ಭಾನುವಾರ, ಸೆಪ್ಟೆಂಬರ್ 27, 2020
21 °C

ಬೆಂಗಳೂರಲ್ಲಿ ಎಲ್ಲಿ ಸಿಗುತ್ತೆ ರುಚಿಯಾದ ಆಹಾರ? ಸಾಮಾಜಿಕ ಜಾಲತಾಣದಲ್ಲೊಂದು ಇಣುಕು

ಯೋಗಿತಾ ಆರ್‌.ಜೆ. Updated:

ಅಕ್ಷರ ಗಾತ್ರ : | |

ಒಳ್ಳೆ ಊಟ ಮಾಡ್ಬೇಕು, ಚೆನ್ನಾಗಿರೋ ರುಚಿ ರುಚಿಯಾಗಿರೋ ಆಹಾರ ಸವಿಯಬೇಕು ಅನ್ನೋ ಆಸೆ ಯಾರಿಗೆ ಇರಲ್ಲ ಹೇಳಿ ಅಂತಹವರಿಗಾಗಿಯೇ ಸಾಮಾಜಿಕ ಜಾಲತಾಣಗಳಲ್ಲಿರುವ ಆಹಾರ ಪುಟಗಳನ್ನು ಹೆಕ್ಕಿ ನಿಮ್ಮ ಮುಂದಿಡುವ ಪ್ರಯತ್ನವನ್ನು ಈ ಲೇಖನದಲ್ಲಿ ಮಾಡಲಾಗಿದೆ.

ಈ ಜನುಮವೇ ಆಹಾ ದೊರಕಿದೆ ರುಚಿ ಸವಿಯಲು,
ಆಹಾ ಈ ಜಗವಿದೆ ನವರಸಗಳ ಉಣಬಡಿಸಲು...
–ಜಯಂತ್‌ ಕಾಯ್ಕಿಣಿ

‘ಒಗ್ಗರಣೆ’ ಸಿನಿಮಾದ ಈ ಹಾಡಿನ ಸಾಲಿನಂತೆ ಆಹಾರಪ್ರಿಯರಿಗೆ ಬಾಯಲ್ಲಿ ನೀರೂರಿಸುವಂತಹ ರುಚಿ ರುಚಿಯಾದ ಆಹಾರ ಸವಿಯಲು ಬೆಂಗಳೂರು ನಿಮಗೆ ಹೇಳಿ ಮಾಡಿಸಿದ ಜಾಗ. 

ಹುಬ್ಬಳ್ಳಿ ಅಂದ್ರೆ ನೆನಪಾಗೋದು ರೊಟ್ಟಿ–ಕಾಳು, ಮಂಡ್ಯಕ್ಕೆ ಹೋದ್ರೆ ಮುದ್ದೆ ಸಾರು, ದಾವಣಗೆರೆ ಅಂದ್ಮೇಲೆ ಬೆಣ್ಣೆ ದೋಸೆ ಆಸೆ ಶುರುವಾಗಲ್ವಾ? ಹೀಗೆ ಒಂದೊಂದು ಊರು ಅದರದ್ದೇಯಾದ ತಿನಿಸಿನ ಮುದ್ರೆ ಹಾಕಿಕೊಂಡಿದೆ. ಆದರೆ ಬೆಂಗಳೂರು ಹಾಗಲ್ಲ.. ಇಲ್ಲಿ ಜಗತ್ತಿನ ಎಲ್ಲಾ ಆಹಾರಗಳೂ ಲಭ್ಯ, ವೈವಿದ್ಯಮಯ ಭಾರತೀಯ ತಿನಿಸುಗಳಷ್ಟೇ ಅಲ್ಲ, ಸ್ಪಾನಿಷ್, ಇಟಾಲಿಯನ್‌, ಚೈನೀಸ್‌.. ಹೀಗೆ ಅಂತರರಾಷ್ಟ್ರೀಯ ತಿನಿಸುಗಳೂ ಇಲ್ಲಿ ಸಿದ್ಧವಾಗುತ್ತವೆ. 

ಬೆಂಗಳೂರಿಗರು ಎಷ್ಟು ಆಹಾರ ಪ್ರಿಯರೆಂದರೆ ಎಷ್ಟೇ ದೂರವಿದ್ದರೂ ರುಚಿಯನ್ನು ಅರಸಿ ಹೋರಟೇ ಬಿಡುತ್ತಾರೆ. ಜೊತೆಗೆ ತಾವು ಸವಿದ ರುಚಿಯ ಆಸ್ವಾದವನ್ನು ಬೇರೆಯವರೊಂದಿಗೆ ಹಂಚಿಕೊಳ್ಳುತ್ತಾರೆ. ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ಟ್ವಿಟ್ಟರ್‌, ಇನ್‌ಸ್ಟಾಗ್ರಾಂಗಳಲ್ಲಿ ಫುಡ್‌ ಕುರಿತೇ ಸಾಕಷ್ಟು ಪೇಜ್‌ಗಳು ಜನ್ಮತಳೆದಿವೆ.

ಬಾಯಲ್ಲಿ ನೀರೂರಿಸುವಂತಹ ರುಚಿ ರುಚಿಯ ತಿನಿಸುಗಳ ಮಾಹಿತಿ ನೀಡುವುದಕ್ಕಾಗಿಯೇ ‘ಟೇಸ್ಟಿ ಬೆಂಗಳೂರು’ ಫೇಸ್‌ಬುಕ್‌ ಪೇಜ್‌ ಶುರುವಾಗಿದೆ. ಈ ಪುಟದಲ್ಲಿ ನಿಮಗೆ ಅತ್ಯತ್ತಮ ತಟ್ಟೆ ಇಡ್ಲಿ, ಇಡ್ಲಿ ವಡಾ, ಮದ್ದೂರು ವಡೆ, ಸ್ಟ್ರೀಟ್‌ ಫುಡ್‌, ಬಿರಿಯಾನಿ, ಮೀನೂಟ, ಹೊಟ್ಟೆಯನ್ನು ತಣ್ಣಗಿಡುವ ಐಸ್‌ಕ್ರೀಂಗಳು...ಹೀಗೆ ದೇಸಿ ಆಹಾರದ ಮಾಹಿತಿಯನ್ನು ಉಣಬಡಿಸಿದ್ದಾರೆ.

ವಾಟ್‌ ಹಾಟ್‌ ಬೆಂಗಳೂರು‘ ಎಂಬ ಪುಟ ನೋಡಿದಾಕ್ಷಣ, ಸಿಲಿಕಾನ್‌ ಜನರ ಕಣ್ಣರಳುತ್ತದೆ. ವಿದೇಶಿ ಆಹಾರಕ್ಕೆ ಮನಸೋಲುವವರಿಗೆ ಹೆಚ್ಚು ಮಾಹಿತಿಯನ್ನು ನೀಡುವ ಈ ಪುಟ, ಪ್ಯಾನ್‌ ಏಷ್ಯಾ ಫುಡ್‌ಗಳು ದೊರೆಯುವ ತಾಣಗಳತ್ತಾ ಹೆಜ್ಜೆ ಹಾಕಲು ನಿಮ್ಮ ಮನಸ್ಸನ್ನು ಸಜ್ಜುಗೊಳಿಸುತ್ತದೆ.

ನೀವು ಚಾಟ್ಸ್‌ ಪ್ರಿಯರಾ? ಹಾಗಿದ್ದರೆ ‘ಫುಡ್‌ ಭೋಗಿ ಬೆಂಗಳೂರು’ ಫೇಸ್‌ಬುಕ್‌ ಪುಟ ನಿಮ್ಮಗೊಂದು ಒಳ್ಳೆಯ ಮಾಹಿತಿ ತಾಣವಾಗಲಿದೆ. ರುಚಿ ರುಚಿಯಾದ ಪಾನಿಪುರಿ, ಮಸಾಲಪರಿ, ಬಗೆ ಬಗೆಯ ಪಿಜ್ಜಾಗಳು, ಸ್ಯಾಂಡ್‌ವಿಚ್‌ಗಳು, ನೂಡಲ್ಸ್‌ಗಳು, ಸಲಾಡ್‌, ಐಸ್‌ಕ್ರೀಮ್‌, ಸಿಹಿ ಖಾದ್ಯಗಳು ಅಬ್ಬಬ್ಬ..ಹೇಳಿದಷ್ಟು ಮುಗಿಯದ ಆಹಾರಗಳ ಸರಮಾಲೆಯೇ ಇಲ್ಲಿದೆ.

ಅಯ್ಯೋ ನಮ್ಮನೆ ಪಕ್ಕವೇ ಇಂತದ್ದೊಂದು ಹೋಟೆಲ್‌ ಇದೆಯೇ? ಇಷ್ಟೊಳ್ಳೆ ಐಸ್‌ಕ್ರೀಂ ಸಿಗುತ್ತಾ? ಎಂದು ಬೆರಗು ಹುಟ್ಟಿಸುವಷ್ಟು ಆಹಾರ ತಾಣಗಳನ್ನು ಹೆಕ್ಕಿ ತೋರಿಸುತ್ತಿದೆ. ‘ಬೆಂಗಳೂರು ಫುಡ್ಡೀ’, ‘ಬೆಂಗಳೂರು ಫುಡ್‌ಬಾಂಬ್‌’ ಎಂಬ ಇನ್‌ಸ್ಟಾಗ್ರಾಂ ಪುಟಗಳಲ್ಲಿ. ಜೊತೆಗೆ ಅಯ್ಯೋ ಇದನ್ನು ತಿನ್ನಲೇ ಬೇಕು ಎನಿಸುವಂತಹ ಜಿಹ್ವಾ ಚಪಲ ಹೆಚ್ಚಿಸುವ ಫೋಟೊಗಳನ್ನು ನೀವು ಇಲ್ಲಿ ಕಾಣಬುಹುದು. 

ಬೆಂಗಳೂರು ಫುಡ್ಸ್, ಬೆಂಗಳೂರು ಫುಡ್‌ ಸ್ಟೋರೀಸ್, ಬೆಂಗಳೂರು ಫುಡ್‌ ಜಂಕೀಸ್‌, ಫುಡ್‌ ಟೇಲ್ಸ್, ಫುಡ್‌ ಡೈರೀಸ್, ಫುಡ್‌ ಟ್ರಯಲ್ಸ್, ಫುಡ್ಡೀಗೈಡ್‌,ದಿ ಬೆಂಗಳೂರು ಫುಡ್ ಬ್ಲಾಗ್, ಫುಡ್‌ ಸ್ಟ್ರೀಡ್‌, ಫುಡ್‌ ಟ್ರೋಲ್ಸ್, ಫುಡ್‌ ಹಂಟ್‌.... ಇವಿಷ್ಟೇ ಅಲ್ಲ ಈ ರೀತಿಯ ಸಾಕಷ್ಟು ಪುಟಗಳನ್ನು ಇನ್‌ಸ್ಟಾಗ್ರಾಂನಲ್ಲಿ ಕಾಣಬಹುದು. ಅದಲ್ಲಿಯೇ ಆರ್ಡರ್‌ ಮಾಡಿ ಆಹಾರ ಸವಿಯುವ ಅವಕಾಶವನ್ನು ಕೆಲವೊಂದು ಪುಟದಲ್ಲಿ ಕಲ್ಪಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು