ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಾಲ್ಗುಡಿ’ ಬಾಡೂಟ

Last Updated 9 ಜೂನ್ 2017, 19:30 IST
ಅಕ್ಷರ ಗಾತ್ರ

ಟ ಶಂಕರ್‌ನಾಗ್‌ ಭಾವಚಿತ್ರದ ಎದುರಿನ ಟೇಬಲ್‌ನಲ್ಲಿ ಕುಳಿತಿದ್ದ ವ್ಯಕ್ತಿ ಆರ್ಡರ್‌ ಮಾಡಿದ್ದು ರಾಗಿಮುದ್ದೆ ಮತ್ತು ನಾಟಿ ಕೋಳಿಸಾರು. ಜೊತೆಗೆ ಚಿಕನ್‌ ತವಾ ಫ್ರೈ. ಅದೇ ವೇಳೆ ಮತ್ತೊಬ್ಬ ಗ್ರಾಹಕ ಬಂದು  ‘ಅಂಜಲ್‌ ರವಾ ಫ್ರೈ ಹಾಗೂ ನೀರುದೋಸೆ ಪಾರ್ಸಲ್ ಮಾಡಿ’ ಎಂದು ಕ್ಯಾಷಿಯರ್‌ಗೆ ಹೇಳಿದರು.

ಊಟಕ್ಕಾಗಿ ಕಾಯುತ್ತಿದ್ದ ಮತ್ತೊಂದು ಗುಂಪಿಗೆ  ವೇಟರ್‌ ಅಕ್ಕಿರೊಟ್ಟಿ, ಕಡುಬು ಹಾಗೂ ಮಟನ್‌ ಕರ್ರಿ ತಂದಿಟ್ಟರು. ರಾಜಾಜಿನಗರ 2ನೇ ಬ್ಲಾಕ್‌ನಲ್ಲಿ ಕಳೆದ ವರ್ಷ ಆರಂಭವಾಗಿರುವ ‘ಮಾಲ್ಗುಡಿ 1991’ ಹೋಟೆಲ್‌ನಲ್ಲಿ ಕಂಡ ದೃಶ್ಯಗಳಿವು. ಇಲ್ಲಿನ ವಿಶೇಷವೆಂದರೆ ಕರಾವಳಿ, ಹಳೆ ಮೈಸೂರು ಹಾಗೂ ಮಲೆನಾಡು ಭಾಗಗಳ ಊಟ.

ಸಕಲೇಶಪುರದ ಜ್ಞಾನೇಂದ್ರ ಕುಮಾರ್‌ ಹಾಗೂ ಬೆಂಗಳೂರಿನ ನವೀನ್‌ ಕುಮಾರ್‌ ಅವರು 2016ರ ಡಿಸೆಂಬರ್‌ನಲ್ಲಿ ಆರಂಭಿಸಿದ ಹೋಟೆಲ್‌ ಇದು.

ಮಾಲ್ಗುಡಿ ಹೆಸರಿಡಲು ಕಾರಣ
‘1991ರಲ್ಲಿ ನಾನು ಪದವಿ ಓದುವಾಗ ಸಕಲೇಶಪುರದಲ್ಲಿ ಒಂದು ಕ್ಯಾಂಟೀನ್‌ ಆರಂಭಿಸಿದೆ. ಹೆಸರು ಏನು ಇಡಬೇಕು ಎಂಬ ಗೊಂದಲದಲ್ಲಿದ್ದಾಗ ನೆನಪಾದದ್ದು ಮಾಲ್ಗುಡಿ. ಶಂಕರ್‌ನಾಗ್‌ ನಿರ್ದೇಶನದ ಮಾಲ್ಗುಡಿ ಡೇಸ್‌ ಧಾರಾವಾಹಿ ಹೆಚ್ಚು ಜನಪ್ರಿಯವಾಗಿದ್ದ ಕಾಲವದು. ಹಾಗಾಗಿ ಮಾಲ್ಗುಡಿ ಹೋಟೆಲ್ ಎಂದು ನಾಮಕರಣ ಮಾಡಿದ್ದೆವು. ಎರಡು ವರ್ಷಗಳ ನಂತರ ಆ ಹೋಟೆಲ್ ಮುಚ್ಚಬೇಕಾಯಿತು. ಬೆಂಗಳೂರಿನಲ್ಲಿ ಹೋಟೆಲ್‌ ಆರಂಭಿಸುವ ಯೋಚನೆ ಬಂತು. ಕಳೆದ ಡಿಸೆಂಬರ್‌ನಲ್ಲಿ ಪ್ರಾರಂಭ ಮಾಡಿದೆವು.   ಮಾಲ್ಗುಡಿ ಹೋಟೆಲ್‌ನ ಹೆಸರನ್ನೇ ಇಡೋಣವೆಂದು ತೀರ್ಮಾನಿಸಿ ಮಾಲ್ಗುಡಿ 1991 ಹೆಸರಿಟ್ಟೆವು’ ಎನ್ನುತ್ತಾರೆ ಜ್ಞಾನೇಂದ್ರ ಕುಮಾರ್‌.

ಮನೆ ಮಾದರಿಯ ಮಸಾಲೆ ತಯಾರಿಸಿಕೊಂಡು ಮಾಂಸಾಹಾರಕ್ಕೆ ಬಳಸುತ್ತಾರೆ. ಮಾಲ್ಗುಡಿ ತವಾ ಸ್ಪೆಷಲ್‌ ಇಲ್ಲಿನ ಸಿಗ್ನೇಚರ್‌ ತಿನಿಸು. ಮೂಳೆ ರಹಿತ ಕೋಳಿಮಾಂಸದ ತುಂಡುಗಳಿಗೆ ಮಸಾಲೆ  ಬೆರೆಸಿ ತವಾ ಮೇಲೆ ಬೇಯಿಸಿ ಕೊಡುತ್ತಾರೆ. ಹೆಚ್ಚು ಖಾರವಿಲ್ಲದ, ಮೀನಿನ ಫ್ರೈ ತಿಂದಷ್ಟೇ ರುಚಿ ಈ ತಿನಿಸಿನದ್ದಾಗಿದೆ.

ಮಾಲ್ಗುಡಿ ಬಿರಿಯಾನಿಯೂ ಇಲ್ಲಿನ ಮತ್ತೊಂದು ವಿಶೇಷ. ದಮ್‌ಕಟ್ಟಿ ನಾಟಿ ಶೈಲಿಯಲ್ಲಿ ಮಾಡಿಕೊಡುತ್ತಾರೆ. ‘ಈ ಭಾಗದಲ್ಲಿ ಬಹಳಷ್ಟು ಕಾಲೇಜುಗಳು, ಸರ್ಕಾರಿ ಕಚೇರಿಗಳು ಹಾಗೂ ಪೇಯಿಂಗ್‌ ಗೆಸ್ಟ್‌ಗಳು ಇರುವುದರಿಂದ ವಿವಿಧ ಭಾಗಗಳ ಜನರು ಬರುತ್ತಾರೆ. ಮಲೆನಾಡು, ಕರಾವಳಿ ಹಾಗೂ ಮೈಸೂರು ಯಾವ ಪ್ರದೇಶದ ಊಟ ಬೇಕೊ ಅದನ್ನು ಆಯ್ಕೆ ಮಾಡಿಕೊಳ್ಳಬಹುದು. ನಮ್ಮಲ್ಲಿಗೆ ಯಶವಂತಪುರ, ವಿಜಯನಗರ, ಕೆ.ಆರ್‌. ಪುರದಿಂದಲೂ ಗ್ರಾಹಕರು ಬರುತ್ತಾರೆ. ರುಚಿಯಲ್ಲಿ ವ್ಯತ್ಯಾಸವಾಗದಂತೆ ನೋಡಿಕೊಳ್ಳುತ್ತೇವೆ’ ಎಂದರು ಮಾಲೀಕರಲ್ಲಿ ಒಬ್ಬರಾದ ನವೀನ್‌ ಕುಮಾರ್‌.

(ಬಾಣಸಿಗ ಮಂಡ್ಯದ ಸಂತೋಷ್‌)

ಬೆಳಿಗ್ಗೆ 7ರಿಂದ 11ರವರೆಗೆ ಕಾಲು ಸೂಪ್‌ ಹಾಗೂ ತಟ್ಟೆ ಇಡ್ಲಿ ದೊರೆಯುತ್ತದೆ. ಖಾಲಿದೋಸೆ, ನೀರುದೋಸೆಯೂ ಆಯ್ಕೆಗಿರುತ್ತವೆ. ಮಟನ್‌ ಬಾಡೂಟದಲ್ಲಿ ಮಟನ್‌ ಕುರ್ಮ, ಬೋಟಿ ಅಥವಾ ತಲೆಮಾಂಸ, ಮುದ್ದೆ ಅಥವಾ ಅಕ್ಕಿರೊಟ್ಟಿ, ತಂಪು ಪಾನೀಯವಿರುತ್ತದೆ. ಬೆಲೆ ₹230 ನಿಗದಿಪಡಿಸಿದ್ದಾರೆ.

ಸೀಫುಡ್‌ನಲ್ಲಿ ಅಂಜಲ್‌, ಬಂಗುಡೆ ಮೀನು, ಸಿಗಡಿ ರವಾ/ತವಾ/ಮಸಾಲ ಫ್ರೈ ಸಿಗುತ್ತವೆ. ಲಾಲಿಪಪ್‌, ಮಟನ್‌ ಕುರ್ಮ, ಗುಂಟೂರು ಚಿಕನ್‌, ಪುದೀನ, ಗಾರ್ಲಿಕ್‌ ಚಿಕನ್‌, ನಾಟಿ ಚಿಕನ್‌ ಫ್ರೈ, ಮಟನ್‌ ಗ್ರೀನ್‌ ಚಾಪ್ಸ್‌ ಇಲ್ಲಿನ ಇತರೆ ತಿನಿಸುಗಳಾಗಿವೆ.

‘ಮೈಸೂರು ರಸ್ತೆಯ ಪಾಪಣ್ಣ ಮಟನ್‌ ಸ್ಟಾಲ್‌ನಿಂದ ಕುರಿಮಾಂಸ ತರಿಸುತ್ತೇವೆ. ಒಂದೇ ಅಳತೆಯ ತುಂಡುಗಳನ್ನಾಗಿ ಮಾಡಿ, ಅಡುಗೆಗೆ ಬಳಸಲಾಗುತ್ತದೆ. ಫ್ರಿಜ್‌ನಲ್ಲಿಟ್ಟ ಮಾಂಸ ಬಳಸುವುದಿಲ’ ಎನ್ನುತ್ತಾರೆ ಜ್ಞಾನೇಂದ್ರ ಕುಮಾರ್‌.

ಮಾಲ್ಗುಡಿ ಹೋಟೆಲ್‌ನ ರುಚಿಯ ಹಿಂದೆ ಮಂಡ್ಯದ ಅಡುಗೆ ಭಟ್ಟ ಸಂತೋಷ್‌ ಕೈಚಳಕವಿದೆ. 10 ವರ್ಷಗಳಿಂದ ನಗರದ ವಿವಿಧ ಕ್ಲಬ್‌ಗಳಲ್ಲಿ ಕೆಲಸ ಮಾಡಿದ ಅನುಭವ ಸಂತೋಷ್‌ ಅವರದ್ದು. ‘ಅಡುಗೆ ಕೆಲಸವನ್ನು ಕಲಿಯಲು ಇಲ್ಲಿಗೆ ಬಂದೆ. ಮಹಾಲಕ್ಷ್ಮಿ ಲೇಔಟ್‌ ಕ್ಲಬ್‌ನಲ್ಲಿ ಸೇರಿಕೊಂಡೆ. ದಕ್ಷಿಣ ಹಾಗೂ ಉತ್ತರ ಭಾರತೀಯ ತಿನಿಸು, ತಂದೂರಿ, ಚೈನೀಸ್‌ ಅಡುಗೆ ಮಾಡುವುದನ್ನು ಕಲಿತೆ’ ಎನ್ನುತ್ತಾರೆ ಸಂತೋಷ್‌.

‘ಕೆಲಸದ ನಿಮಿತ್ತ ರಾಜಾಜಿನಗರಕ್ಕೆ ಬರುತ್ತಿರುತ್ತೇನೆ. ಬಂದಾಗಲೆಲ್ಲ ಇಲ್ಲಿಗೆ ಬಂದು ನಾಟಿಕೋಳಿ ಸಾರು, ರಾಗಿ ಮುದ್ದೆ, ಬಿರಿಯಾನಿ ಊಟ ಮಾಡುತ್ತೇನೆ.   ಮನೆಗೂ ತೆಗೆದುಕೊಂಡು ಹೋಗುತ್ತೇನೆ. ವಾರಕ್ಕೆ ಮೂರು ದಿನವಾದರೂ ಇಲ್ಲಿನ ರುಚಿ ನೋಡಲೇಬೇಕು’ ಎನ್ನುತ್ತಾರೆ ಕೆ.ಆರ್‌.ಪುರದ ಶಶಿಧರ್‌.

(ಬಿರಿಯಾನಿ ಸವಿಯುತ್ತಿರುವ ಶಶಿಧರ್‌)

ಜೂನ್‌ 11 ಹಾಗೂ 18ರ ಭಾನುವಾರದಂದು ಬಿರಿಯಾನಿ ಫೆಸ್ಟಿವಲ್‌ ಆಯೋಜಿಸಲಾಗಿದೆ. ಎರಡು ಬಿರಿಯಾನಿ ತೆಗೆದುಕೊಂಡರೆ ಒಂದು ಉಚಿತವಾಗಿ ನೀಡುತ್ತಾರೆ. ಆರು ಕಿಲೋ ಮೀಟರ್‌ವರೆಗೂ ಹೋಮ್‌ ಡೆಲಿವರಿ ವ್ಯವಸ್ಥೆಯಿದೆ.

**

ಹೋಟೆಲ್‌: ಮಾಲ್ಗುಡಿ 1991
ವಿಶೇಷ: ಚಿಕನ್‌ ತವಾ ಫ್ರೈ
ಸಮಯ: ಬೆಳಿಗ್ಗೆ 7ರಿಂದ ರಾತ್ರಿ 11

ಇಬ್ಬರಿಗೆ: ₹500

ಸ್ಥಳ: ನಂ207, 2ನೇ ಬ್ಲಾಕ್‌, 28ನೇ ಕ್ರಾಸ್‌, ಕೆಎಲ್‌ಇ ಕಾಲೇಜು ಸಮೀಪ, ರಾಜಾಜಿನಗರ.
ಸ್ಥಳ ಕಾಯ್ದಿರಿಸಲು: 85489 42434

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT