ನೆಲದಡಿಯ ಪೈಪ್‌ ಒಡೆದು ಮತ್ತೆ ಚಿಮ್ಮಿದ ಅನಿಲ

7
ಬೆಳ್ಳಂದೂರಿನ ಸರ್ಜಾಪುರ ರಸ್ತೆಯಲ್ಲಿ ಘಟನೆ

ನೆಲದಡಿಯ ಪೈಪ್‌ ಒಡೆದು ಮತ್ತೆ ಚಿಮ್ಮಿದ ಅನಿಲ

Published:
Updated:
Prajavani

ಬೆಂಗಳೂರು: ಬೆಳ್ಳಂದೂರು ಬಳಿಯ ಸರ್ಜಾಪುರ ರಸ್ತೆಯ ನೆಲದಡಿ ಅಳವಡಿಸಿರುವ ನೈಸರ್ಗಿಕ ಅನಿಲದ ಪೈಪ್‌ ಶುಕ್ರವಾರ ಒಡೆದಿದ್ದರಿಂದ, ಅನಿಲ ಸೋರಿಕೆಯಾಗಿ ಸ್ಥಳದಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು.

ಮನೆಗಳಿಗೆ ನೇರವಾಗಿ ಅನಿಲ ಪೂರೈಕೆ ಮಾಡುವ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತಂದಿರುವ ಗೇಲ್‌ ಕಂಪನಿಯು ಎಚ್‌ಎಸ್‌ಆರ್‌ ಲೇಔಟ್‌, ಬೆಳ್ಳಂದೂರು ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ನೆಲದಡಿಯಲ್ಲಿ ಗ್ಯಾಸ್‌ ಪೈಪ್‌ಲೈನ್‌ ಅಳವಡಿಸಿದೆ.  

ಬೆಳ್ಳಂದೂರಿನಲ್ಲಿರುವ ವಿಪ್ರೊ ಕಂಪನಿಯ ಗೇಟ್‌ಗೆ ಹೊಂದಿಕೊಂಡಿರುವ ಸರ್ಜಾಪುರ ರಸ್ತೆ ಬದಿ ನೆಲದಡಿಯಲ್ಲಿರುವ ಪೈಪ್‌ಗೆ ಧಕ್ಕೆ ಉಂಟಾಗಿತ್ತು. ಅದರಿಂದ ಬೆಳಿಗ್ಗೆ 11.30ರ ಸುಮಾರಿಗೆ ಅನಿಲ ಸೋರಿಕೆಯಾಗಿ ರಸ್ತೆಯದ್ದಕ್ಕೂ ವಾಸನೆ ಬರಲಾರಂಭಿಸಿತ್ತು. ಭಯಗೊಂಡ ಸ್ಥಳೀಯರು, ಮನೆ ಹಾಗೂ ಕಚೇರಿಯಿಂದ ಹೊರಗೆ ಬಂದು ನಿಂತುಕೊಂಡಿದ್ದರು.

ಸ್ಥಳಕ್ಕೆ ಬಂದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ, ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ನಿರ್ಬಂಧಿಸಿದರು. ಮೊಬೈಲ್‌ ಸ್ವಿಚ್‌ ಆಫ್‌ ಮಾಡು
ವಂತೆ ಹಾಗೂ ವಿದ್ಯುತ್‌ ಪರಿಕರ ಬಳಸದಂತೆ ಸುತ್ತಮುತ್ತಲಿನವರಿಗೆ ಎಚ್ಚರಿಕೆ ನೀಡಿದರು.  ಸಂಜೆಯವರೆಗೂ ಕಾರ್ಯಾಚರಣೆ ನಡೆಸಿ, ಒಡೆದಿದ್ದ ಪೈಪ್‌  ಬದಲಾ
ಯಿಸಿ ಅನಿಲ ಸೋರಿಕೆ ನಿಲ್ಲಿಸಿದರು. 

ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯ: ‘ಬಿಬಿಎಂಪಿ ವತಿಯಿಂದ ಸರ್ಜಾಪುರ ರಸ್ತೆಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಕಾಲುವೆ, ಒಳಚರಂಡಿ ಹಾಗೂ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಕಾಲುವೆಗಾಗಿ ಜೆಸಿಬಿ ಯಂತ್ರದಿಂದ ರಸ್ತೆ ಅಗೆಯುವಾಗ ಗ್ಯಾಸ್‌ ಪೈಪ್‌ ಒಡೆದಿದೆ’ ಎಂದು ಬೆಳ್ಳಂದೂರು ಪೊಲೀಸರು ಹೇಳಿದರು.

‘ರಸ್ತೆಯ ನೆಲದಡಿ ಮೂರು ಮೀಟರ್‌ ಆಳದಲ್ಲಿ ಗ್ಯಾಸ್‌ ಪೈಪ್‌ಲೈನ್‌ ಅಳವಡಿಸಿರುವ ಮಾಹಿತಿಯನ್ನು ರಸ್ತೆಯ ಮೇಲ್ಭಾಗದಲ್ಲಿ ಸೂಚನಾ ಫಲಕಗಳಲ್ಲಿ ನೀಡಲಾಗಿದೆ. ಅಷ್ಟಾದರೂ ಜೆಸಿಬಿ ಯಂತ್ರದ ಚಾಲಕ, ತನಗೆ ತೋಚಿದ ರೀತಿಯಲ್ಲಿ ರಸ್ತೆ ಅಗೆದು ಗುಂಡಿ ತೋಡುತ್ತಿದ್ದ. ಕಾಮಗಾರಿ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರ ಸಹ ಯಾವುದೇ ನಿರ್ದೇಶನ ನೀಡಿರಲಿಲ್ಲ’ ಎಂದು ತಿಳಿಸಿದರು.

2 ಕಿ.ಮೀ ಸಂಚಾರ ದಟ್ಟಣೆ

‘ನೀರು ಚಿಮ್ಮುವ ರೀತಿಯಲ್ಲೇ ರಸ್ತೆಯ ನೆಲದಡಿಯಿಂದ ಅನಿಲ ಸೋರಿಕೆಯಾಗುತ್ತಿತ್ತು. ಅದೃಷ್ಟವಶಾತ್‌ ಎಲ್ಲಿಯೂ ಬೆಂಕಿ ಕಾಣಿಸಿಕೊಳ್ಳಲಿಲ್ಲ. ಆ ರಸ್ತೆ ಮಾರ್ಗದಲ್ಲಿ ವಾಹನ ಹಾಗೂ ಜನರು ಓಡಾಡಿದರೆ ಅಪಾಯ ಎದುರಾಗುವ ಸಾಧ್ಯತೆ ಇತ್ತು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದರು.

‘ವಾಹನಗಳ ಓಡಾಟವನ್ನು ಸಂಪೂರ್ಣವಾಗಿ ಬಂದ್‌ ಮಾಡಲಾಗಿತ್ತು. ಅದರಿಂದ ಸರ್ಜಾಪುರ ರಸ್ತೆಯಲ್ಲಿ 2 ಕಿ.ಮೀವರೆಗೂ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ದಟ್ಟಣೆ ಉಂಟಾಯಿತು’ ಎಂದರು.

‘ಅನಿಲ ಸೋರಿಕೆ ಬಂದ್‌ ಮಾಡುವ ಕಾರ್ಯಾಚರಣೆ ಮುಗಿಯುವವರೆಗೂ ವಾಹನಗಳು, ಸ್ಥಳ ಬಿಟ್ಟು ಕದಲಲಿಲ್ಲ. ಕೆಲವು ವಾಹನಗಳಿಗೆ ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ನಂತರವೇ ರಸ್ತೆಯಲ್ಲಿ ವಾಹನಗಳ ಸಂಚಾರ ಯಥಾಸ್ಥಿತಿಗೆ ತಲುಪಿತು’ ಎಂದು ಹೇಳಿದರು. 

 

‘ರಸ್ತೆ ವಿಸ್ತರಣೆ ಕಾಮಗಾರಿ’

‘ಇಬ್ಬಲೂರು ವೃತ್ತದಿಂದ ದೊಡ್ಡಕನ್ನಳ್ಳಿಯವರೆಗೆ ರಸ್ತೆ ವಿಸ್ತರಣೆ ಕಾಮಗಾರಿ, ಕಾಲುವೆ ನಿರ್ಮಾಣಕ್ಕಾಗಿ ರಸ್ತೆ ಪಕ್ಕದಲ್ಲಿ ತೋಡಿದ್ದ ಗುಂಡಿಯಲ್ಲಿದ್ದ ಮಣ್ಣು ಹೊರಗೆ ತೆಗೆಯುವಾಗ ಗ್ಯಾಸ್‌ ಪೈಪ್‌ ಒಡೆದಿತ್ತು’ ಎಂದು ಬೆಳ್ಳಂದೂರು ವಾರ್ಡ್ ಪಾಲಿಕೆ ಸದಸ್ಯೆ ಆಶಾ ಸುರೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಗ್ಯಾಸ್‌ ಪೈಪ್‌ಗಳ ನಡುವೆ 100 ಮೀಟರ್‌ಗೊಂದು ವಾಲ್ವ್‌ಗಳಿವೆ. ಒಡೆದಿದ್ದ ಪೈಪ್‌ನ ಅಕ್ಕ–ಪಕ್ಕದ ಎರಡು ವಾಲ್‌ಗಳನ್ನು ಬಂದ್‌ ಮಾಡಿ ಪೈಪ್‌ ಬದಲಾಯಿಸಿ ಸೋರಿಕೆ ತಡೆಯಲಾಗಿದೆ. ಸ್ಥಳದಲ್ಲಿ ಸದ್ಯ ಯಾವುದೇ ಆತಂಕವಿಲ್ಲ’ ಎಂದು ಹೇಳಿದರು.

‘ಇಬ್ಬಲೂರು ವೃತ್ತದಿಂದ ದೊಡ್ಡಕನ್ನಳ್ಳಿಯವರೆಗೆ ರಸ್ತೆ ವಿಸ್ತರಣೆ ಕಾಮಗಾರಿ, ಕಾಲುವೆ ನಿರ್ಮಾಣಕ್ಕಾಗಿ ರಸ್ತೆ ಪಕ್ಕದಲ್ಲಿ ತೋಡಿದ್ದ ಗುಂಡಿಯಲ್ಲಿದ್ದ ಮಣ್ಣು ಹೊರಗೆ ತೆಗೆಯುವಾಗ ಗ್ಯಾಸ್‌ ಪೈಪ್‌ ಒಡೆದಿತ್ತು’ ಎಂದು ಬೆಳ್ಳಂದೂರು ವಾರ್ಡ್ ಪಾಲಿಕೆ ಸದಸ್ಯೆ ಆಶಾ ಸುರೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಗ್ಯಾಸ್‌ ಪೈಪ್‌ಗಳ ನಡುವೆ 100 ಮೀಟರ್‌ಗೊಂದು ವಾಲ್ವ್‌ಗಳಿವೆ. ಒಡೆದಿದ್ದ ಪೈಪ್‌ನ ಅಕ್ಕ–ಪಕ್ಕದ ಎರಡು ವಾಲ್‌ಗಳನ್ನು ಬಂದ್‌ ಮಾಡಿ ಪೈಪ್‌ ಬದಲಾಯಿಸಿ ಸೋರಿಕೆ ತಡೆಯಲಾಗಿದೆ. ಸ್ಥಳದಲ್ಲಿ ಸದ್ಯ ಯಾವುದೇ ಆತಂಕವಿಲ್ಲ’ ಎಂದು ಹೇಳಿದರು.

 

ಪದೇ ಪದೇ ಅನಿಲ ಸೋರಿಕೆ  

* ಎಚ್‌ಎಸ್ಆರ್‌ ಲೇಔಟ್‌ನ ಒಂದನೇ ಹಂತದ 11ನೇ ಮುಖ್ಯರಸ್ತೆಯ 22ನೇ ಅಡ್ಡರಸ್ತೆಯ ನೆಲದಡಿ ಅಳವಡಿಸಿದ್ದ ಗ್ಯಾಸ್‌ ಪೈಪ್‌ನಿಂದ ಜ. 5ರಂದು ಅನಿಲ ಸೋರಿಕೆಯಾಗಿತ್ತು. ಏರ್‌ಟೆಲ್ ಕಂಪನಿಯವರು ಕೇಬಲ್ ಅಳವಡಿಸುವುದಕ್ಕಾಗಿ ರಸ್ತೆ ಅಗೆಯುತ್ತಿದ್ದ ವೇಳೆಯಲ್ಲೇ ಪೈಪ್‌ ಒಡೆದಿದ್ದರು.

* ಗರುಡಾಚಾರ ಪಾಳ್ಯದ ವೈಟ್‌ಫೀಲ್ಡ್‌ ಮುಖ್ಯರಸ್ತೆಯಲ್ಲಿರುವ ಗೋಶಾಲಾ ಕ್ರಾಸ್‌ ರಸ್ತೆ ಬಳಿ ಕಳೆದ ಅಕ್ಟೋಬರ್ 29ರಂದು ಗ್ಯಾಸ್‌ ಪೈಪ್‌ಲೈನ್‌ ಒಡೆದು ಅನಿಲ ಸೋರಿಕೆಯಾಗಿತ್ತು. ಮೆಟ್ರೊ ಮಾರ್ಗದ ಕಾಮಗಾರಿಗಾಗಿ ಭೂಮಿ ಕೊರೆಯುತ್ತಿದ್ದಾಗ ಯಂತ್ರದ ಮೊನೆ ಸ್ಟೀಲ್‌ ಪೈಪ್‌ಲೈನ್‌ಗೆ (ಎಂಟು ಇಂಚು ವ್ಯಾಸದ ಕೊಳವೆಮಾರ್ಗ ಇದು) ತಾಕಿ, ಸೋರಿಕೆ ಉಂಟಾಗಿತ್ತು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !