ಸ್ನೇಹಕ್ಕೆ ಒಂದೇ ಮಾತು...

7
ಫ್ರೆಂಡ್‌ಶಿಪ್‌ ಡೇ

ಸ್ನೇಹಕ್ಕೆ ಒಂದೇ ಮಾತು...

Published:
Updated:

 ಸ್ನೇಹಕ್ಕೆ ಒಂದೇ ಮಾತು... ಹಾಡಿನಂತೆಯೇ ಸ್ನೇಹವೂ ಸಹ. ಇಲ್ಲಿ ದೂರು ದುಮ್ಮಾನಗಳೇನೇ ಇದ್ದರೂ ಅವು ದೋಷಗಳನ್ನೆಣಿಸಲು ಇರುವುದಿಲ್ಲ. ಪರಸ್ಪರ ಬೆಂಬಲಿಸಿ ನಿಲ್ಲಲು ಗೆಳೆತನ ಯಾವತ್ತಿಗೂ ಸಹಕರಿಸುತ್ತದೆ.

ಸಾಮಾಜಿಕ ಜಾಲತಾಣಗಳ ಜಾಲದಲ್ಲಿ ಸಹಸ್ರಾರು ಸ್ನೇಹಿತರಿದ್ದರೂ ನಮ್ಮನ್ನು ಮುನ್ನಡೆಸಲು ಕೆಲವೇ ಕೆಲವರು ಸಾಥ್‌ ನೀಡುತ್ತಾರೆ. ಎಲ್ಲೆಡೆಯೂ ಉಸಿರುಗಟ್ಟಿಸುವಂಥ ವಾತಾವರಣವಿದ್ದರೂ ಒಬ್ಬರ ಮುಂದೆ ನಾವು ಹಗುರವಾಗುತ್ತೇವೆ. ಆತಂಕಗಳನ್ನು, ಹಿಂಜರಿಕೆಗಳನ್ನು ಹಂಚಿಕೊಳ್ಳುತ್ತೇವೆ. ಅವನ್ನು ನಗೆಯಲ್ಲಿ ತೇಲಿಸಿ, ಆತ್ಮವಿಶ್ವಾಸ ತುಂಬುವ, ಭರವಸೆಯ ಮಾತುಗಳನ್ನಾಡುವ ಸ್ನೇಹಕ್ಕೆ ಮತ್ತೆ ಯಾವ ಬಾಂಧವ್ಯವೂ ಸಾಟಿಯಾಗದು. ಯಾವುದೇ ಮುಖವಾಡಗಳಿಲ್ಲದೇ ಸ್ನೇಹಿತರ ಮುಂದೆ ಬಯಲಾಗುತ್ತೇವೆ. ಪರಸ್ಪರ ಹೆಗಲಮೇಲೆ ಕೈ ಹಾಕಿಕೊಂಡು ಪಟ್ಟಾಂಗ ಹೊಡೆದು, ಬೈಟು ಕಾಫಿ, ಚಹಾ ಅಥವಾ ಕೋಲಾ ಹೀರಿದರೆ ಸಾಕು, ಜಗತ್ತಿಡೀ ನಮ್ಮೊಟ್ಟಿಗಿರುವ ವಿಶ್ವಾಸ ಹುಟ್ಟುತ್ತದೆ. ಒಂದು ಲಾಂಗ್‌ ರೈಡು, ಒಂದರೆ ಇರಾನಿ ಚಹಾ, ಸೇಮ್‌ ಟು ಸೇಮ್‌ ಬಟ್ಟೆಗಳ ಸಂಗ್ರಹ, ದುಡ್ಡಿಲ್ಲದಿದ್ದರೂ ಪರವಾ ಇಲ್ಲ ಎನ್ನುವಂಥ ಧೈರ್ಯ ಇದೆಲ್ಲವೂ ಸ್ನೇಹ ಸಂಬಂಧದಲ್ಲಿ ಮಾತ್ರ ಕಾಣಲು ಸಾಧ್ಯ. ನಾಳೆ ಸ್ನೇಹಿತರ ದಿನ. ಈ ನೆಪದಲ್ಲಿ ಹಲವರು ತಮ್ಮ ಸ್ನೇಹಿತರ ಬಗ್ಗೆ ಹಾಗೂ ತಮ್ಮ ದಿನಾಚರಣೆಯ ಬಗೆಗೆ ಹಂಚಿಕೊಂಡಿದ್ದಾರೆ. 

ಸ್ನೇಹಿತರ ಬೆಂಬಲವೇ ನನ್ನ ಬಲ
ನಾನಿವತ್ತು ಏನಾದರೂ ಆಗಿದ್ರೆ, ನಗುನಗುತ್ತ ನಿಮ್ಮೆದುರಿಗೆ ಇದ್ರೆ ಅದು ನನ್ನ ಸ್ನೇಹಿತರಿಂದಲೇ. ನನ್ನ ಗುಂಪು ದೊಡ್ಡದು. ಪಟ್ಟಿ ಮುಗಿಯುವುದೇ ಇಲ್ಲ. ಅಶ್ವಿನಿ, ಸಂದೀಪ್‌, ಮಂಜು, ಸುಬ್ರದೀಪ್‌, ಸ್ವಾತಿ, ವೀಣಾ, ಶೋಭಿತಾ ಹೀಗೆ... ಇವರೆಲ್ಲರ ಬಗ್ಗೆ ಏನು ಹೇಳಿದರೂ ಕಡಿಮೆಯೇ.. ಎಷ್ಟು ಬರೆದರೂ ಸಾಲಲ್ಲ. ಅಮ್ಮನನ್ನು ಹೊರತುಪಡಿಸಿದರೆ ನಮ್ಮೆಲ್ಲ ತಪ್ಪುಗಳನ್ನು ಒಪ್ಪಿಕೊಂಡು, ನಮ್ಮನ್ನು ನಗುವಂತೆ, ನಗಿಸುವಂತೆ ಮಾಡುವವರೇ ನಮ್ಮ ನಿಜವಾದ ಸ್ನೇಹಿತರು. ಆತಂಕ, ಹಿಂಜರಿಕೆಯಂತಹ ಪ್ರತಿ ಹಂತದಲ್ಲಿಯೂ ನನಗೆ ಬೆಂಬಲವಾಗಿ ನಿಂತಿದ್ದು ನನ್ನ ಸ್ನೇಹಿತರ ಸಮೂಹವೆ.

ನಟನೆ ಇರಲಿ, ಇನ್ನಾವುದೇ ಚಟುವಟಿಕೆಯಿರಲಿ, ಇದು ನಿನ್ನಿಂದ ಸಾಧ್ಯ ಎಂದು ಮನವರಿಕೆ ಮಾಡಿಕೊಟ್ಟಿದ್ದು ಇದೇ ಸ್ನೇಹವೃಂದ. ಇಂದು ಆ ಇಡೀ ಸಮೂಹವನ್ನು ಅಭಿನಂದಿಸಲು ಇದೊಂದು ನೆಪ ಅಷ್ಟೆ. ಇಷ್ಟಕ್ಕೂ ಸ್ನೇಹಿತರಿರದಿದ್ದರೆ... ಈ ವಿಷಯ ಯೋಚಿಸಲೂ ಆಗದು. ನೀವೂ ನಿಮ್ಮ ಸ್ನೇಹಿತರನ್ನು ಈ ದಿನ ಅಭಿನಂದಿಸಿ. ಅವರೊಟ್ಟಿಗೆ ಸಮಯ ಕಳೆಯಿರಿ. ವಿಶೇಷವಾಗಿ ಆಚರಿಸಿ. ಸ್ಮರಣೀಯ ದಿನ ಅದಾಗಲಿ
–ಗೀತಾ ಭಟ್, ಕಿರುತೆರೆ ನಟಿ


ಗೀತಾ ಭಟ್

***

ಸಂಗಾತಿಯೇ ಸಖಿ
ನನ್ನ ನಿಜವಾದ ಸ್ನೇಹಿತೆ ನನ್ನ ಜೀವನಸಂಗಾತಿ. ನನ್ನೆಲ್ಲ ಕಷ್ಟದ ದಿನಗಳಲ್ಲಿ ನನ್ನೊಟ್ಟಿಗೆ ನಿಂತು ಬೆಂಬಲ ಸೂಚಿಸಿದಾಕೆ. ಎಲ್ಲ ಸಂದರ್ಭಗಳಲ್ಲೂ ಸಖಿಯಾಗಿಯೇ ನನ್ನೊಟ್ಟಿಗೆ ನಿಂತಳು. ಅವಳಿಂದ ನಾನೇನೂ ಬಚ್ಚಿಡಲಾರೆ. ಬಚ್ಚಿಡುವುದಿಲ್ಲ. ನನ್ನ ಹೆಂಡತಿಯನ್ನು ಹೊರತು ಪಡಿಸಿದರೆ ಯೋಗಿ, ವಿಶಾಲ್‌, ಕಿರಣ್‌, ಸುನಿಲ್‌, ಮೇಘನಾ, ಅರ್ಚನಾ ಹೀಗೆ ಹಲವರಿದ್ದಾರೆ. ಅವರೆಲ್ಲರೂ ಸದಾಕಾಲ ನನ್ನ ಒಳಿತನ್ನು ಬಯಸುವವರು. ಎಷ್ಟೇ ಕಷ್ಟದ ಸಮಯದಲ್ಲಿಯೂ ಸರಿಹೋಗುತ್ತದೆ ಬಿಡು ಎನ್ನುವ ಭರವಸೆಯ ಮಾತಾಡುವವರೇ ನನ್ನ ಸ್ನೇಹಿತರಾಗಿದ್ದಾರೆ. ಯಾವುದೇ ಯಶಸ್ಸಿರಲಿ ಅದರಲ್ಲಿ ಸ್ನೇಹಿತರ ಪಾತ್ರ ತುಸು ಹೆಚ್ಚಾಗಿಯೇ ಇರುತ್ತದೆ. ಫ್ರೆಂಡ್‌ಶಿಪ್‌ ಡೇಗೆ ಸ್ನೇಹಿತರೊಟ್ಟಿಗೆ ಸಮಯ ಕಳೆಯಿರಿ. ಬಾಂಧವ್ಯ ಗಟ್ಟಿಗೊಳಿಸಿ.
ವಿಜಯ ರಾಘವೇಂದ್ರ, ನಟ
***

ಶುಭ ಕೋರಿ, ಟ್ಯಾಗ್ ಮಾಡಿ
ಫ್ರೆಂಡ್‌ಶಿಪ್‌ ಡೇ ಅಂದಕೂಡ್ಲೆ ನೆನಪಾಗೋದು ಒಬ್ಬಿಬ್ಬರು ಸ್ನೇಹಿತರು ಮಾತ್ರ. ನನ್ನ ಕಷ್ಟದ ಸಮಯದಲ್ಲಿ ನನ್ನ ಕಣ್ಣೀರಿಗೆ ಹೆಗಲಾದವರು, ಸುಖದ ಸಮಯದಲ್ಲಿ ನಗೆಮಿಂಚಿನಲ್ಲಿ ಜೊತೆಯಾದವರು. ನನ್ನ ಉತ್ತಮ ಸ್ನೇಹಿತೆ ನನ್ನಮ್ಮನೇ. ಎಲ್ಲ ಹೆಣ್ಣುಮಕ್ಕಳಿಗೂ ಅಮ್ಮನೇ ಬೆಸ್ಟ್‌ ಫ್ರೆಂಡ್‌. ಅಮ್ಮನನ್ನು ಹೊರತು ಪಡಿಸಿದರೆ ನಿಖಿತಾ ತುಕ್ರಾಲ್‌ ಮತ್ತು ಶುಭಾ ಪೂಂಜಾ ನನ್ನ ಸ್ನೇಹಿತರು ಎಂದು ಹೇಳಬಲ್ಲೆ. ಇವರಿಬ್ಬರ ಜೊತೆಗೆ ದಿನವೂ ಮಾತಾಡಲಿ, ಬಿಡಲಿ.. ಈಗಿನ ಭಾಷೆಯಲ್ಲಿ ಹೇಳುವುದಾದರೆ ಕಾಂಟ್ಯಾಕ್ಟ್‌ನಲ್ಲಿರಲಿ, ಬಿಡಲಿ, ಟಚ್‌ನಲ್ಲಿರಲಿ, ಬಿಡಲಿ ಅಥವ ಎಷ್ಟೇ ಸಮಯ ದೂರವಿದ್ದರೂ ನಮ್ಮ ಬಾಂಧವ್ಯದಲ್ಲಿ ಯಾವುದೇ ಬಿರುಕು ಬಾರದು. ನಮ್ಮ ಧ್ವನಿಯಿಂದಲೇ ಪರಸ್ಪರ  ಗೊತ್ತಾಗುತ್ತದೆ, ಖುಷಿಯಲ್ಲಿದ್ದೇವೆಯೇ? ಆತಂಕ ಕಾಡುತ್ತಿದೆಯೇ ಅಥವಾ ಎಲ್ಲೋ ಏನೋ ಸರಿ ಇಲ್ಲ... ಹೀಗೆ ಮಾತಾಡದಿದ್ದರೂ ನಮ್ಮ ತಿಳಿವಿಗೆ ಬಂದಿರುತ್ತದೆ. ಯಾವುದಕ್ಕೂ ಪರಸ್ಪರ ಬೆಂಬಲಿಸಿ ನಿಲ್ಲುವುದು ನಮಗೆ ಗೊತ್ತಿದೆ. ಹೀಗಿರುವ ಬಾಂಧವ್ಯಗಳೇ ನಿಜವಾದ ಸ್ನೇಹಸೇತುವಾಗಿರುತ್ತವೆ. ನಾನು ಈ ಸಲ ನನ್ನ ಸ್ನೇಹಿತರನ್ನು ‘ಹ್ಯಾಪಿ ಫ್ರೆಂಡ್‌ಶಿಪ್‌ ಡೇ’ ಸಂದೇಶದೊಂದಿಗೆ ಟ್ಯಾಗ್‌ ಮಾಡುತ್ತಿರುವೆ. ಹೀಗೆ ಟ್ಯಾಗ್‌ ಮಾಡುವುದರಿಂದ ನಾವು ಒಬ್ಬರಿಗೊಬ್ಬರು ಜೊತೆಗಿರುತ್ತೇವೆ ಎನ್ನುವುದನ್ನೇ ಜಗಜ್ಜಾಹೀರು ಮಾಡಿದಂತೆ ಎನಿಸುತ್ತದೆ. ನೀವೂ ನಿಮ್ಮ ಸ್ನೇಹಿತರಿಗೆ ಶುಭ ಕೋರಿರಿ. ಟ್ಯಾಗ್ ಮಾಡಿರಿ.
– ಅನುಶ್ರೀ, ನಿರೂಪಕಿ, ನಟಿ


ಅನುಶ್ರೀ

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !