ಬ್ರೌನ್‌ಬ್ರೆಡ್‌ ಕಟ್ಲೆಟ್‌, ಚಾಟ್‌

7

 ಬ್ರೌನ್‌ಬ್ರೆಡ್‌ ಕಟ್ಲೆಟ್‌, ಚಾಟ್‌

Published:
Updated:

ಆರೋಗ್ಯಕ್ಕೆ ಹಿತವಾದ ಬ್ರೌನ್‌ಬ್ರೆಡ್‌ ಸ್ವೀಟ್‌ಕಾರ್ನ್‌, ದಾಳಿಂಬೆ, ಕ್ಯಾರೆಟ್ ಬಳಸಿ ಹಲವಾರು ವೈವಿಧ್ಯಗಳನ್ನು ಬಹಳ ಬೇಗನೆ ರುಚಿಕರವಾದ ಚಾಟ್ಸ್‌ ತಯಾರಿಸಬಹುದು. ಇಲ್ಲಿದೆ ರೆಸಿಪಿ..

ಪೀನಟ್ ಗಾರ್ಲಿಕ್ ಟೋಸ್ಟ್ 


ಏನೇನು ಬೇಕು? : ಬ್ರೆಡ್ ಸ್ಲೈಸ್ -ಎಂಟು, ಶೇಂಗಾ ಆರು ಚಮಚ, ಕೆಂಪುಮೆಣಸು- ಎರಡು, ಗಟ್ಟಿ ಹುಳಿ ಮೊಸರು ನಾಲ್ಕು ಚಮಚ, ಬೆಳ್ಳುಳ್ಳಿ ಆರು ಎಸಳು, ಕೊತ್ತಂಬರಿ ಸೊಪ್ಪು, ಶುಂಠಿ, ಲಿಂಬೆರಸ ಮತ್ತು ಹಸಿಮೆಣಸು ಸೇರಿಸಿ ರುಬ್ಬಿದ ಪೇಸ್ಟ್ ಎರಡು ಚಮಚ, ಉಪ್ಪು ರುಚಿಗೆ, 

ಮಾಡೋದು ಹೇಗೆ?
ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಶೇಂಗಾವನ್ನು ಹುರಿದು ಮಿಕ್ಸಿ ಜಾರಿಗೆ ಹಾಕಿ. ಇದಕ್ಕೆ ಹುರಿದ ಕೆಂಪು ಮೆಣಸು, ಬೆಳ್ಳುಳ್ಳಿ, ಉಪ್ಪು ಹಾಗೂ ಸ್ವಲ್ಪ ನೀರು ಸೇರಿಸಿ ಚಟ್ನಿಯ ಹದಕ್ಕೆ ರುಬ್ಬಿ ಮಿಕ್ಸಿಂಗ್ ಬೌಲ್‌ಗೆ ಹಾಕಿ. ನಂತರ ಇದಕ್ಕೆ ಕೊತ್ತಂಬರಿ ಸೊಪ್ಪಿನ ಪೇಸ್ಟ್ ಹಾಗೂ ಮೊಸರು ಸೇರಿಸಿ ಚೆನ್ನಾಗಿ ಮಿಶ್ರಮಾಡಿ. ಬ್ರೆಡ್‌ ಸ್ಲೈಸ್‌ ಅನ್ನು ಒಂದರಲ್ಲಿ ಎರಡರಂತೆ ತ್ರಿಕೋನಾಕಾರದಲ್ಲಿ ಕತ್ತರಿಸಿ. ನಂತರ ಒಂದೊಂದೇ ಬ್ರೆಡ್‌ಗೆ ಈ ಮಿಶ್ರಣವನ್ನು ಎರಡೂ ಬದಿಗೆ ಹಚ್ಚಿ ಕಾದ ತವಾದಲ್ಲಿ ಸ್ವಲ್ಪ ತುಪ್ಪ ಹಾಕಿ ಎರಡೂ ಬದಿ ರೋಸ್ಟ್ ಮಾಡಿ. ಈಗ ತಯಾರಾದ ಬ್ರೆಡ್ ಟೋಸ್ಟ್‌ ಅನ್ನು ಟೊಮ್ಯಾಟೊ  ಕೆಚಪ್‌ನೊಂದಿಗೆ ಸರ್ವ್‌ ಮಾಡಬಹುದು.

ಬ್ರೆಡ್ ಕಟ್ಲೆಟ್‌  

ಏನೇನು ಬೇಕು? : ಬ್ರೆಡ್ ಆರು ಸ್ಲೈಸ್, ಸಣ್ಣಗೆ ಹೆಚ್ಚಿದ ಬೀನ್ಸ್, ಕ್ಯಾರೆಟ್, ಕೋಸು, ಬೀಟ್ರೂಟ್ ಮಿಶ್ರಣ ಒಂದು ಕಪ್, ಬೇಯಿಸಿ ಪುಡಿ ಮಾಡಿದ ಆಲೂಗಡ್ಡೆ ಎರಡು, ಹಸಿರು ಬಟಾಣಿ ಅರ್ಧ ಕಪ್, ಶುಂಠಿ- ಬೆಳ್ಳುಳ್ಳಿ ಪೇಸ್ಟ್ -ಮೂರು ಚಮಚ, ಹಸಿ ಮೆಣಸಿನಕಾಯಿ  ಐದು, ಹೆಚ್ಚಿದ ಈರುಳ್ಳಿ ಒಂದು, ಕೊತ್ತಂಬರಿಸೊಪ್ಪು ನಾಲ್ಕು ಚಮಚ, ಅರಶಿಣ ಕಾಲು ಚಮಚ, ಚಿರೋಟಿ ರವೆ ಅರ್ಧ ಕಪ್, ಗರಂ ಮಸಾಲಪುಡಿ ಒಂದು ಚಮಚ,ಉಪ್ಪು ರುಚಿಗೆ

ಮಾಡೋದು ಹೇಗೆ?
ಸಣ್ಣಗೆ ತುರಿದ ಕ್ಯಾರೆಟ್, ಬೀಟ್ರೂಟ್, ಕೋಸು, ಬೀನ್ಸ್ ಮತ್ತು ಬಟಾಣಿಯನ್ನು ಸ್ವಲ್ಪ ಅರಶಿಣ ಹಾಕಿ ಬೇಯಿಸಿ. ಬಾಣಲೆಯಲ್ಲಿ ಜೀರಿಗೆ, ಸಾಸಿವೆ, ಕರಿಬೇವು ಸೇರಿಸಿದ ಒಗ್ಗರಣೆ ಸಿಡಿಸಿ. ಇದಕ್ಕೆ ನೀರುಳ್ಳಿ, ಶುಂಠಿ- ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸು, ಕೊತ್ತಂಬರಿಸೊಪ್ಪು ಒಂದೊಂದಾಗಿ ಹಾಕಿ ಫ್ರೈ ಮಾಡಿ. ನಂತರ ಹೆಚ್ಚಿಟ್ಟುಕೊಂಡ ತರಕಾರಿಗಳನ್ನು ಇದಕ್ಕೆ ಸೇರಿಸಿ ಗರಂ ಮಸಾಲೆ ಹಾಗು ಉಪ್ಪು ಸೇರಿಸಿ ಬೇಯಿಸಿ, ಒಲೆಯಿಂದ ಇಳಿಸಿ. ಆರಿದ ಮೇಲೆ ಇದಕ್ಕೆ ಬೇಯಿಸಿ ಮ್ಯಾಶ್ ಮಾಡಿದ ಆಲೂಗಡ್ಡೆ, ಹಸಿರು ಬಟಾಣಿ ಮತ್ತು ಪುಡಿ ಮಾಡಿದ ಬ್ರೆಡ್ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ಇದನ್ನು ಬೇಕಾದ ಆಕಾರದಲ್ಲಿ ಕಟ್ಲೆಟ್ ತಯಾರಿಸಿ ಚಿರೋಟಿ ರವೆಯಲ್ಲಿ ಮುಳುಗಿಸಿ ಕಾದ ತವಾದಲ್ಲಿ ಎರಡು ಚಮಚ ತುಪ್ಪ ಹಾಕಿ ಎರಡೂ ಬದಿ ಕೆಂಪಗೆ ಬೇಯಿಸಿ.    

ಬ್ರೆಡ್ ಚಾಟ್

ಏನೇನು ಬೇಕು? : ಕ್ಯಾರೆಟ್‌ ತುರಿ ಎಂಟು ಚಮಚ, ಸ್ವೀಟ್‌ಕಾರ್ನ್‌, ಟೊಮ್ಯಾಟೊ ನಾಲ್ಕು ಚಮಚ, ಈರುಳ್ಳಿ ಚೂರು- ಆರು ಚಮಚ, ದಾಳಿಂಬೆ ಆರು ಚಮಚ, ಪೈನಾಪಲ್ ನಾಲ್ಕು ಚಮಚ, ಸೇವ್ ಆರು ಚಮಚ, ಹುರಿದ ಶೇಂಗಾ ಆರು ಚಮಚ, ಬ್ರೆಡ್ ಆರು ಪೀಸ್ ಕೊತ್ತಂಬರಿಸೊಪ್ಪು - ಆರು ಚಮಚ, ಪುದಿನಾಕ್ಕೆ ಲಿಂಬೆರಸ, ಹಸಿಮೆಣಸು, ಶುಂಠಿ ಸೇರಿಸಿ ತಯಾರಿಸಿದ ಪೇಸ್ಟ್ -ಎರಡು ಚಮಚ, ಚಾಟ್‌ಮಸಾಲ ಎರಡು ಚಮಚ, ನೆನೆಸಿದ ಖರ್ಜೂರಕ್ಕೆ ಹುಣಸೆಹುಳಿ ಮತ್ತು ಬೆಲ್ಲ ಸೇರಿಸಿ ರುಬ್ಬಿ ಕುದಿಸಿದ ಸ್ವೀಟ್ ಚಟ್ನಿ -ನಾಲ್ಕು ಚಮಚ, ಉಪ್ಪು ರುಚಿಗೆ.

ಮಾಡೋದು ಹೇಗೆ?
 ಬ್ರೆಡ್‌ ಅನ್ನು ನಾಲ್ಕು ಪೀಸ್ ಮಾಡಿ ತುಪ್ಪ ಅಥವಾ ಬೆಣ್ಣೆ ಸವರಿ ತವಾದಲ್ಲಿ ರೋಸ್ಟ್‌ ಮಾಡಿ ಅಥವಾ ಕಾದ ಎಣ್ಣೆಯಲ್ಲಿ ಹೊಂಬಣ್ಣಕ್ಕೆ ಗರಿಗರಿಯಾಗಿ ಹುರಿಯಿರಿ. ಸರ್ವಿಂಗ್‌ ಪ್ಲೇಟ್‌ನಲ್ಲಿ ಈರುಳ್ಳಿ, ಕ್ಯಾರೆಟ್‌ತುರಿ, ಪುದಿನಾ ಚಟ್ನಿ, ಪೈನಾಪಲ್, ರೋಸ್ಟೆಡ್ ಬ್ರೆಡ್, ಸ್ವೀಟ್ ಚಟ್ನಿ, ಟೊಮ್ಯಾಟೊ, ಹುರಿದ ಶೇಂಗಾ, ದಾಳಿಂಬೆ ಹೀಗೆ ಮೇಲೆ ತಿಳಿಸಿದ ಸಾಮಗ್ರಿಗಳನ್ನು ಒಂದೊಂದೇ ಹರಡಿ ಮೇಲಿನಿಂದ ದಾಳಿಂಬೆ, ಕೊತ್ತಂಬರಿಸೊಪ್ಪು, ಸೇವ್ ಹರಡಿ ಸರ್ವ್‌ ಮಾಡಿ.

ಬ್ರೆಡ್ ಗಾರ್ಲಿಕ್ ಬಜ್ಜಿ

ಏನೇನು ಬೇಕು?
ಕಡಲೆಹಿಟ್ಟು ಒಂದು ಕಪ್, ಕೊತ್ತಂಬರಿಸೊಪ್ಪು -ಆರು ಚಮಚ, ಶುಂಠಿ ಅರ್ಧ ಇಂಚು, ಬೆಳ್ಳುಳ್ಳಿ -ಹತ್ತು ಎಸಳು, ಲಿಂಬೆರಸ ನಾಲ್ಕು ಚಮಚ, ಪುದಿನಾ ನಾಲ್ಕು ಚಮಚ, ಹಸಿಮೆಣಸು ನಾಲ್ಕು, ಉಪ್ಪು ರುಚಿಗೆ, 

 ಮಾಡೋದು ಹೇಗೆ?
ಕಡಲೆಹಿಟ್ಟಿಗೆ ಸ್ವಲ್ಪ ಉಪ್ಪು, ಕೆಂಪು ಮೆಣಸಿನಪುಡಿ, ಇಂಗು, ಜೀರಿಗೆ ಮತ್ತು ಸ್ವಲ್ಪ ನೀರು ಸೇರಿಸಿ ಬಜ್ಜಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಶುಂಠಿ, ಬೆಳ್ಳುಳ್ಳಿ, ಕೊತ್ತಂಬರಿ, ಹಸಿಮೆಣಸು ಮತ್ತು ಲಿಂಬೆರಸ ಇವುಗಳನ್ನು ರುಬ್ಬಿ ಪೇಸ್ಟ್ ತಯಾರಿಸಿ. ಬ್ರೆಡ್‌ ಸ್ಲೈಸ್‌ಗೆ ಈ ಪೇಸ್ಟ್‌ ಅನ್ನು ಹಚ್ಚಿ. ಇನ್ನೊಂದು ಸ್ಲೈಸ್‌ಗೂ ಹಚ್ಚಿ ಒಂದರ ಮೇಲೆ ಒಂದನ್ನು ಇಟ್ಟು ನಡುವಿನಿಂದ ಕತ್ತರಿಸಿ ಮೊದಲೆ ಕಲಸಿಟ್ಟ ಕಡಲೆ ಹಿಟ್ಟಿನಲ್ಲಿ ಮುಳುಗಿಸಿ ಕಾದ ಎಣ್ಣೆಯಲ್ಲಿ ಕರಿಯಿರಿ. 

ಸ್ವೀಟ್‌ ಕಾರ್ನ್‌ ಸ್ಯಾಂಡ್ವಿಚ್ 


ಏನೇನು ಬೇಕು? : 
ಸ್ವೀಟ್‌ ಕಾರ್ನ್‌ ಎಂಟು ಚಮಚ, ಕ್ಯಾಪ್ಸಿಕಂ- ನಾಲ್ಕು ಚಮಚ, ಕ್ಯಾರೆಟ್‌ತುರಿ ಆರು ಚಮಚ, ಈರುಳ್ಳಿ- ಆರು ಚಮಚ, ಪೆಪ್ಪರ್ ಪುಡಿ- ಒಂದು ಚಮಚ, ಪುದಿನಾ, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಎರಡು ಚಮಚ, ಟೊಮ್ಯಾಟೊ ಚೂರು ನಾಲ್ಕು ಚಮಚ, ಹೆಚ್ಚಿದ ಎಲೆಕೋಸು- ನಾಲ್ಕು ಚಮಚ, ಗರಂ ಮಸಾಲ ಒಂದು ಚಮಚ, ಮೆಂತೆಸೊಪ್ಪು ಆರು ಚಮಚ, ಉಪ್ಪು- ರುಚಿಗೆ, ಸಾಂಡ್‌ವಿಚ್ ಬ್ರೆಡ್ ಸ್ಲೈಸ್ ಹತ್ತು

ಮಾಡೋದು ಹೇಗೆ?
ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಜೀರಿಗೆ ಸಿಡಿಸಿ ನೀರುಳ್ಳಿ, ಶುಂಠಿ ಪೇಸ್ಟ್ ಫ್ರೈ ಮಾಡಿ. ನಂತರ ಇದಕ್ಕೆ ಸ್ವೀಟ್ ಕಾರ್ನ್‌  ಹಾಗೂ ಮೇಲೆ ತಿಳಿಸಿದ ಎಲ್ಲ ಸಾಮಗ್ರಿಗಳನ್ನು ಸೇರಿಸಿ ಫ್ರೈ ಮಾಡಿ ಗರಂ ಮಸಾಲ, ಪೆಪ್ಪರ್‌ಪುಡಿ, ಕೊತ್ತಂಬರಿಸೊಪ್ಪು, ಉಪ್ಪು ಸೇರಿಸಿ ಒಲೆಯಿಂದ ಇಳಿಸಿ. ಬ್ರೆಡ್ ಸ್ಲೈಸ್‌ಗೆ ಬೆಣ್ಣೆ ಹಚ್ಚಿ ತವಾದಲ್ಲಿ ಸ್ವಲ್ಪ ರೋಸ್ಟ್ ಮಾಡಿಕೊಂಡು ಮಾಡಿಟ್ಟ ಪಲ್ಯ ತುಂಬಿಸಿ ಟೊಮ್ಯಾಟೊ ಸಾಸ್‌ನ ಜೊತೆ ಸರ್ವ್‌ ಮಾಡಬಹುದು. 

ಸುಧಾ – 23 – ಆಗಸ್ಟ್‌ 2018

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !