ವಿಶ್ವಸಂಸ್ಥೆ ಭದ್ರತಾ ಮಂಡಳಿ ಕಾಯಂ ಸದಸ್ಯ ಸ್ಥಾನ: ಭಾರತ ಬೆಂಬಲಿಸಿದ ಫ್ರಾನ್ಸ್‌

ಬುಧವಾರ, ಮಾರ್ಚ್ 20, 2019
31 °C

ವಿಶ್ವಸಂಸ್ಥೆ ಭದ್ರತಾ ಮಂಡಳಿ ಕಾಯಂ ಸದಸ್ಯ ಸ್ಥಾನ: ಭಾರತ ಬೆಂಬಲಿಸಿದ ಫ್ರಾನ್ಸ್‌

Published:
Updated:

ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸುಧಾರಣೆಯ ಅಗತ್ಯವಿದ್ದು, ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸದಸ್ಯ ಸ್ಥಾನ ನೀಡಬೇಕು ಎಂದು ಫ್ರಾನ್ಸ್‌ ಒತ್ತಾಯಿಸಿದೆ.

 ಮಂಡಳಿಯಲ್ಲಿ ಕಾಯಂ ಸದಸ್ಯ ರಾಷ್ಟ್ರವಾಗಿರುವ ಫ್ರಾನ್ಸ್ ಇದೇ ತಿಂಗಳು ಸಮಿತಿಯ ಅಧ್ಯಕ್ಷ ಸ್ಥಾನ ವಹಿಸಿಕೊಂಡಿದೆ. ಭದ್ರತಾ ಮಂಡಳಿ ಸುಧಾರಣೆಗಾಗಿ ಸದಸ್ಯ ರಾಷ್ಟ್ರಗಳ ಸಂಖ್ಯೆ ಹೆಚ್ಚಿಸುವ ಅಗತ್ಯವೂ ಇದೆ ಎಂದು ಅದು ಪ್ರತಿಪಾದಿಸಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತ ಮತ್ತು ರಾಷ್ಟ್ರಗಳ ಎರಡು ವಿಭಾಗಗಳಲ್ಲೂ ಸದಸ್ಯರ ಸಂಖ್ಯೆ ವಿಸ್ತರಿಸಲು ನಾವು ಒತ್ತಾಯಿಸುತ್ತೇವೆ ಎಂದು ವಿಶ್ವಸಂಸ್ಥೆಯಲ್ಲಿ ಫ್ರಾನ್ಸ್‌ನ ಶಾಶ್ವತ ಪ್ರತಿನಿಧಿ ಫ್ರಾಂಸ್ವಾ ಡೆಲೆಟ್ರಿ ಹೇಳಿದ್ದಾರೆ.

ಬ್ರೆಜಿಲ್, ಜರ್ಮನಿ, ಜಪಾನ್ ದೇಶಗಳೊಂದಿಗೆ ಭಾರತ ಸಹ ದೀರ್ಘ ಕಾಲದಿಂದ ಮಂಡಳಿಯ ಸುಧಾರಣೆಗೆ 
ಒತ್ತಾಯಿಸುತ್ತಲೇ ಇದೆ. ಅಲ್ಲದೆ ಶಾಶ್ವತ ಸದಸ್ಯ ಸ್ಥಾನಕ್ಕೆ ಅರ್ಹತೆ ಹೊಂದಿರುವುದಾಗಿ ಪ್ರತಿಪಾದಿಸಿಕೊಂಡು ಬಂದಿದೆ.

ಭದ್ರತಾ ಮಂಡಳಿಯ ಕಾಯಂ ಮತ್ತು ಕಾಯಂಯೇತರ ಸದಸ್ಯ ರಾಷ್ಟ್ರಗಳ ಸಂಖ್ಯೆ ವಿಸ್ತರಣೆ ಮಾಡಬೇಕು. ಕಾಯಂ ಸ್ಥಾನವನ್ನು  ಜರ್ಮನಿ ಮತ್ತು ಜಪಾನ್ ಜತೆಗೆ ಭಾರತಕ್ಕೂ ನೀಡಬೇಕು ಎಂದು ಫ್ರಾನ್ಸ್‌ ಹೇಳಿದೆ.

15 ರಾಷ್ಟ್ರಗಳನ್ನು ಒಳಗೊಂಡ ಭದ್ರತಾ ಮಂಡಳಿಯಲ್ಲಿ ವಿಟೋ ಅಧಿಕಾರ ಹೊಂದಿರುವ ಫ್ರಾನ್ಸ್, ಪಾಕಿಸ್ತಾನ ಮೂಲದ 
ಜೈಷ್‌ ಎ ಮೊಹಮ್ಮದ್ ಸಂಘಟನೆ ಮತ್ತು ಅದರ ಮುಖ್ಯಸ್ಥ ಮಸೂದ್ ಅಜರ್‌ನನ್ನು ಜಾಗತಿಕ ಭಯೋತ್ಪಾದಕ ಪಟ್ಟಿಗೆ ಸೇರಿಸುವಂತೆ ಕಳೆದ ತಿಂಗಳು ಅಮೆರಿಕ ಮತ್ತು ಇಂಗ್ಲೆಂಡ್ ಜತೆಗೆ ಹೊಸದಾಗಿ ಪ್ರಸ್ತಾವನೆ ಸಲ್ಲಿಸಿದೆ.

ಪುಲ್ವಾಮಾ ದಾಳಿ ಖಂಡಿಸಿ ಪ್ರತಿಭಟನೆ

ನ್ಯೂಯಾರ್ಕ್‌: ಪುಲ್ವಾಮಾ ದಾಳಿ ಖಂಡಿಸಿ ಭಾರತೀಯ ಅಮೆರಿಕನ್ನರು ವಿಶ್ವಸಂಸ್ಥೆ ಪ್ರಧಾನ ಕಚೇರಿ ಎದುರು ಸೇರಿ ಪ್ರತಿಭಟನೆ ನಡೆಸಿದ್ದು, ಪಾಕಿಸ್ತಾನ ತನ್ನ ದೇಶದಲ್ಲಿರುವ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. 

ಜೈಷ್–ಎ–ಮೊಹಮ್ಮದ್ ಉಗ್ರ ಸಂಘಟನೆ ಹಾಗೂ ಅದರ ನಾಯಕ ಮಸೂದ್ ಅಜರ್ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಪ್ರತಿಭಟನಾಕಾರರು ಘೋಷಣಾ ಫಲಕಗಳನ್ನು ಪ್ರದರ್ಶಿಸಿದರು. 

‘ಪಾಕಿಸ್ತಾನ ಇನ್ನೂ ಉಗ್ರರನ್ನು ರಕ್ಷಿಸುತ್ತಿದ್ದು, ಅಲ್ ಖೈದಾ, ಲಷ್ಕರ್ ಎ ತಯಬಾ, ಜೈಷ್–ಎ–ಮೊಹಮ್ಮದ್‌ ರೀತಿಯ ಉಗ್ರ ಸಂಘಟನೆಗಳಿಗೆ ಪಾಕ್ ಸೇನೆ ಬೆಂಬಲ ನೀಡುತ್ತಿದೆ. ಇನ್ನು ಸಾಕು. ಪಾಕಿಸ್ತಾನಕ್ಕೆ ಅರ್ಥವಾಗುವ ಭಾಷೆಯಲ್ಲಿ ದಿಟ್ಟ ಪ್ರತಿಕ್ರಿಯೆ ನೀಡುವ ಸಮಯ ಬಂದಿದೆ’ ಎಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ‘ಅಮೆರಿಕನ್ ಇಂಡಿಯಾ ಸಾರ್ವಜನಿಕ ವ್ಯವಹಾರಗಳ ಸಮಿತಿ’ ಅಧ್ಯಕ್ಷ ಜಗದೀಶ್ ಸೆಹವಾನಿ ಅವರು ತಿಳಿಸಿದ್ದಾರೆ.

ಪಾಕ್‌ ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸದ ಚೀನಾ

ಬೀಜಿಂಗ್: ಭಾರತ ಹಾಗೂ ಪಾಕಿಸ್ತಾನಕ್ಕೆ ವಿಶೇಷ ರಾಯಭಾರಿಗಳನ್ನು ಕಳುಹಿಸಲು ಚೀನಾ ಯೋಚಿಸಿದೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ನೀಡಿದ್ದ ಹೇಳಿಕೆ ಕುರಿತು ಚೀನಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಸ್ನೇಹಯುತ ಮಾತುಕತೆ ಮೂಲಕ ಉಭಯ ರಾಷ್ಟ್ರಗಳು ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಳ್ಳಬಹುದು ಎಂದು ಚೀನಾ ಹೇಳಿದೆ. 

ಪುಲ್ವಾಮಾ ಭಯೋತ್ಪಾದಕ ದಾಳಿಯಿಂದ ಭಾರತ ಮತ್ತು ಪಾಕಿಸ್ತಾನದ ನಡುವೆ ಉಂಟಾಗಿರುವ ಉದ್ವಿಗ್ನತೆ ತಿಳಿಗೊಳಿಸಲು ಉಭಯ ರಾಷ್ಟ್ರಗಳಿಗೆ ಚೀನಾ ವಿಶೇಷ ರಾಯಭಾರಿಗಳನ್ನು ಕಳಿಸಲಿದೆ ಎಂದು ಶಾ ಹೇಳಿದ್ದಾಗಿ ಪಾಕ್ ಮಾಧ್ಯಮಗಳು ವರದಿ ಮಾಡಿದ್ದವು. 

‘ಉದ್ವಿಗ್ನತೆ ಪರಿಹರಿಸುವ ಸಲುವಾಗಿ ಉಭಯ ರಾಷ್ಟ್ರಗಳ ಜತೆ ನಿರಂತರ ಸಂಪರ್ಕದಲ್ಲಿದ್ದೇವೆ. ಪ್ರಾದೇಶಿಕವಾಗಿ ಶಾಂತಿ, ಸ್ಥಿರತೆ ತರುವಲ್ಲಿ ಚೀನಾ ಯತ್ನಿಸಲಿದೆ’ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಲು ಕಾಂಗ್ ತಿಳಿಸಿದ್ದಾರೆ. ವಿಶೇಷ ರಾಯಭಾರಿಗಳ ಕುರಿತು ಅವರು ಯಾವುದೇ ಹೇಳಿಕೆ ನೀಡಿಲ್ಲ.

***

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತ ಮತ್ತು ರಾಷ್ಟ್ರಗಳ ಎರಡು ವಿಭಾಗಗಳಲ್ಲೂ ಸದಸ್ಯರ ಸಂಖ್ಯೆ ವಿಸ್ತರಿಸಲು ನಾವು ಒತ್ತಾಯಿಸುತ್ತೇವೆ

–ಫ್ರಾಂಕೋಯಿಸ್ ಡೆಲೆಟ್ರಿ, ವಿಶ್ವಸಂಸ್ಥೆಯಲ್ಲಿ ಫ್ರಾನ್ಸ್‌ನ ಶಾಶ್ವತ ಪ್ರತಿನಿಧಿ 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !