ಶನಿವಾರ, ಡಿಸೆಂಬರ್ 14, 2019
21 °C

ಬಾಂಧವ್ಯಗಳ ಬೆಸುಗೆಯಲಿ...

ಶುಭಶ್ರೀ ಪ್ರಸಾದ್ Updated:

ಅಕ್ಷರ ಗಾತ್ರ : | |

Deccan Herald

‘ಯಾ ಕೇ ಗೀತಾ ಇಷ್ಟು ಸಪ್ಪಗಿದೀಯಾ? ಏನಾಯ್ತೆ? ಮನೇಲೆಲ್ಲಾ ಹುಷಾರು ತಾನೇ...?’ ಗೆಳತಿ ಸುಮಾಳ ಪ್ರಶ್ನೆಗೆ ಗೀತಾ ಕಣ್ಣು ತುಂಬಿತು. ಆದರೆ ಆಫೀಸಿನಲ್ಲಿ ಎಲ್ಲರ ಎದುರು ಕಣ್ಣೀರು ತುಳುಕುವುದು ಚಂದವಲ್ಲ ಎಂದು ಲೇಡೀಸ್ ರೂಮಿನ ಕಡೆ ಹೆಜ್ಜೆ ಹಾಕಿದಳು.

ಜೊತೆಯೇ ಬಂದ ಸುಮಾ ಕೊಟ್ಟ ಕರ್ಚೀಫಿನಲ್ಲಿ ಕಣ್ಣೊರೆಸಿಕೊಂಡ ನಂತರ ‘ಬೆಳಿಗ್ಗೆ ಅವರು ಹೇಳಿದ ತಿಂಡಿ ಮಾಡಿಲ್ಲ ಅಂತ ನಮ್ಮತ್ತೆ ಒಂದೇ ಸಮ ಕೂಗಾಡಿದರು. ಮನೇಲೂ ದುಡೀತೀನಿ, ಆಫೀಸಿನಲ್ಲೂ ದುಡೀತೀನಿ. ಎಷ್ಟೂಂತ ಮಾಡ್ಲೀ ಸುಮಾ?’...

ಗೌರಿಯ ದುಃಖ ಮತ್ತೊಂದು ಥರ. ಗಂಡನ ಒರಟು ಮಾತು, ಅಕ್ಕಪಕ್ಕದವರ ಕಿರಿಕಿರಿ, ಮಗನಂತೆ ಸಾಕಿದ್ದ ಮೈದುನನ ನಿರ್ಲಕ್ಷ್ಯ, ಒಂದೇ ಎರಡೇ....

ಇದು ಒಂದು ಗೀತಾಳ ಸಮಸ್ಯೆಯಲ್ಲ; ಒಂದು ಗೌರಿಯ ದುಃಖವಲ್ಲ. ಬಹುತೇಕ ಹೆಣ್ಣುಮಕ್ಕಳ ಸಂಗೀತವಿದು. ಸಂಬಂಧಗಳೆಂದರೆ ಸಂಭ್ರಮದ ತವರು ಎನ್ನುವುದನ್ನು ಮೀರಿ ಸಂಕಟದ ಮೂಲಸ್ಥಾನವಾಗುತ್ತಿರುವುದು ನಿಜಕ್ಕೂ ಆತಂಕಕಾರಿ ವಿಚಾರ.

ಮೊಬೈಲ್ ಬಳಕೆಯ ಪ್ರಭಾವದಿಂದ ದಿನಗಳೆದಂತೆ ಸಂಬಂಧಿಕರು, ಸ್ನೇಹಿತರು ಹೆಚ್ಚಾಗುತ್ತಿದ್ದಾರೆ, ಹೆಚ್ಚು ಸಂಪರ್ಕದಲ್ಲಿದ್ದಾರೆ. ಆದರೆ ಬಾಂಧವ್ಯಗಳು ವಿಸ್ತಾರವಾದಷ್ಟು ಆಳವಾಗುತ್ತಿಲ್ಲ.

ಮನೆಯೆಂದ ಮೇಲೆ ಸಣ್ಣಪುಟ್ಟ ವಿರಸಗಳು ಸಹಜ. ಅದು ಗಂಡ–ಹೆಂಡತಿಯರಿರಬಹುದು, ತಂದೆ–ತಾಯಿ ಮತ್ತು ಮಕ್ಕಳು, ಅಕ್ಕ–ತಂಗಿಯರು, ಅಣ್ಣ–ತಮ್ಮಂದಿರು, ಅತ್ತೆ–ಸೊಸೆ, ಮಾವ–ಅಳಿಯ, ಅತ್ತಿಗೆ–ನಾದಿನಿ – ಹೀಗೆ ನಾನಾ ವಿಧದ ಸಂಬಂಧಗಳಲ್ಲಿ ಮನಸ್ತಾಪ, ಬಿರುಕು ಆಗಾಗ್ಗೆ ಬರುತ್ತಿರುತ್ತವೆ, ಹೋಗುತ್ತಿರುತ್ತವೆ. ಸ್ನೇಹಿತರ ನಡುವೆ ಕೂಡ ಇಂಥವು ಇಣುಕುತ್ತಿರುತ್ತವೆ. ಆದರೆ ತಾವು ಕೊಟ್ಟರೆ ಬಿರುಕು ಬೆಂಕಿ ಬಿರುಗಾಳಿಯಾಗಿ ಇಡೀ ಮನೆಯ ಶಾಂತಿಯನ್ನು ಆಪೋಶನ ಪಡೆದುಬಿಡಬಹುದು.

ಮನುಷ್ಯನ ನೆಮ್ಮದಿಯನ್ನೂ ಕಸಿದುಬಿಡಬಹುದು. ಮುರಿದ ಕಬ್ಬಿಣಕ್ಕೆ ಬೆಸುಗೆ ಹಾಕುವುದು, ಹರಿದ ಕಾಗದಕ್ಕೆ ಅಂಟುಹಾಕುವುದು ಸುಲಭ. ಆದರೆ ಮನಸ್ಸು ಮುರಿದುಹೋದರೆ ಬೆಸುಗೆ ಹಾಕುವುದು ಚೂರಾದ ಕನ್ನಡಿಯನ್ನು ಒಗ್ಗೂಡಿಸಿದಂತೆ. ಬಿರುಕು ದೊಡ್ಡದಾದಷ್ಟೂ ಮುಚ್ಚಲು ಬಯಸುವ ಸಮಯ, ಶ್ರಮ ಅತಿ ಹೆಚ್ಚು. ಹಾಗಾಗದಂತೆ ಎಚ್ಚರ ವಹಿಸಿವುದು ಅತಿ ಅಗತ್ಯ.

ಸಂಸಾರದಲ್ಲಿ ವಿರಸ ಹೆಚ್ಚಾಗದಂತೆ ಬೆಸುಗೆ ಹಾಕುವ ಜಾಣ್ಮೆ, ಸಹನೆ, ತಾಳ್ಮೆ, ಕ್ಷಮೆ ಹೆಣ್ಣುಮಕ್ಕಳಲ್ಲಿ ರಕ್ತಗತ. ಆದರೆ ಆ ಶಕ್ತಿಯನ್ನು ಮರೆತಿರುವುದೇ ಕಲಹಗಳ ಉಲ್ಬಣಕ್ಕೆ ಕಾರಣವೆನಿಸುತ್ತದೆ.

ಅದಕ್ಕೆ ಒಂದಿಷ್ಟು ಜಾಗ್ರತೆ ವಹಿಸೋಣವೇ?

* ಇಂಗ್ಲಿಷಿನಲ್ಲಿ ಒಂದು ಮಾತಿದೆ - ಇಬ್ಬರ ನಡುವೆ ಸಂಘರ್ಷ ಉಂಟಾಗುವುದು ಹೇಳುವ ವಿಷಯದಿಂದ ಶೇ 10 ಹೇಳುವ ಧಾಟಿಯಿಂದ ಶೇ 90. ಹಾಗಾಗಿ ಹೇಳುವ ರೀತಿ ಬಲು ಮುಖ್ಯ. ನೇರವಾಗಿ, ಸ್ಪಷ್ಟವಾಗಿ ಮತ್ತು ಎದುರಿನವರಿಗೆ ಚುಚ್ಚದ ಹಾಗೆ ಹೇಳುವ ಜಾಣ್ಮೆ ಕಲಿಯೋಣ.

* ಯಾವುದೋ ವಿಷಯದಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಬಂದಾಗ ‘ನನಗೆ ನನ್ನ ಚರ್ಚೆ ಗೆಲ್ಲುವುದು ಮುಖ್ಯವೋ, ಸ್ನೇಹ/ಸಂಬಂಧ ಉಳಿಸಿಕೊಳ್ಳುವುದು ಮುಖ್ಯವೋ’ ಎಂದು ಪ್ರಶ್ನೆ ಹಾಕಿಕೊಳ್ಳೋಣ.

* ಮಾತು ಮುತ್ತು, ಮಾತೇ ಮೃತ್ಯು. ಇನ್ನೊಬ್ಬರ ವಿಷಯದಲ್ಲಿ ಮೂಗು ತೂರಿಸುವುದು ಬೇಡ. ಸಂಬಂಧಪಡದ ವಿಷಯವಾದರೆ ಉಪಾಯದಿಂದ ವಿಷಯಾಂತರಿಸೋಣ.

* ಕೇಳುವ ತಾಳ್ಮೆ ಬಹುಮುಖ್ಯ. ಎದುರಿನವರು ಮಾತನಾಡುವಾಗ ಪೂರ್ಣವಾಗಿ ಕೇಳಿಸಿಕೊಂಡು, ಅದರ ಸಾಧಕ-ಬಾಧಕಗಳನ್ನು ಮನದಲ್ಲಿ ತೂಗಿ ನಂತರ ಅದಕ್ಕೆ ಪ್ರತಿಕ್ರಿಯೆ ಕೊಡೋಣ.

* ನನ್ನದೇ ನಡೆಯಬೇಕು ಎಂಬ ಧೋರಣೆ ಬೇಕಿಲ್ಲ. ಇತರರ ಅಭಿಪ್ರಾಯಕ್ಕೂ ಗೌರವ ಕೊಡೋಣ. ಗೌರವ ಕೊಟ್ಟರೆ ಪ್ರತಿಯಾಗಿ ಗೌರವ ಲಭ್ಯ.

* ಬೀಗುವುದಕ್ಕಿಂದ ಬಾಗುವುದು ಲೇಸು. ಹಾಗೆಂದ ಮಾತ್ರಕ್ಕೆ ಆತ್ಮಾಭಿಮಾನ/ಸ್ವಾಭಿಮಾನವನ್ನು ತೊರೆದು ಬದುಕಬೇಕೆಂದಲ್ಲ.

* ಸಹಾಯ ಪಡೆದಾಗ ಥ್ಯಾಂಕ್ಸ್ ಹೇಳುವಾ... ತಪ್ಪಾದಾಗ ಕೂಡಲೇ ಕ್ಷಮೆ ಕೇಳೋಣ. ಥ್ಯಾಂಕ್ಸ್ ಮತ್ತು ಸಾರಿ ಪದಗಳಿಗಿರುವ ಅಗಾಧ ಶಕ್ತಿ ಸಂಬಂಧಗಳ ಬಿರುಕಿಗೆ ಬೆಸುಗೆ ಹಾಕುವ ಕೆಲಸ ಮಾಡುತ್ತದೆ.

* ಎಲ್ಲ ಸಂಬಂಧಗಳಲ್ಲಿ ಪ್ರೀತಿಯೇ ಆಧಾರ. ಎಲ್ಲರಲ್ಲೂ ಪ್ರೀತಿಯಿರುತ್ತದೆ. ಆದರೆ ಪ್ರೀತಿಯ ಭಾಷೆ ಒಬ್ಬೊಬ್ಬರದೂ ಒಂದೊಂದು. ಆ ಭಾಷೆಯನ್ನೂ ಕಲಿತು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡಬೇಕಷ್ಟೆ.

* ಗಾಯವಾದಾಗ ಮತ್ತೆ ಮತ್ತೆ ಕೆದಕದೆ ಮಾಯಲು ಸಮಯ ಕೊಡಬೇಕು. ಅಂತೆಯೇ ಸಂಬಂಧಗಳಲ್ಲಿ ವಿರಸ ಮೂಡಿದಾಗ.

* ಗಂಡನಾಗಲೀ ಹೆಂಡತಿಯಾಗಲೀ ಅತ್ತೆ–ಮಾವ, ತಂದೆ–ತಾಯಿಯರಾಗಲೀ ಯಾರೇ ತಪ್ಪು ಮಾಡಿದಾಗ ನಾಲ್ಕಾರು ಜನ ಇರುವಾಗ ಮೌನ ತಾಳಿ, ಖಾಸಗಿಯಾಗಿರುವಾಗ ತಪ್ಪನ್ನು ತಿಳಿಸಬೇಕು. ಎಲ್ಲರ ಎದುರು ಅಂದ ಮಾತು ಹೆಚ್ಚಿನ ನೋವು ತರುತ್ತದೆ, ವಿರಸಕ್ಕೂ ಕಾರಣ.

ಆಗಲೇ ಹೇಳಿದಂತೆ ಗೀತಾಳ ಉದಾಹರಣೆಯನ್ನೇ ನೋಡಿದರೆ ಎರಡೂ ಕಡೆ ದುಡಿವಾಗ ಚಕಮಕಿ ಮತ್ತಷ್ಟು ಹೆಚ್ಚು. ಅಲ್ಲಿ ಇಬ್ಬರದೂ ತಪ್ಪಿಲ್ಲ. ‘ಅತ್ತೆ ಇವತ್ತು ಆಫೀಸಿಗೆ ಬೇಗ ಹೋಗಬೇಕು. ಸ್ವಲ್ಪ ಸುಲಭದ ತಿಂಡಿ ಮಾಡುತ್ತೇನೆ. ನೀವು ಹೇಳಿದ್ದನ್ನು ನಾಳೆ ಮಾಡು
ತ್ತೇನೆ’ ಎಂದಿದ್ದರೆ ಮುನಿಸೇಕಾಗುತ್ತಿತ್ತು? ಇಲ್ಲೆಲ್ಲ ಸಶಕ್ತ ಸಂವಹನದ ಕೊರತೆ ಕಾಣುತ್ತದೆ.

ಪ್ರತಿಫಲಾಪೇಕ್ಷೆಯಿರದ ಸ್ನೇಹ/ಪ್ರೀತಿ ಬಹುಕಾಲ ಉಳಿಯುತ್ತದೆ. ಪರಸ್ಪರಾವಲಂಬನೆ ಒಳಿತೇ. ಯಾವುದು ಅತಿಯಾದರೂ ಕೆಡುಕೇ.

ಗೌರಿಯ ವಿಷಯದಲ್ಲೂ ಇದೇ ಆಗಿರುವುದು. ಅತಿಯಾದ ಭಾವುಕತೆ ತಂದೊಡ್ಡಿದ ನೋವು. ತಾ ಹೆತ್ತ ಮಗನಂತೆ ಸಲಹಿದ ಮೈದುನ ತನ್ನ ಮೇಲೆಯೇ ಇಲ್ಲ ಸಲ್ಲದ ಆರೋಪ ಮಾಡಿ ದೂರವಾಗಿದ್ದಾಗ, ಅದು ತನ್ನ ಪ್ರೀತಿಯ ಕರ್ತವ್ಯ, ಮಾಡಿದ್ದೇನೆ. ಇಷ್ಟರ ಮೇಲೆ ಆತ್ಮಸಾಕ್ಷಿಯುಂಟು ಎಂದು ತನ್ನನ್ನು ತಾನು ಸಮಾಧಾನ ಮಾಡಿಕೊಂಡಿದ್ದರೆ ಗೌರಿಯ ಮನಸು ಹಗುರಾಗುತ್ತಿತ್ತು.

ಒಬ್ಬರಿಗೆ ಕಷ್ಟ ಅಂದಾಗ ‘ಓ’ಗೊಡದಿದ್ದರೆ ಬಾಂಧವ್ಯ ಉಳಿವುದಾದರೂ ಹೇಗೆ? ಅಕ್ಕಪಕ್ಕದವರಿಗೆ ಅಲ್ಪಸ್ವಲ್ಪವಾದರೂ ನೆರವಾಗೋಣ.

‘ನನ್ನ ಅತ್ತಿಗೆ ನಾನು ಮನೆಗೆ ಬಂದಾಗಿನಿಂದ ಮಾತನಾಡಿಸಿಲ್ಲ. ಕೊನೇಪಕ್ಷ ನನ್ನ ಮುಖ ನೋಡಿ ನಕ್ಕಿಲ್ಲ. ಒಂದು ವಾರಕ್ಕೆ ಅಂತ ಬಂದಿದೀನಿ. ನಾಳೆಯೆ ಅಮ್ಮನ ಮನೆಯಿಂದ ವಾಪಸ್ ಹೋಗೋಣ ಅನಿಸಿದೆ’ ಕಮಲಾ ತನ್ನ ಗೆಳತಿ ಆರತಿಯ ಹತ್ತಿರ ಅಲವತ್ತುಕೊಂಡಳು. ‘ನೀನೇ ಹೋಗಿ ಮಾತನಾಡಿಸಬಹುದಿತ್ತಲ್ಲಾ, ಯಾರು ಯಾರನ್ನು ಮೊದಲು ಮಾತನಾಡಿಸಿದರೇನು?’ ಆರತಿಯ ಪ್ರಶ್ನೆಗೆ ಕಮಲಳ ನಿರುತ್ತರ.

‘ಅಹಂ’ ಎನ್ನುವುದು ಸುಡುವ ಬೆಂಕಿ. ಅದು ತಾ ನೆಲೆಸಿದ ಜಾಗವನ್ನು ಸುಡುತ್ತ ಸುತ್ತಲಿನವರನ್ನೂ ಸುಡುತ್ತದೆ. ಹಾಗಾಗಿ ನಾನೇಕೆ ಅವರ ಮಾತನ್ನು ಕೇಳಬೇಕು, ನಾನೇ ಮೊದಲು ಮಾತಾಡಿಸಬೇಕಾ? ಎನ್ನುವಂಥ ಧೋರಣೆಯನ್ನು ಬಿಟ್ಟರೆ, ಸಂಬಂಧಗಳು ಮತ್ತಷ್ಟು ಗಟ್ಟಿಯಾಗುತ್ತವೆ.‌

ಹಿತ್ತಾಳೆ ಕಿವಿಯಾಗದೆ, ಕೇಳಿದ ಮಾತುಗಳನ್ನು ಒರೆಗೆ ಹಚ್ಚಿ ನೋಡುವ ಅಭ್ಯಾಸ ಮಾಡಿಕೊಳ್ಳದಿದ್ದರೆ ಅದು ಸ್ನೇಹವಾಗಿರಬಹುದು, ರಕ್ತ ಸಂಬಂಧಗಳಾಗಿರಬಹುದು, ಸುಲಭವಾಗಿ ಮುರಿದುಹೋಗುತ್ತದೆ. ಇಂತಹ ಗಾಳಿಸುದ್ದಿಗಳ ವಿಚಾರದಲ್ಲಿ ಮತ್ತಷ್ಟು ಎಚ್ಚರ ವಹಿಸಬೇಕು. ಸೊಕ್ಕು ಮತ್ತು ಹಟ ಎಂದಿಗೂ ಬಾಂಧವ್ಯಗಳ ನಡುವೆ ಕತ್ತರಿಯೇ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು