿಯಲ್ಲಿ ನೀರ್‌ ದೋಸೆ ಖ್ಯಾತಿಯ ರವಿ ಕುಂದಾಪುರ..!

Published:
Updated:
Prajavani

ಸಿಂದಗಿ: ಬೋಂಡಾ ಸೂಪ್‌ ಎಂದೊಡನೆ ಪಟ್ಟಣಿಗರಿಗೆ ರವಿ ಕುಂದಾಪುರ ಅವರ ನ್ಯೂ ಶೀತಲ್‌ ಹೋಟೆಲ್‌ ನೆನಪಾಗುತ್ತದೆ. ತಕ್ಷಣವೇ ಅಲ್ಲಿಗೆ ಬೋಂಡಾ ನೆನಪಿಸಿಕೊಂಡವರು ದಾಂಗುಡಿಯಿಡುವುದು ಸಹಜವಾಗಿರುತ್ತದೆ. ಇದು ಉಡುಪಿ ಮೂಲದ ಹೋಟೆಲ್ ಉದ್ಯಮಿಯ ಕರಾಮತ್ತು.

ರವಿ ಬೋಂಡಾ ಅಂದ್ರೇ ಎಲ್ಲೆಲ್ಲೂ ಭಾರಿ ಬೇಡಿಕೆ. ಮುಂಜಾನೆ ಬೋಂಡಾ ಸ್ಪೆಷಲ್‌ ಎರಡು ಗಂಟೆಯೊಳಗಾಗಿ ಖಾಲಿ. ಮತ್ತೆ ಬೇಕೂ ಅಂದ್ರೂ; ಮರುದಿನದವರೆಗೂ ಕಾಯಲೇಬೇಕು.

ಸಂಜೆ ಹೊತ್ತು ಮಿಡಚಿ ಬಜಿ, ಕಟ್ ಬಜಿ ಸ್ಪೆಷಲ್. ಕಮರು ಒಲ್ಲೇ ಅನ್ನುವ ಮನುಷ್ಯ ಸಹ ಇಲ್ಲಿಗೆ ಒಮ್ಮೆ ಭೇಟಿ ಕೊಟ್ಟರೆ, ಬಿಸಿ, ಬಿಸಿ ಬಜಿ ತಿಂದು ಬಾಯಾಡಿಸುತ್ತಲೇ ಹೋಗಬೇಕು. ಹಾಗಿರುತ್ತದೆ ಇಲ್ಲಿನ ಬಜಿ ಮಹಿಮೆ.

ಇವುಗಳ ಜತೆ ಇಲ್ಲಿನ ಇನ್ನೂ ಒಂದು ವಿಶೇಷ ತಿನಿಸು ಎಂದ್ರೇ ಕರಾವಳಿಯ ನೀರ್‌ ದೋಸೆ. ಇದಕ್ಕೆ ಮುಂಚಿತವಾಗಿಯೇ ಹೇಳಬೇಕು. ಸ್ವಾದಿಷ್ಟವಾದ ಇಲ್ಲಿನ ನೀರ್‌ ದೋಸೆ ಲೆಕ್ಕಕ್ಕೆ ಸಿಗದಷ್ಟು ತಿನ್ನುತ್ತಾರೆ ಆಹಾರ ಪ್ರಿಯರು.

ಬೆಳಿಗ್ಗೆ ಬೋಂಡಾ ಜತೆ ಸಾಂಬಾರು, ಪುದೀನಾ ಚಟ್ನಿ ಅತ್ಯುತ್ತಮ ಕಾಂಬಿನೇಶನ್. ಸಂಜೆ ಕಟ್ ಬಜಿ ಮತ್ತು ಮಿಡಚಿ ಬಜಿ ಜತೆ ಹುರಿದ, ಕರಿದ ಮೆಣಸಿನಕಾಯಿ ಇರುತ್ತದೆ. ನೀರ್‌ ದೋಸೆಗೆ ಕುರ್ಮಾ ಅದ್ಭುತವಾಗಿರುತ್ತದೆ.

ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಮನಗೂಳಿ ತಮ್ಮ ಮನೆಗೆ ನೀರ್‌ ದೋಸೆ ತರಿಸಿಕೊಂಡು ತಿನ್ನುವುದುಂಟು. ಆಗಾಗ್ಗೆ ಮೆಚ್ಚುಗೆಯ ಮಾತು ನೀರ್ ದೋಸೆ ಬಗೆ ಬರುವುದುಂಟು.

‘ವಾರದಲ್ಲಿ 2-3 ದಿನ ನೀರ್‌ ದೋಸೆಗೆ ಆರ್ಡರ್ ಇದ್ದೇ ಇರುತ್ತದೆ. ನಾಲ್ಕು ದೋಸೆಗೆ ₹ 25. ಎಲ್ಲ ವಯೋಮಾನದವರಿಗೂ ಇದು ಉತ್ತಮ ಆಹಾರ’ ಎನ್ನುತ್ತಾರೆ ರವಿ ಕುಂದಾಪುರ.

ರವಿ ಹೋಟೆಲ್‌ ಉದ್ಯಮದ ಜತೆಗೆ ಕೊಂಚ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಬಸ್ ನಿಲ್ದಾಣದ ಸುತ್ತಲೂ ಹೆರಿಗೆ ಆಸ್ಪತ್ರೆಗಳಿವೆ. ಹೆರಿಗೆಯಾದ ನಂತರ ಬಾಣಂತಿಯರಿಗೆ ಅಗತ್ಯವಾಗಿರುವ ಕುಡಿಯಲು ಬಿಸಿ ನೀರು, ತಿನ್ನಲು ಇಡ್ಲಿಯನ್ನು ರಾತ್ರಿಯಾದರೂ ಪೂರೈಕೆ ಮಾಡುತ್ತಾರೆ.

ಮನೆಯಲ್ಲಿ ಇಷ್ಟು ಕಾಳಜಿ ಮಾಡೋದಿಲ್ಲ. ಅಷ್ಟು ಕಾಳಜಿಯನ್ನು ಹೋಟೆಲ್‌ ಮಾಲೀಕ ರವಿ ಗ್ರಾಹಕರಿಗೆ ಮಾಡುವುದು ವಿಶೇಷ. ಗ್ರಾಹಕರೇ ನನ್ನ ದೇವರು ಎಂಬ ಭಾವನೆ ಇವರದ್ದು.

ಕನಿಷ್ಠ ವಾರಕ್ಕೆ ಎರಡು ದಿನವಾದರೂ ರವಿ ಹೋಟೆಲ್‌ನ ನೀರ್‌ ದೋಸೆ ತಿನ್ನದೇ ಇರೋದಕ್ಕೆ ಆಗೋದಿಲ್ಲ ಎನ್ನುತ್ತಾರೆ ಪುರಸಭೆ ಮಾಜಿ ಅಧ್ಯಕ್ಷ ಸುಶಾಂತ ಪೂಜಾರಿ. ನನಗೆ ನಿತ್ಯವೂ ಇಲ್ಲಿನ ಬಜಿ ತಿನ್ನದಿದ್ದರೇ ಊಟವೇ ಒಳಗಿಳಿಯಲ್ಲ ಎಂದವರು ಪುರಸಭೆ ಸದಸ್ಯ ರಾಜು ಕೂಚಬಾಳ. ಬಹುತೇಕ ಪ್ರಾಥಮಿಕ ಶಾಲಾ ಶಿಕ್ಷಕರಿಗೆ, ರಾಜಕಾರಣಿಗಳಿಗೆ ಸಂಜೆ ಹೊತ್ತು ಈ ಹೊಟೇಲ್ ಕಾಯಂ ಜಾಗ.

‘ಉದ್ಯಮದ ಎರಡು ದಶಕ ಕಳೆದಿದ್ದು ಮೈಸೂರು, ಶಹಾಪುರ, ಸಿಂದಗಿಯಲ್ಲಿ. ಶಹಾಪುರದಲ್ಲಿ ₨ 10 ಲಕ್ಷ ಕೈ ಸುಟ್ಟುಕೊಂಡು ಸಿಂದಗಿಗೆ ಬಂದೆ. ಇಲ್ಲಿನ ಜನ ನನ್ನ ಕೈ ಹಿಡಿದರು. ನಮ್ಮವನಂತೆ ನನ್ನನ್ನು ಕಾಣುತ್ತಿದ್ದಾರೆ’ ಎನ್ನುತ್ತಾರೆ ರವಿ ಕುಂದಾಪುರ.

ಸಂಪರ್ಕ ಸಂಖ್ಯೆ: 9591787294

ಲೆಮೆನ್ ಟೀ ಸ್ಪೆಷಲ್‌

ಇಲ್ಲಿ ತಯಾರಿಸುವ ಲೆಮೆನ್‌ ಟೀ ಕುಡಿಯಲು ಬರುವವರೇ ಹೆಚ್ಚಿದ್ದಾರೆ. ಲೆಮೆನ್‌ ಟೀ ಇಂದಿನ ಅತ್ಯಗತ್ಯವಾಗಿದೆ. ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಎನ್ನುತ್ತಾರೆ ಈ ಹೋಟೆಲ್‌ನ ಗ್ರಾಹಕರೂ ಆಗಿರುವ ತಾಲ್ಲೂಕು ಆಯುಷ್ಯ ವೈದ್ಯಾಧಿಕಾರಿ ಮಹಾಂತೇಶ ಹಿರೇಮಠ.

ನೀರು, ಸಕ್ಕರೆ, ಸ್ವಲ್ಪ ಟೀ ಪುಡಿ, ಶುಂಠಿ ಹಾಕಿ ಕುದಿಸೋದು. ಕುಡಿಯುವ ಮುನ್ನ ಪುದಿನಾ ಎಲೆ ಮತ್ತು ಲಿಂಬೆ ರಸ ಹಾಕಿಕೊಂಡು ಕುಡಿದರೆ ಅದರ ಮಜಾನೇ ಬೇರೆ ಎನ್ನುತ್ತಾರೆ ಹೋಟೆಲ್‌ ಮಾಲೀಕ ರವಿ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !